ಯೆಹೆಜ್ಕೇಲನು 13 - ಕನ್ನಡ ಸತ್ಯವೇದವು J.V. (BSI)ಕಣಿಯವರನ್ನು ಖಂಡಿಸಿದ್ದು 1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - 2 ನರಪುತ್ರನೇ, ಪ್ರವಾದನೆಮಾಡಿ ಸ್ವಕಲ್ಪಿತವಾದದ್ದನ್ನೇ ಸಾರುತ್ತಲಿರುವ ಇಸ್ರಾಯೇಲಿನ ಪ್ರವಾದಿಗಳಿಗೆ ಖಂಡನೆಯಾಗಿ ನೀನು ಪ್ರವಾದಿಸುತ್ತಾ ಹೀಗೆ ಹೇಳು - ಯೆಹೋವನ ವಾಕ್ಯವನ್ನು ಕೇಳಿರಿ, 3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುವ ಮೂರ್ಖ ಪ್ರವಾದಿಗಳ ಗತಿಯು ಏನೆಂದು ಹೇಳಲಿ! 4 ಇಸ್ರಾಯೇಲೇ, ನಿನ್ನ ಪ್ರವಾದಿಗಳು ಹಾಳು ಪ್ರದೇಶಗಳಲ್ಲಿನ ನರಿಗಳಂತಿದ್ದಾರೆ. 5 ಯೆಹೋವನ ದಿನದಲ್ಲಿ ಯುದ್ಧಕ್ಕೆ ನಿಲ್ಲಬೇಕೆಂದು ನೀವು ಪೌಳಿಯ ಒಡಕುಗಳನ್ನೇರಲಿಲ್ಲ, ಇಸ್ರಾಯೇಲ್‍ವಂಶದ ರಕ್ಷಣೆಗಾಗಿ ಗೋಡೆಯನ್ನು ಗಟ್ಟಿಮಾಡಲೂ ಇಲ್ಲ. 6 ಯೆಹೋವನು ಇಂತೆನ್ನುತ್ತಾನೆ ಎಂದು ನುಡಿಯುವವರಿಗೆ ಆದ ದರ್ಶನ ವಿುಥ್ಯ, ಕೇಳಿಸಿದ ಕಣಿ ಸುಳ್ಳು; ಯೆಹೋವನು ಅವರನ್ನು ಕಳುಹಿಸಲಿಲ್ಲ, ತಾವು ನುಡಿದ ಮಾತು ನೆರವೇರುವದೆಂದು ಸುಮ್ಮ ಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ. 7 ನಾನು ಮಾತಾಡದೆಹೋದರೂ ಯೆಹೋವನು ಇಂತೆನ್ನುತ್ತಾನೆ ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನವು ವಿುಥ್ಯ, ನೀವು ಹೇಳಿದ ಕಣಿಯು ಸುಳ್ಳು. 8 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀವು ವ್ಯರ್ಥವಾದದ್ದನ್ನು ನುಡಿದು ಸುಳ್ಳಾದದ್ದನ್ನು ಕಂಡದರಿಂದ ಇಗೋ, ನಿಮಗೆ ವಿರುದ್ಧವಾಗಿದ್ದೇನೆ, ಇದು ಕರ್ತನಾದ ಯೆಹೋವನೆಂಬ ನನ್ನ ನುಡಿ. 9 ವಿುಥ್ಯಾದರ್ಶನ ಹೊಂದಿ ಸುಳ್ಳು ಕಣಿ ಹೇಳುವ ಪ್ರವಾದಿಗಳ ಮೇಲೆ ನಾನು ಕೈ ಮಾಡುವೆನು; ಅವರು ನನ್ನ ಜನರ ಹಿರೀ ಸಭೆಯಲ್ಲಿ ಸೇರಕೂಡದು, ಇಸ್ರಾಯೇಲ್ ವಂಶದವರ ಪಟ್ಟಿಯಲ್ಲಿ ಅವರ ಹೆಸರುಗಳು ಲಿಖಿತವಾಗವು, ಅವರು ಇಸ್ರಾಯೇಲ್ ದೇಶದಲ್ಲಿ ಪ್ರವೇಶಿಸಲೂಬಾರದು; ನಾನೇ ಕರ್ತನಾದ ಯೆಹೋವನು ಎಂದು ನಿಮಗೆ ಗೊತ್ತಾಗುವದು. 10 ಕ್ಷೇಮವಿಲ್ಲದಿದ್ದರೂ ಅವರು ಕ್ಷೇಮ ಎಂದು ಹೇಳಿ ನನ್ನ ಜನರನ್ನು ವಂಚಿಸಿದ್ದಾರಲ್ಲಾ. ಒಬ್ಬನು ತೆಳುವಾದ ಗೋಡೆಯನ್ನು ಕಟ್ಟಿದ್ದರೆ, ಇಗೋ, ಅದಕ್ಕೆ ಸುಣ್ಣ ಬಳಿಯುತ್ತಾರೆ; 11 ಆದಕಾರಣ ನೀನು ಸುಣ್ಣಬಳಿಯುವವರಿಗೆ ಹೀಗೆ ನುಡಿ - ವಿಪರೀತ ಮಳೆಯಾಗಿ ಗೋಡೆಯು ಬಿದ್ದುಹೋಗುವದು, ಆನೆಕಲ್ಲುಗಳು ಸುರಿಯುವವು; ಬಿರುಗಾಳಿಯು ಗೋಡೆಯನ್ನು ಒಡೆದುಹಾಕುವದು; 12 ಇಗೋ, ಗೋಡೆಯು ಬಿದ್ದ ಮೇಲೆ ನೀವು ಬಳಿದ ಸುಣ್ಣ ಎಲ್ಲಿ ಎಂದು ನಿಮ್ಮನ್ನು ಕೇಳುವರಲ್ಲವೆ. 13 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ಸಿಟ್ಟುಗೊಂಡು ಗೋಡೆಯನ್ನು ಬಿರುಗಾಳಿಯಿಂದ ಒಡೆದುಹಾಕುವೆನು; ಅದನ್ನು ನಾಶಮಾಡಲಿಕ್ಕೆ ನನ್ನ ಕೋಪದಿಂದ ವಿಪರೀತ ಮಳೆಯುಂಟಾಗುವದು, [ನನ್ನ] ರೋಷದಿಂದ ಆನೆಕಲ್ಲುಗಳು ಸುರಿಯುವವು; 14 ನೀವು ಸುಣ್ಣ ಬಳಿದ ಗೋಡೆಯನ್ನು ನಾನು ಹೀಗೆ ಕೆಡವಿ ನೆಲಸಮಮಾಡಿ ಅದರ ಅಸ್ತಿವಾರವನ್ನು ಬೈಲುಪಡಿಸುವೆನು; ಅದು ಬಿದ್ದು ಹೋಗುವದು, ಮತ್ತು ನೀವು ಅದರೊಳಗೆ ಸಿಕ್ಕಿಕೊಂಡು ನಾಶವಾಗುವಿರಿ; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು. 15 ಹೀಗೆ ನಾನು ಗೋಡೆಯಲ್ಲಿಯೂ ಅದಕ್ಕೆ ಸುಣ್ಣ ಬಳಿದ ನಿಮ್ಮಲ್ಲಿಯೂ ರೋಷವನ್ನು ತೀರಿಸಿಕೊಂಡು ಇಂತೆನ್ನುವೆನು - 16 ಇಸ್ರಾಯೇಲಿನ ಪ್ರವಾದಿಗಳೇ, ಕ್ಷೇಮವಿಲ್ಲದಿದ್ದರೂ ಕ್ಷೇಮವಾಗುವದೆಂಬ ದರ್ಶನಗಳನ್ನು ನೀವು ಕಂಡು ಯೆರೂಸಲೇವಿುನ ವಿಷಯವಾಗಿ ಪ್ರವಾದಿಸಿದ್ದೀರಲ್ಲಾ; ಗೋಡೆಯು ಇಲ್ಲವಾಯಿತು, ಅದಕ್ಕೆ ಸುಣ್ಣ ಬಳಿದವರೂ ಇಲ್ಲವಾದರು. ಇದು ಕರ್ತನಾದ ಯೆಹೋವನ ನುಡಿ. 17 ನರಪುತ್ರನೇ, ಸ್ವಕಲ್ಪಿತವಾದದ್ದನ್ನು ಕಣಿಹೇಳುವ ನಿನ್ನ ಸ್ವಕುಲಸ್ತ್ರೀಯರ ಕಡೆಗೆ ಮುಖಮಾಡಿಕೊಂಡು ಅವರಿಗೆ ಖಂಡನೆಯಾಗಿ ಹೀಗೆ ಪ್ರವಾದಿಸು. 18 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಜನರ ಪ್ರಾಣಗಳನ್ನು ಬೇಟೆಯಾಡಬೇಕೆಂದು ಎಲ್ಲರ ಮೊಣಕೈಗಳಿಗೆ ತಾಯಿತಿಗಳನ್ನು ಕಟ್ಟಿ ಉದ್ದವಾದವರಿಗೂ ಗಿಡ್ಡಾದವರಿಗೂ ತಕ್ಕತಕ್ಕ ಮುಸುಕುಗಳನ್ನು ಸಿದ್ಧಮಾಡಿಕೊಂಡಿರುವ ಸ್ತ್ರೀಯರ ಗತಿಯನ್ನು ಏನೆಂದು ಹೇಳಲಿ! ಸ್ತ್ರೀಯರೇ, ನೀವು ನನ್ನ ಜನರ ಪ್ರಾಣಗಳನ್ನು ಬೇಟೆಯಾಡಿ ಸ್ವಂತ ಪ್ರಾಣಗಳನ್ನು ಉಳಿಸಿಕೊಳ್ಳುವಿರೋ? 19 ನೀವು ಜವೆಗೋದಿಯ ಹಿಡಿಗಳನ್ನೂ ರೊಟ್ಟಿಯ ಚೂರುಗಳನ್ನೂ ಆಶಿಸಿ ಸುಳ್ಳುಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳುವದರಿಂದ ಸಾಯದಿರತಕ್ಕವರನ್ನು ಸಾಯಿಸಿ ಸಾಯತಕ್ಕವರನ್ನು ಉಳಿಸಿ ನನ್ನ ಜನರ ನಡುವೆ ನನ್ನ ಘನತೆಗೆ ಕುಂದು ತಂದಿದ್ದೀರಿ. 20 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ನೀವು ಜನರ ಪ್ರಾಣಗಳನ್ನು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವದಕ್ಕೆ ಸಾಧನವಾದ ನಿಮ್ಮ ತಾಯಿತಿಗಳಿಗೆ ನಾನು ಹೇಸಿ ಅವುಗಳನ್ನು ನಿಮ್ಮ ಕೈಗಳಿಂದ ಕಿತ್ತುಹಾಕುವೆನು; ನೀವು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವ ಪ್ರಾಣಗಳನ್ನು ನಾನು ಬಿಡಿಸಿಬಿಡುವೆನು. 21 ನಾನು ನಿಮ್ಮ ಮುಸುಕುಗಳನ್ನೂ ಹರಿದು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ಅವರು ಇನ್ನು ಮೇಲೆ ನಿಮ್ಮ ಕೈಗೆ ಬೇಟೆಯಾಗಿ ಸಿಕ್ಕುವದಿಲ್ಲ; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು. 22 ನಾನು ವ್ಯಥೆಗೊಳಿಸದ ಶಿಷ್ಟನ ಮನಸ್ಸನ್ನು ನೀವು ಸುಳ್ಳಾಡಿ ಕುಂದಿಸಿದ್ದರಿಂದಲೂ ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನ ಕೈಗಳನ್ನು ಬಲಪಡಿಸಿದ್ದರಿಂದಲೂ 23 ನೀವು ವಿುಥ್ಯಾದರ್ಶನವನ್ನು ಹೊಂದಿ ಕಣಿಹೇಳುವ ಕೆಲಸವು ಇನ್ನು ನಡಿಯುವದೇ ಇಲ್ಲ; ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India