Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 9 - ಕನ್ನಡ ಸತ್ಯವೇದವು J.V. (BSI)

1 ಆದರೆ ಸಂಕಟಪಟ್ಟ ದೇಶಕ್ಕೆ ಅಂಧಕಾರವಿನ್ನಿಲ್ಲ. ಪೂರ್ವಕಾಲದಲ್ಲಿ ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳನ್ನು ಆತನು ಅವಮಾನಕ್ಕೆ ಗುರಿಮಾಡಿದನು; ಅನಂತರದಲ್ಲಿ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿಗಿರುವ ಗಲಿಲಾಯ ಸೀಮೆ ಈ ಪ್ರಾಂತವನ್ನೆಲ್ಲಾ ಘನಪಡಿಸಿದ್ದಾನೆ.

2 ಕತ್ತಲಲ್ಲಿ ಸಂಚರಿಸಿದ ಜನರಿಗೆ ದೊಡ್ಡ ಬೆಳಕು ಕಾಣಿಸಿತು, ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಪ್ರಕಾಶವು ಹೊಳೆಯಿತು.

3 ನೀನು ಪ್ರಜೆಗಳನ್ನು ವೃದ್ಧಿಗೊಳಿಸಿದ್ದೀ, ಅವರಿಗೆ ಸಂತೋಷವನ್ನು ಹೆಚ್ಚಿಸಿದ್ದೀ; ಸುಗ್ಗಿಕಾಲದಲ್ಲಿ ಜನರು ಹರ್ಷಿಸುವ ಹಾಗೂ ಕೊಳ್ಳೆಯನ್ನು ಹಂಚಿಕೊಳ್ಳುವವರು ಹೆಚ್ಚಳಪಡುವ ಹಾಗೂ ನಿನ್ನ ಮುಂದೆ ಆನಂದಿಸುತ್ತಾರೆ.

4 ಅವರಿಗೆ ಭಾರವಾದ ನೊಗವನ್ನೂ ಬೆನ್ನನ್ನು ಹೊಡೆದ ಕೋಲನ್ನೂ ಬಿಟ್ಟಿಹಿಡಿದವನ ದೊಣ್ಣೆಯನ್ನೂ ವಿುದ್ಯಾನಿನ ನಾಶದಿನದಲ್ಲಿ ಮುರಿದುಬಿಟ್ಟಂತೆ ಮುರಿದುಬಿಟ್ಟಿದ್ದೀ.

5 [ಯುದ್ಧದ] ಗದ್ದಲದಲ್ಲಿ ತುಳಿದಾಡಿದವರೆಲ್ಲರ ಮೆಟ್ಟುಗಳೂ ರಕ್ತದಲ್ಲಿ ಹೊರಳಾಡಿಸಿದ ಉಡುಪುಗಳೂ ಅಗ್ನಿಗೆ ಆಹಾರವಾಗಿ ಸುಟ್ಟುಹೋಗುವವು.

6 ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರವಿುಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು.

7 ಅವನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು, ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು, ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವದು; ಸೇನಾಧೀಶ್ವರನಾದ ಯೆಹೋವನ ಆಗ್ರಹವು ಇದನ್ನು ನೆರವೇರಿಸುವದು.


ಯೆಹೋವನು ಇಸ್ರಾಯೇಲ್ಯರ ಮೇಲೆ ಕೋಪಗೊಂಡು ಉಂಟುಮಾಡುವ ಈತಿಬಾಧೆಗಳು

8 ಕರ್ತನು ಯಾಕೋಬ್ಯರಿಗೆ ವಿರುದ್ಧವಾಗಿ ಒಂದು ಮಾತನ್ನು ಹೇಳಿ ಕಳುಹಿಸಿದನು; ಅದು ಇಸ್ರಾಯೇಲ್ಯರಿಗೆ ತಗಲಿತು.

9 ಇಟ್ಟಿಗೆಗಳು ಬಿದ್ದುಹೋದವು, ಹೋಗಲಿ, ಕೆತ್ತಿದ ಕಲ್ಲಿನಿಂದ ಕಟ್ಟುವೆವು; ಅತ್ತಿಮರಗಳು ಕಡಿಯಲ್ಪಟ್ಟವು, ಇರಲಿ,

10 ದೇವದಾರುಗಳನ್ನು ಹಾಕುವೆವು ಎಂದು ಗರ್ವದಿಂದಲೂ ಉಬ್ಬಟೆಯಿಂದಲೂ ಹೇಳಿಕೊಳ್ಳುವ ಎಫ್ರಾಯೀಮ್ಯರು ಸಮಾರ್ಯದ ನಿವಾಸಿಗಳು ಇವರೆಲ್ಲರಿಗೂ ಆ ಮಾತು ಗೊತ್ತಾಗುವದು.

11 ಯೆಹೋವನು ರೆಚೀನನ ವೈರಿಗಳನ್ನು ಅವರಿಗೆ ವಿರುದ್ಧವಾಗಿ ಹೆಚ್ಚಿಸಿದ್ದಾನೆ; ಅವರ ಮುಂದೆ ಅರಾಮ್ಯರನ್ನು ಅವರ ಹಿಂದೆ ಫಿಲಿಷ್ಟಿಯರನ್ನು ಅಂತು ಅವನ ಶತ್ರುಗಳನ್ನೆಲ್ಲಾ ಎಬ್ಬಿಸಿದ್ದಾನೆ.

12 ಇವರು ಇಸ್ರಾಯೇಲ್ಯರನ್ನು ಬಾಯಿತೆರೆದು ನುಂಗಿದ್ದಾರೆ. ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೆ ಕೈ ಎತ್ತಿಯೇ ಇದೆ.

13 ಹೀಗಿದ್ದರೂ ಆ ಜನರು ತಮ್ಮನ್ನು ಹೊಡೆದಾತನ ಕಡೆಗೆ ತಿರುಗಿಕೊಳ್ಳಲೂ ಇಲ್ಲ, ಸೇನಾಧೀಶ್ವರನಾದ ಯೆಹೋವನನ್ನು ಸೇವಿಸಲೂ ಇಲ್ಲ.

14 ಆದಕಾರಣ ಯೆಹೋವನು ಇಸ್ರಾಯೇಲಿನಿಂದ ತಲೆಬಾಲಗಳನ್ನೂ ತಾಲತೃಣಗಳನ್ನೂ ಒಂದೇ ದಿನದಲ್ಲಿ ಕಡಿದುಬಿಟ್ಟಿದ್ದಾನೆ.

15 (ಘನಹೊಂದಿದ ಹಿರಿಯನೇ ತಲೆ; ಸುಳ್ಳುಬೋಧನೆ ಮಾಡುವ ಪ್ರವಾದಿಯೇ ಬಾಲ).

16 ಈ ಜನರನ್ನು ನಡಿಸುವವರು ದಾರಿತಪ್ಪಿಸುವವರಾಗಿದ್ದಾರಷ್ಟೆ; ನಡಿಸಲ್ಪಟ್ಟವರೂ ನಾಶವಾಗುತ್ತಾರೆ.

17 ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಉಲ್ಲಾಸಿಸನು, ಅವರಲ್ಲಿನ ಅನಾಥರನ್ನೂ ವಿಧವೆಯರನ್ನೂ ಕರುಣಿಸನು; ಪ್ರತಿಯೊಬ್ಬನೂ ಭ್ರಷ್ಟನೂ ದುಷ್ಟನೂ ಆಗಿದ್ದಾನೆ; ಎಲ್ಲರ ಬಾಯೂ ನೀಚವಾಗಿ ಮಾತಾಡುತ್ತದೆ. ಎಷ್ಟು ದಂಡಿಸಿದರೂ ಆತನ ಕೋಪವು ತೀರದೆ ಕೈ ಎತ್ತಿಯೇ ಇದೆ.

18 ದುಷ್ಟತನವು ಬೆಂಕಿಯಂತೆ ಉರಿದು ಮುಳ್ಳುಗಿಳ್ಳನ್ನು ನುಂಗಿ ಅರಣ್ಯದ ಪೊದೆಗಳನ್ನು ಹತ್ತಿಕೊಳ್ಳಲು ಅವು ಹೊಗೆಹೊಗೆಯಾಗಿ ಸುತ್ತಿಸುತ್ತಿಕೊಂಡು ಮೇಲಕ್ಕೆ ಏರುತ್ತವೆ.

19 ಸೇನಾಧೀಶ್ವರನಾದ ಯೆಹೋವನ ಕೋಪೋದ್ರೇಕದಿಂದ ದೇಶವು ಸುಟ್ಟುಹೋಗಿದೆ; ಪ್ರಜೆಯು ಅಗ್ನಿಗೆ ಆಹುತಿಯಾಗಿದೆ; ಅಣ್ಣನು ತಮ್ಮನನ್ನು ಕರುಣಿಸನು.

20 ಬಲಗಡೆಯಲ್ಲಿರುವದನ್ನು ಕಿತ್ತುಕೊಂಡು [ತಿಂದರೂ] ಹಸಿದೇ ಇರುತ್ತಾರೆ; ಎಡಗಡೆಯಲ್ಲಿರುವದನ್ನು ಉಂಡರೂ ತೃಪ್ತಿಗೊಳ್ಳರು; ಒಬ್ಬೊಬ್ಬನೂ ತನ್ನ ತನ್ನ ತೋಳಿನ ಮಾಂಸವನ್ನು ತಿನ್ನುತ್ತಾನೆ.

21 ಮನಸ್ಸೆಯು ಎಫ್ರಾಯೀಮನ್ನು, ಎಫ್ರಾಯೀಮು ಮನಸ್ಸೆಯನ್ನು ತಿಂದು ಬಿಡುತ್ತದೆ, ಈ ಎರಡೂ ಯೆಹೂದಕ್ಕೆ ವಿರುದ್ಧವಾಗಿವೆ. ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೆ ಕೈ ಎತ್ತಿಯೇ ಇದೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು