Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 60 - ಕನ್ನಡ ಸತ್ಯವೇದವು J.V. (BSI)


ಯೆರೂಸಲೇವಿುನ ಮುಂದಿನ ಮಹಾವೈಭವವು

1 ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.

2 ಇಗೋ, ಕತ್ತಲು ಭೂವಿುಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು.

3 ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು, ಅರಸರು ನಿನ್ನಲ್ಲಿನ ಉದಯಪ್ರಕಾಶಕ್ಕೆ ಬರುವರು.

4 ಕಣ್ಣೆತ್ತಿ ಸುತ್ತಲು ನೋಡು, ನಿನ್ನ ಮಕ್ಕಳೆಲ್ಲರೂ ಗುಂಪುಕೂಡಿ ನಿನ್ನ ಬಳಿಗೆ ಸೇರುತ್ತಿದ್ದಾರೆ; ಗಂಡು ಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣುಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ.

5 ನೀನು ನೋಡಿ ಕಳೆಗೊಳ್ಳುವಿ, ನಿನ್ನ ಹೃದಯವು ಅದರುತ್ತಾ ಉಬ್ಬುವದು; ಏಕಂದರೆ ಸಮುದ್ರವ್ಯಾಪಾರ ಸಮೃದ್ಧಿಯು ನಿನ್ನ ಕಡೆಗೆ ತಿರುಗುವದು, ಜನಾಂಗಗಳ ಐಶ್ವರ್ಯವು ನಿನಗೆ ದೊರೆಯುವದು.

6 ಉಷ್ಟ್ರಸಮೂಹವೂ ವಿುದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು; ಆ ಸ್ವಾರ್ಥವಾಹರೆಲ್ಲಾ ಕನಕವನ್ನೂ ಧೂಪವನ್ನೂ ತೆಗೆದುಕೊಂಡು ಶೆಬದಿಂದ ಬಂದು ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು.

7 ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸಿ ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ನನ್ನ ಸುಂದರಾಲಯವನ್ನು ಚಂದಗೊಳಿಸುವೆನು.

8 ಆಹಾ, ದ್ವೀಪನಿವಾಸಿಗಳೂ ನನ್ನನ್ನು ನಿರೀಕ್ಷಿಸುವವರಾಗಿದ್ದಾರೆ! ಮೇಘದೋಪಾದಿಯಲ್ಲಿಯೂ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆಯೂ ಹಾರಿಬರುತ್ತಿರುವ ಇವರು ಯಾರು?

9 ಯೆಹೋವನು ನಿನ್ನನ್ನು ವೈಭವಪಡಿಸಿರುವದನ್ನು ಕೇಳಿ ತಾರ್ಷೀಷಿನ ಹಡಗುಗಳು ನಿನ್ನ ದೇವರಾದ ಯೆಹೋವನ ನಾಮಮಹತ್ತಿನ ವಿಧಿಯೂ ಇಸ್ರಾಯೇಲಿನ ಸದಮಲಸ್ವಾವಿುಯ ಸನ್ನಿಧಿಯೂ ಆದ ಸ್ಥಾನಕ್ಕೆ ನಿನ್ನ ಮಕ್ಕಳನ್ನು ಅವರ ಬೆಳ್ಳಿ ಬಂಗಾರಗಳ ಸಮೇತ ದೂರದಿಂದ ತರುವದರಲ್ಲಿ ಮುಂದಾಗುತ್ತಿವೆ.

10 ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಕಟ್ಟುವರು, ಅವರ ಅರಸರು ನಿನ್ನನ್ನು ಸೇವಿಸುವರು; ನನ್ನ ಕೋಪದಿಂದ ನಿನ್ನನ್ನು ಹೊಡೆದುಬಿಟ್ಟು ನನ್ನ ಕೃಪೆಯಿಂದ ನಿನ್ನನ್ನು ಕರುಣಿಸಿದ್ದೇನಷ್ಟೆ.

11 ಜನಾಂಗಗಳ ಐಶ್ವರ್ಯವನ್ನು ನಿನ್ನಲ್ಲಿಗೆ ತರುತ್ತಿರುವರು, ಅವುಗಳ ಅರಸರು ಮೆರವಣಿಗೆಯಾಗಿ ಬರುತ್ತಿರುವರು; ಇದರಿಂದ ನಿನ್ನ ಬಾಗಿಲುಗಳು ಹಗಲಿರುಳೂ ಮುಚ್ಚದೆ ಸದಾ ತೆರೆದಿರುವವು.

12 ನಿನ್ನನ್ನು ಸೇವಿಸಲೊಲ್ಲದ ಜನಾಂಗ ರಾಜ್ಯಗಳು ನಾಶವಾಗುವವು; ಹೌದು, ಆ ಜನಾಂಗಗಳು ಹಾಳೇ ಹಾಳಾಗಿ ಹೋಗುವವು.

13 ನನ್ನ ಪವಿತ್ರಾಲಯವನ್ನು ಭೂಷಿಸುವದಕ್ಕಾಗಿ ತುರಾಯಿ, ತಪಸಿ, ತಿಲಕ ಈ ವೃಕ್ಷರೂಪವಾದ ಲೆಬನೋನಿನ ಮಹಿಮೆಯು ನಿನಗಾಗುವದು; ನನ್ನ ಪಾದಸನ್ನಿಧಿಯ ಮಂದಿರವನ್ನು ವೈಭವಪಡಿಸುವೆನು.

14 ನಿನ್ನನ್ನು ಕುಗ್ಗಿಸಿದವರ ಸಂತಾನದವರು ನಿನ್ನ ಬಳಿಗೆ ತಗ್ಗಿಬಗ್ಗಿ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರೂ ನಿನ್ನ ಕಾಲಕೆಳಗೆ ಅಡ್ಡಬಿದ್ದು ನೀನು ಯೆಹೋವನ ಪಟ್ಟಣ, ಇಸ್ರಾಯೇಲಿನ ಸದಮಲಸ್ವಾವಿುಯ ಚೀಯೋನ್ ಎಂದು ಕೊಂಡಾಡುವರು.

15 ನಿವಾಸಿಗಳು ಬಿಟ್ಟು ಬಿಟ್ಟ, ದ್ವೇಷಕ್ಕೀಡಾದ, ಯಾರೂ ಹಾದು ಹೋಗದ ನಿನಗೆ ನಾನು ನಿತ್ಯಶ್ರೇಷ್ಠತೆಯನ್ನು ದಯಪಾಲಿಸಿ ನಿನ್ನನ್ನು ತಲತಲಾಂತರಗಳವರಿಗೆ ಉಲ್ಲಾಸಕರವಾಗುವಂತೆ ಮಾಡುವೆನು.

16 ನೀನು ಜನಾಂಗಗಳ ಮೊಲೆಕೂಸಾಗುವಿ, ರಾಜರು ನಿನಗೆ ಮೊಲೆಯೂಡಿಸುವರು; ಆಗ ಯೆಹೋವನಾದ ನಾನೇ ನಿನ್ನ ರಕ್ಷಕನು, ನಿನ್ನ ವಿಮೋಚಕನು, ಯಾಕೋಬ್ಯರ ಶೂರನು ಎಂದು ನೀನು ತಿಳಿದುಕೊಳ್ಳುವಿ.

17 ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇವಿುಸುವೆನು.

18 ನಿನ್ನ ದೇಶದಲ್ಲಿ ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು, ನಿನ್ನ ಪ್ರಾಂತಗಳೊಳಗೆ ಭಂಗನಾಶನಗಳ ವಾರ್ತೆಯೇ ಕೇಳಬರುವದಿಲ್ಲ; ಆಗ ದೇವರಕ್ಷಣೆಯು ನನ್ನ ಪೌಳಿಗೋಡೆಗಳು, ದೇವಸ್ತೋತ್ರವು ನನ್ನ ಬಾಗಿಲುಗಳು ಎಂದು ಅಂದುಕೊಳ್ಳುವಿ.

19 ಇನ್ನು ಮೇಲೆ ಹಗಲಿನಲ್ಲಿ ನಿನಗಿರುವ ಪ್ರಕಾಶವು ಸೂರ್ಯನದಲ್ಲ; ಚಂದ್ರನು ನಿನ್ನ ಬೆಳಕಿಗಾಗಿ ಎಂದಿಗೂ ಕಳೆಗೊಳ್ಳನು; ಯೆಹೋವನೇ ನಿನಗೆ ನಿತ್ಯಪ್ರಕಾಶವು, ನಿನ್ನ ದೇವರೇ ನಿನಗೆ ತೇಜಸ್ಸು.

20 ನಿನ್ನ ಸೂರ್ಯನು ಇನ್ನು ಮುಣುಗನು, ನಿನ್ನ ಚಂದ್ರನು ತೊಲಗನು; ಯೆಹೋವನೇ ನಿನಗೆ ನಿತ್ಯಪ್ರಕಾಶವಾಗಿರುವನು, ನೀನು ದುಃಖಿಸುವ ದಿನಗಳು ಕೊನೆಗಾಣುವವು.

21 ನಿನ್ನ ಜನರೆಲ್ಲಾ ಸದ್ಧರ್ಮಿಗಳಾಗಿರುವರು; ನನ್ನ ಪ್ರಭಾವಕ್ಕೋಸ್ಕರ ನಾನು ನೆಟ್ಟ ಸಸಿಯಾಗಿಯೂ ನನ್ನ ಕೈ ಸೃಷ್ಟಿಸಿದ ಪ್ರಜೆಯಾಗಿಯೂ ದೇಶವನ್ನು ಸದಾ ಅನುಭವಿಸುವರು.

22 ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು