ಯೆಶಾಯ 59 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್ಯರ ರಕ್ಷಣೆಗೆ ಅವರ ಪಾಪವೇ ಅಡ್ಡಿ 1 ಇಗೋ, ಯೆಹೋವನ ಹಸ್ತವು ರಕ್ಷಿಸಲಾರದಂತೆ ಮೋಟುಗೈಯಲ್ಲ; ಆತನ ಕಿವಿಯು ಕೇಳಲಾರದ ಹಾಗೆ ಕಿವುಡಲ್ಲ. 2 ಆದರೆ ನಿಮ್ಮ ಅಪರಾಧಗಳೇ ನಿಮ್ಮ ದೇವರಿಂದ ನಿಮ್ಮನ್ನು ಅಗಲಿಸುತ್ತಾ ಬಂದಿವೆ; ನಿಮ್ಮ ಪಾಪಗಳೇ ಆತನು ಕೇಳಲಾರದಂತೆ ಆತನ ಮುಖಕ್ಕೆ ಅಡ್ಡವಾಗಿವೆ. 3 ನಿಮ್ಮ ಕೈಗಳು ರಕ್ತದಿಂದ ಹೊಲಸಾಗಿವೆ, ನಿಮ್ಮ ಬೆರಳುಗಳು ಅಪರಾಧದಿಂದ ಅಶುದ್ಧವಾಗಿವೆ; ನಿಮ್ಮ ತುಟಿಗಳು ಸುಳ್ಳಾಡುತ್ತವೆ, ನಿಮ್ಮ ನಾಲಿಗೆಯು ಕೆಡುಕನ್ನು ನುಡಿಯುತ್ತದೆ. 4 [ಇವರಲ್ಲಿ] ಯಾರೂ ನ್ಯಾಯವಾಗಿ ನ್ಯಾಯಾಸ್ಥಾನಕ್ಕೆ ಹೋಗುವದಿಲ್ಲ, ಯಾರೂ ಸತ್ಯವಾಗಿ ವಾದಿಸುವದಿಲ್ಲ; ಇವರು ಶೂನ್ಯವಾಗಿರುವದನ್ನು ನಂಬಿಕೊಂಡು ಅಬದ್ಧವನ್ನಾಡುತ್ತಾರೆ; ಹಿಂಸೆಯನ್ನು ಗರ್ಭಧರಿಸಿ ಶ್ರಮೆಯನ್ನು ಹೆರುತ್ತಾರೆ. 5 ಹಾವಿನಂತೆ [ಕೇಡಿನ] ಮೊಟ್ಟೆಗಳನ್ನು ಮರಿಮಾಡುತ್ತಾರೆ, ಜಾಡರ ಹುಳದಂತೆ ಬಲೆಯನ್ನು ನೇಯುತ್ತಾರೆ; ಆ ಮೊಟ್ಟೆಗಳನ್ನು ತಿನ್ನುವವನಿಗೆ ಮರಣವಾಗುವದು, ಒಡೆದುಬಿಡುವವನಿಗೆ ವಿಷದ ಮರಿಹೊರಡುವದು. 6 ಇವರ ಬಲೆಯ ದಾರವು ಬಟ್ಟೆಯಾಗದು, ಇವರು ನೇಯ್ದದ್ದು ಹೊದಿಕೆಯಾಗದು; ಇವರ ಕಾರ್ಯಗಳು ಅಧರ್ಮಕಾರ್ಯಗಳು, ಇವರ ಕೈಯಲ್ಲಿ ಬಲಾತ್ಕಾರವೇ. 7 ಇವರ ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುತ್ತವೆ, ಇವರು ನಿರಪರಾಧಿಯ ರಕ್ತವನ್ನು ಸುರಿಸಲು ಆತುರಪಡುತ್ತಾರೆ, ಇವರ ಯೋಚನೆಗಳು ಅಧರ್ಮದ ಯೋಚನೆಗಳೇ, ಇವರು ಹೋದ ದಾರಿಗಳಲ್ಲಿ ಭಂಗವೂ ನಾಶನವೂ ಉಂಟಾಗುತ್ತವೆ; 8 ಇವರು ಸಮಾಧಾನದ ಮಾರ್ಗವನ್ನೇ ಅರಿಯರು, ಇವರ ಹಾದಿಗಳಲ್ಲಿ ಯಾವ ನ್ಯಾಯವೂ ಇಲ್ಲ, ತಮ್ಮ ಮಾರ್ಗಗಳನ್ನು ವಕ್ರಮಾಡಿಕೊಂಡಿದ್ದಾರೆ, ಅವುಗಳಲ್ಲಿ ನಡೆಯುವ ಯಾವನೂ ಸಮಾಧಾನವನ್ನರಿಯನು. 9 ಆದಕಾರಣ [ಯೆಹೋವನ] ನ್ಯಾಯನಿರ್ಣಯವು ನಮಗೆ ದೂರವಾಗಿದೆ. [ಆತನ] ರಕ್ಷಣಧರ್ಮದ ಕಾರ್ಯವು ನಮಗೆ ಸಂಧಿಸುವದಿಲ್ಲ; ಬೆಳಕನ್ನು ಎದುರುನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ, ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲೇ ನಡೆಯುತ್ತೇವೆ. 10 ಕುರುಡರಂತೆ ಗೋಡೆಯನ್ನು ತಡವರಿಸುತ್ತೇವೆ, ಹೌದು, ಕಣ್ಣಿಲ್ಲದವರ ಹಾಗೆ ತಡವಾಡುತ್ತೇವೆ, ಮಧ್ಯಾಹ್ನದಲ್ಲಿ ಸಂಜೆಯಂತೆ ಎಡವುತ್ತೇವೆ, ಪುಷ್ಟರ ನಡುವೆ ಸತ್ತವರ ಹಾಗಿದ್ದೇವೆ. 11 ನಾವೆಲ್ಲರೂ ಕರಡಿಗಳಂತೆ ಗುರುಗುಟ್ಟುತ್ತೇವೆ, ಪಾರಿವಾಳಗಳಂತೆ ಮೂಲುಗುತ್ತಲೇ ಇದ್ದೇವೆ; ನಾವು [ಯೆಹೋವನ] ನ್ಯಾಯನಿರ್ಣಯವನ್ನು ಎದುರುನೋಡಿದರೂ ಅದು ಸಿಕ್ಕದು, [ಆತನ] ರಕ್ಷಣಕಾರ್ಯವನ್ನು ನಿರೀಕ್ಷಿಸಿದರೂ ಅದು ನಮಗೆ ದೂರ. 12 ಏಕೆಂದರೆ ನಮ್ಮ ತಪ್ಪುಗಳು ನಿನ್ನ ದೃಷ್ಟಿಗೆ ಹೆಚ್ಚಾಗಿ ಬಿದ್ದಿವೆ, ನಮ್ಮ ಪಾಪಗಳು ನಮಗೆ ವಿರುದ್ಧವಾಗಿ ಸಾಕ್ಷಿಕೊಡುತ್ತವೆ; ನಮ್ಮ ತಪ್ಪುಗಳು ನಮ್ಮ ಸಂಗಡಲೇ ಇವೆ, ನಮ್ಮ ಅಪರಾಧಗಳನ್ನು ನಾವೇ ಬಲ್ಲೆವು. 13 ಹೌದು, ಯೆಹೋವನಿಗೆ ತಪ್ಪಿ ನಡೆದು ಆತನನ್ನು ಅಲ್ಲಗಳೆದಿದ್ದೇವೆ, ನಮ್ಮ ದೇವರ ಅನುಸರಣೆಯನ್ನು ಬಿಟ್ಟು ತಿರುಗಿಕೊಂಡಿದ್ದೇವೆ, ಅನ್ಯಾಯವನ್ನೂ ದ್ರೋಹವನ್ನೂ ನುಡಿದಿದ್ದೇವೆ, ಹೃದಯಪೂರ್ವಕವಾಗಿ ಸುಳ್ಳುಮಾತುಗಳನ್ನು ಕಲ್ಪಿಸಿ ಆಡಿದ್ದೇವೆ. 14 ನ್ಯಾಯವು ಹಿಂದಕ್ಕೆ ತಳ್ಳಲ್ಪಟ್ಟಿದೆ, ಧರ್ಮವು ದೂರದಲ್ಲಿ ನಿಂತಿದೆ, ಸತ್ಯವು ಚಾವಡಿಯಲ್ಲಿ ಬಿದ್ದುಹೋಗಿದೆ, ಯಥಾರ್ಥವು ಪ್ರವೇಶಿಸಲಾರದು. 15 ಸತ್ಯವು ಇಲ್ಲವೇ ಇಲ್ಲ, ಕೇಡನ್ನು ಬಿಟ್ಟವನು ಸೂರೆಯಾಗುತ್ತಾನೆ. ತನ್ನ ಜನರನ್ನು ರಕ್ಷಿಸಲು ಯೆಹೋವನು ಮುಂಗೊಂಡದ್ದು 16 ಯೆಹೋವನು ಇದನ್ನು ನೋಡಿ ನ್ಯಾಯವಿಲ್ಲವಲ್ಲಾ ಎಂದು ವ್ಯಸನಗೊಂಡನು; ಉದ್ಧಾರಕನಾದ ಯಾವ ಪುರುಷನೂ ಇಲ್ಲವೆಂದು ಕಂಡು ಸ್ತಬ್ಧನಾದನು; ಆಗ ಆತನ ಸ್ವಹಸ್ತವೇ ಆತನಿಗೆ ರಕ್ಷಣಸಾಧನವಾಯಿತು, ಆತನ ಧರ್ಮವೇ ಆತನಿಗೆ ಆಧಾರವಾಯಿತು. 17 ಧರ್ಮವನ್ನು ವಜ್ರ ಕವಚವನ್ನಾಗಿ ತೊಟ್ಟು ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಂಡನು; ರೋಷವೆಂಬ ವಸ್ತ್ರವನ್ನು ಉಡುಪುಮಾಡಿಕೊಂಡು ಆಗ್ರಹವನ್ನು ನಿಲುವಂಗಿಯನ್ನಾಗಿ ಹಾಕಿಕೊಂಡನು. 18 ತನ್ನ ವಿರೋಧಿಗಳಲ್ಲಿಟ್ಟ ಕ್ರೋಧವನ್ನು ಈಡೇರಿಸಿ ತನ್ನ ಶತ್ರುಗಳಿಗೆ ದಂಡನೆಯನ್ನು ವಿಧಿಸಿ ಅವರವರ ಕೃತ್ಯಗಳಿಗೆ ತಕ್ಕಂತೆ ಮುಯ್ಯಿತೀರಿಸುವನು; ಕರಾವಳಿಯವರಿಗೂ ಪ್ರತಿಕ್ರಿಯೆಮಾಡುವನು. 19 ಹೀಗಿರಲು ಪಡುವಣವರು ಯೆಹೋವನ ನಾಮಕ್ಕೆ ಹೆದರುವರು, ಮೂಡಣವರು ಆತನ ಮಹಿಮೆಗೆ ಅಂಜುವರು; ಬಿರುಗಾಳಿಯಿಂದ ಹೊಡೆಯಲ್ಪಟ್ಟು ಇಕ್ಕಟ್ಟಿನಲ್ಲಿ ಹರಿಯುವ ತೊರೆಯ ಹಾಗೆ ಆತನು ರಭಸದಿಂದ ಬರುವನಷ್ಟೆ; 20 ಆದರೆ ಚೀಯೋನಿಗೂ ದ್ರೋಹವನ್ನು ಬಿಟ್ಟುಬಿಟ್ಟ ಯಾಕೋಬ್ಯರ ಬಳಿಗೂ ವಿಮೋಚಕನಾಗಿ ಬರುವನು. ಯೆಹೋವನೇ ಇದನ್ನು ನುಡಿದಿದ್ದಾನೆ. 21 ನಾನಂತೂ ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು, ನೋಡಿರಿ; ನಿಮ್ಮಲ್ಲಿ ಆವೇಶಿಸಿರುವ ನನ್ನ ಆತ್ಮವೂ ನಿಮ್ಮ ಬಾಯಿಗೆ ನಾನು ಕೊಟ್ಟಿರುವ ಮಾತುಗಳೂ ನಿಮ್ಮ ಬಾಯಿಂದಾಗಲಿ ನಿಮ್ಮ ಸಂತತಿಯ ಬಾಯಿಂದಾಗಲಿ ನಿಮ್ಮ ಸಂತತಿಯ ಸಂತಾನದ ಬಾಯಿಂದಾಗಲಿ ಇಂದಿನಿಂದ ಎಂದಿಗೂ ತೊಲಗುವದಿಲ್ಲ ಎಂದು ಯೆಹೋವನು ಅನ್ನುತ್ತಾನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India