Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 58 - ಕನ್ನಡ ಸತ್ಯವೇದವು J.V. (BSI)


ಕಪಟಭಕ್ತಿ, ಯಥಾರ್ಥಭಕ್ತಿ ಇವುಗಳ ಲಕ್ಷಣಗಳು

1 ಗಂಟಲೆತ್ತಿ ಕೂಗು, ಸಂಕೋಚಪಡಬೇಡ, ಕೊಂಬಿನಂತೆ ದನಿಗೈದು ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು, ಯಾಕೋಬವಂಶದವರಿಗೆ ಅವರ ಪಾಪಗಳನ್ನು ಅರುಹು.

2 ಅವರಂತು ದಿನ ದಿನವೂ ನನ್ನ ದರ್ಶನಕ್ಕಾಗಿ ಬಂದು ನನ್ನ ಮಾರ್ಗವನ್ನು ತಿಳಿದುಕೊಳ್ಳುವದರಲ್ಲಿ ಹೆಚ್ಚಳಪಡುತ್ತಾರೆ; ತನ್ನ ದೇವರ ನಿಯಮಗಳನ್ನು ಬಿಡದೆ ಧರ್ಮವನ್ನಾಚರಿಸುವ ಜನಾಂಗವೋ ಎಂಬಂತೆ ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳಿಕೊಂಡು ದೇವದರ್ಶನದಲ್ಲಿ ಆನಂದಿಸುತ್ತಾರೆ.

3 ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವದಿಲ್ಲ; ನಮ್ಮ ಆತ್ಮವನ್ನು ಕುಂದಿಸಿಕೊಂಡಿದ್ದೇವೆ, ನೀನು ಗಮನಿಸದಿರುವದೇಕೆ ಅಂದುಕೊಳ್ಳುತ್ತಾರೆ. ಇಗೋ, ನಿಮ್ಮ ಉಪವಾಸದ ದಿನದಲ್ಲಿಯೂ ನಿಮ್ಮ ನಿತ್ಯದ ಕೆಲಸವನ್ನು ನಡಿಸಿ ನಿಮ್ಮ ಆಳುಗಳನ್ನು ದುಡಿತಕ್ಕೆಳೆಯುತ್ತೀರಿ.

4 ನೋಡಿರಿ, ನಿಮ್ಮ ಉಪವಾಸದ ಫಲವೇನಂದರೆ - ವ್ಯಾಜ್ಯ, ಕಲಹ, ಕೇಡಿನ ಗುದ್ದು, ಇವುಗಳೇ. ನೀವು ಈಗ ಮಾಡುವ ಉಪವಾಸವು ನಿಮ್ಮ ಪ್ರಾರ್ಥನೆಯನ್ನು ಉನ್ನತಲೋಕಕ್ಕೆ ಮುಟ್ಟಿಸತಕ್ಕದ್ದಲ್ಲ.

5 ಮನುಷ್ಯನು ತನ್ನ ಆತ್ಮವನ್ನು ಕುಂದಿಸಿಕೊಳ್ಳುವದಕ್ಕಾಗಿ ನಾನು ನೇವಿುಸಿದ ಉಪವಾಸದಿನವು ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣೀತಟ್ಟನ್ನೂ ಬೂದಿಯನ್ನೂ ಆಸನಮಾಡಿಕೊಳ್ಳುವದು ಯೆಹೋವನಿಗೆ ಸಮರ್ಪಕವಾದ ಉಪವಾಸ ಎನ್ನುತ್ತೀರೋ?

6 ನೋಡಿರಿ, ಕೇಡಿನ ಬಂಧಗಳನ್ನು ಬಿಚ್ಚುವದು, ನೊಗದ ಕಣ್ಣಿಗಳನ್ನು ಕಳಚುವದು, ಜಜ್ಜಿಹೋದವರನ್ನು ಬಿಡುಗಡೆಮಾಡುವದು, ನೊಗಗಳನ್ನೆಲ್ಲಾ ಮುರಿಯುವದು,

7 ಹಸಿದವರಿಗೆ ಅನ್ನವನ್ನು ಹಂಚುವದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವದು, ನಿನ್ನಂತೆ ನರನಾಗಿರುವ ಯಾವನಿಗೇ ಆಗಲಿ ಮುಖ ತಪ್ಪಿಸಿಕೊಳ್ಳದಿರುವದು, ಇವುಗಳೇ ನನಗೆ ಇಷ್ಟವಾದ ಉಪವಾಸವ್ರತವಲ್ಲವೇ.

8 ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಭೇದಿಸಿಕೊಂಡು ಬರುವದು, ನಿಮ್ಮ ಕ್ಷೇಮವು ಬೇಗನೆ ವಿಕಸಿಸುವದು; ನಿಮ್ಮ ಧರ್ಮವು ನಿಮಗೆ ಮುಂಬಲವಾಗಿ ಮುಂದರಿಯುವದು, ಯೆಹೋವನ ಮಹಿಮೆಯು ನಿಮಗೆ ಹಿಂಬಲವಾಗಿರುವದು.

9 ಆಗ ನೀವು ಕೂಗಿದರೆ ಯೆಹೋವನು ಉತ್ತರಕೊಡುವನು, ಮೊರೆಯಿಟ್ಟು ಕರೆದರೆ ಇಗೋ, ಇದ್ದೇನೆ, ಅನ್ನುವನು. ನೀವು ನಿಮ್ಮ ಮಧ್ಯದೊಳಗಿಂದ ನೊಗವನ್ನೂ ಬೆರಳಸನ್ನೆಯನ್ನೂ ಕೆಡುಕಿನ ನುಡಿಯನ್ನೂ ಹೋಗಲಾಡಿಸಿ

10 ನಿಮಗೆ ಪ್ರಿಯವಾದದ್ದನ್ನು ಹಸಿದವರಿಗೆ ಒದಗಿಸಿ ಕುಗ್ಗಿದವರ ಆಶೆಯನ್ನು ನೆರವೇರಿಸಿದರೆ ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವದು, ನಿಮ್ಮ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವದು.

11 ಮತ್ತು ಯೆಹೋವನು ನಿಮ್ಮನ್ನು ನಿತ್ಯವೂ ನಡಿಸುತ್ತಾ ಮರುಭೂವಿುಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸಿ ನಿಮ್ಮ ಎಲುಬುಗಳನ್ನು ಸಸಾರಮಾಡುವನು; ನೀವು ತಂಪಾದ ತೋಟಕ್ಕೂ ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ.

12 ನಿಮ್ಮ ಸಂತಾನದವರು ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರಿಗಿ ಕಟ್ಟುವರು. ನೀವು ತಲತಲಾಂತರಗಳಿಂದ ಪಾಳುಬಿದ್ದಿರುವ ಅಸ್ತಿವಾರಗಳ ಮೇಲೆ ಕಟ್ಟಡಗಳನ್ನು ಎಬ್ಬಿಸುವಿರಿ; ಬಿದ್ದ ಗೋಡೆಯನ್ನು ಹಾಕುವ ಜನಾಂಗ, ಹಾದಿಗಳನ್ನು ತಿರುಗಾಡುವ ಸ್ಥಿತಿಗೆ ತರುವ ಜನಾಂಗ, ಎಂಬೀ ಬಿರುದುಗಳು ನಿಮಗುಂಟಾಗುವವು.

13 ನೀವು ಸಬ್ಬತ್ ದಿನವನ್ನು ಅಗಮ್ಯವಾದದ್ದೆಂದು ತಿಳಿದು ಆ ನನ್ನ ಪರಿಶುದ್ಧ ದಿವಸದಲ್ಲಿ ನಿಮ್ಮ ನಿತ್ಯದ ಕೆಲಸವನ್ನು ಮಾಡದೆ ಸ್ವೇಚ್ಫೆಯಾಗಿ ನಡೆಯದೆ ಸ್ವಕಾರ್ಯದಲ್ಲಿ ನಿರತರಾಗದೆ ಹರಟೆಹರಟದೆ ಯೆಹೋವನ ಸಬ್ಬತ್ತೆಂಬ ಪರಿಶುದ್ಧ ದಿನವು ಉಲ್ಲಾಸಕರವೂ ಮಾನ್ಯವೂ ಆದದ್ದೆಂದು ಘನಪಡಿಸಿದರೆ

14 ಆಗ ನೀವು ಯೆಹೋವನಲ್ಲಿ ಉಲ್ಲಾಸಪಡುವಿರಿ, ಮತ್ತು ನಾನು ನಿಮ್ಮನ್ನು ಭೂವಿುಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ ನಿಮ್ಮ ಪಿತೃವಾದ ಯಾಕೋಬನ ಸ್ವಾಸ್ತ್ಯವನ್ನು ನೀವು ಅನುಭವಿಸುವಂತೆ ಮಾಡುವೆನು. ಯೆಹೋವನೇ ಇದನ್ನು ನುಡಿದಿದ್ದಾನೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು