ಯೆಶಾಯ 56 - ಕನ್ನಡ ಸತ್ಯವೇದವು J.V. (BSI)ಯೆಹೋವನ ನಿಯಮಗಳನ್ನು ಅನುಸರಿಸುವ ನಪುಂಸಕರೂ ವಿದೇಶೀಯರೂ ದೇವಾಲಯದಲ್ಲಿ ಹಕ್ಕುದಾರರಾಗುವದು 1 ಯೆಹೋವನು ಹೀಗನ್ನುತ್ತಾನೆ - ನ್ಯಾಯವನ್ನು ಅನುಸರಿಸಿರಿ, ಧರ್ಮವನ್ನು ಆಚರಿಸಿರಿ; ಏಕಂದರೆ ನನ್ನ ವಿಮೋಚನ ಕ್ರಿಯೆಯು ಬೇಗನೆ ಬರುವದು, ನನ್ನ ರಕ್ಷಣಧರ್ಮದ ಕಾರ್ಯವು ಶೀಘ್ರವಾಗಿ ವ್ಯಕ್ತವಾಗುವದು. 2 ಈ ವಿಧಿಯನ್ನು ಕೈಕೊಳ್ಳುವ ಮನುಷ್ಯನು ಧನ್ಯನು; ಇದನ್ನೇ ಭದ್ರವಾಗಿ ಹಿಡಿದು ಸಬ್ಬತ್‍ದಿನವನ್ನು ಹೊಲೆಮಾಡದೆ ದೇವರ ದಿನವೆಂದು ಆಚರಿಸುತ್ತಾ ಯಾವ ಕೇಡಿಗೂ ಕೈಹಾಕದ ಮಾನವನು ಭಾಗ್ಯವಂತನು. 3 ಯೆಹೋವನನ್ನು ಅವಲಂಬಿಸಿದ ವಿದೇಶೀಯನು - ಯೆಹೋವನು ತನ್ನ ಜನರಿಂದ ನನ್ನನ್ನು ಖಂಡಿತವಾಗಿ ಅಗಲಿಸುವನು ಎಂದು ಮಾತಾಡದಿರಲಿ; ಮತ್ತು ನಪುಂಸಕನು - ಅಯ್ಯೋ, ನಾನು ಗೊಡ್ಡುಮರ ಎಂದು ಅಂದುಕೊಳ್ಳದಿರಲಿ. 4 ಯೆಹೋವನು ಹೀಗನ್ನುತ್ತಾನೆ - ಸಬ್ಬತ್ ದಿನಗಳನ್ನು ನನ್ನ ದಿನಗಳೆಂದು ಆಚರಿಸಿ ನನಗೆ ಮೆಚ್ಚಿಕೆಯಾದದ್ದನ್ನು ಕೈಕೊಂಡು ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿದುಕೊಂಡಿರುವ ನಪುಂಸಕರಿಗೆ 5 ನನ್ನ ಪ್ರಾಕಾರಗಳೊಳಗೆ ನನ್ನ ಆಲಯದಲ್ಲಿ ಅವರ ಜ್ಞಾಪಕಾರ್ಥವಾಗಿ ಶಿಲೆಯನ್ನಿಟ್ಟು ಹೆಣ್ಣುಗಂಡು ಮಕ್ಕಳಿಗಿಂತ ಮೇಲಾದ ಹೆಸರುವಾಸಿಯನ್ನು ದಯಪಾಲಿಸುವೆನು; ಹೌದು, ಎಂದಿಗೂ ಅಳಿಯದ ಶಾಶ್ವತ ನಾಮವನ್ನು ಅನುಗ್ರಹಿಸುವೆನು. 6 ಅನ್ಯದೇಶೀಯರಲ್ಲಿ ಯಾರು ಯೆಹೋವನೆಂಬ ನನ್ನನ್ನು ಅವಲಂಬಿಸಿ ಸೇವಿಸಿ ನನ್ನ ನಾಮವನ್ನು ಪ್ರೀತಿಸಿ ನನಗೆ ದಾಸರಾಗಿ ಸಬ್ಬತ್ ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿಯುತ್ತಾರೋ 7 ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ ಬರಮಾಡಿ ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವೆನು; ನನ್ನ ಯಜ್ಞವೇದಿಯಲ್ಲಿ ಅವರು ಅರ್ಪಿಸುವ ಸರ್ವಾಂಗಹೋಮಗಳೂ ಯಜ್ಞಗಳೂ ನನಗೆ ಮೆಚ್ಚಿಕೆಯಾಗುವವು; ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವದು. 8 ಇಸ್ರಾಯೇಲಿನ ದೇಶಭ್ರಷ್ಟರನ್ನು ಕೂಡಿಸಿಕೊಳ್ಳುವ ಕರ್ತನಾದ ಯೆಹೋವನ ನುಡಿಯೇನಂದರೆ - ನಾನು ಕೂಡಿಸಿದ ಇಸ್ರಾಯೇಲ್ಯರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು ಎಂಬದೇ. ಅಧಿಪತಿಗಳ ಅತ್ಯಾಶೆ, ಜನರ ದೇವದ್ರೋಹ, ಇವುಗಳ ಖಂಡನೆ 9 ಅರಣ್ಯದ ಸಕಲ ಮೃಗಗಳೇ, ಕಾಡಿನ ಎಲ್ಲಾ ಜಂತುಗಳೇ, ನುಂಗಿಬಿಡುವದಕ್ಕೆ ಬನ್ನಿರಿ! 10 ಇವರ ಕಾವಲುಗಾರರು ಕುರುಡರು, ಇವರಲ್ಲಿ ಯಾರಿಗೂ ತಿಳುವಳಿಕೆಯಿಲ್ಲ; ಇವರೆಲ್ಲರೂ ಬೊಗಳಲಾರದ ಮೂಗನಾಯಿಗಳು, ನಿದ್ರೆಯನ್ನಾಶಿಸಿ ಮಲಗಿಕೊಂಡು ಕನವರಿಸುವ ನಾಯಿಗಳು. 11 ಮತ್ತು ಇವು ಹೊಟ್ಟೆಬಾಕ ನಾಯಿಗಳು, ಇವುಗಳಿಗೆ ಎಂದಿಗೂ ಸಾಕು ಎನಿಸದು. ಇಂಥವರು ಕುರಿಗಳನ್ನು ಕಾಯತಕ್ಕವರೋ! ಬುದ್ಧಿಹೀನರಾಗಿದ್ದಾರೆ, ಇವರಲ್ಲಿ ಯಾವನೂ ತಪ್ಪದೆ ಪ್ರತಿಯೊಬ್ಬನೂ ಕೊಳ್ಳೆಹೊಡೆಯಬೇಕೆಂದು ತನ್ನ ತನ್ನ ಮಾರ್ಗಕ್ಕೆ ತಿರುಗಿಕೊಂಡಿದ್ದಾನೆ. 12 ಬನ್ನಿರಿ, ನಾನು ದ್ರಾಕ್ಷಾರಸವನ್ನು ತರಿಸುವೆನು, ಬೇಕಾದಷ್ಟು ಮದ್ಯವನ್ನು ಕುಡಿಯುವ; ನಾಳೆಯೂ ಈ ದಿನದಂತೆ ಕೇವಲ ಅತ್ಯಂತ ವಿಶೇಷದಿನವಾಗಿರುವದು [ಎಂದು ಹರಟಿಕೊಳ್ಳುವರು]. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India