Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 52 - ಕನ್ನಡ ಸತ್ಯವೇದವು J.V. (BSI)

1 ಚೀಯೋನೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ನಿನ್ನ ಪ್ರತಾಪವನ್ನು ಧರಿಸಿಕೋ! ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ, ನಿನ್ನ ಚಂದದ ಉಡುಪನ್ನು ಹಾಕಿಕೋ! ಇಂದಿನಿಂದ ಅಶುದ್ಧರೂ ಸುನ್ನತಿಯಿಲ್ಲದವರೂ ನಿನ್ನೊಳಗೆ ಪ್ರವೇಶಮಾಡರು.

2 ಯೆರೂಸಲೇಮೇ, ದೂಳನ್ನು ಝಾಡಿಸಿಕೋ! ಎದ್ದು ಆಸನದ ಮೇಲೆ ಕೂಡ್ರು! ಸೆರೆಬಿದ್ದ ಚೀಯೋನ್ ಕನ್ಯೆಯೇ, ನಿನ್ನ ಕತ್ತಿನ ಪಾಶವನ್ನು ಬಿಚ್ಚಿಬಿಡು!

3 ಯೆಹೋವನ ಈ ಮಾತನ್ನು ಕೇಳಿರಿ, ಲಾಭಪಡೆಯದೆ ನಿಮ್ಮನ್ನು ಮಾರಿದೆನು, ಹಣತಕ್ಕೊಳ್ಳದೆ ನಿಮ್ಮನ್ನು ಬಿಡುಗಡೆ ಮಾಡುವೆನು.

4 ಕರ್ತನಾದ ಯೆಹೋವನು ಹೀಗಂದುಕೊಳ್ಳುತ್ತಾನೆ - ನನ್ನ ಜನರು ಮೊಟ್ಟಮೊದಲು ಐಗುಪ್ತದಲ್ಲಿ ಇಳಿದುಕೊಳ್ಳಬೇಕೆಂದು ಹೋಗಿ [ಅಲ್ಲಿ ಸೆರೆಯಾದರು]; ಅಶ್ಶೂರ್ಯರು ಹಕ್ಕಿಲ್ಲದೆ ಅವರನ್ನು ಬಾಧೆಪಡಿಸಿದರು.

5 ಈಗಲೂ ಅನ್ಯರು ನನ್ನ ಜನರನ್ನು ಹಕ್ಕಿಲ್ಲದೆ ಒಯ್ದಿರಲು ನಾನು ಇಲ್ಲಿ ಸುಮ್ಮನಿರುವದು ಹೇಗೆ? ನನ್ನ ಪ್ರಜೆಯನ್ನು ಆಳುವವರು [ರೌದ್ರದಿಂದ] ಕಿರಚುತ್ತಾರೆ; ನನ್ನ ನಾಮವು ದಿನವೆಲ್ಲಾ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ.

6 ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ತನ್ನು ತಿಳಿದು [ತಮ್ಮ ಸಂಗಡ] ಮಾತಾಡುವವನು ನಾನೇ, ಹೌದು ನಾನೇ, ಎಂದು [ರಕ್ಷಣೆಯ] ಆ ದಿನದಲ್ಲಿ ಗ್ರಹಿಸಿಕೊಳ್ಳುವ ಹಾಗೆ ಮಾಡುವೆನು. ಇದೇ ಯೆಹೋವನ ನುಡಿ.

7 ಪರ್ವತಗಳ ಮೇಲೆ ತ್ವರೆಪಡುತ್ತಾ ಶುಭಸಮಾಚಾರವನ್ನು ತಂದು ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಒಳ್ಳೆಯ ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು ರಕ್ಷಣೆಯನ್ನು ಪ್ರಕಟಿಸುತ್ತಾ - ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ.

8 ಇಗೋ, ನಿನ್ನ ಕಾವಲುಗಾರರ ಕೂಗು! ಸ್ವರವೆತ್ತಿ ಒಟ್ಟಿಗೆ ಹರ್ಷಧ್ವನಿಗೈಯುತ್ತಾರೆ; ಯೆಹೋವನು ಚೀಯೋನಿಗೆ ತಿರುಗಿ ಬರುವದನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದಾರೆ.

9 ಯೆರೂಸಲೇವಿುನ ಹಾಳುಪ್ರದೇಶಗಳೇ, ತಟ್ಟನೆ ಜಯಘೋಷಮಾಡಿ ಒಟ್ಟಿಗೆ ಹರ್ಷಧ್ವನಿಗೈಯಿರಿ! ಯೆಹೋವನು ಯೆರೂಸಲೇಮನ್ನು ವಿಮೋಚಿಸಿ ತನ್ನ ಜನರನ್ನು ಸಂತೈಸಿದ್ದಾನೆ.

10 ಯೆಹೋವನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ; ಭೂವಿುಯ ಎಲ್ಲಾ ದಿಕ್ಕಿನವರೂ ನಮ್ಮ ದೇವರ ರಕ್ಷಣಕಾರ್ಯವನ್ನು ನೋಡುವರು.

11 ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವದನ್ನೂ ಮುಟ್ಟದಿರಿ, ಅದರ ಮಧ್ಯದೊಳಗಿಂದ ತೆರಳಿರಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ!

12 ನೀವು ಅವಸರದಿಂದ ಹೊರಡಬೇಕಾಗಿಲ್ಲ, ಓಡಿಹೋಗಬೇಕಾಗಿಲ್ಲ; ಯೆಹೋವನು ನಿಮಗೆ ಮುಂಬಲವಾಗಿ ಮುಂದರಿಯುವನು, ಇಸ್ರಾಯೇಲಿನ ದೇವರು ನಿಮಗೆ ಹಿಂಬಲವಾಗಿಯೂ ಇರುವನು.


ಯೆಹೋವನ ಸೇವಕನ ಶ್ರಮೆ, ಪ್ರಾಣತ್ಯಾಗ, ಅದರ ಪ್ರತಿಫಲ

13 ಇಗೋ, ನನ್ನ ಸೇವಕನು ಕೃತಾರ್ಥನಾಗುವನು; ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತ ಪದವಿಗೆ ಬರುವನು.

14 ಅವನ ಮುಖವು ಸಕಲ ಮನುಷ್ಯರ ಮುಖಕ್ಕಿಂತಲೂ ಅವನ ರೂಪವು ಎಲ್ಲಾ ನರಜನ್ಮದವರ ರೂಪಕ್ಕಿಂತಲೂ ವಿಕಾರವಾಗಿರುವದನ್ನು ನೋಡಿ ಅನೇಕರು ಹೇಗೆ ಅವನಿಂದ ಬೆದರಿ ಬಿದ್ದರೋ

15 ಹಾಗೆಯೇ ಅನೇಕ ಜನಾಂಗಗಳವರು ಅವನನ್ನು ಕಂಡು ವಿಸ್ಮಯದಿಂದ ಚಮಕಿತರಾಗುವರು; ಅರಸರೂ ಅವನ ಮುಂದೆ ಬಾಯಿಮುಚ್ಚಿಕೊಳ್ಳುವರು; ಏಕಂದರೆ ಸುದ್ದಿಯೇ ಇಲ್ಲದ ಸಂಗತಿಯನ್ನು ನೋಡುವರು, ಎಂದೂ ಕೇಳದ ವಿಷಯವನ್ನು ಗ್ರಹಿಸಿಕೊಳ್ಳುವರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು