ಯೆಶಾಯ 50 - ಕನ್ನಡ ಸತ್ಯವೇದವು J.V. (BSI)1 ಯೆಹೋವನು ಹೀಗನ್ನುತ್ತಾನೆ - ನಾನು ನಿಮ್ಮ ತಾಯಿಯನ್ನು ತ್ಯಜಿಸಿದ ತ್ಯಾಗಪತ್ರವು ಎಲ್ಲಿ? ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟಿದ್ದೇನೆ ನೋಡಿರಿ, ನಿಮ್ಮ ದೋಷಗಳ ನಿವಿುತ್ತ ನಿಮ್ಮನ್ನು ಮಾರಿದೆನು, ನಿಮ್ಮ ದ್ರೋಹಗಳಿಗಾಗಿ ನಿಮ್ಮ ತಾಯಿಯನ್ನು ಬಿಟ್ಟೆನು. 2 ನಾನು ಬಂದಾಗ ಏಕೆ ಯಾರೂ ಕಾದಿರಲಿಲ್ಲ, ನಾನು ಕರೆದಾಗ ಏಕೆ ಯಾರೂ ಉತ್ತರಕೊಡಲಿಲ್ಲ? ನನ್ನ ಹಸ್ತವು ರಕ್ಷಿಸಲಾರದ ಮೋಟುಗೈಯೋ? ಉದ್ಧರಿಸುವ ಶಕ್ತಿಯು ನನ್ನಲ್ಲಿಲ್ಲವೋ? ಇಗೋ, ನನ್ನ ತರ್ಜನದಿಂದಲೇ ಸಮುದ್ರವನ್ನು ಬತ್ತಿಸಿ ನದಿಗಳನ್ನು ಒಣಕಾಡನ್ನಾಗಿ ಮಾಡುತ್ತೇನೆ; ನೀರಿಲ್ಲದೆ ಅಲ್ಲಿನ ಮೀನುಗಳು ಬಾಯಾರಿ ಸತ್ತು ನಾರುವವು. 3 ಆಕಾಶಕ್ಕೆ ಅಂಧಕಾರವನ್ನು ಹೊದಿಸಿ ಗೋಣಿತಟ್ಟಿನ ಮುಸುಕನ್ನು ಹಾಕುತ್ತೇನೆ. ಯೆಹೋವನ ಸೇವಕನ ಭರವಸ 4 ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ; ಬೆಳಬೆಳಗೂ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಜಾಗರಗೊಳಿಸುತ್ತಾನೆ. 5 ಕರ್ತನಾದ ಯೆಹೋವನು ನನ್ನ ಕಿವಿಯನ್ನು ತೆರೆದಿದ್ದಾನೆ; ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ. 6 ಹೊಡೆಯುವವರಿಗೆ ಬೆನ್ನುಕೊಟ್ಟು ಕೂದಲುಕೀಳುವವರಿಗೆ ಗಡ್ಡವನ್ನು ಒಡ್ಡಿದೆನು; ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಲಿಲ್ಲ. 7 ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು; ಆದಕಾರಣ ನಾನು ನಾಚಿಕೆಯಿಂದ ಕೊರಗಲಿಲ್ಲ; ನನ್ನ ಮುಖವನ್ನು ಕಗ್ಗಲ್ಲಿನಂತೆ ಗಟ್ಟಿಮಾಡಿಕೊಂಡಿದ್ದೇನೆ; ಆಶಾಭಂಗಪಡಲಾರೆನೆಂದು ನನಗೆ ಗೊತ್ತು. 8 ನನ್ನ ನ್ಯಾಯಸ್ಥಾಪಕನು ಸಮೀಪದಲ್ಲಿದ್ದಾನೆ; ನನ್ನೊಡನೆ ಯಾರು ವ್ಯಾಜ್ಯವಾಡುವರು? ನಾವಿಬ್ಬರು [ನ್ಯಾಯಾಸನದ ಮುಂದೆ] ನಿಂತುಕೊಳ್ಳುವ; ನನಗೆ ಪ್ರತಿಕಕ್ಷಿಯು ಯಾರು? ನನ್ನ ಬಳಿಗೆ ಬರಲಿ. 9 ಆಹಾ, ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು; ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ವಸ್ತ್ರದಂತೆ ಜೀರ್ಣವಾಗುವರು; ಅವರನ್ನು ನುಸಿಯು ತಿಂದುಬಿಡುವದು. 10 ನಿಮ್ಮೊಳಗೆ ಯಾವನು ಯೆಹೋವನಲ್ಲಿ ಭಯಭಕ್ತಿಯಿಟ್ಟು ಆತನ ಸೇವಕನ ಮಾತನ್ನು ಕೇಳುವನು? ಕತ್ತಲಲ್ಲಿ ನಡೆಯುತ್ತಾ ಬೆಳಕಿಲ್ಲದವನು ಯೆಹೋವನ ನಾಮದಲ್ಲಿ ಭರವಸವಿಟ್ಟು ತನ್ನ ದೇವರನ್ನು ಆಧಾರಮಾಡಿಕೊಳ್ಳಲಿ. 11 ಓಹೋ, ಬೆಂಕಿಯಿಕ್ಕಿ ಸುತ್ತುಮುತ್ತಲು ಕೊಳ್ಳಿಗಳನ್ನು ಹತ್ತಿಸಿಕೊಂಡಿರುವವರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ ನೀವು ಹತ್ತಿಸಿದ ಕೊಳ್ಳಿಗಳ ನಡುವೆಯೂ ನಡೆದರೂ ನಡೆಯಿರಿ. ಇಗೋ, ನನ್ನ ಹಸ್ತದಿಂದ ನಿಮಗಾಗುವ ಗತಿಯು ಇದೇ, ದುಃಖಕ್ಕೆ ಒಳಗಾಗಿ ಸಾಯುವಿರಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India