ಯೆಶಾಯ 5 - ಕನ್ನಡ ಸತ್ಯವೇದವು J.V. (BSI)ಯೆಹೋವನ ದ್ರಾಕ್ಷೆಯ ತೋಟ 1 ನನ್ನ ಪ್ರಿಯನನ್ನೂ ಅವನ ತೋಟವನ್ನೂ ಕುರಿತು ನನ್ನ ಪ್ರಿಯನ ಒಂದು ಗೀತವನ್ನು ನಾನು ಹಾಡುವೆ, ಕೇಳಿರಿ. ಸಾರವತ್ತಾದ ಗುಡ್ಡದ ಮೇಲೆ ನನ್ನ ಪ್ರಿಯನಿಗೆ ದ್ರಾಕ್ಷೆಯ ತೋಟವಿತ್ತು. 2 ಅವನು ಅದನ್ನು ಅಗತೆಮಾಡಿ ಕಲ್ಲುಗಳನ್ನು ತೆಗೆದುಹಾಕಿ ಒಳ್ಳೊಳ್ಳೇ ದ್ರಾಕ್ಷೆಯ ಸಸಿಗಳನ್ನು ನೆಟ್ಟು ಮಧ್ಯದಲ್ಲಿ ಬುರುಜನ್ನು ಕಟ್ಟಿ ದ್ರಾಕ್ಷೆಯ ತೊಟ್ಟಿಯನ್ನು ಕೊರೆಯಿಸಿ ಮಾಡಿಕೊಂಡು ತೋಟವು [ಒಳ್ಳೇ] ದ್ರಾಕ್ಷೆಯ ಹಣ್ಣನ್ನು ಕೊಡುವದೆಂದು ಎದುರುನೋಡುತ್ತಿರಲು ಅದು ಹೊಲಸುಹಣ್ಣನ್ನು ಬಿಟ್ಟಿತು. 3 ಯೆರೂಸಲೇವಿುನ ನಿವಾಸಿಗಳೇ, ಯೆಹೂದದ ಜನರೇ, ಈಗ ನನಗೂ ನನ್ನ ತೋಟಕ್ಕೂ ನ್ಯಾಯತೀರಿಸಿರಿ, 4 ನನ್ನ ತೋಟದಲ್ಲಿ ಹಿಂದೆ ನಾನು ಮಾಡಿದ್ದಕ್ಕಿಂತಲೂ ಇನ್ನೇನು ಮಾಡಬೇಕಾಗಿತ್ತು? ಅದು [ಒಳ್ಳೇ] ದ್ರಾಕ್ಷೆಯನ್ನು ಕೊಡುವದೆಂದು ನಾನು ನಿರೀಕ್ಷಿಸುತ್ತಿರಲು ಏಕೆ ಹೊಲಸುಹಣ್ಣನ್ನು ಬಿಟ್ಟಿತು? 5 ನನ್ನ ತೋಟವನ್ನು ಏನು ಮಾಡುವೆನೋ ಈಗ ನಿಮಗೆ ತಿಳಿಸುವೆನು, ಕೇಳಿರಿ; ಅದರ ಬೇಲಿಯನ್ನು ಕೀಳುವೆನು, ದನವು ಅದನ್ನು ಮೇಯ್ದುಬಿಡುವದು; ಅದರ ಗೋಡೆಯನ್ನು ಕೆಡವಿಹಾಕುವೆನು, ಅದು ತುಳಿದಾಟಕ್ಕೆ ಈಡಾಗುವದು. 6 ಅದನ್ನು ಹಾಳುಮಾಡುವೆನು, ಯಾರೂ ಕುಡಿಕತ್ತರಿಸಿ ಅಗತೆಮಾಡುವದಿಲ್ಲ; ಅದರಲ್ಲಿ ಮುಳ್ಳುಗಿಳ್ಳು ಬೆಳೆದುಹೋಗುವದು; ಮತ್ತು ಅದರ ಮೇಲೆ ಮಳೆಸುರಿಸಬಾರದೆಂದು ಮೇಘಗಳಿಗೆ ಅಪ್ಪಣೆಮಾಡುವೆನು. 7 ಸೇನಾಧೀಶ್ವರನಾದ ಯೆಹೋವನ ದ್ರಾಕ್ಷೆಯ ತೋಟವು ಇಸ್ರಾಯೇಲ್ಯರ ಮನೆತನ, ಯೆಹೂದದ ಜನವೋ ಆತನ ಇಷ್ಟದ ಗಿಡವೇ; ಆತನು ನ್ಯಾಯವನ್ನು ನಿರೀಕ್ಷಿಸಿದಾಗ ಆಹಾ, ಸಿಕ್ಕಿದ್ದು ನರಹತ್ಯವೇ; ಧರ್ಮವನ್ನು ಎದುರುನೋಡಿದಾಗ ಆಹಾ, ದೊರಕಿದ್ದು ಅರಚಾಟವೇ. ಆರುಬಗೆಯ ಪಾಪಿಗಳಿಗೆ ಆಗುವ ದುರವಸ್ಥೆ 8 ಅಯ್ಯೋ, ಮನೆಗೆ ಮನೆಯನ್ನೂ ಹೊಲಕ್ಕೆ ಹೊಲವನ್ನೂ ಸೇರಿಸಿಕೊಳ್ಳುತ್ತಾ ಬಂದು ಇತರರಿಗೆ ಸ್ವಲ್ಪ ಸ್ಥಳವನ್ನೂ ಬಿಡದೆ ದೇಶದ ಮಧ್ಯದಲ್ಲಿ ತಾವೇ ತಾವಾಗಿ ವಾಸಿಸುವವರ ಗತಿಯನ್ನು ಏನು ಹೇಳಲಿ! 9 ನನ್ನ ಕಿವಿಯಲ್ಲಿ ಸೇನಾಧೀಶ್ವರನಾದ ಯೆಹೋವನ ಒಂದು ಮಾತು ಬಿದ್ದಿತು, ನೋಡಿರಿ - ಸೊಗಸಾದ ಅನೇಕ ದೊಡ್ಡ ಮನೆಗಳು ವಾಸಿಸುವವರೇ ಇಲ್ಲದೆ ಖಂಡಿತವಾಗಿ ಹಾಳಾಗುವವು. 10 ಏಕಂದರೆ ಹತ್ತು ಎಕರೆ ಬಾಗಾಯಿತು ಭೂವಿುಯು ನಾಲ್ಕು ಕೊಳಗದಷ್ಟೇ ದ್ರಾಕ್ಷಾರಸವನ್ನೀಯುವದು, ಬಿತ್ತಿದ ಒಂದು ಕಂಡುಗ ಬೀಜದಿಂದ ಇಕ್ಕಳ ದವಸವು ಬರುವದು. 11 ಅಯ್ಯೋ, ಮದ್ಯದ ಗೀಳಿನಿಂದಲೇ ಮುಂಜಾನೆ ಎದ್ದು ಸಂಜೆಯಾದ ಮೇಲೆಯೂ ದ್ರಾಕ್ಷಾರಸದಿಂದ ಅಮಲೇರಿದವರಾಗಿ ಕಾಲ ಕಳೆಯುವವರ ಪಾಡು ಏನು ಹೇಳಲಿ! 12 ಕಿನ್ನರಿ, ವೀಣೆ, ದಮ್ಮಡಿ, ಕೊಳಲು, ದ್ರಾಕ್ಷಾರಸ ಇವುಗಳೇ ಅವರ ಔತಣಗಳ ಸೊಬಗು; ಯೆಹೋವನ ಕೆಲಸವನ್ನೋ ಅವರು ಲಕ್ಷಿಸರು, ಆತನ ಹಸ್ತಕಾರ್ಯವನ್ನು ಆಲೋಚಿಸರು. 13 ಆದಕಾರಣ ನನ್ನ ಜನರು ಜ್ಞಾನಹೀನರಾಗಿ ಸೆರೆಗೆ ಹೋಗುವದು ಖಂಡಿತ; ಘನವಂತರು ಹಸಿಯುವರು, ಸಾಮಾನ್ಯರು ಬಾಯಾರುವರು. 14 ಮತ್ತು ಪಾತಾಳವು ಹೆಚ್ಚು ಆತುರದಿಂದ ಅಪಾರವಾಗಿ ಬಾಯಿತೆರೆಯಲು ಅವರ ಮಹಿಮೆ, ಕೋಲಾಹಲ, ಗದ್ದಲ, ಉಲ್ಲಾಸ ಇವೆಲ್ಲಾ [ಅದರೊಳಗೆ] ಬಿದ್ದುಹೋಗುವವು. 15 ಕುಲಹೀನರು ಬೊಗ್ಗುವರು, ಕುಲೀನರು ಕುಗ್ಗುವರು, ಉನ್ನತರ ದೃಷ್ಟಿಯು ತಗ್ಗುವದು. 16 ಸೇನಾಧೀಶ್ವರನಾದ ಯೆಹೋವನೋ ನ್ಯಾಯತೀರಿಸುವದರಲ್ಲಿ ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು; ಪರಿಶುದ್ಧನಾದ ದೇವರು ಧರ್ಮವನ್ನು ನಡಿಸುವದರಲ್ಲಿ ಪರಿಶುದ್ಧನೆನಿಸಿಕೊಳ್ಳುವನು. 17 ಪುಷ್ಟರ ಪ್ರದೇಶಗಳು ಹಾಳಾಗಿ ಪಶುಪಾಲಕರಿಗೆ ಜೀವನಕ್ಕಾಗುವವು, ಹುಲ್ಲುಗಾವಲಂತೆ ಕುರಿಗಳು ಅಲ್ಲಿ ಮೇಯುವವು. 18 ಅಯ್ಯೋ, ಅಕಾರ್ಯಗಳೆಂಬ ಹಗ್ಗಗಳಿಂದ ಅಪರಾಧ ದಂಡನೆಯನ್ನು, ತೇರನ್ನು ಹೊರಜಿಯಿಂದಲೋ ಎಂಬಂತೆ ಪಾಪದ ಫಲವನ್ನು ತಮ್ಮ ಕಡೆಗೆ ಎಳೆದುಕೊಳ್ಳುತ್ತಾ ಆತನು ತ್ವರೆಪಡಲಿ, 19 ನಾವು ಆತನ ಕೆಲಸವನ್ನು ನೋಡಬೇಕು, ಅದನ್ನು ಬೇಗನೆ ನಡಿಸಲಿ, ಇಸ್ರಾಯೇಲ್ಯರ ಸದಮಲಸ್ವಾವಿುಯ ಉದ್ದೇಶವನ್ನು ನಾವು ತಿಳಿಯಬೇಕು. ಅದು ಸಮೀಪಿಸಿ ಬರಲಿ ಎಂದು ನುಡಿಯುವವರ ದುರವಸ್ಥೆಯನ್ನು ಏನು ಹೇಳಲಿ! 20 ಅಯ್ಯೋ, ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ ಬೋಧಿಸಿ ಕತ್ತಲನ್ನು ಬೆಳಕೆಂದೂ ಬೆಳಕನ್ನು ಕತ್ತಲೆಂದೂ ಸಾಧಿಸಿ ಕಹಿಯು ಸಿಹಿ, ಸಿಹಿಯು ಕಹಿ ಎಂದು ಸ್ಥಾಪಿಸುವವರ ಗತಿಯನ್ನು ಏನೆಂದು ಹೇಳಲಿ! 21 ಅಯ್ಯೋ, ತಮ್ಮಲ್ಲಿ ತಾವೇ ಜ್ಞಾನಿಗಳೆಂದೂ ಸ್ವಂತ ಗಣನೆಯಲ್ಲಿ ವಿವೇಕಿಗಳೆಂದೂ ಭಾವಿಸಿಕೊಳ್ಳುವವರ ಪಾಡು ಏನು ಹೇಳಲಿ! 22 ಅಯ್ಯೋ, ಸುರಾಪಾನದಲ್ಲಿ ಶೂರರೂ ಮದ್ಯವಿುಶ್ರಣದಲ್ಲಿ ಸಾಹಸಿಗಳೂ ಆಗಿ 23 ಲಂಚಕ್ಕೋಸ್ಕರ ದೋಷಿಗಳನ್ನು ನಿರ್ದೋಷಿಗಳೆಂದು ತೀರ್ಪುಮಾಡಿ ನ್ಯಾಯವಂತರ ನ್ಯಾಯವನ್ನು ಹಾಳುಮಾಡುವವರ ಗತಿಯನ್ನು ಏನೆಂದು ಹೇಳಲಿ! 24 ಅವರು ಸೇನಾಧೀಶ್ವರನಾದ ಯೆಹೋವನ ಉಪದೇಶವನ್ನು ನಿರಾಕರಿಸಿ ಇಸ್ರಾಯೇಲ್ಯರ ಸದಮಲಸ್ವಾವಿುಯ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದ ಅಗ್ನಿಯ ನಾಲಿಗೆಗಳು ಒಣಕೂಳೆಯನ್ನು ನುಂಗಿಬಿಡುವ ಹಾಗೂ ಒಣಹುಲ್ಲು ಬೆಂಕಿಯಲ್ಲಿ ಕುಗ್ಗುವಂತೆಯೂ ಅವರ ಬೇರು ಕೊಳೆತು ಅವರ ಹೂವು ದೂಳಾಗಿ ತೂರಿಹೋಗುವದು. ಯೆಹೋವನು ತನ್ನ ಜನರನ್ನು ದಂಡಿಸಲು ಶತ್ರುಗಳನ್ನು ಬರಮಾಡುವದು 25 ಹೀಗಿರಲು ಯೆಹೋವನು ತನ್ನ ಜನರಲ್ಲಿ ಉರಿಗೊಂಡು ಅವರ ಮೇಲೆ ಕೈಯೆತ್ತಿ ಅವರನ್ನು ಹೊಡೆದು ಬಿಡುವನು; ಆಗ ಬೆಟ್ಟಗಳು ನಡಗುವವು, ಹೆಣಗಳು ಬೀದಿಗಳಲ್ಲಿ ಕಸವಾಗಿ ಬಿದ್ದಿರುವವು. ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೆ ಕೈಯೆತ್ತಿಯೇ ಇರುವದು. 26 ಆತನು ದೂರದ ಜನಾಂಗದವರಿಗೆ ಗುರುತಾಗಿ ಧ್ವಜವೆತ್ತಿ ಅವರನ್ನು ಭೂಲೋಕದ ಅಂಚಿನಲ್ಲಿಂದ ಸಿಳ್ಳುಹಾಕಿ ಕರೆಯುವನು; ಇಗೋ, ತ್ವರೆಪಟ್ಟು ವೇಗವಾಗಿ ಬರುತ್ತಾರೆ! 27 ಅವರಲ್ಲಿ ಯಾರೂ ಬಳಲಿ ಮುಗ್ಗರಿಸರು, ಯಾರೂ ತೂಕಡಿಸಿ ನಿದ್ರಿಸರು; ಅವರ ನಡುಕಟ್ಟು ಬಿಚ್ಚಿಲ್ಲ, ಅವರ ಕೆರದ ಬಾರು ಕಿತ್ತಿಲ್ಲ; 28 ಅವರ ಅಂಬುಗಳು ಮೊನೆಯಾಗಿವೆ, ಬಿಲ್ಲುಗಳು ಬಿಗಿದಿವೆ; ಕುದುರೆಗಳ ಗೊರಸೆಗಳು ಕಲ್ಲಿನಂತಿವೆ; ಚಕ್ರಗಳು ಬಿರುಗಾಳಿಯಂತೆ ರಭಸವಾಗಿವೆ; 29 ಸಿಂಹದಂತೆ ಗರ್ಜಿಸುತ್ತಾರೆ, ಪ್ರಾಯದ ಸಿಂಹಗಳ ಹಾಗೆ ಆರ್ಭಟಿಸುತ್ತಾರೆ, ಗುರುಗುಟ್ಟುತ್ತಾ ಬೇಟೆಹಿಡಿದು ಹೊತ್ತುಕೊಂಡು ಹೋಗುತ್ತಾರೆ, ರಕ್ಷಿಸುವವರು ಯಾರೂ ಇಲ್ಲ. 30 ಸಮುದ್ರವು ಭೋರ್ಗರೆಯುವಂತೆ ಆ ದಿನದಲ್ಲಿ ಇವರು ಯೆಹೂದ್ಯರ ಮೇಲೆ ಗುರುಗುಟ್ಟುವರು; ದೇಶದಲ್ಲಿಯೋ, ಆಹಾ, ಅಂಧಕಾರವೂ ವ್ಯಾಕುಲವೂ ತುಂಬಿರುವವು, ಮೋಡ ಕವಿದು ಬೆಳಕು ಕತ್ತಲಾಗುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India