ಯೆಶಾಯ 48 - ಕನ್ನಡ ಸತ್ಯವೇದವು J.V. (BSI)ಹಿಂದಿನ ಎಂಟು ಅಧ್ಯಾಯಗಳ ಸಾರಾಂಶ 1 ಇಸ್ರಾಯೇಲೆಂಬ ಹೆಸರಿನವರೂ ಯೆಹೂದವಂಶೋತ್ಪನ್ನರೂ ಆದ ಯಾಕೋಬನ ಮನೆತನದವರೇ, ನೀವು ಯೆಹೋವನ ನಾಮದ ಮೇಲೆ ಆಣೆಯಿಟ್ಟು ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ, ನಿಜ, ಆದರೆ ಈ ನಿಮ್ಮ ಕಾರ್ಯಗಳು ಸತ್ಯಕ್ಕೂ ಧರ್ಮಕ್ಕೂ ಅನುಸಾರವಾಗಿಲ್ಲ. 2 ಇವರು ತಮ್ಮನ್ನು ಪರಿಶುದ್ಧ ಪಟ್ಟಣದವರು ಎಂದುಕೊಂಡು ದೇವರು ಇಸ್ರಾಯೇಲಿನವನೇ ಎಂದು ಆತನ ಮೇಲೆ ಭರವಸವಿಟ್ಟುಕೊಂಡಿರುತ್ತಾರೆ. ಆತನ ಹೆಸರೋ ಸಕಲ ಸೈನ್ಯಗಳ ಅಧೀಶ್ವರನಾದ ಯೆಹೋವನೆಂಬದು. 3 ಯಾಕೋಬನ ಮನೆತನವೇ, ಕೇಳು, ಈವರೆಗೂ ನಡೆದ ಸಂಗತಿಗಳನ್ನು ಪುರಾತನಕಾಲದಲ್ಲಿಯೇ ತಿಳಿಸಿದೆನು, ಹೌದು, ನನ್ನ ಬಾಯಿಂದ ಹೊರಟವು, ಪ್ರಕಟಿಸಿದೆನು; ನಾನು ತಟ್ಟನೆ ನಡಿಸಲು ನೆರವೇರಿದವು. 4 ನೀನು ಹಟಗಾರ, ನಿನ್ನ ಕತ್ತಿನ ನರವು ಕಬ್ಬಿಣ, ನಿನ್ನ ಹಣೆ ತಾಮ್ರ ಎಂದು ನಾನು ತಿಳಿದುಕೊಂಡೆನು; 5 ಅದರಿಂದಲೇ ಈ ಕಾರ್ಯಗಳನ್ನು ನನ್ನ ವಿಗ್ರಹವು ನಡಿಸಿದೆ, ನನ್ನ ಕೆತ್ತಿದ ಬೊಂಬೆ, ಎರಕದ ಪುತ್ತಳಿ ಇವುಗಳನ್ನು ವಿಧಿಸಿದೆ ಎಂದು ನೀನು ಹೇಳಿಕೊಳ್ಳದಂತೆ ನಾನು ಪುರಾತನಕಾಲದಲ್ಲಿಯೇ ತಿಳಿಸಿದೆನು, ನಡೆಯುವದಕ್ಕೆ ಮುಂಚೆಯೇ ಪ್ರಕಟಿಸಿದೆನು. 6 [ಆಗಲೇ] ಕೇಳಿದಿಯಲ್ಲಾ, [ಈಗ] ನಡೆದದ್ದನ್ನೆಲ್ಲಾ ನೋಡು, ನಿನ್ನವರೇ ಪ್ರಸಿದ್ಧಿಪಡಿಸಲಿ, ಇಂದಿನಿಂದ ಹೊಸ ಸಂಗತಿಗಳನ್ನು, ನೀನು ತಿಳಿಯದಿದ್ದ ಗುಪ್ತ ವಿಷಯಗಳನ್ನು, ನಿನಗೆ ಅರುಹುತ್ತೇನೆ. 7 ಈಗಲೇ ಉಂಟಾಗುತ್ತಿವೆ, ಪುರಾತನಕಾಲದಲ್ಲಿ ಆಗಿಲ್ಲ; ಆಹಾ, ಮೊದಲೇ ನಾನು ತಿಳಿದುಕೊಂಡಿದ್ದೆನು ಎಂದು ನೀನು ಅಂದುಕೊಳ್ಳದ ಹಾಗೆ ಈ ದಿನಕ್ಕೆ ಮುಂಚೆ ನಾನು ನಿನಗೆ ಕೇಳಗೊಡಿಸಲಿಲ್ಲ. 8 ನೀನು ಕೇಳಿಲ್ಲ, ತಿಳಿದೂ ಇಲ್ಲ, ಪುರಾತನಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ನೀನು ದೊಡ್ಡ ವಂಚಕನು, ಆಗರ್ಭದ್ರೋಹಿ ಎನಿಸಿಕೊಂಡವನು ಎಂದು ನಾನು ತಿಳಿದುಕೊಂಡಿದ್ದೆನಷ್ಟೆ. 9 ನನ್ನ ಹೆಸರು ಕೆಡದಂತೆ ನಿನ್ನ ಮೇಲಣ ಕೋಪವನ್ನು ತಡೆದು ನನ್ನ ಕೀರ್ತಿಗೆ ಕಳಂಕಬಾರದಂತೆ ನಿನ್ನನ್ನು ನಿರ್ಮೂಲಮಾಡದೆ ತಾಳಿಕೊಳ್ಳುವೆನು. 10 ನೋಡು, ನಿನ್ನನ್ನು ಶೋಧಿಸಿದ್ದೇನೆ, ಆದರೆ ಬೆಳ್ಳಿಯಷ್ಟು ಶೋಧಿಸಲಿಲ್ಲ; ಸಂಕಟವೆಂಬ ಪುಟಕ್ಕೆ ಹಾಕಿ ನಿನ್ನನ್ನು ಪರೀಕ್ಷಿಸಿದ್ದೇನೆ. 11 ನನಗಾಗಿ, ನನಗೋಸ್ಕರವೇ, ಇದನ್ನು ಮಾಡುವೆನು; ನನ್ನ ಹೆಸರು ಕೆಡಬಾರದಷ್ಟೆ; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು. 12 ಯಾಕೋಬೇ, ನಾನು ಕರೆದ ಇಸ್ರಾಯೇಲೇ, ನನ್ನ ಕಡೆಗೆ ಕಿವಿಗೊಡು; ನಾನೇ ಪರಮಾತ್ಮನು; ನಾನೇ ಆದಿ, ಅಂತವೂ ನಾನೇ. 13 ನನ್ನ ಕೈ ಭೂವಿುಗೆ ಅಸ್ತಿವಾರವನ್ನು ಹಾಕಿತು, ನನ್ನ ಬಲಗೈ ಆಕಾಶವನ್ನು ಹರಡಿತು, ನಾನು ಕರೆದ ಕೂಡಲೆ ಅವೆರಡೂ ಸಿದ್ಧವಾಗಿ ನಿಲ್ಲುವವು. 14 ನೀವೆಲ್ಲರು ಕೂಡಿಕೊಂಡು ಕೇಳಿರಿ! ಇವರಲ್ಲಿನ ಯಾವ ದೇವರು ಈ ಸಂಗತಿಗಳನ್ನು ಅರುಹಿದ್ದಾನೆ? ಯೆಹೋವನ ಪ್ರೀತಿಪಾತ್ರನು ಬಾಬೆಲಿನಲ್ಲಿ ಆತನ ಇಷ್ಟವನ್ನು ನೆರವೇರಿಸುವನು, ಕಸ್ದೀಯರ ಮೇಲೆ ಕೈಮಾಡುವನು. 15 ನಾನೇ, ನಾನೇ ಬಾಯಿಬಿಟ್ಟು ಅವನನ್ನು ಕರೆದು ಬರಮಾಡಿದ್ದೇನೆ; ಅವನ ಮಾರ್ಗವು ಸಾರ್ಥಕವಾಗುವದು. 16 ನನ್ನ ಬಳಿಗೆ ಬಂದು ಇದನ್ನು ಕೇಳಿರಿ; ಆದಿಯಿಂದಲೂ ನಾನು ಗುಟ್ಟಾಗಿ ಮಾತಾಡಲಿಲ್ಲ, [ಭೂವಿುಯು] ಉಂಟಾದಂದಿನಿಂದ ಅಲ್ಲಿ ಇದ್ದೇನೆ. (ಈಗ ಯೆಹೋವನೆಂಬ ದೇವರು ತನ್ನ ಆತ್ಮದೊಡನೆ ನನ್ನನ್ನು ಕಳುಹಿಸಿದ್ದಾನೆ.) 17 ನಿನ್ನ ವಿಮೋಚಕನೂ ಇಸ್ರಾಯೇಲ್ಯರ ಸದಮಲಸ್ವಾವಿುಯೂ ಆದ ಯೆಹೋವನು ಹೀಗನ್ನುತ್ತಾನೆ - ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. 18 ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು; 19 ನಿನ್ನ ಸಂತತಿಯವರು ಮರಳಿನೋಪಾದಿಯಲ್ಲಿಯೂ ನಿನ್ನ ಹೊಟ್ಟೆಯಲ್ಲಿ ಹುಟ್ಟಿದವರು ಉಸುಬಿನ ಅಣುರೇಣುಗಳ ಪ್ರಕಾರವೂ ಅಸಂಖ್ಯಾತರಾಗುತ್ತಿದ್ದರು; ಅವರ ಹೆಸರು ನನ್ನ ಮುಂದೆ ನಿರ್ಮೂಲವಾಗಿ ಹಾಳಾಗುತ್ತಿರಲಿಲ್ಲ. 20 ಬಾಬೆಲಿನಿಂದ ಹೊರಡಿರಿ, ಕಸ್ದೀಯರ ಕಡೆಯಿಂದ ಹಾರಿಹೋಗಿರಿ; ಹರ್ಷಧ್ವನಿಯಿಂದ ಇದನ್ನು ತಿಳಿಸಿರಿ, ಪ್ರಕಟಿಸಿರಿ, ಭೂವಿುಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ; ಯೆಹೋವನು ತನ್ನ ಸೇವಕನಾದ ಯಾಕೋಬನನ್ನು ವಿಮೋಚಿಸಿದ್ದಾನೆಂದು ಹೇಳಿರಿ. 21 ಆತನು ಅವರನ್ನು ಮರುಭೂವಿುಯಲ್ಲಿ ನಡಿಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಕಲ್ಲಿನೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ಜಲಪಾತವಾಯಿತು. 22 ದುಷ್ಟರಿಗೆ ಸಮಾಧಾನವೇ ಇಲ್ಲ ಎಂದು ಯೆಹೋವನು ನುಡಿಯುತ್ತಾನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India