Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 46 - ಕನ್ನಡ ಸತ್ಯವೇದವು J.V. (BSI)


ಬಾಬೆಲಿನ ನಾಶನ ( 46—48 ) ಬಾಬೆಲಿನ ದೇವತೆಗಳ ಅಶಕ್ತಿ. ಯೆಹೋವನ ಸರ್ವಶಕ್ತಿ

1 ಬೇಲ್ ದೇವತೆಯು ಬೊಗ್ಗಿದೆ, ನೆಬೋದೇವತೆಯು ಕುಗ್ಗಿದೆ, ಅವುಗಳ ಬೊಂಬೆಗಳು ದನ ಮೊದಲಾದವುಗಳ ಮೇಲೆ ಹೊರಿಸಲ್ಪಟ್ಟಿವೆ, ನೀವು ಮೆರವಣಿಗೆಯಾಗಿ ಹೊರುತ್ತಿದ್ದವುಗಳು ಪಶುಗಳಿಗೆ ಭಾರವಾದ ಹೊರೆಯಾಗಿ ಅವುಗಳನ್ನು ಬಳಲಿಸಿವೆ.

2 ಒಟ್ಟಿಗೆ ಕುಗ್ಗಿ ಬೊಗ್ಗಿವೆ, ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ ತಾವೇ ಸೆರೆಗೆ ಹೋಗಿವೆ.

3 ಯಾಕೋಬವಂಶವೇ, ಇಸ್ರಾಯೇಲ್ ಸಂತಾನಶೇಷವೇ, ನನ್ನ ಮಾತಿಗೆ ಕಿವಿಗೊಡಿರಿ; ನಿಮ್ಮನ್ನು ಗರ್ಭದಿಂದ ಹೊರುತ್ತಿದ್ದೇನೆ, ಹುಟ್ಟಿದಂದಿನಿಂದ ವಹಿಸುತ್ತಿದ್ದೇನೆ;

4 ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.

5 ನನ್ನನ್ನು ಯಾರಿಗೆ ಸರಿಕಟ್ಟಿ ಹೋಲಿಸೀರಿ, ಇಬ್ಬರೂ ಸಮಾನರೆಂದು ನನ್ನನ್ನು ಯಾರೊಡನೆ ಸಮಮಾಡೀರಿ?

6 ಚೀಲದಿಂದ ಚಿನ್ನವನ್ನು ಸುರಿದು ತ್ರಾಸಿನಲ್ಲಿ ಬೆಳ್ಳಿಯನ್ನು ತೂಗಿ ಅಕ್ಕಸಾಲಿಗನಿಗೆ ಕೊಟ್ಟು ಕೂಲಿಗೊತ್ತುಮಾಡಿ ದೇವರನ್ನು ಮಾಡಿಸಿ ಅದಕ್ಕೆ ಎರಗಿ ಪೂಜೆಮಾಡುವರು.

7 ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅಲ್ಲಿಂದ ಜರಗದು, ಒಬ್ಬನು ಕೂಗಿಕೊಂಡರೂ ಉತ್ತರಕೊಟ್ಟು ಕಷ್ಟದಿಂದ ಅವನನ್ನು ಬಿಡಿಸಲಾರದು.

8 ದ್ರೋಹಿಗಳೇ, ಇದನ್ನು ಜ್ಞಾಪಕದಲ್ಲಿಟ್ಟುಕೊಂಡು ಗಮನಿಸಿ ಮನುಷ್ಯರಿಗೆ ತಕ್ಕಂತೆ ನಡೆಯಿರಿ!

9 ಪುರಾತನದ ಹಳೇ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ಇನ್ನು ಯಾರೂ ಅಲ್ಲ; ನಾನೇ ಪರಮದೇವರು, ನನಗೆ ಸರಿಸಮಾನರಿಲ್ಲ.

10 ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ;

11 ಮೂಡಲಿಂದ ಹದ್ದು ಎರಗಲಿ ಎಂದು, ಅಂದರೆ ನನ್ನ ಸಂಕಲ್ಪವನ್ನು ನೆರವೇರಿಸತಕ್ಕವನು ದೂರದೇಶದಿಂದ ಬರಲಿ ಎಂದು ಕೂಗಿದ್ದೇನೆ; ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.

12 ಧರ್ಮಕ್ಕೆ ದೂರರಾದ ಹಟಗಾರರೇ, ನನ್ನ ಮಾತಿಗೆ ಕಿವಿಗೊಡಿರಿ;

13 ನನ್ನ ಧರ್ಮವನ್ನು ಹತ್ತಿರಕ್ಕೆ ಬರಮಾಡುವೆನು, ಅದು ಇನ್ನು ದೂರವಾಗಿರದು, ನನ್ನ ರಕ್ಷಣೆಯು ತಡವಾಗದು; ಚೀಯೋನಿನಲ್ಲಿ ರಕ್ಷಣಾಕಾರ್ಯವನ್ನು ನಡಿಸಿ ಇಸ್ರಾಯೇಲಿಗೆ ನನ್ನ ಮಹಿಮೆಯನ್ನು ದಯಪಾಲಿಸುವೆನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು