Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 42 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲು ಯೆಹೋವನ ಸೇವಕನೂ ಸಾಕ್ಷಿಯೂ ವಿವಿಧವಾದ ಎಚ್ಚರಿಕೆಯೂ ಪ್ರೋತ್ಸಾಹವೂ ( 42.1—44.23 ) ಯೆಹೋವನ ಸೇವಕನ ಗುಣಲಕ್ಷಣಗಳೂ ಕರ್ತವ್ಯವೂ

1 ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ; ಇವನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ; ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರ ಪಡಿಸುವನು.

2 ಇವನು ಕೂಗಾಡುವದಿಲ್ಲ, ಆರ್ಭಟಿಸುವದಿಲ್ಲ, ಬೀದಿಗಳಲ್ಲಿ ಇವನ ಧ್ವನಿಯೇ ಕೇಳಿಸುವದಿಲ್ಲ.

3 ಜಜ್ಜಿದ ದಂಟನ್ನು ಮುರಿದು ಹಾಕದೆ ಕಳೆಗುಂದಿದ ದೀಪವನ್ನು ನಂದಿಸದೆ ಸದ್ಧರ್ಮವನ್ನು ಪ್ರಚುರಪಡಿಸಿ ಸಿದ್ಧಿಗೆ ತರುವನು.

4 ಲೋಕದಲ್ಲಿ ಸದ್ಧರ್ಮವನ್ನು ಸ್ಥಾಪಿಸುವ ತನಕ ಇವನು ಕಳೆಗುಂದದೆಯೂ ಜಜ್ಜಿಹೋಗದೆಯೂ [ತನ್ನ ಕಾರ್ಯದಲ್ಲಿ ನಿರತನಾಗಿರುವನು]; ದ್ವೀಪದ್ವೀಪಾಂತರಗಳು ಇವನ ಧರ್ಮಪ್ರಮಾಣಕ್ಕೆ ಕಾದಿರುವವು.

5 ಆಕಾಶಮಂಡಲವನ್ನುಂಟುಮಾಡಿ ಹರವಿ ಭೂಮಂಡಲವನ್ನೂ ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, ಹೌದು, ಭೂಚರರಿಗೆ ಜೀವಾತ್ಮವನ್ನೂ ದಯಪಾಲಿಸುವ ಯೆಹೋವನೆಂಬ ದೇವರು ಹೀಗನ್ನುತ್ತಾನೆ -

6 ನೀನು ಕುರುಡರಿಗೆ ಕಣ್ಣುಕೊಟ್ಟು ಬಂದಿಗಳನ್ನು ಸೆರೆಯಿಂದಲೂ ಕತ್ತಲಲ್ಲಿ ಬಿದ್ದವರನ್ನು ಕಾರಾಗೃಹದಿಂದಲೂ ಹೊರಗೆ ಕರತರಬೇಕು ಎಂದು

7 ಯೆಹೋವನೆಂಬ ನಾನು ನನ್ನ ಧರ್ಮದ ಸಂಕಲ್ಪನುಸಾರವಾಗಿ ನಿನ್ನನ್ನು ಕರೆದು ಕೈಹಿಡಿದು ಕಾಪಾಡಿ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ ಅನ್ಯಜನಗಳಿಗೆ ಬೆಳಕನ್ನಾಗಿಯೂ ನೇವಿುಸಿದ್ದೇನೆ.

8 ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲು ಮಾಡೆನು.

9 ಇಗೋ, ಮೊದಲನೆಯ ಸಂಗತಿಗಳು ನೆರವೇರಿವೆ, ಹೊಸ ಸಂಗತಿಗಳನ್ನು ಪ್ರಕಟಿಸುತ್ತೇವೆ; ಅವು ತಲೆದೋರುವದಕ್ಕೆ ಮುಂಚೆ ಅವುಗಳನ್ನು ನಿಮಗೆ ತಿಳಿಸುತ್ತೇನೆ.


ಯೆಹೋವನ ರಕ್ಷಣಾಸಂಕಲ್ಪ

10 ಸಮುದ್ರಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಾಂತರಗಳೇ, ದ್ವೀಪಾಂತರವಾಸಿಗಳೇ, ಯೆಹೋವನ ಘನತೆಗಾಗಿ ನೂತನಗೀತವನ್ನು ಹಾಡಿ ದಿಗಂತಗಳಲ್ಲಿಯೂ ಆತನನ್ನು ಕೀರ್ತಿಸಿರಿ.

11 ಅರಣ್ಯವೂ ಅಲ್ಲಿನ ಊರುಗಳೂ ಕೇದಾರಿನವರ ಗ್ರಾಮಗಳೂ ಆರ್ಭಟಿಸಲಿ, ಸೆಲಪಟ್ಟಣದವರು ಹರ್ಷಧ್ವನಿಗೈದು ಪರ್ವತಾಗ್ರಗಳಲ್ಲಿ ಕೇಕೆ ಹಾಕಲಿ.

12 ಯೆಹೋವನನ್ನು ಘನಪಡಿಸಿ ದ್ವೀಪಾಂತರಗಳಲ್ಲಿ ಆತನ ಸ್ತೋತ್ರವನ್ನು ಹಬ್ಬಿಸಲಿ.

13 ಯೆಹೋವನು ಶೂರನಂತೆ ಹೊರಟು ಯುದ್ಧವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸುವನು; ಆರ್ಭಟಿಸಿ ಗರ್ಜಿಸಿ ಶತ್ರುಗಳ ಮೇಲೆ ಬಿದ್ದು ತನ್ನ ಪರಾಕ್ರಮವನ್ನು ತೋರ್ಪಡಿಸುವನು.

14 ನಾನು ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನು ಬಿಗಿಹಿಡಿದಿದ್ದೆನು. [ಈಗ] ಹೆರುವವಳಂತೆ ಮೂಲುಗುತ್ತಾ ಅಸುರುಸಿರಿನೊಡನೆ ಏದುವೆನು.

15 ಬೆಟ್ಟಗುಡ್ಡಗಳನ್ನು ನಾಶಪಡಿಸಿ ಅಲ್ಲಿಯ ಮೇವನ್ನೆಲ್ಲಾ ತಾರಿಸಿ ನದಿಗಳನ್ನು ಒಣದಿಣ್ಣೆ ಮಾಡಿ ಕೆರೆಗಳನ್ನು ಬತ್ತಿಸುವೆನು.

16 ಮತ್ತು ಕುರುಡರನ್ನು ನೆಪ್ಪಿಲ್ಲದ ಮಾರ್ಗದಲ್ಲಿ ಬರಮಾಡುವೆನು, ಅವರಿಗೆ ಗೊತ್ತಿಲ್ಲದ ದಾರಿಗಳಲ್ಲಿ ಅವರನ್ನು ನಡೆಯಿಸುವೆನು; ಅವರೆದುರಿನ ಕತ್ತಲನ್ನು ಬೆಳಕುಮಾಡಿ ಡೊಂಕನ್ನು ಸರಿಪಡಿಸುವೆನು. ಈ ಕಾರ್ಯಗಳನ್ನು ಬಿಡದೆ ಮಾಡುವೆನು.

17 ಕೆತ್ತಿದ ವಿಗ್ರಹಗಳಲ್ಲಿ ಭರವಸವಿಟ್ಟು ನೀವೇ ನಮ್ಮ ದೇವರುಗಳು ಎಂದು ಎರಕದ ಬೊಂಬೆಗಳಿಗೆ ಅರಿಕೆಮಾಡುವವರು ಹಿಂದೆ ಬಿದ್ದು ಕೇವಲ ಅವಮಾನಕ್ಕೆ ಈಡಾಗುವರು.


ಯೆಹೋವನ ಸೇವಕನ ಈಗಿನ ದುಸ್ಥಿತಿಯೂ ಮುಂದಿನ ಉದ್ಧಾರವೂ

18 ಕಿವುಡರೇ, ಕೇಳಿರಿ! ಕುರುಡರೇ, ನಿಮ್ಮ ಕಣ್ಣಿಟ್ಟು ನೋಡಿರಿ!

19 ನನ್ನ ಸೇವಕನ ಹೊರತು ಯಾರು ಕುರುಡರು? ನಾನು ಕಳುಹಿಸುವ ದೂತನಂತೆ ಯಾರು ಕಿವುಡರು? ನನ್ನ ಭಕ್ತನ ಹಾಗೆ ಯಾರು ಕುರುಡರು? ಯೆಹೋವನ ಸೇವಕನ ಪ್ರಕಾರ ಅಂಧಕರು ಯಾರು?

20 ನೀನು ಬಹು ವಿಷಯಗಳನ್ನು ಕಂಡಿದ್ದರೂ ನಿನಗೆ ಗಮನವಿಲ್ಲ; ಇವನ ಕಿವಿ ತೆರೆದಿದ್ದರೂ ಕೇಳನು.

21 ಯೆಹೋವನು ಧರ್ಮಸ್ವರೂಪನಾಗಿರುವದರಿಂದ ಧರ್ಮೋಪದೇಶವನ್ನು ಘನಪಡಿಸಿ ಮಹತ್ತಿಗೆ ತರಬೇಕೆಂದು ಇಷ್ಟಪಟ್ಟನು.

22 ಈ ಜನರೇ ಕೊಳ್ಳೆಗೆ ಈಡಾಗಿ ಸೂರೆಹೋಗಿದ್ದಾರೆ; ಎಲ್ಲರೂ ಹಳ್ಳಕೊಳ್ಳಗಳಿಗೆ ಸಿಕ್ಕಿಬಿದ್ದಿದ್ದಾರೆ, ಸೆರೆಮನೆಗಳಲ್ಲಿ ಮುಚ್ಚಲ್ಪಟ್ಟಿದ್ದಾರೆ; ಅವರು ಸುಲಿಗೆಯಾಗಿದ್ದರೂ ಯಾರೂ ಬಿಡಿಸರು, ಸೂರೆಯಾಗಿದ್ದರೂ ಯಾರೂ ಹಿಂದಕ್ಕೆ ಬಿಡು ಅನ್ನರು.

23 ನಿಮ್ಮಲ್ಲಿ ಯಾರು ಈ ಮಾತಿಗೆ ಕಿವಿಗೊಡುವರು? ಯಾರು ಇನ್ನು ಮುಂದೆ ಆಲಿಸಿ ಕೇಳುವರು?

24 ಯಾಕೋಬನ್ನು ಸುಲಿಗೆಗೂ ಇಸ್ರಾಯೇಲನ್ನು ಕೊಳ್ಳೆಗೂ ಕೊಟ್ಟವನು ಯಾರು? ಯಾವನಿಗೆ ವಿರುದ್ಧವಾಗಿ ನಾವು ದ್ರೋಹ ಮಾಡಿದೆವೋ ಆ ಯೆಹೋವನಲ್ಲವೇ. ಆತನ ಜನರು ಆತನ ಮಾರ್ಗಗಳಲ್ಲಿ ನಡೆಯಲೊಲ್ಲದೆ ಆತನ ಉಪದೇಶವನ್ನು ಕೇಳದೆ ಹೋದರಷ್ಟೆ.

25 ಆಗ ಆತನು ಅವರ ಮೇಲೆ ತನ್ನ ರೋಷಾಗ್ನಿಯನ್ನೂ ಯುದ್ಧದ ರೌದ್ರವನ್ನೂ ಸುರಿಸಿದನು. ಎಲ್ಲಾ ಕಡೆಯಿಂದಲೂ ಅವರಿಗೆ ಉರಿಹತ್ತಿತು, ಆದರೆ ಅವರು ತಿಳಿಯಲಿಲ್ಲ; ದಹಿಸಿತು, ಲಕ್ಷ್ಯಕ್ಕೆ ತರಲಿಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು