ಯೆಶಾಯ 4 - ಕನ್ನಡ ಸತ್ಯವೇದವು J.V. (BSI)1 ಆ ದಿನದಲ್ಲಿ ಏಳು ಮಂದಿ ಹೆಂಗಸರು ಒಬ್ಬ ಗಂಡಸನ್ನು ಹಿಡಿದು ಸ್ವಂತವಾಗಿ ದುಡಿದ ಅನ್ನವನ್ನು ಉಣ್ಣುವೆವು, ನಾವೇ ಸಂಪಾದಿಸಿದ ಬಟ್ಟೆಯನ್ನು ಉಟ್ಟುಕೊಳ್ಳುವೆವು; ನಿನ್ನ ಹೆಸರು ಮಾತ್ರ ನಮಗಿದ್ದರೆ ಸಾಕು; ನಮ್ಮ ಅವಮಾನವನ್ನು ನೀಗಿಸಿಬಿಡು ಎಂದು ಕೇಳಿಕೊಳ್ಳುವರು. ಚೀಯೋನಿನ ಮುಂದಣ ಸುಸ್ಥಿತಿ 2 ಆ ದಿನದಲ್ಲಿ ಯೆಹೋವನು ದಯಪಾಲಿಸುವ ಬೆಳೆಯಿಂದ ಇಸ್ರಾಯೇಲ್ಯರಲ್ಲಿ ಉಳಿದವರಿಗೆ ಸೌಂದರ್ಯವೂ ಮಹಿಮೆಯೂ ಉಂಟಾಗುವವು, ದೇಶದ ಫಲದಿಂದ ಉನ್ನತಿಯೂ ಭೂಷಣವೂ ಲಭಿಸುವವು. 3 ಮತ್ತು ಚೀಯೋನಿನಲ್ಲಿ ಉಳಿದವರು, ಯೆರೂಸಲೇವಿುನಲ್ಲಿ ನಿಂತವರು, ಅಂತು ಜೀವಬಾಧ್ಯರ ಪಟ್ಟಿಯಲ್ಲಿ ಹೆಸರುಬಿದ್ದ ಯೆರೂಸಲೇವಿುನವರೆಲ್ಲರೂ ದೇವರ ಜನರೆನಿಸಿಕೊಳ್ಳುವರು. 4 ಆಗ ಕರ್ತನಾದ ಯೆಹೋವನು ನ್ಯಾಯತೀರ್ಪಿನ ಆತ್ಮದಿಂದಲೂ ದಹಿಸುವ ಆತ್ಮದಿಂದಲೂ ಚೀಯೋನಿನ ಸ್ತ್ರೀಯರ ಕಲ್ಮಷವನ್ನೂ ಯೆರೂಸಲೇವಿುನ ಮಧ್ಯದಲ್ಲಿನ ರಕ್ತವನ್ನೂ ತೊಳೆದುಬಿಟ್ಟ ಮೇಲೆ 5 ಚೀಯೋನ್ ಪರ್ವತದ ಸಂಪೂರ್ಣ ಮಂದಿರದ ಮೇಲೆಯೂ ಅಲ್ಲಿನ ಕೂಟಗಳ ಮೇಲೆಯೂ ಹಗಲಲ್ಲಿ ಧೂಮಮೇಘವನ್ನು, ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನು, ಉಂಟು ಮಾಡುವನು. [ಈ] ಪ್ರಭಾವದ ಮೇಲೆಲ್ಲಾ ಆವರಣವಿರುವದು. 6 ಹಗಲಿನ ಬಿಸಿಲಲ್ಲಿ ನೆರಳನ್ನೂ ಸಣ್ಣ ದೊಡ್ಡ ಮಳೆಗಳಲ್ಲಿ ಆಶ್ರಯವನ್ನೂ ಕೊಡುವ ಮಂಟಪವಿರುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India