ಯೆಶಾಯ 38 - ಕನ್ನಡ ಸತ್ಯವೇದವು J.V. (BSI)ಹಿಜ್ಕೀಯನು ರೋಗಿಯಾಗಿ ಆರೋಗ್ಯ ಹೊಂದಿದ್ದು 1 ಆ ಕಾಲದಲ್ಲಿ ಹಿಜ್ಕೀಯನು ಮರಣಕರ ರೋಗದಲ್ಲಿ ಬಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ - ನಿನ್ನ ಮನೆಯ ವಿಷಯವಾಗಿ ವ್ಯವಸ್ಥೆಮಾಡು; ಏಕಂದರೆ ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ ಎಂಬದಾಗಿ ಯೆಹೋವನು ಅನ್ನುತ್ತಾನೆ ಎಂದು ಹೇಳಿದನು. 2 ಇದನ್ನು ಕೇಳಿದೊಡನೆ ಹಿಜ್ಕೀಯನು ಮೋರೆಯನ್ನು ಗೋಡೆಯ ಕಡೆಗೆ ತಿರುಗಿಸಿ - 3 ಯೆಹೋವನೇ, ನಾನು ನಂಬಿಗಸ್ತನಾಗಿಯೂ ಯಥಾರ್ಥಚಿತ್ತನಾಗಿಯೂ ನಿನಗೆ ನಡೆದುಕೊಂಡು ನಿನ್ನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದದ್ದನ್ನು ನೆನಪುಮಾಡಿಕೋ ಎಂದು ಪ್ರಾರ್ಥಿಸಿ ಬಹಳವಾಗಿ ಅತ್ತನು. 4 ಆಗ ಯೆಹೋವನು ಯೆಶಾಯನಿಗೆ - 5 ನೀನು ಹೋಗಿ ನನ್ನ ಪ್ರಜೆಗಳ ಪ್ರಭುವಾಗಿರುವ ಹಿಜ್ಕೀಯನಿಗೆ - ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ; ನಿನ್ನ ಆಯುಷ್ಯಕ್ಕೆ ಹದಿನೈದು ವರುಷಗಳನ್ನು ಕೂಡಿಸುತ್ತೇನೆ. 6 ನಿನ್ನನ್ನೂ ಈ ಪಟ್ಟಣವನ್ನೂ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸುವೆನು; ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು, 7 ಯೆಹೋವನು ನುಡಿದದ್ದನ್ನು ನೆರವೇರಿಸುವನು ಎಂಬದಕ್ಕೆ ಒಂದು ಗುರುತನ್ನು ಕಾಣುವಿ. 8 ಇಗೋ, ಸೂರ್ಯನ ಇಳಿತರದಿಂದ ಆಹಾಜನ ಸೋಪಾನಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಲು ಹಿಂದಕ್ಕೆ ಬರಮಾಡುವೆನು ಎಂದು ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನು ಹೇಳುತ್ತಾನೆಂಬದಾಗಿ ತಿಳಿಸು ಎಂದು ಆಜ್ಞಾಪಿಸಿದನು. ಅದರಂತೆ ಸೋಪಾನಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಲು ಹಿಂದಕ್ಕೆ ಬಂತು. 9 ಯೆಹೂದದ ಅರಸನಾದ ಹಿಜ್ಕೀಯನು ರೋಗದಿಂದ ಆರೋಗ್ಯವನ್ನು ಹೊಂದಿ ಬರೆದದ್ದು - 10 [ನನ್ನ ರೋಗದಲ್ಲಿ] ಹೀಗೆಲ್ಲಾ ಅಂದುಕೊಂಡೆನು - ನನ್ನ ಮಧ್ಯಪ್ರಾಯದಲ್ಲಿ ಪಾತಾಳದ್ವಾರಗಳೊಳಗೆ ಸೇರಿದ್ದೇನೆ, ನನ್ನ ಆಯುಷ್ಯದಲ್ಲಿ ಕಳೆದು ವಿುಕ್ಕ ವರುಷಗಳು ನನಗೆ ನಷ್ಟವಾದವು. 11 ನಾನು ಇನ್ನು ಜೀವಲೋಕದವನಾಗಿ ಯಾಹು ಯೆಹೋವನ ದರ್ಶನವನ್ನು ಹೊಂದೆನಲ್ಲಾ, ಇನ್ನು ಭೂಲೋಕ ನಿವಾಸಿಗಳಲ್ಲೊಬ್ಬನಾಗಿ ಮನುಷ್ಯರನ್ನು ದೃಷ್ಟಿಸಲಾರೆನಲ್ಲಾ. 12 ನನ್ನ ಆಶ್ರಯವು ಕುರುಬನ ಗುಡಾರದಂತೆ ಕಿತ್ತು ನನ್ನ ಕಡೆಯಿಂದ ಒಯ್ಯಲ್ಪಟ್ಟಿದೆ; ಆತನು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದ ನೆಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ; ಉದಯದಿಂದ ಅಸ್ತಮಾನದೊಳಗೇ ನನ್ನನ್ನು ತೀರಿಸುತ್ತೀ. 13 ಆತನು ಸಿಂಹದಂತೆ ನನ್ನ ಎಲುಬುಗಳನ್ನೆಲ್ಲಾ ಮುರಿಯುತ್ತಿದ್ದರೂ ಬೆಳಗಿನ ತನಕ ತಡಕೊಂಡೇ ಇದ್ದೆನು. ಉದಯದಿಂದ ಅಸ್ತಮಾನದೊಳಗೇ ನನ್ನನ್ನು ತೀರಿಸುತ್ತೀಯಲ್ಲಾ ಎಂದು ಪ್ರಲಾಪಿಸಿದೆನು. 14 ನಾನು ಬಾನಕ್ಕಿಯಂತೆಯೂ ಬಕದ ಹಾಗೂ ಕೀಚುಗುಟ್ಟಿದೆನು, ಪಾರಿವಾಳದಂತೆ ಮೊರೆಯಿಟ್ಟೆನು, ಯೆಹೋವನೇ, ನಾನು ಬಾಧೆಪಡುತ್ತಿದ್ದೇನೆ, ನನಗೆ ಹೊಣೆಯಾಗು ಎಂದು ಮೇಲೆ ಮೇಲೆ ದೃಷ್ಟಿಸುತ್ತಾ ಕಂಗೆಟ್ಟೆನು. 15 ನಾನು ಏನು ಹೇಳಲಿ! ಆತನು ನನಗೆ ಮಾತು ಕೊಟ್ಟು ತಾನೇ ನೆರವೇರಿಸಿದ್ದಾನೆ! ನನ್ನ ಆತ್ಮಕ್ಕೆ ಸಂಭವಿಸಿದ ದುಃಖವನ್ನು ಸ್ಮರಿಸುತ್ತಾ ನನ್ನ ಜೀವಮಾನದಲ್ಲೆಲ್ಲಾ ಮೆಲ್ಲಗೆ ನಡೆಯುವೆನು. 16 ಯೆಹೋವನೇ, ಇಂಥಾ ಸಂಭವಗಳಿಂದ ಮನುಷ್ಯರು ಬದುಕುತ್ತಾರೆ, ಅವುಗಳಿಂದಲೇ ನನ್ನ ಆತ್ಮವು ಜೀವಿಸುತ್ತದೆ. ಈಗ ನನ್ನನ್ನು ಸ್ವಸ್ಥಮಾಡಿ ಬದುಕಿಸು. 17 ಆಹಾ, ನಾನು ಪಟ್ಟ ದುಃಖವು ನನ್ನ ಸುಖಕ್ಕಾಗಿಯೇ ಆಯಿತು, ನನ್ನ ಆತ್ಮವನ್ನು ನಾಶಕೂಪದಿಂದ ರಕ್ಷಿಸಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನ ಹಿಂದೆ ಹಾಕಿಬಿಟ್ಟಿದ್ದೀ. 18 ಪಾತಾಳದವರು ನಿನ್ನನ್ನು ಸ್ತುತಿಸರು, ಸತ್ತವರು ನಿನ್ನನ್ನು ಕೀರ್ತಿಸರು, ಅಧೋಲೋಕಕ್ಕೆ ಇಳಿದುಹೋದವರು ನಿನ್ನ ಸತ್ಯಸಂಧತೆಯನ್ನು ಆಶ್ರಯಿಸಲಾರರು. 19 ಜೀವಂತನು ಜೀವಂತನೇ ನಿನ್ನನ್ನು ಸ್ತುತಿಸುವನು, ಹೌದು, ಜೀವಂತನಾದ ನಾನೇ ಈ ಹೊತ್ತು ನಿನ್ನನ್ನು ಹೊಗಳುವೆನು. ತಂದೆಯು ಮಕ್ಕಳಿಗೆ ನಿನ್ನ ಸತ್ಯಸಂಧತೆಯನ್ನು ಬೋಧಿಸುವನು. 20 ಯೆಹೋವನು ನನಗೆ ರಕ್ಷಣಪರನಾಗಿದ್ದಾನಷ್ಟೆ; ನಮ್ಮ ಜೀವಮಾನದಲ್ಲೆಲ್ಲಾ ಯೆಹೋವನ ಆಲಯದಲ್ಲಿ ನಮ್ಮ ಕಿನ್ನರಿ ವೀಣೆಗಳನ್ನು ನುಡಿಸುವೆವು. 21 (ಯೆಶಾಯನು - ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ ಕುರುವಿನ ಮೇಲೆ ಇಟ್ಟರೆ ಅರಸನು ಗುಣಹೊಂದುವನು ಎಂದು ಅಪ್ಪಣೆಕೊಡಲಾಗಿ 22 ಹಿಜ್ಕೀಯನು - ನಾನು [ಗುಣಹೊಂದಿ] ಯೆಹೋವನ ಆಲಯವನ್ನು ಸೇರುವೆನೆಂಬದಕ್ಕೆ ಗುರುತೇನು ಎಂದು ಕೇಳಿದ್ದನು). |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India