ಯೆಶಾಯ 35 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲಿನ ಮುಂದಿನ ಸೌಭಾಗ್ಯವು 1 ಅರಣ್ಯವೂ ಮರುಭೂವಿುಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು. 2 ಅದು ಸಮೃದ್ಧಿಯಾಗಿ ಹೂಬಿಟ್ಟು ಉತ್ಸಾಹ ಧ್ವನಿಮಾಡುವಷ್ಟು ಉಲ್ಲಾಸಿಸುವದು; ಲೆಬನೋನಿನ ಮಹಿಮೆಯೂ ಕರ್ಮೆಲಿನ ಮತ್ತು ಶಾರೋನಿನ ವೈಭವವೂ ಅದಕ್ಕೆ ದೊರೆಯುವವು; ಇವೆಲ್ಲಾ ಯೆಹೋವನ ಮಹಿಮೆಯನ್ನೂ ನಮ್ಮ ದೇವರ ವೈಭವವನ್ನೂ ಕಾಣುವವು. 3 ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ. 4 ಭಯಭ್ರಾಂತಹೃದಯರಿಗೆ - ಬಲಗೊಳ್ಳಿರಿ, ಹೆದರಬೇಡಿರಿ; ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವದಕ್ಕೂ ದೈವಿಕ ಪ್ರತಿಫಲವನ್ನು ಕೊಡುವದಕ್ಕೂ ಬರುವನು; ತಾನೇ ಬಂದು ನಿಮ್ಮನ್ನು ರಕ್ಷಿಸುವನು ಎಂದು ಹೇಳಿರಿ. 5 ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು; 6 ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣ ನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು. 7 ಬೆಂಗಾಡು ಸರೋವರವಾಗುವದು; ಒಣನೆಲದಲ್ಲಿ ಬುಗ್ಗೆಗಳುಕ್ಕುವವು; ನರಿಗಳು ಮಲಗುತ್ತಿದ್ದ ಹಕ್ಕೆಯು ಆಪುಜಂಬುಗಳ ಪ್ರದೇಶವಾಗುವದು. 8 ಅಲ್ಲಿ ರಾಜಮಾರ್ಗವಿರುವದು, ಹೌದು [ಹೋಗಿಬರುವ] ದಾರಿ; ಅದು ಪರಿಶುದ್ಧಮಾರ್ಗ ಎನಿಸಿಕೊಳ್ಳುವದು; ಯಾವ ಅಶುದ್ಧನೂ ಅಲ್ಲಿ ನಡೆಯನು, ಅದು ದೇವಜನರಿಗಾಗಿಯೇ ಇರುವದು, ಅಲ್ಲಿ ಹೋಗುವ ಮೂಢನೂ ದಾರಿತಪ್ಪನು. 9 ಸಿಂಹವು ಅಲ್ಲಿರದು, ಕ್ರೂರ ಜಂತು ಅಲ್ಲಿ ಸೇರದು, ಕಾಣುವದೇ ಇಲ್ಲ; ಬಿಡುಗಡೆಯಾದವರೇ ಅಲ್ಲಿ ನಡೆಯುವರು; 10 ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India