Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 33 - ಕನ್ನಡ ಸತ್ಯವೇದವು J.V. (BSI)


ಯೆರೂಸಲೇವಿುನ ಅಪಾಯವೂ ಮುಂದಿನ ಸುರಕ್ಷಣೆಯೂ 33 ಶತ್ರುಬಾಧೆಗೆ ಒಳಗಾದ ಯೆರೂಸಲೇವಿುನವರ ದೇವಪ್ರಾರ್ಥನೆಯೂ ಯೆಹೋವನ ಉತ್ತರವೂ

1 ಸೂರೆಯಾಗದಿದ್ದರೂ ಸೂರೆಮಾಡಿದಿ, ಬಾಧೆಪಡದಿದ್ದರೂ ಬಾಧಿಸಿದಿ; ನಿನ್ನ ಗತಿಯನ್ನು ಏನು ಹೇಳಲಿ; ನೀನು ಸೂರೆಮಾಡಿ ಬಿಟ್ಟ ಮೇಲೆ ನೀನೂ ಸೂರೆಯಾಗುವಿ! ಬಾಧಿಸಿ ಬಿಟ್ಟ ಮೇಲೆ ನಿನ್ನನ್ನೂ ಬಾಧಿಸುವರು.

2 ಯೆಹೋವನೇ, ನಮ್ಮನ್ನು ಕರುಣಿಸು! ನಿನ್ನನ್ನು ಕಾದುಕೊಂಡಿದ್ದೇವೆ; ಪ್ರತಿ ಮುಂಜಾನೆಯೂ ನಮಗೆ ಭುಜಬಲವಾಗಿಯೂ ಇಕ್ಕಟ್ಟಿನಲ್ಲಿ ನಮಗೆ ರಕ್ಷಣೆಯಾಗಿಯೂ ಇರು.

3 ಭೋರ್ಗರೆಯುವ ಶಬ್ದಕ್ಕೆ ಜನಾಂಗಗಳು ಓಡುವವು; ನೀನು ಏಳುವಾಗ ರಾಜ್ಯಗಳು ದಿಕ್ಕಾಪಾಲಾಗುವವು.

4 ನೀವು ಕೊಳ್ಳೆಹೊಡೆದದ್ದನ್ನು ಇತರರು ವಿುಡತೆಗಳಂತೆ ಕೊಳ್ಳೆಮಾಡುವರು; ಶಲಭಗಳಂತೆ ಅದರ ಮೇಲೆ ಹಾರಿಬೀಳುವರು;

5 ಯೆಹೋವನು ಉನ್ನತೋನ್ನತನಾಗಿದ್ದಾನೆ; ಮೇಲಿನ ಲೋಕದಲ್ಲಿ ವಾಸಿಸುತ್ತಾನಷ್ಟೆ; ಚೀಯೋನನ್ನು ನೀತಿನ್ಯಾಯಗಳಿಂದ ತುಂಬಿಸಿದ್ದಾನೆ.

6 ಜ್ಞಾನವೂ ತಿಳುವಳಿಕೆಯೂ ರಕ್ಷಣ ಕಾರ್ಯಸಮೃದ್ಧಿಯೂ ಇರುವದರಿಂದ ನಿನ್ನ ಕಾಲದಲ್ಲಿ ಸ್ಥೈರ್ಯವಿರುವದು; ಯೆಹೋವನ ಮೇಲಣ ಭಯಭಕ್ತಿಯು ನಿನಗೆ ನಿಧಿಯಾಗುವದು.

7 ಇಗೋ, ಸಿಂಹವೀರರು ಹೊರಗೆ ಹಾಹಾಕಾರ ಮಾಡುತ್ತಿದ್ದಾರೆ; ಸಮಾಧಾಯಕ ರಾಯಭಾರಿಗಳು ಘೋರವಾಗಿ ಅಳುತ್ತಿದ್ದಾರೆ.

8 ರಾಜಮಾರ್ಗಗಳು ಹಾಳಾಗಿವೆ, ದಾರಿಗರು ಇಲ್ಲವೇ ಇಲ್ಲ; [ಶತ್ರುವು] ಒಪ್ಪಂದವನ್ನು ಮೀರಿದ್ದಾನೆ, ಊರಿನವರನ್ನು ತಿರಸ್ಕರಿಸಿದ್ದಾನೆ, ಮನುಷ್ಯರನ್ನು ಗಣನೆಗೆ ತಾರನು.

9 ದೇಶವು ಪ್ರಲಾಪಿಸಿ ಕುಗ್ಗುತ್ತದೆ, ಲೆಬನೋನ್ ನಾಚಿಕೊಂಡು ಒಣಗುತ್ತದೆ. ಶಾರೋನ್ ಬೆಂಗಾಡಾಗಿದೆ, ಬಾಷಾನ್ ಮತ್ತು ಕರ್ಮೆಲ್ [ತಳಿರುಗಳನ್ನು] ಉದುರಿಸಿಬಿಟ್ಟಿವೆ.

10 ಯೆಹೋವನು ಹೀಗನ್ನುತ್ತಾನೆ - ಈಗ ಏಳುವೆನು, ಈಗಲೇ ನನ್ನನ್ನು ಉನ್ನತಪಡಿಸಿಕೊಳ್ಳುವೆನು, ಕೂಡಲೆ ಉನ್ನತೋನ್ನತನಾಗುವೆನು.

11 ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರುವಿರಿ; ನಿಮ್ಮ ಬುಸುಗುಟ್ಟುವಿಕೆಯು ನಿಮ್ಮನ್ನೇ ನುಂಗುವ ಜ್ವಾಲೆಯಾಗುವದು.

12 ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವವು; ಕತ್ತರಿಸಿದ ಮುಳ್ಳುಕೊಂಪೆಗೆ ಬೆಂಕಿ ಹಚ್ಚಿದಂತಾಗುವವು.

13 ದೂರಸ್ಥರೇ, ನಾನು ನಡಿಸಿದ್ದನ್ನು ಕೇಳಿರಿ; ಸಮೀಪಸ್ಥರೇ, ನನ್ನ ಪರಾಕ್ರಮವನ್ನು ತಿಳಿದುಕೊಳ್ಳಿರಿ.


ಯೆಹೋವನ ರಕ್ಷಣೆಯನ್ನು ಹೊಂದತಕ್ಕವರು ಯಾರು?

14 ಚೀಯೋನಿನ ಪಾಪಿಗಳು ಹೆದರುತ್ತಾರೆ, ಆ ಭ್ರಷ್ಟರು ನಡುಕಕ್ಕೆ ಒಳಗಾಗಿ - ನಮ್ಮಲ್ಲಿ ಯಾರು ನುಂಗುವ ಕಿಚ್ಚಿನ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗಿಯಾರು ಅಂದುಕೊಳ್ಳುತ್ತಾರೆ.

15 [ಕೇಳಿರಿ], ಸನ್ಮಾರ್ಗದಲ್ಲಿ ನಡೆದು ಯಥಾರ್ಥವಾಗಿ ನುಡಿದು ದೋಚಿಕೊಂಡ ಲಾಭ ಬೇಡವೆಂದು ಲಂಚ ಮುಟ್ಟದಂತೆ ಕೈ ಒದರಿ ಕೊಲೆಯ ಮಾತಿಗೆ ಕಿವಿಗೊಡದೆ ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನೇ ಉನ್ನತಸನ್ನಿಧಾನದಲ್ಲಿ ವಾಸಿಸುವನು;

16 ಇವನಿಗೆ ಆಶ್ರಯವು ಗಿರಿದುರ್ಗ, ಅನ್ನವು ಉಚಿತವಾಗಿ ಒದಗುವದು, ನೀರೂ ನಿಸ್ಸಂದೇಹ.


ಯೆರೂಸಲೇವಿುನ ಮುಂದಿನ ಸುಸ್ಥಿತಿ

17 ನೀವು ಭೂಷಿತರಾಜನನ್ನು ಕಣ್ಣಾರೆ ದರ್ಶನ ಮಾಡುವಿರಿ. ಅತಿವಿಸ್ತಾರವಾದ ಸ್ವದೇಶವನ್ನು ಕಣ್ಣು ತುಂಬಾ ನೋಡುವಿರಿ.

18 ಆಗ ನೀವು [ಹಿಂದಿನ] ಭಯವನ್ನು ಮನಸ್ಸಿಗೆ ತಂದುಕೊಳ್ಳುತ್ತಾ - [ಕಪ್ಪವನ್ನು] ಲೆಕ್ಕಿಸಿದವನು ಎಲ್ಲಿ, ತೂಕಮಾಡಿದವನು ಎಲ್ಲಿ, ಬುರುಜುಗಳನ್ನು ಗಣಿಸಿದವನು ಎಲ್ಲಿ ಅಂದುಕೊಳ್ಳುವಿರಿ.

19 ನಿಮಗೆ ತಿಳಿಯಲಾಗದ ಅನ್ಯಭಾಷೆಯನ್ನೂ ನೀವು ಗ್ರಹಿಸಲಾರದ ತೊದಲುಮಾತುಗಳನ್ನೂ ಆಡುವ ಆ ಕ್ರೂರಜನರನ್ನು ಕಾಣದೆ ಇರುವಿರಿ.

20 ನಮ್ಮ ಉತ್ಸವಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ; ಯೆರೂಸಲೇಮು ನೆಮ್ಮದಿಯ ನಿವಾಸವಾಗಿಯೂ ಗೂಟಕೀಳದ, ಹಗ್ಗಹರಿಯದ, ಒಂದೇ ಕಡೆ ಇರುವ ಗುಡಾರವಾಗಿಯೂ ಇರುವದನ್ನು ನೀವು ಕಣ್ಣಾರೆ ಕಾಣುವಿರಿ.

21 ಅಲ್ಲಿ ಯೆಹೋವನು ಘನಹೊಂದಿದವನಾಗಿ ಹುಟ್ಟುಗೋಲಿನ ದೋಣಿ ಹೋಗದ, ಘನನಾವೆಯೂ ಸಂಚರಿಸದ ವಿಸ್ತೀರ್ಣನದೀನದಗಳಂತೆ ನಮ್ಮೊಂದಿಗಿರುವನು.

22 ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಧರ್ಮವಿಧಾಯಕ, ಯೆಹೋವನು ನಮ್ಮ ರಾಜ; ಆತನೇ ನಮ್ಮನ್ನು ರಕ್ಷಿಸುವನು.

23 ನಿನ್ನ ಹಗ್ಗಗಳು ಸಡಲಿ ಸ್ತಂಭದ ಪಾದವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು, ಪಠವನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ; ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ ಹಂಚುವದಕ್ಕೆ ಆಸ್ಪದವಾಯಿತು. ಕುಂಟರೂ ಸುಲಿಗೆಮಾಡಿದರು.

24 ಚೀಯೋನಿನ ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು; ಅಲ್ಲಿಯ ಜನರ ಪಾಪವು ಪರಿಹಾರವಾಗುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು