Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 32 - ಕನ್ನಡ ಸತ್ಯವೇದವು J.V. (BSI)


ಮುಂದಿನ ಧರ್ಮರಾಜ್ಯದ ಸುಲಕ್ಷಣ
( 32.1-8 , 15-20 )

1 ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.

2 ಮತ್ತು ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂವಿುಯಲ್ಲಿ ನೀರಿನ ಕಾಲುವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.

3 ಆಗ ನೋಡುವವರ ಕಣ್ಣು ಮೊಬ್ಬಾಗದು, ಕೇಳುವವರ ಕಿವಿ ಮಂದವಾಗದು.

4 ಆತುರಗಾರರ ಮನವು ಅರುಹನ್ನರಿಯುವದು, ತೊದಲುಮಾತಿನವರ ನಾಲಿಗೆಯು ಸ್ವಚ್ಫವಾಗಿಯೂ ಶೀಘ್ರವಾಗಿಯೂ ನುಡಿಯುವದು.

5 ಇನ್ನು ಮೇಲೆ ನೀಚನು ಘನವಂತನೆನಿಸಿಕೊಳ್ಳನು. ಕಳ್ಳನು ಮಹನೀಯನೆನಿಸನು.

6 ನೀಚನು ನೀಚವಾಗಿ ಮಾತಾಡುವನು; ಅವನ ಹೃದಯವು ಕೇಡನ್ನು ಕಲ್ಪಿಸಿ ಅಲ್ಲದ್ದನ್ನು ನಡೆಯಿಸಿ ಯೆಹೋವನಿಗೆ ವಿರುದ್ಧವಾಗಿ ಅಸತ್ಯವನ್ನಾಡಿ ಹಸಿವೆಗೊಂಡವನ ಆಶೆಯನ್ನು ಬರಿದು ಮಾಡಿ ಬಾಯಾರಿದವನ ಪಾನವನ್ನು ತಪ್ಪಿಸುವದಷ್ಟೆ.

7 ಕಳ್ಳನ ಸಲಕರಣೆಗಳು ಕೆಟ್ಟವುಗಳೇ; ದೀನದರಿದ್ರರು ನ್ಯಾಯವಾದಿಗಳಾಗಿದ್ದರೂ ಅವರನ್ನು ಸುಳ್ಳುಮಾತುಗಳಿಂದ ಕೆಡಿಸುವದಕ್ಕೆ ಕುಯುಕ್ತಿಗಳನ್ನು ಕಲ್ಪಿಸುವನು.

8 ಘನವಂತನಾದರೋ ಘನಕಾರ್ಯಗಳನ್ನು ಕಲ್ಪಿಸುವನು; ಘನವಾದವುಗಳಲ್ಲಿಯೇ ನಿರತನಾಗಿರುವನು.


ಯೆರೂಸಲೇವಿುನ ನಿಶ್ಚಿಂತೆಯ ಹೆಂಗಸರನ್ನು ಎಚ್ಚರಿಸಿದ್ದು

9 ನಿಶ್ಚಿಂತೆಯ ಹೆಂಗಸರೇ, ಏಳಿರಿ, ನನ್ನ ಧ್ವನಿಯನ್ನು ಕೇಳಿರಿ; ಭಯವಿಲ್ಲದ ಹೆಣ್ಣುಗಳಿರಾ, ನನ್ನ ಮಾತಿಗೆ ಕಿವಿಗೊಡಿರಿ!

10 ನಿರ್ಭೀತರೇ, ಒಂದು ವರುಷದ ಮೇಲೆ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ; ದ್ರಾಕ್ಷೆಯ ಕೊಯ್ಲು ಇಲ್ಲದೆ ಹೋಗುವದು, ಯಾವ ಬೆಳೆಯೂ ದೊರೆಯದು.

11 ನಿಶ್ಚಿಂತೆಯವರೇ, ನಡುಗಿರಿ! ನಿರ್ಭೀತರೇ, ಕಳವಳಗೊಳ್ಳಿರಿ! ನಿಮ್ಮ ಬಟ್ಟೆಯನ್ನು ಕಿತ್ತುಹಾಕಿ ಬೆತ್ತಲೆಯಾಗಿ ಸೊಂಟಕ್ಕೆ [ಗೋಣಿತಟ್ಟನ್ನು] ಸುತ್ತಿಕೊಳ್ಳಿರಿ.

12 ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಳ ವಿಷಯದಲ್ಲಿ ಎದೆಬಡಿದುಕೊಳ್ಳುವರು.

13 ನನ್ನ ಜನರ ಭೂವಿುಯ ಮೇಲೂ ಉತ್ಸಾಹಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆಗಳ ಮೇಲೂ ಮುಳ್ಳುಗಿಳ್ಳು ಹತ್ತಿಕೊಳ್ಳುವದು;

14 ಅರಮನೆಯು ಬಿಕೋ ಎನ್ನುವದು, ಗಿಜಿಗುಟ್ಟುವ ಪಟ್ಟಣವು ನಿರ್ಜನವಾಗುವದು, ಓಫೆಲ್ ಗುಡ್ಡವೂ ಕೋವರವೂ ಯಾವಾಗಲೂ ಗುಹೆಗಳಾಗಿಯೂ ಕಾಡುಕತ್ತೆಗಳಿಗೆ ಉಲ್ಲಾಸಕರವಾಗಿಯೂ ದನಕುರಿಗಳಿಗೆ ಕಾವಲಾಗಿಯೂ ಇರುವವು.

15 ಬಳಿಕ ಉನ್ನತಲೋಕದಿಂದ ದಿವ್ಯಾತ್ಮಧಾರೆಯು ನಮ್ಮ ಮೇಲೆ ಸುರಿಸಲ್ಪಡುವದು; ಆಗ ಅರಣ್ಯವು ತೋಟವಾಗುವದು, [ಈಗಿನ] ತೋಟವು [ಆಗಿನವರಿಗೆ] ಅರಣ್ಯವಾಗಿ ಕಾಣಿಸುವದು.

16 ನ್ಯಾಯವು ಅಡವಿಯಲ್ಲಿಯೂ ನೆಲೆಗೊಳ್ಳುವದು, ಧರ್ಮವು ತೋಟದಲ್ಲಿ ಇದ್ದೇ ಇರುವದು.

17 ಧರ್ಮದಿಂದ ಸಮಾಧಾನವು ಫಲಿಸುವದು, ಶಾಂತಿ ನಿರ್ಭಯಗಳು ಧರ್ಮದ ನಿತ್ಯಪರಿಣಾಮವಾಗಿರುವವು.

18 ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.

19 ಆದರೆ ಕಲ್ಮಳೆಸುರಿಯಲು ವನವು ಹಾಳಾಗುವದು; ಪಟ್ಟಣವು ನೆಲಸಮವಾಗುವದು,

20 ನೀರಾವರಿಗಳಲ್ಲೆಲ್ಲಾ ಬೀಜಬಿತ್ತುತ್ತಲೂ ದನ ಕತ್ತೆಗಳನ್ನು [ಕಾವಲಿಗೆ] ಮೇಯಬಿಡುತ್ತಲೂ ಇರುವ ನೀವು ಧನ್ಯರೇ ಸರಿ!

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು