ಯೆಶಾಯ 3 - ಕನ್ನಡ ಸತ್ಯವೇದವು J.V. (BSI)ಯೆಹೂದದ ಅಧಿಕಾರಿಗಳ ಅನ್ಯಾಯವೂ ಅದರ ನಷ್ಟವೂ 1 ಇಗೋ, ಕರ್ತನೂ ಸೇನಾಧೀಶ್ವರನೂ ಆಗಿರುವ ಯೆಹೋವನೆಂಬ ನಾನು ಜೀವನಕ್ಕೆ ಆಧಾರಕೋದ್ಧಾರಕವಾದ ಅನ್ನಪಾನಗಳನ್ನೆಲ್ಲಾ ಯೆರೂಸಲೇವಿುನಿಂದಲೂ ಯೆಹೂದದಿಂದಲೂ ತೆಗೆದುಬಿಡುವೆನು. 2 ಇದಲ್ಲದೆ ಶೂರ, ಭಟ, ನ್ಯಾಯಾಧಿಪತಿ, ಪ್ರವಾದಿ, ಶಕುನದವ, ಹಿರಿಯ, ಪಂಚದಶಾಧಿಪತಿ, 3 ಘನವಂತ, ಮಂತ್ರಾಲೋಚಕ, ತಾಂತ್ರಿಕ, ಮಾಂತ್ರಿಕ, ಇವರೆಲ್ಲರನ್ನೂ ತೊಲಗಿಸಿಬಿಡುವೆನು. 4 ಬಾಲಕರನ್ನು ಪ್ರಭುಗಳನ್ನಾಗಿ ಆ ದೇಶಕ್ಕೆ ನೇವಿುಸುವೆನು, ಬಾಲಚೇಷ್ಟೆಯು ಅದನ್ನಾಳುವದು. 5 ಪ್ರಜೆಗಳು ಪರಸ್ಪರ ವಿರೋಧಿಗಳಾಗಿ ಒಬ್ಬರನ್ನೊಬ್ಬರು ಹಿಂಸಿಸುವರು; ಹುಡುಗನು ಮುದುಕನ ಮೇಲೆಯೂ ನೀಚನು ಘನವಂತನ ಮೇಲೆಯೂ ಸೊಕ್ಕೇರಿ ನಡೆಯುವರು. 6 ಆ ದಿನದಲ್ಲಿ ಒಬ್ಬನು - ಎಲಾ, ಅಣ್ಣ, ನಿನಗೆ ನಿಲುವಂಗಿ ಇದೆ. ನೀನು ನಮಗೆ ಒಡೆಯನಾಗಬೇಕು, ಹಾಳಾದ ಈ ಪಟ್ಟಣವು ನಿನ್ನ ಕೈಕೆಳಗಿರಲಿ ಎಂದು ತಂದೆಯ ಮನೆಯೊಳಗೆ ಅಣ್ಣನನ್ನು ಬಲವಂತ ಮಾಡಲು 7 ಅಣ್ಣನು ಹೂಂಕರಿಸಿ ದೇಶದ ವ್ರಣವೈದ್ಯನಾಗಿರುವದಕ್ಕೆ ನನಗಿಷ್ಟವಿಲ್ಲ, ನನ್ನ ಮನೆಯಲ್ಲಿ ಅನ್ನವೆಲ್ಲಿ, ಅಂಗಿಯೆಲ್ಲಿ? ನನ್ನನ್ನು ಜನದೊಡೆಯನನ್ನಾಗಿ ಮಾಡಬೇಡಿರಿ ಎಂದು ಹೇಳುವನು. 8 ಯೆರೂಸಲೇಮು ಹಾಳಾಯಿತು, ಯೆಹೂದದವರು ಬಿದ್ದುಹೋದರು! ಅವರ ನಡೆನುಡಿಗಳು ಯೆಹೋವನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿಯನ್ನು ಪ್ರತಿಭಟಿಸುತ್ತವಲ್ಲವೆ. 9 ಅವರ ಮುಖಭಾವವೇ ಅವರಿಗೆ ವಿರುದ್ಧ ಸಾಕ್ಷಿಯಾಗಿದೆ; ತಮ್ಮ ಪಾಪವನ್ನು ಮರೆಮಾಜದೆ ಸೊದೋವಿುನವರಂತೆ ಮೆರೆಯಿಸುತ್ತಾರೆ. ಅಯ್ಯೋ, ಅವರ ಆತ್ಮದ ಗತಿಯೇ! ತಮಗೆ ತಾವೇ ಕೇಡು ಮಾಡಿಕೊಂಡಿದ್ದಾರೆ. 10 ಶಿಷ್ಟರಿಗೆ ಶುಭವೇ ಎಂದು ಹೇಳಿರಿ, ಅವರು ತಮ್ಮ ಸುಕೃತಫಲವನ್ನು ಅನುಭವಿಸುವರಷ್ಟೆ. 11 ದುಷ್ಟರ ಗತಿಯನ್ನು ಏನು ಹೇಳಲಿ! ಅವರ ಕಾರ್ಯಗಳಿಗೆ ತಕ್ಕ ಪ್ರತಿಫಲವು ಅವರಿಗೆ ಲಭಿಸುವದಲ್ಲವೆ. 12 ನನ್ನ ಜನರನ್ನೋ ಬಾಧಿಸುವವರು ಹುಡುಗರು, ಆಳುವವರು ಹೆಂಗಸರು. ನನ್ನ ಜನರೇ! ನಿಮ್ಮನ್ನು ನಡಿಸುವವರು ದಾರಿತಪ್ಪಿಸುವವರಾಗಿದ್ದಾರೆ, ನೀವು ನಡೆಯತಕ್ಕ ದಾರಿಯನ್ನು ಅಳಿಸಿಬಿಟ್ಟಿದ್ದಾರೆ. 13 ಯೆಹೋವನು ವಾದಿಸುವದಕ್ಕೂ ಜನಗಳ ನ್ಯಾಯಾನ್ಯಾಯಗಳನ್ನು ನಿರ್ಣಯಿಸುವದಕ್ಕೂ ಎದ್ದು ನಿಂತಿದ್ದಾನೆ. 14 ಯೆಹೋವನು ತನ್ನ ಜನರ ಹಿರಿಯರನ್ನೂ ಅಧಿಕಾರಿಗಳನ್ನೂ ನ್ಯಾಯವಿಚಾರಣೆಗೆ ತರುವನು; ನೀವು ದ್ರಾಕ್ಷೆಯ ತೋಟವನ್ನು ನುಂಗಿಬಿಟ್ಟಿದ್ದೀರಿ; ಬಡವರಿಂದ ಕೊಳ್ಳೆಹೊಡೆದದ್ದು ನಿಮ್ಮ ಮನೆಗಳಲ್ಲಿಯೇ ಇದೆ; 15 ನೀವು ನನ್ನ ಜನರನ್ನು ಜಜ್ಜಿ ಬಡವರ ಮುಖವನ್ನು ಹಿಂಡುವದೇಕೆ ಎಂದು ಕರ್ತನಾದ ಸೇನಾಧೀಶ್ವರ ಯೆಹೋವನು ವಾದಿಸುವನು. ಯೆರೂಸಲೇವಿುನ ಸ್ತ್ರೀಯರ ವಯ್ಯಾರವೂ ಅವರಿಗಾಗುವ ದಂಡನೆಯೂ 16 ಇದಲ್ಲದೆ ಯೆಹೋವನು ಹೀಗನ್ನುತ್ತಾನೆ - ಚೀಯೋನಿನ ಹೆಂಗಸರು ವಯ್ಯಾರವುಳ್ಳವರಾಗಿ ಕತ್ತು ತೂಗುತ್ತಾ ಕಡೆಗಣ್ಣುಹಾಕುತ್ತಾ ಕುಲುಕಿ ಹೆಜ್ಜೆಯಿಡುತ್ತಾ ಕಾಲುಗೆಜ್ಜೆ ಜಣಜಣಿಸುತ್ತಾ ನಡೆಯುವವರಾಗಿರುವದರಿಂದ 17 ಕರ್ತನಾದ ಯೆಹೋವನು ಅವರ ನಡುನೆತ್ತಿಯನ್ನು ಹುಣ್ಣಿನಿಂದ ಬಾಧಿಸಿ ಅವರ ಮಾನವನ್ನು ಬೈಲುಮಾಡುವನು. 18 ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬು ಬಲೆ, ಅರ್ಧಚಂದ್ರ, 19-20 ಜುಮಕಿ, ಬಳೆ, ಮುಸುಕು, ಮುಂಡಾಸ, ಕಾಲಸರಪಣಿ, ನಡುಕಟ್ಟು, ಗಂಧದ ಡಬ್ಬಿ, ತಾಯಿತಿ, 21-22 ಮುದ್ರಿಕೆ, ಮೂಗುತಿ, ಹಬ್ಬದ ಬಟ್ಟೆ, ಮೇಲಂಗಿ, 23 ಶಾಲು, ಚೀಲ, ಕೈಗನ್ನಡಿ, ನಾರುಮಡಿ, ಶಿರೋವೇಷ್ಟನ, ಮೇಲ್ಹೊದಿಕೆ, ಈ ಭೂಷಣಗಳನ್ನೆಲ್ಲಾ ತೆಗೆದುಹಾಕುವನು. 24 ಮತ್ತು ಸುಗಂಧಕ್ಕೆ ಬದಲಾಗಿ ಕೊಳೆ, ನಡುಪಟ್ಟಿಯಿದ್ದಲ್ಲಿ ಹಗ್ಗ, ಅಂದವಾಗಿ ಸೆಕ್ಕಿದ ಜಡೆಯ ಸ್ಥಾನದಲ್ಲಿ ಬೋಡು, ನಡುವಿನ ಶಲ್ಯಕ್ಕೆ ಪ್ರತಿಯಾಗಿ ಗೋಣೀಪಟ್ಟಿ, ಬೆಡಗಿಗೆ ಬದಲಾಗಿ ಬರೆ, ಇವು ಆಗುವವು. 25 [ಚೀಯೋನ್ ನಗರಿಯೇ,] ನಿನ್ನ ವೀರರು ಖಡ್ಗದಿಂದ ಬಿದ್ದುಹೋಗುವರು, ನಿನ್ನ ಶೌರ್ಯವು ಯುದ್ಧದಲ್ಲಿ ಅಡಗುವದು. 26 ಅವಳ ಪುರದ್ವಾರಗಳಲ್ಲಿ ಪ್ರಲಾಪವೂ ದುಃಖವೂ ತುಂಬಿರುವವು; ಅವಳು ಹಾಳಾಗಿ ನೆಲದ ಮೇಲೆ ಕೂತುಬಿಡುವಳು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India