Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 29 - ಕನ್ನಡ ಸತ್ಯವೇದವು J.V. (BSI)


ಯೆರೂಸಲೇವಿುನ ಮುಂದಿನ ಕಷ್ಟವೂ ಅದರ ನಿವಾರಣೆಯೂ

1 ಅಯ್ಯೋ, ಅರೀಯೇಲೇ, ಅರೀಯೇಲೇ, ದಾವೀದನು ಸೈನ್ಯಸಮೇತನಾಗಿ ವಾಸಿಸಿದ ಪಟ್ಟಣವೇ, ನಿನ್ನ ಗತಿಯನ್ನು ಏನು ಹೇಳಲಿ! ಈ ವರುಷಕ್ಕೆ ಮುಂದಿನ ವರುಷವನ್ನು ಸೇರಿಸಿರಿ; ಹಬ್ಬಗಳು ಸುತ್ತಿಬರಲಿ; ಆಮೇಲೆ ನಾನು ಅರೀಯೇಲನ್ನು ಬಾಧಿಸುವೆನು; ಅರಿಚಾಟ ಕಿರಿಚಾಟವಾಗುವದು;

2 ಆ ಪಟ್ಟಣವು ನನಗೆ ಅರೀಯೇಲಾಗಿಯೇ ಪರಿಣವಿುಸುವದು.

3 ನಾನು ನಿನ್ನ ಸುತ್ತಲು ದಂಡಿಳಿಸಿ ನಿನಗೆ ವಿರುದ್ಧವಾಗಿ ಕೊತ್ತಲಕಟ್ಟಿ ದಿಬ್ಬಹಾಕಿ ನಿನ್ನನ್ನು ಮುತ್ತುವೆನು.

4 ನೀನು ಕುಗ್ಗಿ ಭೂವಿುಯೊಳಗಿಂದ ಮಾತಾಡುವಿ, ನಿನ್ನ ನುಡಿಯು ಮಣ್ಣಿನೊಳಗಿಂದ ಸಣ್ಣಸ್ವರವಾಗಿ ಹೊರಡುವದು. ನಿನ್ನ ಧ್ವನಿಯು ಪ್ರೇತದ ಧ್ವನಿಯಂತೆ ನೆಲದೊಳಗಿಂದ ಬರುವದು, ನಿನ್ನ ನುಡಿಯು ದೂಳಿನೊಳಗಿಂದ ಲೊಚಗುಟ್ಟುವದು.

5 ಗುಂಪುಗುಂಪಾಗಿ ಕೂಡಿರುವ ನಿನ್ನ ಶತ್ರುಗಳು ಸೂಕ್ಷ್ಮ ದೂಳಿಯಂತೆಯೂ ತಂಡೋಪತಂಡವಾಗಿ ಬಂದಿರುವ ಭಯಂಕರರು ಹಾರಿಹೋಗುವ ಹೊಟ್ಟಿನ ಹಾಗೂ ಆಗುವರು; ತಟ್ಟನೆ ಕ್ಷಣದಲ್ಲಿ ಲಯಹೊಂದುವರು.

6 ಸೇನಾಧೀಶ್ವರನಾದ ಯೆಹೋವನು ಗುಡುಗು, ಭೂಕಂಪ, ಮಹಾಶಬ್ದ, ಬಿರುಗಾಳಿ, ಚಂಡಮಾರುತ, ದಹಿಸುವ ಅಗ್ನಿಯ ಜ್ವಾಲೆ ಇವುಗಳ ಮೂಲಕ ಆ ನಗರಿಯನ್ನು ರಕ್ಷಿಸುವನು.

7 ಅರೀಯೇಲಿನ ಮೇಲೆ ಹೋರಾಡಿ ಅದಕ್ಕೂ ಅದರ ಕೋಟೆಗೂ ವಿರುದ್ಧವಾಗಿ ಯುದ್ಧಮಾಡಿ ಬಾಧಿಸುವ ಸಕಲ ಜನಾಂಗಗಳ ಗುಂಪು ಕನಸಿನಂತೆ, ರಾತ್ರಿಯ ಸ್ವಪ್ನದ ಹಾಗೆ, ಮಾಯವಾಗುವದು.

8 ಹಸಿದವನು ಕನಸು ಕಂಡು ಆಹಾ, ಉಣ್ಣುತ್ತೇನೆ ಎಂದು ಕೊಂಡಂತಾಗುವದು; ಎಚ್ಚತ್ತಾಗ ಅವನ ಹೊಟ್ಟೆ ಬರಿದೇ. ಬಾಯಾರಿದವನು ಸ್ವಪ್ನದಲ್ಲಿ ಇಗೋ ಕುಡಿಯುತ್ತೇನೆ ಎಂದುಕೊಂಡ ಹಾಗೂ ಆಗುವದು; ನಿದ್ರೆ ತಿಳಿದಾಗ ಬಳಲಿ ನೀರನ್ನು ಬಯಸುವನು. ಚೀಯೋನ್ ಪರ್ವತಕ್ಕೆ ವಿರುದ್ಧವಾಗಿ ಹೋರಾಡುವ ಸಕಲಜನಾಂಗಗಳ ಗುಂಪಿಗೆ ಈ ಗತಿಯಾಗುವದು.


ಯೆರೂಸಲೇವಿುನ ಮೂಢಭಕ್ತಿ

9 ನಿಮ್ಮನ್ನು ನೀವೇ ಬೆರಗುಮಾಡಿಕೊಂಡು ಬೆರಗಾಗಿರಿ, ಕುರುಡುಮಾಡಿಕೊಂಡು ಕುರುಡರಾಗಿರಿ; ಇವರು ಅಮಲೇರಿದ್ದಾರೆ, ದ್ರಾಕ್ಷಾರಸದಿಂದಲ್ಲ; ಓಲಾಡುತ್ತಾರೆ, ಮದ್ಯದಿಂದಲ್ಲ.

10 ಯೆಹೋವನು ನಿಮ್ಮ ಮೇಲೆ ಗಾಢನಿದ್ರೆಯನ್ನು ಬರಮಾಡಿ ಪ್ರವಾದಿಗಳೆಂಬ ಕಣ್ಣುಗಳನ್ನು ಮುಚ್ಚಿ ದಿವ್ಯದರ್ಶಿಗಳೆಂಬ ತಲೆಗಳಿಗೆ ಮುಸುಕು ಹಾಕಿದ್ದಾನಷ್ಟೆ.

11 ದೈವದರ್ಶನವೆಲ್ಲಾ ಮುದ್ರೆಹಾಕಿದ ಶಾಸ್ತ್ರದ ಮಾತಿನ ಹಾಗಿದೆ; ಅದನ್ನು ಅಕ್ಷರಬಲ್ಲವನಿಗೆ - ದಯಮಾಡಿ ಓದೆಂದು ಒಪ್ಪಿಸಿದರೆ ಅವನು - ಮುದ್ರೆಹಾಕಿದೆಯಲ್ಲಾ, ಆಗುವದಿಲ್ಲ ಅನ್ನುವನು;

12 ಅಕ್ಷರವಿಲ್ಲದವನಿಗೆ - ದಯವಿಟ್ಟು ಓದೆಂದು ಒಪ್ಪಿಸಿದರೆ ಅವನು - ನನಗೆ ವಿದ್ಯೆಯಿಲ್ಲ ಅನ್ನುವನು.

13 ಮತ್ತು ಯೆಹೋವನು - ಈ ಜನರು ಮಾತಿನಿಂದ ನನ್ನನ್ನು ಸಮೀಪಿಸಿ ತುಟಿಯಿಂದ ನನ್ನನ್ನು ಸನ್ಮಾನಿಸುತ್ತಾರೆ, ಮನಸ್ಸನ್ನೋ ದೂರಮಾಡಿಕೊಂಡು ಬಾಯಿಪಾಠವಾಗಿ ಕಲಿತಿರುವ ಮನುಷ್ಯರ ಆಜ್ಞೆಗೆ ಸರಿಯಾದ ಭಯಭಕ್ತಿಯನ್ನು ಮಾತ್ರ ನನ್ನಲ್ಲಿಟ್ಟಿದ್ದಾರೆ;

14 ಹೀಗಿರುವದರಿಂದ ನಾನು ಈ ಜನರ ಮಧ್ಯದಲ್ಲಿ ಅಧಿಕಾಶ್ಚರ್ಯವೂ ಅದ್ಭುತವೂ ಆದ ಕಾರ್ಯವನ್ನು ಇನ್ನು ಮಾಡುವೆನು; ಇವರ ಜ್ಞಾನಿಗಳ ಜ್ಞಾನವು ಅಳಿಯುವದು, ವಿವೇಕಿಗಳ ವಿವೇಕವು ಅಡಗುವದು ಎಂದು ಹೇಳಿದನು.


ಯೆಹೂದ ಐಗುಪ್ತಗಳ ಒಪ್ಪಂದ ( 29.15—31.9 ) ಮಂತ್ರಾಲೋಚಕರ ಉಪಾಯವೂ ಯೆಹೋವನ ಕೃಪೆಯ ಉದ್ದೇಶವೂ

15 ತಮ್ಮ ಆಲೋಚನೆಯನ್ನು ಯೆಹೋವನಿಗೆ ಮರೆಮಾಜುವದಕ್ಕೆ ಅಗಾಧೋಪಾಯ ಮಾಡಿ ನಮ್ಮನ್ನು ಯಾರು ನೋಡಿಯಾರು, ಯಾರು ತಿಳಿದಾರು ಅಂದುಕೊಂಡು ಕತ್ತಲಲ್ಲೇ ತಮ್ಮ ಕೆಲಸಗಳನ್ನು ನಡಿಸುವವರ ಗತಿಯನ್ನು ಏನು ಹೇಳಲಿ!

16 ಅಯ್ಯೋ, ನೀವು ಎಂಥಾ ಮೂರ್ಖರು! ಕುಂಬಾರನು ಮಣ್ಣೆನಿಸಿಕೊಂಡಾನೇ? ಕಾರ್ಯವು ಕರ್ತೃವನ್ನು ಕುರಿತು ಅವನು ನನ್ನನ್ನು ಮಾಡಲಿಲ್ಲ ಎಂದುಕೊಂಡೀತೇ? ನಿರ್ಮಿತವಾದದ್ದು ನಿರ್ಮಿಸಿದವನ ವಿಷಯವಾಗಿ ಅವನಿಗೆ ವಿವೇಕವಿಲ್ಲ ಎಂದೀತೇ?

17 ಅತ್ಯಲ್ಪಕಾಲದೊಳಗೆ ಲೆಬನೋನ್ ಅರಣ್ಯವು ತೋಟವಾಗುವದು, [ಈಗಿನ] ತೋಟವು [ಆಗಿನವರಿಗೆ] ಅರಣ್ಯವಾಗಿ ಕಾಣಿಸುವದು.

18 ಆ ದಿನದಲ್ಲಿ ಕಿವುಡರು ಶಾಸ್ತ್ರದ ಮಾತುಗಳನ್ನು ಕೇಳುವರು, ಮೊಬ್ಬುಕತ್ತಲುಗಳಲ್ಲಿಯೂ ಕುರುಡರ ಕಣ್ಣು ಕಾಣುವದು.

19 ದೀನರು ಯೆಹೋವನಲ್ಲಿ ಹೆಚ್ಚುಹೆಚ್ಚಾಗಿ ಆನಂದಿಸುವರು, ಬಡವರು ಇಸ್ರಾಯೇಲ್ಯರ ಸದಮಲಸ್ವಾವಿುಯಲ್ಲಿ ಉಲ್ಲಾಸಿಸುವರು.

20 ಏಕಂದರೆ ಭಯಂಕರರು ನಿಶ್ಶೇಷವಾಗುವರು, ಧರ್ಮನಿಂದಕರು ನಿರ್ನಾಮವಾಗುವರು,

21 ಅಪಸಾಕ್ಷಿಯಿಂದ ತಪ್ಪು ಹೊರಿಸುವವರೂ ಚಾವಡಿಯಲ್ಲಿ ದೋಷವನ್ನು ಖಂಡಿಸುವವನಿಗೆ ಉರುಲೊಡ್ಡುವವರೂ ನ್ಯಾಯವಂತನ ನ್ಯಾಯವನ್ನು ಸುಮ್ಮಸುಮ್ಮನೆ ತಪ್ಪಿಸುವವರೂ ಆಗಿರುವ ಅಧರ್ಮನಿರತರೆಲ್ಲಾ ನಿರ್ಮೂಲರಾಗುವರು.

22 ಹೀಗಿರಲು ಅಬ್ರಹಾಮನನ್ನು ಉದ್ಧರಿಸಿದ ಯೆಹೋವನು ಯಾಕೋಬನ ಮನೆತನದ ವಿಷಯವಾಗಿ - ಯಾಕೋಬ್ಯರು ಇನ್ನು ನಾಚಿಕೆಗೆ ಈಡಾಗರು, ಅವರ ಮುಖವು ಇನ್ನು ಬಾಡದು,

23 ಯಾಕೋಬ ವಂಶದವರು ತಮ್ಮ ಮಧ್ಯದಲ್ಲಿ ನಾನು ನಡಿಸುವ ಕೆಲಸವನ್ನು ನೋಡಿ ನನ್ನ ನಾಮವೇ ಆರಾಧನೆಗೆ ಅರ್ಹವೆಂದು ಪ್ರತಿಷ್ಠಿಸುವರು; ಹೌದು, ಯಾಕೋಬ್ಯರ ಸದಮಲಸ್ವಾವಿುಯನ್ನು ಪ್ರತಿಷ್ಠೆಪಡಿಸಿ ಇಸ್ರಾಯೇಲ್ಯರ ದೇವರಿಗೆ ನಡುಗುವರು.

24 ತಪ್ಪಿದ ಹೃದಯವುಳ್ಳವರೆಲ್ಲರೂ ವಿವೇಕಿಗಳಾಗುವರು, ಗುಣುಗುಟ್ಟುವವರು ಉಪದೇಶವನ್ನು ಗಮನಿಸುವರು ಎಂದು ಹೇಳುತ್ತಾನೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು