ಯೆಶಾಯ 28 - ಕನ್ನಡ ಸತ್ಯವೇದವು J.V. (BSI)ಯೆರೂಸಲೇಮನ್ನು ಗದರಿಸಿ ಎಚ್ಚರಿಸಿದ್ದು ( 28.1—29.14 ) ಸಮಾರ್ಯದ ದುರ್ಗತಿ 1 ಅಯ್ಯೋ, ಕುಡುಕರಾದ ಎಫ್ರಾಯೀಮ್ಯರ ಮಹಿಮೆಯ ಕಿರೀಟದ ಗತಿಯೇ! ದ್ರಾಕ್ಷಾರಸಕ್ಕೆ ಸೋತುಹೋದವರ ಫಲವತ್ತಾದ ತಗ್ಗಿಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಬಾಡುತ್ತಿರುವ ಹೂವಿನ ಪಾಡೇ! 2 ಆಹಾ, ಕರ್ತನು ಒಬ್ಬ ಮಹಾ ಬಲಿಷ್ಠನನ್ನು ನೇವಿುಸಿದ್ದಾನೆ; ಅವನು ರಭಸವಾಗಿ ಸುರಿಯುವ ಕಲ್ಮಳೆಯಂತೆಯೂ ನಾಶಕವಾದ ಬಿರುಗಾಳಿಯೋಪಾದಿಯಲ್ಲಿಯೂ ಮುಣುಗಿಸುವ ಅತಿಧಾರಾವೃಷ್ಟಿಯ ಹಾಗೂ ಬಲಾತ್ಕಾರದಿಂದ [ಆ ಪಟ್ಟಣವನ್ನು] ನೆಲಕ್ಕೆ ಬೀಳಿಸುವನು. 3 ಕುಡುಕರಾದ ಎಫ್ರಾಯೀಮ್ಯರ ಮಹಿಮೆಯ ಕಿರೀಟವು ಕಾಲಿನಿಂದ ತುಳಿಯಲ್ಪಡುವದು. 4 ಫಲವತ್ತಾದ ತಗ್ಗಿಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಬಾಡುತ್ತಿರುವ ಹೂವು ಫಲಕಾಲಕ್ಕೆ ಮುಂಚೆ ಮಾಗಿದ ಅಂಜೂರಕ್ಕೆ ಸಮಾನವಾಗುವದು; ಆ ಹಣ್ಣನ್ನು ಕಂಡವನು ಕಿತ್ತ ಕೂಡಲೆ ನುಂಗಿಬಿಡುವನಲ್ಲವೆ. 5 ಆ ದಿನದಲ್ಲಿ ಸೇನಾಧೀಶ್ವರನಾದ ಯೆಹೋವನೇ ತನ್ನ ಜನರಲ್ಲಿ ಉಳಿದವರಿಗೆ ಅಂದದ ಕಿರೀಟವೂ ಸುಂದರ ಮುಕುಟವೂ ಆಗಿರುವನು; 6 ಆತನೇ ನ್ಯಾಯಾಸನದಲ್ಲಿ ಕುಳಿತವನಿಗೆ ನ್ಯಾಯವಿವೇಚನೆಯಾಗಿಯೂ ಊರಬಾಗಿಲಲ್ಲಿ ಶತ್ರುಗಳನ್ನು ತಳ್ಳಿಬಿಡುವವರಿಗೆ ಶೌರ್ಯವಾಗಿಯೂ ಪರಿಣವಿುಸುವನು. ಯೆಶಾಯನು ಯೆರೂಸಲೇವಿುನ ಅಧಿಪತಿಗಳನ್ನು ಖಂಡಿಸಿದ್ದು 7 ಈ [ನನ್ನ] ಜನರು ಸಹ ದ್ರಾಕ್ಷಾರಸದಿಂದ ಓಲಾಡುತ್ತಾರೆ, ಮದ್ಯದಿಂದ ತೂಗಾಡುತ್ತಾರೆ; ಯಾಜಕ ಪ್ರವಾದಿಗಳೂ ಮದ್ಯದಿಂದ ಓಲಾಡುತ್ತಾರೆ, ದ್ರಾಕ್ಷಾರಸವೇ ಅವರನ್ನು ನುಂಗಿಬಿಟ್ಟಿದೆ, ಮದ್ಯದಿಂದ ತೂಗಾಡುತ್ತಾರೆ; ದೈವದರ್ಶನವಾಗುತ್ತಿರುವಾಗಲೂ ಓಲಾಡುತ್ತಾರೆ, ನ್ಯಾಯತೀರಿಸುತ್ತಿರುವಾಗಲೂ ಅತ್ತಿತ್ತ ತೂಗಾಡುತ್ತಾರೆ. 8 [ಅವರ] ಮೇಜುಗಳ ಮೇಲೆಲ್ಲಾ ವಾಂತಿಯೂ ಎಂಜಲೂ ತುಂಬಿವೆ, ಶುದ್ಧಸ್ಥಳವೇ ಇಲ್ಲ. 9 [ಇವರು ಹರಟಿಕೊಳ್ಳುವದೇನಂದರೆ] - ಇವನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಇವನು ಯಾರಿಗೆ ಯೆಹೋವನ ಮಾತನ್ನು ತಿಳಿಯಪಡಿಸುತ್ತಾನೆ? ಮೊಲೆ ಬಿಟ್ಟ ಕೂಸುಗಳಿಗೋ? ಎದೆಬಿಟ್ಟ ಮಕ್ಕಳಿಗೋ? 10 ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ [ಪ್ರಕಟಿಸುತ್ತಾನಲ್ಲಾ ಇತ್ಯಾದಿ]. 11 ಹೌದು, ತೊದಲು ಮಾತಿನವರು, ಅನ್ಯಭಾಷಿಗಳು, ಇವರ ಮೂಲಕವಾಗಿಯೇ ಯೆಹೋವನು ಈ ಜನರ ಮಧ್ಯದಲ್ಲಿ ಮಾತಾಡುವನು. 12 ಆತನು ಮೊದಲು - ಇದೇ ನಿಮಗೆ ಆವಶ್ಯಕವಾದ ವಿಶ್ರಾಂತಿ, ಬಳಲಿದವರನ್ನು ವಿಶ್ರಮಗೊಳಿಸಿರಿ, ನಿಮಗೆ ಅನುಕೂಲವಾದ ಉಪಶಮನವು ಇದೇ ಎಂದು ಹೇಳಿದಾಗ ಇವರು ಕೇಳಲೊಲ್ಲದೆ ಹೋದರು. 13 ಹೀಗಿರಲು ಯೆಹೋವನ ಮಾತು ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ ಎಂಬದಾಗಿ ಇವರಿಗೆ ಪರಿಣವಿುಸುವದು; ಇವರು ನಡೆದು ಹಿಂದೆಬಿದ್ದು ಭಂಗಪಡುವರು, ಬೋನಿಗೆ ಸಿಕ್ಕಿ ವಶವಾಗುವರು. 14 ಆದಕಾರಣ ಯೆರೂಸಲೇವಿುನ ಈ ಜನರನ್ನಾಳುವ ಧರ್ಮನಿಂದಕರೇ, ಯೆಹೋವನ ಮಾತನ್ನು ಕೇಳಿರಿ, 15 ನೀವು ನಿಮ್ಮೊಳಗೆ - ಮೃತ್ಯುವಿನಿಂದ ಒಡಂಬಡಿಕೆಯನ್ನು ಪಡೆದುಕೊಂಡು ಪಾತಾಳದೊಡನೆ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ಅದು ನಮ್ಮನ್ನು ಮುಟ್ಟದು; ನಾವು ಅಸತ್ಯವನ್ನು ಆಶ್ರಯಿಸಿಕೊಂಡು ಮೋಸವನ್ನು ಮರೆ ಹೊಕ್ಕಿದ್ದೇವಲ್ಲಾ ಅಂದುಕೊಂಡದರಿಂದ 16 ಕರ್ತನಾದ ಯೆಹೋವನು ಹೀಗೆ ಹೇಳುತ್ತಾನೆ - ಇಗೋ, ಪರೀಕ್ಷಿತವಾಗಿಯೂ ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ; ಭರವಸವಿಡುವವನು ಆತುರಪಡನು. 17 ನಾನು ನ್ಯಾಯವನ್ನು ನೂಲನ್ನಾಗಿಯೂ ಧರ್ಮವನ್ನು ಮಟ್ಟಗೋಲನ್ನಾಗಿಯೂ ಮಾಡುವೆನು, ಕಲ್ಮಳೆಯು ಅಸತ್ಯದ ಆಶ್ರಯವನ್ನು ಬಡಿದುಕೊಂಡು ಹೋಗುವದು, ಜಲಪ್ರವಾಹವು [ಮೋಸದ] ಮರೆಯನ್ನು ಮುಣುಗಿಸುವದು. 18 ಮೃತ್ಯುವಿನಿಂದ ನೀವು ಪಡೆದುಕೊಂಡ ಒಡಂಬಡಿಕೆಯು ಸಾಗದು, ಪಾತಾಳದೊಡನೆ ನೀವು ಮಾಡಿಕೊಂಡ ಒಪ್ಪಂದವು ನಿಲ್ಲದು; ವಿಪರೀತ ಬಾಧೆಯು ದೇಶದೊಳಗೆ ಹಾದುಹೋಗುವಾಗ ನಿಮ್ಮನ್ನು ತುಳಿದುಬಿಡುವದು. 19 ಅದು ಹಾದುಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವದು; ಬೆಳಬೆಳಗೂ ಹಗಲುರಾತ್ರಿಯೂ ಅದು ಹಾದುಹೋಗುವದು; ಆಗ ಯೆಹೋವನ ಮಾತನ್ನು ಗ್ರಹಿಸಿಕೊಳ್ಳುವದು ಬರೀ ಭಯವೇ. 20 ಒಬ್ಬನು ಚಾಚಿಕೊಂಡು ಮಲಗೇನಂದರೆ ಹಾಸಿಗೆಯ ಉದ್ದ ಸಾಲದು; ಮುದುರಿಕೊಂಡು ಮಲಗೇನಂದರೆ ಹೊದಿಕೆಯ ಅಗಲ ಸಾಲದು. 21 ಯೆಹೋವನು ಈಗ ಅಪರೂಪವಾದ ತನ್ನ ಕೆಲಸವನ್ನು ನಡಿಸಬೇಕೆಂತಲೂ ಅಪೂರ್ವವಾದ ತನ್ನ ಕಾರ್ಯವನ್ನು ನೆರವೇರಿಸಬೇಕೆಂತಲೂ ಪೆರಾಚೀಮ್ ಬೆಟ್ಟದಲ್ಲಿ ಎದ್ದಂತೆ ಏಳುವನು, ಗಿಬ್ಯೋನ್ ತಗ್ಗಿನಲ್ಲಿ ರೋಷಗೊಂಡಂತೆ ರೋಷಗೊಳ್ಳುವನು. 22 ಆದಕಾರಣ ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಡಿರಿ; ಭೂಮಂಡಲದಲ್ಲೆಲ್ಲಾ ನಿಶ್ಚಿತಪ್ರಲಯವಾಗಲಿ ಎಂದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ನುಡಿಯುವದನ್ನು ಕೇಳಿದ್ದೇನೆ. ಯೆಹೋವನ ಕಾರ್ಯಗಳಲ್ಲಿನ ವಿವೇಕವು 23 ನನ್ನ ಧ್ವನಿಗೆ ಕಿವಿಗೊಟ್ಟು ಕೇಳಿರಿ, ನನ್ನ ಮಾತಿಗೆ ಗಮನವಿಟ್ಟು ಆಲಿಸಿರಿ; 24 ಬಿತ್ತನೆಗಾಗಿ ಉಳುವವನು ಸದಾ ಉಳುತ್ತಿರುವನೋ? [ಪ್ರತಿನಿತ್ಯವೂ] ಮಣ್ಣನ್ನು ಕೆಳಮೇಲು ಮಾಡುತ್ತಾ ಕುಂಟೆಹೊಡೆಯುವನೋ? 25 ಅಂತು ಭೂವಿುಯನ್ನು ಹಸನುಮಾಡಿದ ಮೇಲೆ ಕರಿಯ ಜೀರಿಗೆಯನ್ನು ಚೆಲ್ಲಿ ಜೀರಿಗೆಯನ್ನು ಬಿತ್ತಿ ಗೋದಿಯನ್ನು ಸಾಲು ಸಾಲಾಗಿಯೂ ಜವೆಗೋದಿಯನ್ನು ತಕ್ಕ ಸ್ಥಳದಲ್ಲಿಯೂ ಕಡಲೆಯನ್ನು ಅಂಚಿನಲ್ಲಿಯೂ ಹಾಕುವನಲ್ಲವೆ. 26 ಅವನ ದೇವರು ಇದನ್ನೆಲ್ಲಾ ಅವನಿಗೆ ಸರಿಯಾಗಿ ಕಲಿಸಿ ತಿದ್ದುತ್ತಾನೆ. 27 ಆದಕಾರಣ ಅವನು ಕರಿಯ ಜೀರಿಗೆಯನ್ನು ಒಕ್ಕುವದು ಹಲಿವೆಯಿಂದಲ್ಲ, ಕೋಲಿನಿಂದಲೇ; ಜೀರಿಗೆಯನ್ನು ಒಕ್ಕುವದು ಕಣದ ಗುಂಡಿನಿಂದಲ್ಲ, ದೊಣ್ಣೆಯಿಂದಲೇ. 28 ಗೋದಿಯ ಕಾಳನ್ನು ನುಚ್ಚು ನುಚ್ಚು ಮಾಡುವನೋ? ತನ್ನ ಕುದುರೆಗಳನ್ನು ಹೊಡೆಯುತ್ತಾ ಗುಂಡನ್ನು ಗಿರ್ರನೆ ಉರುಳಿಸುತ್ತಾ ಯಾವಾಗಲೂ ಒಕ್ಕುತ್ತಿರುವದಿಲ್ಲ; ನುಚ್ಚು ನುಚ್ಚು ಮಾಡನು. 29 ಈ ವಿವೇಕವು ಸಹ ಅತಿಶಯಾಲೋಚನಾಪರನೂ ಸುಜ್ಞಾನಶ್ರೇಷ್ಠನೂ ಆಗಿರುವ ಸೇನಾಧೀಶ್ವರನಾದ ಯೆಹೋವನಿಂದಲೇ ಉಂಟಾಗುತ್ತದೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India