Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 27 - ಕನ್ನಡ ಸತ್ಯವೇದವು J.V. (BSI)

1 ಆ ದಿನದಲ್ಲಿ ಯೆಹೋವನು ಕಠಿನವೂ ಮಹತ್ತೂ ಬಲವೂ ಆಗಿರುವ ತನ್ನ ಖಡ್ಗದಿಂದ ವೇಗವಾಗಿ ಓಡುವ ಸರ್ಪ, ಡೊಂಕಾಗಿ ಹರಿಯುವ ಸರ್ಪ, ಈ ಎರಡು ಹೆಬ್ಬಾವುಗಳನ್ನು ಹೊಡೆದು ಮಹಾ ನದಿಯಲ್ಲಿನ ಘಟಸರ್ಪವನ್ನೂ ಕೊಂದುಹಾಕುವನು.


ಯೆಹೋವನ ದ್ರಾಕ್ಷೆಯ ತೋಟದ ಗೀತ

2 ಆ ದಿನದಲ್ಲಿ [ಹೀಗೆ ಗಾನ ಮಾಡುವರು] - ಇಗೋ, ವಿಹಾರದ ತೋಟ, ಇದನ್ನು ಕುರಿತು ಹಾಡಿರಿ;

3 ಯೆಹೋವನಾದ ನಾನು ತೋಟಗಾರನು, ಕ್ಷಣಕ್ಷಣವೂ ನೀರು ಹೊಯ್ಯುತ್ತಿದ್ದೇನೆ; ಯಾರೂ ಮುಟ್ಟದ ಹಾಗೆ ಹಗಲಿರುಳೂ ಕಾಯುತ್ತೇನೆ.

4 ರೌದ್ರವು ನನ್ನಲಿಲ್ಲ; ಮುಳ್ಳುಗಿಳ್ಳು ನನಗೆ ಎದುರುಬಿದ್ದರೆ ಎಷ್ಟೋ ಒಳ್ಳೇದು! ಅವುಗಳಿಗೆ ವಿರುದ್ಧವಾಗಿ ಯುದ್ಧಕ್ಕೆ ನಡೆದು ಹೋಗಿ ಒಟ್ಟಿಗೆ ಸುಟ್ಟುಬಿಡುವೆನು.

5 ಬೇಡವಾದರೆ ಆ ಶತ್ರುಗಳು ನನ್ನ ಬಲವನ್ನು ಶರಣುಹೊಂದಲಿ, ನನ್ನ ಸಂಗಡ ಸಮಾಧಾನಕ್ಕೆ ಬರಲಿ, ನನ್ನೊಡನೆ ಸಂಧಿಮಾಡಿಕೊಳ್ಳಲಿ.

6 ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವದು, ಇಸ್ರಾಯೇಲು ಹೂಬಿಟ್ಟು ಚಿಗುರುವದು, ಆ ವೃಕ್ಷವು ಭೂಮಂಡಲವನ್ನೆಲ್ಲಾ ಫಲದಿಂದ ತುಂಬಿಸುವದು.


ಯೆಹೋವನು ಇಸ್ರಾಯೇಲನ್ನು ಶಿಕ್ಷಿಸುವದು

7 ಯೆಹೋವನು ತನ್ನ ಪ್ರಜೆಯ ಘಾತಕರನ್ನು ಹೊಡೆದಂತೆ ಆ ತನ್ನ ಪ್ರಜೆಯನ್ನು ಹೊಡೆದನೋ? ಅವರಿಗಾದಂಥ ಸಂಹಾರವು ಆ ಪ್ರಜೆಗೆ ಆಯಿತೋ?

8 ನಿನ್ನ ಪ್ರಜೆಯನ್ನು ಕಳುಹಿಸಿಬಿಡುವದರ ಮೂಲಕ ಅದರೊಡನೆ ವಿುತಿಮೀರದೆ ಹೋರಾಡುತ್ತಿದ್ದೀ; ಮೂಡಣ ಗಾಳಿಯು ಬೀಸಿದ ದಿನದಲ್ಲಿ ಅದರ ಕ್ರೂರವಾದ ಬಡಿತದಿಂದ ನಿನ್ನ ಜನವನ್ನು ತೊಲಗಿಸಿದಿ.

9 ಹೀಗಿರಲು ಯಾಕೋಬ್ಯರು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿ ಪುಡಿಮಾಡಿ ಅಶೇರವೆಂಬ ವಿಗ್ರಹಸ್ತಂಭಗಳನ್ನೂ ಸೂರ್ಯಸ್ತಂಭಗಳನ್ನೂ ಇನ್ನು ಪ್ರತಿಷ್ಠಿಸದೆ ಹೋದರೆ ಅದೇ ಅವರ ಅಧರ್ಮಕ್ಕೆ ಪ್ರಾಯಶ್ಚಿತ್ತವಾಗುವದು, ಮತ್ತು ಅವರ ಪಾಪಪರಿಹಾರಕ್ಕೆ ಗುರುತಾದ ಪೂರ್ಣಫಲವೂ ಇದೇ.

10 ಕೋಟೆಕೊತ್ತಲದ ಪಟ್ಟಣವು ಹಾಳಾಗಿ ಕಾಡಿನಂತೆ ಜನರಿಲ್ಲದೆ ಶೂನ್ಯನಿವಾಸಸ್ಥಾನವಾಗಿದೆ; ಅಲ್ಲಿ ಕರು ಮೇದು ಮಲಗುವದು, ಅಲ್ಲಿನ ಚಿಗುರುಗಳನ್ನು ತಿಂದುಬಿಡುವದು.

11 ಅಲ್ಲಿನ ರೆಂಬೆಗಳು ಒಣಗಿ ಮುರಿದುಹೋಗುವವು, ಹೆಂಗಸರು ಬಂದು ಬೆಂಕಿ ಹಚ್ಚಿ ಉರಿಸುವರು; ಆ ಪ್ರಜೆಯು ಬುದ್ಧಿಹೀನವಾದದ್ದೇ ಸರಿ; ಆದಕಾರಣ ಸೃಷ್ಟಿಸಿದಾತನು ಅದನ್ನು ಕರುಣಿಸನು, ನಿರ್ಮಿಸಿದಾತನು ಅದಕ್ಕೆ ದಯೆತೋರಿಸನು.


ಇಸ್ರಾಯೇಲ್ಯರ ಪುನರಾಗಮನ

12 ಇಸ್ರಾಯೇಲ್ಯರೇ, ತುಂಬಿತುಳುಕುವ [ಯೂಫ್ರೇಟೀಸ್] ನದಿಯಿಂದ ಐಗುಪ್ತ ದೇಶದ ನದಿಯವರೆಗೆ ಯೆಹೋವನು ತೆನೆಗಳನ್ನು ಒಕ್ಕುವ ದಿನವು ಬರುತ್ತದೆ; ಆಗ ನಿನ್ನನ್ನು ಒಬ್ಬೊಬ್ಬರನ್ನಾಗಿ ಆರಿಸುವನು.

13 ಆ ದಿನದಲ್ಲಿ ದೊಡ್ಡ ಕೊಂಬನ್ನೂದಲು ಅಶ್ಶೂರ ದೇಶದಲ್ಲಿ ಹಾಳಾದವರೂ ಐಗುಪ್ತ ಸೀಮೆಯಲ್ಲಿನ ದೇಶಭ್ರಷ್ಟರಾದವರೂ ಬಂದು ಪರಿಶುದ್ಧಪರ್ವತದ ಯೆರೂಸಲೇವಿುನಲ್ಲಿ ಯೆಹೋವನ ಮುಂದೆ ಅಡ್ಡಬೀಳುವರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು