Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 26 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲು ಮಾಡುವ ಸ್ತೋತ್ರಗೀತ

1 ಆ ದಿವಸದಲ್ಲಿ ಯೆಹೂದ ದೇಶದೊಳಗೆ ಈ ಗೀತವನ್ನು ಹಾಡುವರು - ನಮಗೆ ಬಲವಾದ ಪಟ್ಟಣವಿದೆ. [ಯೆಹೋವನು ತನ್ನ] ರಕ್ಷಣೆಯನ್ನು ಕೋಟೆಯನ್ನಾಗಿಯೂ ಹೊರಪೌಳಿಯನ್ನಾಗಿಯೂ ಮಾಡಿದ್ದಾನೆ.

2 ಬಾಗಿಲುಗಳನ್ನು ತೆರೆಯಿರಿ! ಧರ್ಮಸತ್ಯಗಳನ್ನು ಕೈಕೊಳ್ಳುವ ಜನಾಂಗವು ಪ್ರವೇಶಿಸಲಿ!

3 ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ.

4 ಯೆಹೋವನಲ್ಲಿ ಸದಾ ಭರವಸವಿಡಿರಿ; ಯಾಹುಯೆಹೋವನು ಶಾಶ್ವತವಾಗಿ ಆಶ್ರಯಗಿರಿಯಾಗಿದ್ದಾನೆ.

5 ಆತನು ಎತ್ತರದಲ್ಲಿ ವಾಸಿಸುವವರನ್ನೂ [ಅವರ] ಉನ್ನತಪಟ್ಟಣವನ್ನೂ ತಗ್ಗಿಸಿದ್ದಾನೆ. ಅದನ್ನು ಕೆಡವಿ ನೆಲಸಮಮಾಡಿ ದೂಳಿಗೆ ತಂದಿದ್ದಾನೆ.

6 ಅದು ಕಾಲತುಳಿತಕ್ಕೆ ಈಡಾಗಿದೆ. ದಿಕ್ಕಿಲ್ಲದ ಬಡವರೂ ಅದನ್ನು ಕಾಲಿನಿಂದ ತುಳಿದುಬಿಡುತ್ತಾರೆ.

7 ಶಿಷ್ಟನ ಮಾರ್ಗವು ನೇರವಾಗಿದೆ; ನೀನು ಅವನ ದಾರಿಯನ್ನು ಸರಿಪಡಿಸಿ ಸಮಮಾಡುತ್ತಿ.

8 ಹೌದು, ಯೆಹೋವನೇ, ನಿನ್ನ ನ್ಯಾಯಕಾರ್ಯಗಳು ತೋರತಕ್ಕ ಮಾರ್ಗದಲ್ಲಿ ನಿನ್ನನ್ನು ಕಾದುಕೊಂಡಿದ್ದೇವೆ; ನಿನ್ನ ನಾಮಸ್ಮರಣೆಯು ನಮ್ಮ ಆತ್ಮಕ್ಕೆ ಕೇವಲ ಇಷ್ಟವಾಗಿದೆ.

9 ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಹಾರೈಸಿದ್ದೇವೆ, ಹೌದು, ನಮ್ಮ ಆತ್ಮದಲ್ಲಿ ನಿನ್ನನ್ನು ತವಕದಿಂದ ಹುಡುಕಿದ್ದೇವೆ. ನೀನು ಲೋಕದಲ್ಲಿ ನ್ಯಾಯಕಾರ್ಯಗಳನ್ನು ನಡಿಸುವಾಗ ಭೂನಿವಾಸಿಗಳು ಧರ್ಮಜ್ಞಾನವನ್ನು ಪಡೆದುಕೊಳ್ಳುವರು.

10 ದುಷ್ಟರನ್ನು ಕರುಣಿಸಿದರೂ ಅವರು ಧರ್ಮಜ್ಞಾನವನ್ನು ಪಡೆಯರು; ಯೆಹೋವನ ಮಹಿಮೆಯನ್ನು ಲಕ್ಷಿಸದೆ ಯಥಾರ್ಥವಂತರ ದೇಶದಲ್ಲಿಯೂ ಅನ್ಯಾಯವನ್ನಾಚರಿಸುವರು.

11 ಯೆಹೋವನೇ, ನೀನು ಕೈಯೆತ್ತಿದ್ದರೂ ಅವರು ಲಕ್ಷಿಸರು. ಆದರೆ ನಿನ್ನ ಸ್ವಜನಾಭಿಮಾನವನ್ನು ನೋಡಿ ನಾಚಿಕೆಪಡುವರು; ಹೌದು, ಆ ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವದು.

12 ಯೆಹೋವನೇ, ನೀನು ನಮಗೆ ಸಮಾಧಾನವನ್ನು ವಿಧಿಸುವಿ, ನಾವು ನಡಿಸಿದ್ದೆಲ್ಲವೂ ನೀನು ನಮಗೋಸ್ಕರ ನಡಿಸಿದ್ದೇ ಸರಿ.

13 ನಮ್ಮ ದೇವರಾದ ಯೆಹೋವನೇ, ನಿನ್ನ ಸ್ಥಾನದಲ್ಲಿ ಬೇರೆ ಒಡೆಯರು ನಮ್ಮ ಮೇಲೆ ದೊರೆತನಮಾಡುತ್ತಿದ್ದರು; ಈಗ ನಿನ್ನ ನಾಮವನ್ನು ಹೊಗಳುವದಕ್ಕೆ ನಿನ್ನಿಂದಲೇ ನಮಗೆ ಅವಕಾಶವಾಯಿತು.

14 ನೀನು ಆ ಒಡೆಯರ ಮೇಲೆ ಕೈಮಾಡಿ ನಿರ್ಮೂಲಪಡಿಸಿ ಅವರ ಜ್ಞಾಪಕವನ್ನು ಅಳಿಸಿಬಿಟ್ಟಿದ್ದೀ; ಸತ್ತವರು ಪುನಃ ಬದುಕುವದಿಲ್ಲ, ಪ್ರೇತಗಳು ಎದ್ದು ಬರುವದಿಲ್ಲವಲ್ಲಾ.

15 ಯೆಹೋವನೇ, ನಿನ್ನ ಜನವನ್ನು ಹೆಚ್ಚಿಸಿದ್ದಿ, ಹೌದು ನಿನ್ನ ಪ್ರಜೆಯನ್ನು ವೃದ್ಧಿಗೊಳಿಸಿದ್ದಿ; ನೀನು ದೇಶದ ಮೇರೆಗಳನ್ನೆಲ್ಲಾ ವಿಸ್ತರಿಸಿ ಮಹಿಮೆಗೊಂಡಿದ್ದಿ.

16 ಯೆಹೋವನೇ, [ನಿನ್ನ ಜನರು] ಇಕ್ಕಟ್ಟಿಗೆ ಸಿಕ್ಕಿ ನಿನ್ನನ್ನು ಆಶ್ರಯಿಸಿದರು, ನಿನ್ನ ಶಿಕ್ಷೆಗೆ ಗುರಿಯಾಗಿ ಜಪಮಾಡಿದರು.

17 ಹೆರಿಗೆ ಹತ್ತಿರವಾದ ಗರ್ಭಿಣಿಯು ಯಾತನೆಪಡುತ್ತಾ ಬೇನೆಯಿಂದ ಅರಚುವಂತೆ ಯೆಹೋವನೇ, ನಾವು ನಿನ್ನ ಮುಂದೆ ಅರಚಿದ್ದೇವೆ;

18 ನಾವು ಗರ್ಭಧರಿಸಿ ವೇದನೆಪಟ್ಟು ಗಾಳಿಯನ್ನು ಹಡೆದಂತಾಯಿತು, ದೇಶಕ್ಕೆ ನಮ್ಮಿಂದ ಯಾವ ಉದ್ಧಾರವೂ ಆಗಲಿಲ್ಲ, ನಮ್ಮೊಳಗೆ ಯಾವ ಭೂನಿವಾಸಿಗಳೂ ಹುಟ್ಟಲಿಲ್ಲ.

19 ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಜೀವದಿಂದೇಳುವವು, ಮಣ್ಣಿನಲ್ಲಿ ಪವಳಿಸಿರುವವರೇ, ಎಚ್ಚತ್ತು ಹರ್ಷಧ್ವನಿಗೈಯಿರಿ! [ಯೆಹೋವನೇ,] ನೀನು ಸುರಿಯುವ ಇಬ್ಬನಿಯು ಜ್ಯೋತಿರ್ಮಯವಾದದ್ದು, ಭೂವಿುಯು ಸತ್ತವರನ್ನು ಹೊರಪಡಿಸುವದು.


ಯೆಹೋವನು ಇಸ್ರಾಯೇಲನ್ನು ರಕ್ಷಿಸಿ ಇತರ ಜನಾಂಗಗಳನ್ನು ದಂಡಿಸುವದು

20 ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಿಲು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ.

21 ಇಗೋ, ಯೆಹೋವನು ಭೂನಿವಾಸಿಗಳಿಗೆ ಅವರ ಪಾಪಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂವಿುಯು ತನ್ನಲ್ಲಿ ಇಂಗಿದ್ದ ರಕ್ತವನ್ನು ವ್ಯಕ್ತಗೊಳಿಸುವದು, ತನ್ನ ನಿವಾಸಿಗಳಲ್ಲಿ ಹತರಾಗಿದ್ದವರನ್ನು ಇನ್ನು ಮರೆಮಾಜದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು