Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 25 - ಕನ್ನಡ ಸತ್ಯವೇದವು J.V. (BSI)


ಯೆಹೋವನು ಇಸ್ರಾಯೇಲನ್ನು ಶತ್ರುಬಾಧೆಯಿಂದ ಬಿಡಿಸಿ ಅದರ ಮೂಲಕ ಸಕಲ ಜನಾಂಗಗಳಿಗೂ ಮೇಲನ್ನುಂಟು ಮಾಡುವದು

1 ಯೆಹೋವನೇ, ನೀನೇ ನನ್ನ ದೇವರು; ನೀನು ಸತ್ಯಪ್ರಾಮಾಣಿಕತೆಗಳನ್ನು ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ ಅದ್ಭುತಗಳನ್ನು ನಡಿಸಿದ ಕಾರಣ ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಗೊಳಿಸುವೆನು.

2 ನೀನು ದುರ್ಗವನ್ನು ನಾಶಪಡಿಸಿ ಪಟ್ಟಣವನ್ನು ಹಾಳು ದಿಬ್ಬವನ್ನಾಗಿಯೂ ಅನ್ಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಬಾರದ ಹಾಳೂರನ್ನಾಗಿಯೂ ಮಾಡಿದ್ದೀ.

3 ಆದಕಾರಣ ಬಲಿಷ್ಠವಾದ ಜನಾಂಗವು ನಿನ್ನನ್ನು ಘನಪಡಿಸುವದು, ಭಯಂಕರ ಜನರ ಪಟ್ಟಣವು ನಿನಗೆ ಅಂಜುವದು.

4 ನೀನು ದೀನರಿಗೆ ಕೋಟೆ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣದುರ್ಗ, ಬಿಸಿಲಿಗೆ ನೆರಳು, ಭೀಕರರ ಶ್ವಾಸವು ಗೋಡೆಗೆ ಬಡಿದುಬಿಡುವ ಬಿರುಗಾಳಿಯಂತಿರುವಾಗ ಆಶ್ರಯವೂ ಆಗಿದ್ದೀ.

5 [ಮೇಘವು] ಒಣನೆಲದ ಕಾವನ್ನು ಆರಿಸುವಂತೆ ನೀನು ಅನ್ಯರ ಗದ್ದಲವನ್ನು ಅಣಗಿಸುವಿ; ಮೋಡದ ನೆರಳಿನಿಂದ ಬಿಸಿಲು ಹೇಗೋ ಹಾಗೆಯೇ ನಿನ್ನಿಂದ ಭೀಕರರ ಉತ್ಸಾಹಗಾನವು ನಿಂತುಹೋಗುವದು.

6 ಇದಲ್ಲದೆ ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು.

7 ಮತ್ತು ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ ಸಕಲ ದೇಶೀಯರ ಮೇಲೆ ಹಾಕಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವನು.

8 ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು; ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ.

9 ಆ ದಿನದಲ್ಲಿ ಜನರು - ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ; ಈತನೇ ಯೆಹೋವನು, ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ, ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸಪಡುವೆವು ಎಂದು ಹೇಳಿಕೊಳ್ಳುವರು.

10 ಏಕೆಂದರೆ ಯೆಹೋವನ ಹಸ್ತವು ಈ ಪರ್ವತದಲ್ಲಿ ನೆಲೆಯಾಗಿರುವದು; ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿಯಲ್ಪಡುವ ಹಾಗೆ ತಾನಿದ್ದಲ್ಲೇ ತುಳಿಯಲ್ಪಡುವದು.

11 ಈಜುವವನು ಕೈಯಾಡಿಸುವಂತೆ ಅದರಲ್ಲಿಯೇ ಕೈಯಾಡಿಸುವದು; [ಯೆಹೋವನು] ಅದರ ಗರ್ವವನ್ನೂ ಕೈಯ ಚಮತ್ಕಾರವನ್ನೂ ತಗ್ಗಿಸಿಬಿಡುವನು.

12 ದುರ್ಗಮವಾಗಿಯೂ ಎತ್ತರವಾಗಿಯೂ ಇರುವ ನಿನ್ನ ಕೋಟೆಗಳನ್ನು ಆತನು ಕೆಡವಿ ತಗ್ಗಿಸಿ ನೆಲಸಮಮಾಡಿ ದೂಳಿಗೇ ತರುವನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು