Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 24 - ಕನ್ನಡ ಸತ್ಯವೇದವು J.V. (BSI)


ಯೆಹೋವನು ಸರ್ವಲೋಕವನ್ನು ದಂಡಿಸುವದೂ ಇಸ್ರಾಯೇಲನ್ನು ರಕ್ಷಿಸುವದೂ ( 24—27 ) ಲೋಕದಂಡನೆ

1 ಇಗೋ, ಯೆಹೋವನು ಲೋಕವನ್ನು ಬರಿದುಮಾಡಿ ಹಾಳಿಗೆ ತಂದು ವಿರೂಪಪಡಿಸಿ ಅದರ ನಿವಾಸಿಗಳನ್ನು ಚದರಿಸಿಬಿಡುವವನಾಗಿದ್ದಾನೆ.

2 ಪ್ರಜೆ ಯಾಜಕ, ದಾಸ ದಣಿ, ತೊತ್ತು ಯಜಮಾನಿ, ಕೊಳ್ಳುವವನು ಮಾರುವವನು, ಸಾಲಕೊಡುವವನು ತರುವವನು, ಬಡ್ಡಿ ತೆಗೆಯುವವನು ತೆರುವವನು, ಇವರೆಲ್ಲರಿಗೂ ಒಂದೇ ಗತಿಯಾಗುವದು.

3 ಭೂವಿುಯು ಬಟ್ಟಬರಿದಾಗುವದು, ಲೋಕಕ್ಕೆ ಸಂಪೂರ್ಣ ಸುಲಿಗೆಯಾಗುವದು; ಯೆಹೋವನೇ ಇದನ್ನು ನುಡಿದಿದ್ದಾನೆ.

4 ಭೂವಿುಯು ಪ್ರಲಾಪಿಸುತ್ತಾ ಬಳಲಿದೆ, ಲೋಕವು ಕುಗ್ಗಿ ಹೋಗಿದೆ, ಲೋಕೋನ್ನತರು ಕಂಗೆಟ್ಟಿದ್ದಾರೆ.

5 ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ ನಿಯಮವನ್ನು ಅತಿಕ್ರವಿುಸಿ ಶಾಶ್ವತವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂವಿುಯು ಅವರ ಹೆಜ್ಜೆಯಿಂದ ಅಪವಿತ್ರವಾಯಿತು.

6 ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅಲ್ಲಿನವರು ದಂಡನೆಗೆ ಒಳಗಾಗಿದ್ದಾರೆ; ಭೂನಿವಾಸಿಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ.

7 ದ್ರಾಕ್ಷಾರಸವು ವ್ಯಸನಭರಿತವಾಗಿದೆ, ದ್ರಾಕ್ಷೆಯ ಬಳ್ಳಿಯು ಬಾಡಿದೆ, ಹರ್ಷಹೃದಯರೆಲ್ಲಾ ನರಳುತ್ತಾರೆ.

8 ದಮ್ಮಡಿಗಳ ಉತ್ಸಾಹವು ಮುಗಿದಿದೆ, ಉಲ್ಲಾಸಿಗಳ ಕೋಲಾಹಲವು ಕೊನೆಗೊಂಡಿದೆ, ಕಿನ್ನರಿಯ ಆನಂದವು ಅಡಗಿದೆ.

9 ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, ಮದ್ಯವು ಕುಡಿಯುವವರಿಗೆ ಕಹಿಯಾಗುವದು.

10 ಹಾಳುಪಟ್ಟಣವು ಬಿದ್ದುಹೋಗಿದೆ, ಯಾರೂ ಹೊಗದಂತೆ ಪ್ರತಿಯೊಂದು ಮನೆಯೂ ಮುಚ್ಚಿದೆ.

11 ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲಾ ಅಸ್ತವಿುಸಿದೆ; ಲೋಕದ ಸಡಗರವು ಸೆರೆಯಾಗಿ ತೊಲಗಿದೆ.

12 ಪಟ್ಟಣದಲ್ಲಿ ಹಾಳೇ ಉಳಿದಿದೆ; ನಾಶನವು ಹೆಬ್ಬಾಗಿಲಿಗೆ ತಟ್ಟಿದೆ.

13 ಎಣ್ಣೆಯ ಮರವನ್ನು ಬಡಿದ ಮೇಲೆಯೂ ದ್ರಾಕ್ಷೆಯ ಸುಗ್ಗಿಯು ತೀರಿದನಂತರವೂ ನಿಲ್ಲುವ ಉಳಿಗಾಯ ಹಾಗೆ ಭೂಮಂಡಲದಲ್ಲಿ ಜನಾಂಗಗಳೊಳಗೆ ಶೇಷವಿರುವದು.

14 ಇವರು ಉಚ್ಚಧ್ವನಿಗೈಯುವರು; ಯೆಹೋವನ ಮಹಿಮೆಯನ್ನು ತಿಳಿದುಕೊಂಡವರಾಗಿ ಸಮುದ್ರದ ಕಡೆಯಿಂದ ಆರ್ಭಟಿಸುವರು -

15 ಮೂಡಣವರೇ, ಯೆಹೋವನನ್ನು ಸನ್ಮಾನಿಸಿರಿ; ಕರಾವಳಿಯವರೇ, ಇಸ್ರಾಯೇಲ್ಯರ ದೇವರಾದ ಯೆಹೋವನ ನಾಮವನ್ನು ಘನಪಡಿಸಿರಿ ಎಂದು ಕೂಗುವರು.

16 ಸದ್ಧರ್ಮಿಗಳಿಗೆ ಮಾನವಾಗಲೆಂಬ ಗೀತಗಳು ಭೂಮಂಡಲದ ಕಟ್ಟಕಡೆಯಿಂದ ನಮಗೆ ಕೇಳಬಂದಿವೆ. ನಾನಾದರೋ - ಕ್ಷಯಿಸೇ ಕ್ಷಯಿಸುತ್ತೇನೆ, ನನ್ನ ಗತಿಯನ್ನು ಏನು ಹೇಳಲಿ! ಬಾಧಕರು ಬಾಧಿಸುತ್ತಾರೆ, ಹೌದು, ಬಾಧಕರು ಬಾಧಿಸೇ ಬಾಧಿಸುತ್ತಾರೆ ಎಂದುಕೊಂಡೆನು.

17 ಭೂನಿವಾಸಿಯೇ, ಭಯವೂ ಗುಂಡಿಯೂ ಬಲೆಯೂ ನಿನಗೆ ಕಾದಿವೆ.

18 ಭಯದ ಸಪ್ಪಳದಿಂದ ಓಡಿಹೋಗುವವನು ಗುಂಡಿಯಲ್ಲಿ ಬೀಳುವನು, ಗುಂಡಿಯನ್ನು ಹತ್ತಿಬರುವವನು ಬಲೆಗೆ ಸಿಕ್ಕುವನು. ನೋಡು, ಆಕಾಶದ ದ್ವಾರಗಳು ತೆರೆದಿವೆ, ಭೂವಿುಯ ಅಸ್ತಿವಾರಗಳು ಕಂಪಿಸುತ್ತಿವೆ.

19 ಭೂವಿುಯು ಒಡೆದೇ ಇದೆ, ಬಿರಿದೇ ಬಿರಿದಿದೆ, ಕದಲಿಯೇ ಹೋಗಿದೆ.

20 ಭೂವಿುಯು ಅಮಲೇರಿದವನ ಹಾಗೆ ಓಲಾಡುತ್ತದೆ, ಮಂಚಿಕೆಯಂತೆ ತೂಗಾಡುತ್ತದೆ; ಅದರ ದ್ರೋಹವು ಅದಕ್ಕೆ ಭಾರವಾಗಿದೆ, ಅದು ಬಿದ್ದು ಹೋಗುತ್ತಿದೆ, ತಿರಿಗಿ ಏಳುವದೇ ಇಲ್ಲ.

21 ಆ ದಿನದಲ್ಲಿ ಯೆಹೋವನು ಆಕಾಶಮಂಡಲದ ದೂತಸೈನ್ಯವನ್ನೂ ಭೂಮಂಡಲದ ನೆಲದೊಡೆಯರನ್ನೂ ದಂಡಿಸುವನು.

22 ಇವರು ಬಂದಿಗಳ ಗುಂಪಿನಂತೆ ನೆಲಮಾಳಿಗೆಯೊಳಕ್ಕೆ ಒಟ್ಟಿಗೆ ತಳ್ಳಿಸಿಕೊಂಡು ಅದರಲ್ಲಿ ಮುಚ್ಚಲ್ಪಟ್ಟಿದ್ದು ಬಹು ದಿನಗಳ ಮೇಲೆ ದಂಡನೆಗೆ ಗುರಿಯಾಗುವರು.

23 ಮತ್ತು ಚಂದ್ರನು ನಾಚಿಕೆಪಡುವನು, ಸೂರ್ಯನು ಲಜ್ಜೆಗೊಳ್ಳುವನು; ಸೇನಾಧೀಶ್ವರನಾದ ಯೆಹೋವನು ಚೀಯೋನ್ ಪರ್ವತದಲ್ಲಿ ಯೆರೂಸಲೇವಿುನೊಳಗೆ ಆಳುವನಷ್ಟೆ. ಆತನ [ಪರಿವಾರದ] ಹಿರಿಯರ ಮುಂದೆ ಪ್ರಭಾವವು ಪ್ರತ್ಯಕ್ಷವಾಗುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು