ಯೆಶಾಯ 23 - ಕನ್ನಡ ಸತ್ಯವೇದವು J.V. (BSI)ತೂರಿನ ವಿಷಯವಾದ ದೈವೋಕ್ತಿ 1 ತೂರಿನ ವಿಷಯವಾದ ದೈವೋಕ್ತಿ. ತಾರ್ಷೀಷಿನ ಹಡಗುಗಳೇ, ಅಂಗಲಾಚಿರಿ! [ನಿಮ್ಮ ಆಶ್ರಯವು] ಹಾಳಾಯಿತು, ನಿಮಗೆ ನೆಲೆಯಿಲ್ಲ, ರೇವಿಲ್ಲ. (ಕಿತ್ತೀಮ್ ದೇಶೀಯರಿಂದ ಅವುಗಳಿಗೆ ತಿಳಿಯಿತು). 2 ಕರಾವಳಿಯ ನಿವಾಸಿಗಳೇ, ಸಮುದ್ರವನ್ನು ಹಾದುಹೋಗುವ ಚೀದೋನಿನ ವರ್ತಕರಿಂದ ಸಮೃದ್ಧಿಹೊಂದಿದವರೇ, ಮೌನವಾಗಿರಿ! 3 ವಿಶಾಲವಾದ ಸಾಗರದ ಮೇಲೆ ತಂದ ಶೀಹೋರಿನ ಧಾನ್ಯದಿಂದಲೂ ನೈಲಿನ ಬೆಳೆಯಿಂದಲೂ ಆದಾಯ ಹೊಂದಿದ [ನಿಮ್ಮ ನಗರಿಯು] ಅನೇಕ ಜನಾಂಗಗಳಿಗೆ ಲಾಭಕರವಾಗಿತ್ತು. 4 ಚೀದೋನೇ, ನಾಚಿಕೆಪಡು; ಸಮುದ್ರವು, ಸಮುದ್ರದುರ್ಗವು - ನಾವು ವೇದನೆಪಡಲಿಲ್ಲ, ಪ್ರಸವಿಸಲಿಲ್ಲ, ಯುವತಿಯುವಕರನ್ನು ಸಾಕಿ ಸಲಹಲಿಲ್ಲ ಎಂದು ನುಡಿದಿದೆಯಷ್ಟೆ. 5 ತೂರಿನ ಸಮಾಚಾರವು ಐಗುಪ್ತ್ಯರಿಗೆ ಮುಟ್ಟಲು ಅದಕ್ಕಾಗಿ ಸಂಕಟಪಡುವರು. 6 ತಾರ್ಷೀಷಿಗೆ ಸಮುದ್ರದ ಮೇಲೆ ಹಾದುಹೋಗಿರಿ, ಕರಾವಳಿಯ ನಿವಾಸಿಗಳೇ, ಅಂಗಲಾಚಿರಿ! 7 ನಿಮ್ಮ ಉಲ್ಲಾಸದ ಪಟ್ಟಣವು ಇದೇನೋ? ಅದರ ಉತ್ಪತ್ತಿಯು ಪುರಾತನವಾದದ್ದೇ ಸರಿ; ಅದರ ಜನರು ಮುಂದೆ ನಡೆದು ಅತಿ ದೂರದಲ್ಲಿಯೂ ನಿವಾಸಮಾಡಿಕೊಂಡಿದ್ದರಲ್ಲಾ. 8 ಅದು ಕಿರೀಟದಾಯಕವು; ಅದರ ವರ್ತಕರು ಪ್ರಭುಗಳು, ಅದರ ವ್ಯಾಪಾರಿಗಳು ಲೋಕಮಾನ್ಯರು; ಇಂಥ ತೂರಿಗೆ ವಿರುದ್ಧವಾಗಿ ಈ ಸಂಕಲ್ಪವನ್ನು ಮಾಡಿದವನು ಯಾರು? 9 ಗರ್ವದ ಸಕಲ ವೈಭವವನ್ನು ಹೊಲಸುಮಾಡಬೇಕೆಂತಲೂ ಲೋಕಮಾನ್ಯರೆಲ್ಲರನ್ನು ಅವಮಾನ ಪಡಿಸಬೇಕೆಂತಲೂ ಸೇನಾಧೀಶ್ವರನಾದ ಯೆಹೋವನೇ ಹೀಗೆ ಸಂಕಲ್ಪಿಸಿದ್ದಾನೆ. 10 ತಾರ್ಷೀಷ್ ನಗರಿಯೇ, ನೈಲ್ ನದಿಯಂತೆ ನಿನ್ನ ದೇಶವನ್ನು ಆವರಿಸು; ನಡುಕಟ್ಟು [ಸಡಲಿತು], ಇನ್ನಿಲ್ಲ. 11 ಯೆಹೋವನು ಸಮುದ್ರದ ಮೇಲೆ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ; ಕಾನಾನಿನ ದುರ್ಗಗಳನ್ನು ನಾಶಮಾಡಲು ಅದರ ವಿಷಯವಾಗಿ ಅಪ್ಪಣೆಕೊಟ್ಟಿದ್ದಾನೆ; 12 ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀವಿುಗೆ ಸಮುದ್ರದ ಮೇಲೆ ಹಾದುಹೋಗು, ಅಲ್ಲಿಯೂ ನಿನಗೆ ವಿಶ್ರಾಂತಿಯಿರದು ಎಂದು ಹೇಳಿದ್ದಾನೆ. 13 ಇಗೋ, ಕಸ್ದೀಯರ ದೇಶವು! ಈ ಜನಾಂಗವು ನಿರ್ನಾಮವಾಯಿತು; ಅಶ್ಶೂರ್ಯರು ಈ ದೇಶವನ್ನು ಕಾಡುಮೃಗಗಳಿಗೆ ಈಡುಮಾಡಿದರು; ಬುರುಜುಗಳನ್ನು ಕಟ್ಟಿಕೊಂಡು ಇದರ ಕೋಟೆಗಳನ್ನು ಕೆಡವಿ ಇದನ್ನು ನಾಶಪಡಿಸಿದರು. 14 ತಾರ್ಷೀಷಿನ ಹಡಗುಗಳೇ, ಅಂಗಲಾಚಿರಿ ನಿಮ್ಮ ಆಶ್ರಯವು ಹಾಳಾಯಿತು. 15 ಆ ಕಾಲದಲ್ಲಿ ತೂರ್‍ಪಟ್ಟಣವು ಒಬ್ಬ ರಾಜನ ಆಡಳಿತದ ಎಪ್ಪತ್ತು ವರುಷಗಳ ತನಕ ಜ್ಞಾಪಕಕ್ಕೆ ಬಾರದೇ ಇರುವದು; ಎಪ್ಪತ್ತು ವರುಷದ ಮೇಲೆ ಸೂಳೆಯ ವಿಷಯವಾದ ಗೀತದಂತಾಗುವದು. 16 ಅದೇನಂದರೆ ಎಲ್ಲರೂ ಮರೆತ ಸೂಳೆಯೇ, ಕಿನ್ನರಿಯನ್ನು ತೆಗೆದುಕೊಂಡು ಊರಲ್ಲಿ ಅಲೆಯುತ್ತಾ ಜನರು ನಿನ್ನನ್ನು ಜ್ಞಾಪಿಸಿಕೊಳ್ಳುವಂತೆ ಚೆನ್ನಾಗಿ ನುಡಿಸಿ ಬಹು ಗೀತಗಳನ್ನು ಹಾಡು ಎಂಬದೇ. 17 ಎಪ್ಪತ್ತು ವರುಷಗಳ ಮೇಲೆ ಯೆಹೋವನು ತೂರ್ ಎಂಬವಳಿಗೆ ನೇವಿುಸಲು ಅವಳು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಮಂಡಲದಲ್ಲಿ ಲೋಕದ ಸಕಲ ರಾಜ್ಯಗಳೊಂದಿಗೆ ಕಲೆಯುವಳು. 18 ಅವಳ ವ್ಯಾಪಾರವೂ ಆದಾಯವೂ ಅವಳಿಗೆ ನಿಧಿನಿಕ್ಷೇಪವಾಗದೆ ಯೆಹೋವನಿಗೇ ಮೀಸಲಾಗುವದು; ಆ ವ್ಯಾಪಾರವು ಯೆಹೋವನ ಸನ್ನಿಧಾನದಲ್ಲಿ ವಾಸಿಸುವವರಿಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನುಕೂಲಿಸುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India