ಯೆಶಾಯ 22 - ಕನ್ನಡ ಸತ್ಯವೇದವು J.V. (BSI)ಯೆರೂಸಲೇವಿುನ ವಿಷಯವಾದ ದೈವೋಕ್ತಿ 1 ದಿವ್ಯದರ್ಶನದ ತಗ್ಗಿನ ವಿಷಯವಾದ ದೈವೋಕ್ತಿ. ನಿನಗೆ ಏನಾಯಿತು? ನಿನ್ನ ಜನರೆಲ್ಲರೂ ಮಾಳಿಗೆಗಳನ್ನು ಹತ್ತಿದ್ದೇಕೆ? 2 ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣವೇ, ಸಂಭ್ರಮದ ಊರೇ! ನಿನ್ನಲ್ಲಿ ಹತರಾದವರು ಖಡ್ಗಹತರಲ್ಲ, ಯುದ್ಧದಲ್ಲಿ ಮೃತರಲ್ಲ. 3 ನಿನ್ನ ಅಧಿಕಾರಿಗಳು ಒಟ್ಟಿಗೆ ಓಡಿ ಬಿಲ್ಲಿಲ್ಲದೆ ಸೆರೆಯಾಗಿದ್ದಾರೆ; ದೂರ ಓಡುತ್ತಾ [ಶತ್ರುವಿಗೆ] ಸಿಕ್ಕಿದ ನಿನ್ನ ಜನರೆಲ್ಲರೂ ಒಂದಿಗೆ ಕಟ್ಟುಬಿದ್ದಿದ್ದಾರೆ. 4 ಹೀಗಿರಲು ನನ್ನ ಕಡೆಯಿಂದ ದೃಷ್ಟಿ ತಿರುಗಿಸಿರಿ. ಬಹುಸಂಕಟದಿಂದ ಅಳುವೆನು, ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವದಕ್ಕೆ ತವಕಗೊಳ್ಳದಿರಿ ಅಂದೆನು. 5 ಸೇನಾಧೀಶ್ವರನಾದ ಯೆಹೋವನೆಂಬ ಕರ್ತನಿಂದ ದಿವ್ಯದರ್ಶನದ ತಗ್ಗಿಗೆ ಗಲಿಬಿಲಿಯ ದಿನ, ತುಳಿದಾಟದ ದಿನ, ಭ್ರಾಂತಿಯ ದಿನ, ಕೋಟೆಯು ಒಡೆದುಹೋಗಲು ಕೂಗು ಬೆಟ್ಟವನ್ನು ಮುಟ್ಟುವ ದಿನ ಬಂದಿದೆ. 6 ಏಲಾಮು ರಥಾಶ್ವಪದಾತಿಗಳಿಂದ ಬತ್ತಳಿಕೆಯನ್ನು ಧರಿಸಿತು; ಕೀರಿನವರು ಗುರಾಣಿಯ ಗೌಸಣಿಗೆಯನ್ನು ತೆರೆದರು. 7 ನಿಮ್ಮ ಪ್ರಿಯವಾದ ತಗ್ಗುಗಳಲ್ಲಿ ರಥಗಳು ತುಂಬಿದವು, ರಾಹುತರು ಬಾಗಿಲೆದುರಿಗೆ ವ್ಯೂಹಕಟ್ಟಿದರು. 8 ಯೆಹೂದದ ತೆರೆಯು ತೆರೆದುಹೋಯಿತು; ಆ ದಿನದಲ್ಲಿ [ಲೆಬನೋನಿನ] ತೋಪು ಎನಿಸಿಕೊಳ್ಳುವ ಮಂದಿರದಲ್ಲಿನ ಆಯುಧಗಳ ಕಡೆಗೆ ದೃಷ್ಟಿಹಾಕಿದಿರಿ. 9 ದಾವೀದನ ಕೋಟೆಯ ಒಡಕುಗಳು ಬಹಳವೆಂದು ನೋಡಿದಿರಿ; ಕೆಳಗಿನ ಕೊಳಕ್ಕೆ ನೀರನ್ನು ಹಾಯಿಸಿದಿರಿ. 10 ಯೆರೂಸಲೇವಿುನ ಮನೆಗಳನ್ನು ಲೆಕ್ಕಿಸಿ ಪೌಳಿಗೋಡೆಯನ್ನು ಭದ್ರಪಡಿಸುವದಕ್ಕೆ ಮನೆಗಳನ್ನು ಕೆಡವಿಬಿಟ್ಟಿರಿ. 11 ಎರಡು ಗೋಡೆಗಳ ನಡುವೆ ಹಳೆಯ ಕೊಳದ ನೀರಿಗಾಗಿ ತೊಟ್ಟಿಯನ್ನು ಮಾಡಿದಿರಿ; ಆದರೆ ಇದನ್ನೆಲ್ಲಾ ನಡಿಸಿದಾತನ ಕಡೆಗೆ ನೀವು ದೃಷ್ಟಿಯಿಡಲಿಲ್ಲ, ಪುರಾತನ ಕಾಲದಲ್ಲಿ ಸಂಕಲ್ಪಿಸಿದಾತನನ್ನು ನೀವು ಲಕ್ಷಿಸಲಿಲ್ಲ. 12 ಕಣ್ಣೀರುಸುರಿಸಿ ಅಂಗಲಾಚಿ ತಲೆಬೋಳಿಸಿಕೊಂಡು ಗೋಣಿತಟ್ಟನ್ನು ಸುತ್ತಿಕೊಳ್ಳಿರಿ ಎಂದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಆ ದಿನದಲ್ಲಿ ನಿಮಗೆ ಆಜ್ಞಾಪಿಸಿದನು; 13 ಆದರೆ ಇಗೋ, ಉಲ್ಲಾಸ, ಹರ್ಷ, ದನಕೊಯ್ಯುವದು, ಕುರಿಕಡಿಯುವದು, ಮಾಂಸತಿನ್ನುವದು, ದ್ರಾಕ್ಷಾರಸ ಕುಡಿಯುವದು, ನಾಳೆ ಸಾಯುತ್ತೇವೆಂದು ತಿಂದು ಕುಡಿಯುವದು [ಇವೇ ನಿಮ್ಮ ಕಾರ್ಯ]. 14 ಹೀಗಿರಲು ಸೇನಾಧೀಶ್ವರನಾದ ಯೆಹೋವನು ನನ್ನ ಕಿವಿಗೆ ಗೋಚರಪಡಿಸಿದ್ದೇನಂದರೆ - ನೀವು ಸಾಯುವ ತನಕ ಈ ಅಧರ್ಮಕ್ಕೆ ಪ್ರಾಯಶ್ಚಿತ್ತವು ಇಲ್ಲವೇ ಇಲ್ಲ ಎಂದು ಸೇನಾಧೀಶ್ವರನಾಗಿರುವ ಯೆಹೋವನೆಂಬ ಕರ್ತನಾದ ನಾನು ನುಡಿದಿದ್ದೇನೆ ಎಂಬದೇ. ಶೆಬ್ನನ ವಿಷಯವಾದ ದೈವೋಕ್ತಿ 15 ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ನುಡಿದಿದ್ದಾನೆ - ನಡೆ, ಅರಮನೆಯ ಮೇಲ್ವಿಚಾರಕನಾದ ಶೆಬ್ನನೆಂಬ ಈ ಅಧ್ಯಕ್ಷನ ಬಳಿಗೆ ಹೋಗಿ ಅವನಿಗೆ ಹೇಳತಕ್ಕದ್ದೇನಂದರೆ - 16 ಇಲ್ಲಿ ನಿನಗೇನು? ಇಲ್ಲಿ ನಿನಗೆ ಯಾರಿದ್ದಾರೆ? ಇಲ್ಲಿ ನಿನಗಾಗಿ ಗೋರಿಯನ್ನು ತೋಡಿಸಿಕೊಂಡಿದ್ದೀಯಾ? ಎತ್ತರದಲ್ಲಿ ನಿನಗೆ ಸಮಾಧಿಯನ್ನು ಕೊರೆಸುತ್ತಾ ಬಂಡೆಯನ್ನು ಕಡೆಯಿಸಿ ನಿನಗೆ ನಿವಾಸವನ್ನು ಮಾಡಿಸುತ್ತಾ ಇದ್ದೀಯೋ? 17 ಇಗೋ, ಬಲಿತವನೇ, ಯೆಹೋವನು ನಿನ್ನನ್ನು ಎಸೆದೇ ಎಸೆಯುವನು, ಹಿಡಿದೇ ಹಿಡಿಯುವನು; 18 ನಿನ್ನನ್ನು ಚಂಡಿನಂತೆ ಸುತ್ತಿ ಸುತ್ತಿ ವಿಸ್ತಾರವಾದ ದೇಶಕ್ಕೆ ಬಿಸಾಡುವನು; ದಣಿಯ ಮನೆಗೆ ಅವಮಾನ ತಂದವನೇ, ಅಲ್ಲೇ ಸಾಯುವಿ, ನಿನ್ನ ವೈಭವದ ರಥಗಳು ಅಲ್ಲೇ ಇರುವವು. 19 [ಯೆಹೋವನಾದ] ನಾನು ನಿನ್ನ ಉದ್ಯೋಗದಿಂದ ನಿನ್ನನ್ನು ತಳ್ಳಿಬಿಡುವೆನು, ನಿನ್ನ ಪದವಿಯಿಂದ ನಿನ್ನನ್ನು ಎಳೆದು ಹಾಕುವೆನು. 20 ಆ ದಿನದಲ್ಲಿ ನನ್ನ ಸೇವಕನೂ ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆದು 21 ನಿನ್ನ ನಿಲುವಂಗಿಯನ್ನು ಅವನಿಗೆ ತೊಡಿಸಿ ನಿನ್ನ ನಡುಕಟ್ಟನ್ನು ಅವನಿಗೆ ಕಟ್ಟಿ ನಿನ್ನ ಅಧಿಕಾರವನ್ನು ಅವನ ಕೈಗೆ ಕೊಡುವೆನು; ಅವನು ಯೆರೂಸಲೇವಿುನ ನಿವಾಸಿಗಳಿಗೂ ಯೆಹೂದದ ಮನೆತನದವರಿಗೂ ತಂದೆಯಾಗುವನು. 22 ಅವನು ದಾವೀದನ ಮನೆಯ ಬೀಗದ ಕೈಯನ್ನು ತನ್ನ ಹೆಗಲ ಮೇಲೆ ವಹಿಸಿಕೊಳ್ಳುವಂತೆ ಮಾಡುವೆನು; ಅವನು ತೆರೆದರೆ ಯಾರೂ ಮುಚ್ಚರು, ಮುಚ್ಚಿದರೆ ಯಾರೂ ತೆರೆಯರು. 23 ಗಟ್ಟಿಯಾದ ಸ್ಥಳದಲ್ಲಿ ಮೊಳೆಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು. ಅವನು ತನ್ನ ವಂಶದವರಿಗೆ ಗೌರವಪೀಠವಾಗಿರುವನು. 24 ಬಟ್ಟಲು ಮೊದಲುಗೊಂಡು ಕೊಡದ ತನಕ ಸಕಲ ಸಾಧಾರಣಪಾತ್ರೆಗಳನ್ನು ಅಂದರೆ ತಂದೆಯ ಸಂತಾನ ಸಂತತಿಯಾದ ಅವನ ವಂಶದ ಭಾರವನ್ನೆಲ್ಲಾ ಅವನಿಗೆ ತಗಲುಹಾಕುವರು. 25 ಸೇನಾಧೀಶ್ವರನಾದ ಯೆಹೋವನು ಹೇಳುವದೇನಂದರೆ - ಗಟ್ಟಿಯಾದ ಸ್ಥಳದಲ್ಲಿ ಹೊಡೆದ ಮೊಳೆಯು ಆ ದಿನದಲ್ಲಿ ಕುಸಿದು ಹೋಗುವದು; ಅದು ಬಡಿಯಲ್ಪಟ್ಟು ಬೀಳಲಾಗಿ ಅದಕ್ಕೆ ತಗಲುಹಾಕಿದ ಭಾರವೂ ನಾಶವಾಗುವದು. ಇದೇ ಯೆಹೋವನಾದ ನನ್ನ ನುಡಿ ಎಂಬದೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India