Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 21 - ಕನ್ನಡ ಸತ್ಯವೇದವು J.V. (BSI)


ಬಾಬೆಲಿನ ವಿಷಯವಾದ ದೈವೋಕ್ತಿ

1 ಕಡಲಡವಿಯ ವಿಷಯವಾದ ದೈವೋಕ್ತಿ. ದಕ್ಷಿಣಸೀಮೆಯಲ್ಲಿ ಬೀಸುವ ಬಿರುಗಾಳಿಯಂತೆ ಅರಣ್ಯದ ಕಡೆಯ ಭಯಂಕರ ದೇಶದಿಂದ [ದೊಡ್ಡ ಅವಾಂತರ] ಬರುತ್ತದೆ.

2 ಘೋರದರ್ಶನವು ನನಗೆ ತಿಳಿಯ ಬಂದಿದೆ; ಬಾಧಕನು ಬಾಧಿಸುತ್ತಿದ್ದಾನೆ; ಸೂರೆಗಾರನು ಸೂರೆಮಾಡುತ್ತಿದ್ದಾನೆ. ಏಲಾಮೇ, ಏಳು! ಮೇದ್ಯವೇ, ಮುತ್ತು! ನಿಮ್ಮ ನಿಟ್ಟುಸುರನ್ನು ನಿಲ್ಲಿಸಿಬಿಟ್ಟಿದ್ದೇನೆ.

3 ಈ ದರ್ಶನದಿಂದ ನನ್ನ ಸೊಂಟದಲ್ಲಿ ನೋವು ತುಂಬಿದೆ, ಪ್ರಸವವೇದನೆಯಂತಿರುವ ವೇದನೆಯು ನನ್ನನ್ನು ಹಿಡಿದಿದೆ, ಕಿವಿ ಕಿವುಡಾಗುವಷ್ಟು ಯಾತನೆಪಡುತ್ತೇನೆ, ಕಣ್ಣು ಕುರುಡಾಗುವಷ್ಟು ತತ್ತರಗೊಂಡಿದ್ದೇನೆ.

4 ನನ್ನ ಹೃದಯವು ಭ್ರಮೆಗೊಂಡಿದೆ, ನಡುಕವು ನನ್ನನ್ನು ಆಕ್ರವಿುಸಿದೆ, ನಾನು ಅಪೇಕ್ಷಿಸುತ್ತಿದ್ದ ಸಂಜೆಹೊತ್ತೇ ನನಗೆ ಭಯಂಕರವಾಗಿ ಪರಿಣವಿುಸಿದೆ.

5 ಔತಣಕ್ಕೆ ಸಿದ್ಧಪಡಿಸಿಕೊಂಡು ಚಾಪೆಗಳನ್ನು ಹಾಸಿಕೊಂಡು ಉಂಡು ಕುಡಿಯುತ್ತಿದ್ದಾರಲ್ಲಾ; ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಬಳಿಯಿರಿ!

6 ಕರ್ತನು ನನಗೆ ಹೇಳಿರುವದೇನಂದರೆ - ಕಾವಲುಗಾರನನ್ನು ಇಡು, ನಡೆ; ಕಂಡದ್ದನ್ನು ತಿಳಿಸಲಿ;

7 ಅವನು ಜೋಡಿ ಜೋಡಿಯಾಗಿ ಬರುವ ಸವಾರರ ಸಾಲನ್ನೂ ಕತ್ತೆಗಳ ಮತ್ತು ಒಂಟೆಗಳ ಸಾಲುಗಳನ್ನೂ ನೋಡಿದರೆ ಬಹು ಗಮನದಿಂದ ಕಿವಿಗೊಟ್ಟು ಗಮನಿಸಲಿ ಎಂಬದೇ.

8 ಬಳಿಕ ಅವನು ಸಿಂಹಧ್ವನಿಯಿಂದ - ಕರ್ತನೇ, ಹಗಲೆಲ್ಲಾ ಕೋವರದಲ್ಲಿ ನಿಂತಿದ್ದೇನೆ, ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ;

9 ಇಗೋ, ಸವಾರರು, ಜೋಡಿ ಜೋಡಿಯಾಗಿ ಬರುತ್ತಾರೆ ಎಂದು ಕೂಗಿ ಇನ್ನೂ ಹೇಳಿದ್ದೇನಂದರೆ - ಬಾಬೆಲ್ ಬಿತ್ತು, ಬಿತ್ತು! ಅದರ ದೇವತಾವಿಗ್ರಹಗಳನ್ನು ಒಡೆದು ನೆಲಸಮಮಾಡಿಬಿಟ್ಟರು ಎಂಬದೇ.

10 ನನ್ನ ಕಣದ ದವಸವೇ, ನನ್ನ ಬಡಿತಕ್ಕೆ ಈಡಾದವರೇ, ಇಸ್ರಾಯೇಲ್ಯರ ದೇವರಾಗಿರುವ ಸೇನಾಧೀಶ್ವರನಾದ ಯೆಹೋವನಿಂದ ನಾನು ಕೇಳಿದ್ದನ್ನೇ ನಿಮಗೆ ತಿಳಿಸಿದ್ದೇನೆ.


ಎದೋವಿುನ ವಿಷಯವಾದ ದೈವೋಕ್ತಿ

11 ದೂಮದ ವಿಷಯವಾದ ದೈವೋಕ್ತಿ. ಕಾವಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು, ಕಾವಲುಗಾರನೇ, ರಾತ್ರಿ ಎಷ್ಟು ಕಳೆಯಿತು ಎಂಬ ಕೂಗು ಸೇಯೀರಿನಿಂದ ನನಗೆ ಕೇಳಿಸುತ್ತಿತ್ತು.

12 ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ; ವಿಚಾರಿಸಬೇಕಾದರೆ ವಿಚಾರಿಸಿರಿ, ತಿರಿಗಿ ಬನ್ನಿರಿ ಎಂದು ಕಾವಲುಗಾರನು ಹೇಳಿದನು.


ಅರಬಿಯ ವಿಷಯವಾದ ದೈವೋಕ್ತಿ

13 ಅರಬಿಯ ವಿಷಯವಾದ ದೈವೋಕ್ತಿ. ಸಾರ್ಥವಾಹರಾದ ದೇದಾನ್ಯರೇ, ಮರುಭೂವಿುಯ ಪೊದೆಗಳಲ್ಲಿ ಇಳಿದುಕೊಳ್ಳಿರಿ.

14 ಬಾಯಾರಿದವರಿಗೆ ನೀರನ್ನು ತಂದುಕೊಡಿರಿ, ತೇಮಾದೇಶದವರೇ, ಓಡಿಹೋದವರನ್ನು ಅನ್ನದೊಡನೆ ಎದುರುಗೊಳ್ಳಿರಿ.

15 ಕತ್ತಿ, ಹಿರಿದ ಕತ್ತಿ, ಬಾಗಿದ ಬಿಲ್ಲು, ಯುದ್ಧದ ಬಾಧೆ, ಇವುಗಳ ಕಡೆಯಿಂದ ಓಡಿಹೋಗುತ್ತಿದ್ದಾರಷ್ಟೆ.

16 ಕರ್ತನು ನನಗೆ ಹೇಳಿರುವದೇನಂದರೆ - ಆಳಿನ ವರುಷ ವಾಯಿದೆಗೆ ಸರಿಯಾದ ಒಂದು ವರುಷಕ್ಕೇ ಕೇದಾರಿನ ಸಕಲ ವೈಭವವು ಇಲ್ಲವಾಗುವದು;

17 ಬಿಲ್ಲುಗಾರರಲ್ಲಿ ಉಳಿದವರೂ ಕೇದಾರಿನವರ ಶೂರರೂ ವಿರಳರಾಗುವರು; ಇಸ್ರಾಯೇಲ್ಯರ ದೇವರಾದ ಯೆಹೋವನು ಇದನ್ನು ನುಡಿದಿದ್ದಾನೆ ಎಂಬದೇ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು