ಯೆಶಾಯ 20 - ಕನ್ನಡ ಸತ್ಯವೇದವು J.V. (BSI)ಐಗುಪ್ತದ ವಿಷಯವಾದ ದೈವೋಕ್ತಿ 1 ಅಶ್ಶೂರದ ರಾಜನಾದ ಸರ್ಗೋನನು ಕಳುಹಿಸಿದ ದಳವಾಯಿಯು ಅಷ್ಡೋದಿಗೆ ಬಂದು ಅದನ್ನು ಮುತ್ತಿಹಿಡಿದ ವರುಷದಲ್ಲಿ 2 ಯೆಹೋವನು ಆಮೋಚನ ಮಗನಾದ ಯೆಶಾಯನಿಗೆ - ಏಳು, ಸೊಂಟದಿಂದ ಗೋಣಿತಟ್ಟನ್ನು ಬಿಚ್ಚು, ಕಾಲಿನಿಂದ ಕೆರವನ್ನು ಕಳಚು ಎಂದು ಇತರರಿಗೆ ಸೂಚನೆಯಾಗಿ ಅಪ್ಪಣೆಕೊಟ್ಟನು. ಅವನು ಹಾಗೆಯೇ ಮಾಡಿ ಬೆತ್ತಲೆಯಾಗಿ ಕೆರವಿಲ್ಲದೆ ತಿರುಗುತ್ತಿದ್ದನು. 3 ಆಗ ಯೆಹೋವನು ಹೀಗೆ ಹೇಳಿದನು - ನನ್ನ ಸೇವಕನಾದ ಯೆಶಾಯನು ಐಗುಪ್ತದ ಮತ್ತು ಕೂಷಿನ ನಾಶನಕ್ಕೆ ಸೋಜಿಗದ ಗುರುತಾಗಿ ಮೂರು ವರುಷ ಬಟ್ಟೆ ಕೆರಗಳಿಲ್ಲದೆ ನಡೆದ ಪ್ರಕಾರ 4 ಅಶ್ಶೂರದ ಅರಸನು ಐಗುಪ್ತದ ಸೆರೆಯವರನ್ನೂ ಕೂಷಿನ ಕೈದಿಗಳನ್ನೂ ಅವರು ದೊಡ್ಡವರಾಗಲಿ ಚಿಕ್ಕವರಾಗಲಿ ಬಟ್ಟೆ ಕೆರಗಳಿಲ್ಲದೆ ಬರಿಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋಸ್ಕರ ಸೆರೆಗೆ ನಡೆಯುವಂತೆ ಮಾಡುವನು. 5 ಆಗ [ನನ್ನ ಜನರು] ತಾವು ನಿರೀಕ್ಷಿಸಿಕೊಂಡಿದ್ದ ಕೂಷಿನ ನಿವಿುತ್ತವಾಗಿಯೂ ಕೊಚ್ಚಿಕೊಂಡಿದ್ದ ಐಗುಪ್ತದ ವಿಷಯವಾಗಿಯೂ ಬೆಚ್ಚಿಬೆರಗಾಗಿ ನಾಚಿಕೆಪಡುವರು. 6 ಆ ದಿನದಲ್ಲಿ ಈ ಕರಾವಳಿಯಲ್ಲಿ ವಾಸಿಸುವವರು - ಹಾ, ಅಶ್ಶೂರದ ಅರಸನಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ ನಿರೀಕ್ಷಿಸಿದ್ದೆವೋ ಅವರಿಗೇ ಈ ಗತಿ ಬಂತಲ್ಲಾ; ನಮ್ಮಂಥವರಿಗೆ ಹೇಗೆ ರಕ್ಷಣೆಯಾದೀತು ಎಂದು ಅಂದುಕೊಳ್ಳುವರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India