ಯೆಶಾಯ 2 - ಕನ್ನಡ ಸತ್ಯವೇದವು J.V. (BSI)ಚೀಯೋನಿನ ಮುಂದಣ ಪ್ರಖ್ಯಾತಿ 1 ಯೆಹೂದದ ಮತ್ತು ಯೆರೂಸಲೇವಿುನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಕಂಡು ಬಂದ ದೈವೋಕ್ತಿ - 2 ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. 3 ಹೊರಟುಬಂದ ಬಹು ಜನಾಂಗದವರು - ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು. ಏಕಂದರೆ ಚೀಯೋನಿನಿಂದ ಧರ್ಮೋಪದೇಶವೂ ಯೆರೂಸಲೇವಿುನಿಂದ ಯೆಹೋವನ ವಾಕ್ಯವೂ ಹೊರಡುವವು. 4 ಆತನು ದೇಶದೇಶಗಳ ವ್ಯಾಜ್ಯಗಳನ್ನು ವಿಚಾರಿಸುವನು, ಬಹು ರಾಷ್ಟ್ರದವರಿಗೆ ನ್ಯಾಯತೀರಿಸುವನು; ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ. ಯೆಹೋವನ ನ್ಯಾಯನಿರ್ಣಯದಿನದಲ್ಲಿ ನಡೆಯತಕ್ಕದ್ದು 5 ಯಾಕೋಬನ ಮನೆತನದವರೇ, ಬನ್ನಿರಿ, ಯೆಹೋವನ ಜ್ಞಾನಪ್ರಕಾಶದಲ್ಲಿ ನಡೆಯುವ! 6 ಯಾಕೋಬನ ಮನೆತನದವರು ಮೂಡಣ ದೇಶಗಳ [ಮಂತ್ರತಂತ್ರಗಳಲ್ಲಿ] ಮಗ್ನರೂ ಫಿಲಿಷ್ಟಿಯರ ಹಾಗೆ ಕಣಿಹೇಳುವವರೂ ಅನ್ಯದೇಶಗಳವರ ಸಂಗಡ ಒಪ್ಪಂದಮಾಡುವವರೂ ಆಗಿರುವದರಿಂದ ಈ ನಿನ್ನ ಜನರನ್ನು ಕೈಬಿಟ್ಟಿದ್ದೀಯಷ್ಟೆ. 7 ಇವರ ದೇಶವು ಬೆಳ್ಳಿ ಬಂಗಾರಗಳಿಂದ ತುಂಬಿದೆ, ಇವರ ನಿಧಿ ನಿಕ್ಷೇಪಗಳಿಗೆ ವಿುತಿಯಿಲ್ಲ; ಇವರ ದೇಶವು ಅಶ್ವಬಲಭರಿತವಾಗಿದೆ, ಇವರ ರಥಗಳಿಗೆ ಪಾರವಿಲ್ಲ; 8 ಇವರ ದೇಶವು ವಿಗ್ರಹಗಳಿಂದಲೂ ತುಂಬಿದೆ, ತಮ್ಮ ಕೈಯಿಂದಲೇ, ತಮ್ಮ ಬೆರಳುಗಳಿಂದಲೇ ಮಾಡಿದ ಕೆಲಸಕ್ಕೆ ನಮಸ್ಕರಿಸುತ್ತಾರೆ. 9 ಹೀಗಿರಲು ಅಧಮರಾಗಲಿ ಉತ್ತಮರಾಗಲಿ ತಗ್ಗಿಸಲ್ಪಡುವರು; (ಅವರನ್ನು ಕ್ಷವಿುಸಬೇಡ). 10 ಗವಿಯೊಳಗೆ ನುಗ್ಗು, ಯೆಹೋವನ ಭಯಂಕರತನಕ್ಕೂ ಅತ್ಯುನ್ನತ ಮಹಿಮೆಗೂ ಹೆದರಿ ದೂಳಿನಲ್ಲಿ ಅವುತುಕೋ! 11 ಸಾಮಾನ್ಯರ ಗರ್ವದೃಷ್ಟಿಯು ತಗ್ಗಿಹೋಗುವದು, ಮುಖಂಡರ ಅಹಂಕಾರವು ಕುಗ್ಗಿಹೋಗುವದು, ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು. 12 ಸೇನಾಧೀಶ್ವರನಾದ ಯೆಹೋವನ [ನ್ಯಾಯನಿರ್ಣಯ] ದಿವಸವು ಗರ್ವದಿಂದ ಹೆಚ್ಚಿಕೊಂಡಿರುವ ಸಮಸ್ತಕ್ಕೂ ಸಂಭವಿಸುವದು; ಆಗ ಅದೆಲ್ಲಾ ತಗ್ಗುವದು. 13 ಎತ್ತರವಾಗಿ ಬೆಳೆದಿರುವ ಲೆಬನೋನಿನ ಸರ್ವದೇವದಾರು ವೃಕ್ಷಗಳು, ಬಾಷಾನಿನ ಎಲ್ಲಾ ಅಲ್ಲೋನ್ ಮರಗಳು, 14 ಶಿಖರಗಳನ್ನು ಉನ್ನತವಾಗಿ ಎತ್ತಿಕೊಂಡಿರುವ ಸಮಸ್ತ ಬೆಟ್ಟಗುಡ್ಡಗಳು, 15 ಉದ್ದುದ್ದವಾದ ಸಕಲ ಗೋಪುರಗಳು, ದುರ್ಗಮವಾದ ಸಮಸ್ತ ಕೋಟೆಗಳು, 16 ಎಲ್ಲಾ ದೊಡ್ಡ ದೊಡ್ಡ ಹಡಗುಗಳು, ಅಂತೂ ನೋಡತಕ್ಕ ಮನೋಹರವಾದ ಪ್ರತಿಯೊಂದು ವಸ್ತುವಿಗೂ ಆ ದಿನವು ತಪ್ಪದೆ ಬರುವದು. 17 ಸಾಮಾನ್ಯರ ಗರ್ವವು ಕುಗ್ಗುವದು, ಮುಖಂಡರ ಅಹಂಕಾರವೂ ತಗ್ಗುವದು, ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು. 18 ವಿಗ್ರಹಗಳು ಸಂಪೂರ್ಣವಾಗಿ ಹೋಗಿಬಿಡುವವು. 19 ಯೆಹೋವನು ಭೂಮಂಡಲವನ್ನು ಕಂಪನ ಮಾಡುವದಕ್ಕೆ ಏಳುವಾಗ ಮನುಷ್ಯರು ಆತನ ಭಯಂಕರತನಕ್ಕೂ ಅತ್ಯುನ್ನತ ಮಹಿಮೆಗೂ ಹೆದರಿ ಬಂಡೆಗಳ ಗವಿಗಳಲ್ಲಿಯೂ ನೆಲದ ಹಳ್ಳಕೊಳ್ಳಗಳಲ್ಲಿಯೂ ಸೇರಿಕೊಳ್ಳುವರು. 20 ಆ ದಿನದಲ್ಲಿ ಮನುಷ್ಯರು ತಮ್ಮ ಪೂಜೆಗೋಸ್ಕರ ಮಾಡಿಸಿಕೊಂಡ ಬೆಳ್ಳಿಯ ಬೊಂಬೆಗಳನ್ನೂ ಬಂಗಾರದ ವಿಗ್ರಹಗಳನ್ನೂ ಇಲಿಕಣ್ಣು ಕಪಟಗಳಿಗಾಗಿ ಬಿಸಾಟುಬಿಟ್ಟು 21 ಯೆಹೋವನು ಭೂಮಂಡಲವನ್ನು ಕಂಪನ ಮಾಡುವದಕ್ಕೆ ಏಳುವಾಗ ಆತನ ಭಯಂಕರತನಕ್ಕೂ ಅತ್ಯುನ್ನತಮಹಿಮೆಗೂ ಹೆದರಿ ಬಂಡೆಗಳ ಸಂದುಗೊಂದುಗಳಲ್ಲಿಯೂ ಚೂಪಾದ ಶಿಲೆಗಳ ಸೀಳುಗಳಲ್ಲಿಯೂ ನುಗ್ಗುವರು. 22 ಉಸಿರು ಮೂಗಿನಲ್ಲಿರುವ ತನಕ ಬದುಕುವ ನರಮನುಷ್ಯನನ್ನು ಬಿಟ್ಟುಬಿಡಿರಿ; ಅವನು ಯಾವ ಗಣನೆಗೆ ಬಂದಾನು? |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India