Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 19 - ಕನ್ನಡ ಸತ್ಯವೇದವು J.V. (BSI)


ಐಗುಪ್ತದ ವಿಷಯವಾದ ದೈವೋಕ್ತಿ

1 ಐಗುಪ್ತದ ವಿಷಯವಾದ ದೈವೋಕ್ತಿ. ಇಗೋ, ಯೆಹೋವನು ವೇಗಮೇಘವಾಹನನಾಗಿ ಐಗುಪ್ತಕ್ಕೆ ಬರುವನು; ಆತನು ಸಮ್ಮುಖನಾದಾಗ ಐಗುಪ್ತದ ವಿಗ್ರಹಗಳು ನಡುಗುವವು. ಐಗುಪ್ತ್ಯರ ಹೃದಯವು ತಮ್ಮೊಳಗೆ ಕರಗಿ ನೀರಾಗುವದು.

2 ಐಗುಪ್ತ್ಯರನ್ನು ಐಗುಪ್ತ್ಯರ ಮೇಲೆಯೇ ಎಬ್ಬಿಸುವೆನು; ಅಣ್ಣತಮ್ಮಂದಿರು, ನೆರೆಹೊರೆಯವರು, ಪಟ್ಟಣ ಪಟ್ಟಣಗಳು, ರಾಷ್ಟ್ರ ರಾಷ್ಟ್ರಗಳು ಪರಸ್ಪರವಾಗಿ ಹೋರಾಡುವವು.

3 ಐಗುಪ್ತದ ಅಂತರಾತ್ಮವು ಬರಿದಾಗುವದು; ಅದರ ಆಲೋಚನೆಯನ್ನು ಭಂಗಪಡಿಸುವೆನು; ಅಲ್ಲಿಯವರು ವಿಗ್ರಹಗಳನ್ನೂ ಮಂತ್ರಗಾರರನ್ನೂ ಪ್ರೇತವಿಚಾರಕರನ್ನೂ ಬೇತಾಳಿಕರನ್ನೂ ಆಶ್ರಯಿಸುವರು.

4 ಇದಲ್ಲದೆ ಐಗುಪ್ತ್ಯರನ್ನು ಕ್ರೂರನಾದ ಒಡೆಯನ ಕೈಗೆ ಒಪ್ಪಿಸುವೆನು; ಭಯಂಕರನಾದ ರಾಜನು ಅವರನ್ನಾಳುವನು ಎಂದು ಸೇನಾಧೀಶ್ವರನಾದ ಯೆಹೋವನು ನುಡಿಯುತ್ತಾನೆ.

5 ಮಹಾನದಿಯ ನೀರು ಬತ್ತಿಹೋಗುವದು.

6 ಪ್ರವಾಹವು ಇಂಗಿ ಒಣಗುವದು, ಕಾಲುವೆಗಳು ನಾರುವವು, ಐಗುಪ್ತದ ಹೊಳೆಗಳು ಇಳಿದು ನೀರಿಲ್ಲದೆ ಹೋಗುವವು, ಆಪೂ ಜಂಬುಹುಲ್ಲೂ ಬಾಡುವವು.

7 ನದಿಯ ಪಕ್ಕದ ತೀರಭೂವಿುಯು ಬೀಡು ಬೀಳುವದು; ನದಿಯಲ್ಲಿ ಬಿತ್ತಿದ ಎಲ್ಲಾ ಬೀಜವು ಒಣಗಿ ಗಾಳಿಗೆ ಸಿಕ್ಕಿ ಮಾಯವಾಗುವದು.

8 ಬೆಸ್ತರು ಪ್ರಲಾಪಿಸುವರು, ನದಿಯಲ್ಲಿ ಗಾಳಹಾಕುವವರು ಶೋಕಪಡುವರು, ನೀರಿನ ಮೇಲೆ ಬಲೆಬೀಸುವವರು ಕುಗ್ಗುವರು, ನಯವಾದ ನಾರಿನ ಕೆಲಸದವರೂ

9 ಬಿಳೀ ಬಟ್ಟೆಯನ್ನು ನೇಯುವವರೂ ನಾಚಿಕೊಳ್ಳುವರು.

10 ದೇಶದ ಆಧಾರಭೂತರು ಮುರಿದುಹೋಗುವರು, ಕೂಲಿಯವರು ಮನಮರುಗುವರು.

11 ಚೋಯನಿನ ಪ್ರಭುಗಳು ಕೇವಲ ಬುದ್ಧಿಹೀನರು; ಫರೋಹನ ಮಂತ್ರಿಗಳಲ್ಲಿ ಜ್ಞಾನವೃದ್ಧರ ಆಲೋಚನೆಯೂ ಹುಚ್ಚಾಟ; ನೀವು ಫರೋಹನಿಗೆ - ನಾನು ಜ್ಞಾನಿಗಳ ಸಂತಾನದವನು, ಪುರಾತನ ರಾಜವಂಶೀಯನು ಎಂದು ಹೇಗೆ ತಾನೆ ಹೇಳಿಕೊಳ್ಳುವಿರಿ? ನಿನ್ನ ಜ್ಞಾನಿಗಳು ಎಲ್ಲಿ?

12 ಅವರು ನಿನಗೆ ತಿಳಿಯ ಹೇಳಲಿ, ಸೇನಾಧೀಶ್ವರನಾದ ಯೆಹೋವನು ಐಗುಪ್ತದ ವಿಷಯವಾಗಿ ಉದ್ದೇಶಿಸಿದ್ದನ್ನು ಅರಿತುಕೊಳ್ಳಲಿ.

13 ಚೋಯನಿನ ಪ್ರಭುಗಳು ಬುದ್ಧಿಗೆಟ್ಟಿದ್ದಾರೆ, ನೋಫಿನ ಪ್ರಧಾನರು ಮೋಸಹೋಗಿದ್ದಾರೆ, ಐಗುಪ್ತದ ಕುಲಗಳ ಪ್ರಮುಖರು ಅದನ್ನು ಭ್ರಮಗೊಳಿಸಿದ್ದಾರೆ.

14 ಯೆಹೋವನು ಅದರ ಅಂತರಾತ್ಮದಲ್ಲಿ ವಕ್ರಬುದ್ಧಿಯನ್ನು ಕಲ್ಪಿಸಿದ್ದಾನೆ; ಅಮಲೇರಿದವನು ಕಕ್ಕುತ್ತಾ ಓಲಾಡುವ ಪ್ರಕಾರ ಐಗುಪ್ತವು ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾರೆ.

15 ಮತ್ತು ಐಗುಪ್ತದಲ್ಲಿ ತಲೆಯಾಗಾಲಿ ಬಾಲವಾಗಲಿ, ತಾಳೆಯಾಗಲಿ ತೃಣವಾಗಲಿ, ಸಾಧಿಸಲು ಸಾಧ್ಯವಾದ ಯಾವ ಕೆಲಸವೂ ಇರುವದಿಲ್ಲ.

16 ಆ ದಿನದಲ್ಲಿ ಐಗುಪ್ತವು ಹೆಣ್ಣಾಗಿ ಸೇನಾಧೀಶ್ವರನಾದ ಯೆಹೋವನು ತನ್ನ ಮೇಲೆ ಕೈಬೀಸುವದರಿಂದ ಭಯಪಟ್ಟು ನಡುಗುವದು.

17 ಮತ್ತು ಐಗುಪ್ತವು ಬೆಚ್ಚಿ ಬೀಳುವದಕ್ಕೆ ಯೆಹೂದ ದೇಶವು ಕಾರಣವಾಗುವದು; ಈ ದೇಶದ ಹೆಸರನ್ನು ಕೇಳುವ ಪ್ರತಿಯೊಬ್ಬನೂ ಸೇನಾಧೀಶ್ವರನಾದ ಯೆಹೋವನು ಐಗುಪ್ತಕ್ಕೆ ಪ್ರತಿಕೂಲವಾಗಿ ಮಾಡಿಕೊಂಡಿರುವ ಸಂಕಲ್ಪವನ್ನು ತಿಳಿದು ಬೆರಗಾಗುವನು.

18 ಆ ದಿನದಲ್ಲಿ ಸೇನಾಧೀಶ್ವರನಾದ ಯೆಹೋವನ ಭಕ್ತರೆಂದು ಪ್ರಮಾಣಮಾಡಿ ಕಾನಾನಿನ ಭಾಷೆಯನ್ನಾಡುವವರಿಂದ ತುಂಬಿದ ಐದು ಪಟ್ಟಣಗಳು ಐಗುಪ್ತದೇಶದಲ್ಲಿರುವವು; ಇವುಗಳಲ್ಲಿ ಒಂದರ ಹೆಸರು ನಾಶಪುರ.

19 ಆ ದಿನದಲ್ಲಿ ಐಗುಪ್ತದೇಶದ ಮಧ್ಯೆ ಯೆಹೋವನಿಗೆ ಒಂದು ಯಜ್ಞಪೀಠವೂ ದೇಶದ ಎಲ್ಲೆಯಲ್ಲಿ ಯೆಹೋವನಿಗೆ ಒಂದು ಸ್ತಂಭವೂ ಇರುವವು.

20 ಅವು ಐಗುಪ್ತದೇಶದಲ್ಲಿ ಸೇನಾಧೀಶ್ವರನಾದ ಯೆಹೋವನ ಗುರುತಾಗಿಯೂ ಸಾಕ್ಷಿಯಾಗಿಯೂ ಇರುವವು; ಹಿಂಸಕರ ದೆಸೆಯಿಂದ ಯೆಹೋವನನ್ನು ಕೂಗಿಕೊಳ್ಳಲು ಆತನು ಅವರಿಗಾಗಿ ಹೋರಾಡುವ ಶೂರನಾದ ರಕ್ಷಕನನ್ನು ಕಳುಹಿಸಿ ಅವರನ್ನುದ್ಧರಿಸುವನು.

21 ಮತ್ತು ಯೆಹೋವನು ತನ್ನನ್ನು ಐಗುಪ್ತ್ಯರಿಗೆ ತಿಳಿಯಪಡಿಸಲು ಅವರು ಆ ದಿನದಲ್ಲಿ ಯೆಹೋವನನ್ನು ತಿಳಿದುಕೊಳ್ಳುವರು; ಹೌದು, ಯಜ್ಞನೈವೇದ್ಯಗಳ ಸೇವೆಯನ್ನಾಚರಿಸಿ ಯೆಹೋವನಿಗೆ ಹರಕೆಮಾಡಿಕೊಂಡು ಅದನ್ನು ನೆರವೇರಿಸುವರು.

22 ಇದಲ್ಲದೆ ಯೆಹೋವನು ಐಗುಪ್ತ್ಯರನ್ನು ಹೊಡೆಯುವನು, ಗಾಯಮಾಡಿ ವಾಸಿಮಾಡುವವನಾಗಿಯೇ ಹೊಡೆಯುವನು; ಅವರು ಯೆಹೋವನ ಕಡೆಗೆ ತಿರುಗಿಕೊಳ್ಳುವರು; ಆತನು ಅವರ ವಿಜ್ಞಾಪನೆಯನ್ನು ಲಾಲಿಸಿ ಅವರನ್ನು ಗುಣಪಡಿಸುವನು.

23 ಆ ದಿನದಲ್ಲಿ ಐಗುಪ್ತದಿಂದ ಅಶ್ಶೂರಕ್ಕೆ ಹೋಗುವ ರಾಜಮಾರ್ಗವಿರುವದು; ಅಶ್ಶೂರ್ಯರು ಐಗುಪ್ತಕ್ಕೂ ಐಗುಪ್ತ್ಯರು ಅಶ್ಶೂರಕ್ಕೂ ಹೋಗಿಬರುತ್ತಿರುವರು; ಐಗುಪ್ತ್ಯರು ಅಶ್ಶೂರ್ಯರೊಂದಿಗೆ [ಯೆಹೋವನನ್ನು] ಸೇವಿಸುವರು.

24 ಆ ದಿನದಲ್ಲಿ ಇಸ್ರಾಯೇಲು ಐಗುಪ್ತ ಅಶ್ಶೂರಗಳೊಂದಿಗೆ ಕಲೆತು ಈ ಮೂರೂ ಲೋಕದ ಮಧ್ಯದಲ್ಲಿ ಆಶೀರ್ವಾದದ ನಿಧಿಯಾಗುವವು.

25 ನನ್ನ ಪ್ರಜೆಯಾದ ಐಗುಪ್ತಕ್ಕೂ ನನ್ನ ಸೃಷ್ಟಿಯಾದ ಅಶ್ಶೂರಕ್ಕೂ ನನ್ನ ಸ್ವಾಸ್ತ್ಯವಾದ ಇಸ್ರಾಯೇಲಿಗೂ ಶುಭವಾಗಲಿ ಎಂದು ಸೇನಾಧೀಶ್ವರನಾದ ಯೆಹೋವನು ಅವುಗಳನ್ನು ಆಶೀರ್ವದಿಸಿದ್ದಾನಷ್ಟೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು