ಯೆಶಾಯ 18 - ಕನ್ನಡ ಸತ್ಯವೇದವು J.V. (BSI)ಕೂಷಿನ ವಿಷಯವಾದ ದೈವೋಕ್ತಿ 1 ಓಹೋ, ಕೂಷಿನ ನದಿಗಳ ಆಚೆಯಲ್ಲಿರುವ ಸೀಮೆ, ರೆಕ್ಕೆಗಳು ಪಟಪಟನೆ ಆಡುವ ನಾಡು, ರಾಯಭಾರಿಗಳನ್ನು ನೀರಿನ ಮೇಲೆ ಬೆಂಡಿನ ದೋಣಿಗಳಲ್ಲಿ ನದೀಮಾರ್ಗವಾಗಿ ಕಳುಹಿಸುವ ದೇಶ, ಹೌದು. 2 ವೇಗವುಳ್ಳ ದೂತರೇ, ಉನ್ನತವಾದ ನುಣುಪಿನ ಮೈಯವರೂ ಸರ್ವದಾ ಭಯಂಕರರೂ ಮಹಾಬಲದಿಂದ [ಶತ್ರುಗಳನ್ನು] ತುಳಿಯುವವರೂ ನದಿಗಳಿಂದ ವಿಂಗಡವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರ ಬಳಿಗೆ ಹೋಗಿರಿ. 3 ಸಮಸ್ತ ಭೂನಿವಾಸಿಗಳೇ, ಲೋಕದ ಸಕಲ ಜನರೇ, ಬೆಟ್ಟಗಳಲ್ಲಿ ಧ್ವಜವನ್ನೆತ್ತುವಾಗ ನೋಡಿರಿ, ತುತೂರಿಯನ್ನೂದುವಾಗ ಕೇಳಿರಿ! 4 ಯೆಹೋವನು ನನಗೆ ಹೇಳಿರುವದೇನಂದರೆ, ಬಿಸಿಲಿನಲ್ಲಿ ಜಳಜಳಿಸುವ ದಗೆಯಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು ಎಂಬದೇ. 5 ಕೊಯ್ಲಿನ ಕಾಲಕ್ಕೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಿಂದಾದ ಹೀಚು ದೋರೆಗಾಯಿಯಾಗುತ್ತಿರುವಾಗ ಆತನು ಕುಡುಗೋಲುಗಳಿಂದ ಕುಡಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕುವನು. 6 ಕಡಿಯಲ್ಪಟ್ಟವರ ಶವಗಳೆಲ್ಲಾ ಬೆಟ್ಟದ ಹದ್ದುಗಳಿಗೂ ಕಾಡುಮೃಗಗಳಿಗೂ ಪಾಲಾಗಿ ಬಿದ್ದಿರುವವು, ಬೇಸಿಗೆಯಲ್ಲಿ ಹದ್ದುಗಳಿಗೂ ಹಿಮಗಾಲದಲ್ಲಿ ಕಾಡುಮೃಗಗಳಿಗೂ ಜೀವನವಾಗುವವು. 7 ಆ ಕಾಲದಲ್ಲಿ ಉನ್ನತರಾದ ನುಣುಪಿನ ಮೈಯವರೂ ಸರ್ವದಾ ಭಯಂಕರರೂ ಮಹಾಬಲದಿಂದ [ಶತ್ರುಗಳನ್ನು] ತುಳಿಯುವವರೂ ನದಿಗಳಿಂದ ವಿಂಗಡವಾಗಿರುವ ದೇಶದ ನಿವಾಸಿಗಳೂ ಆದ ಜನಾಂಗದವರು ಸೇನಾಧೀಶ್ವರನಾದ ಯೆಹೋವನ ನಾಮಮಹತ್ತಿರುವ ಚೀಯೋನ್ ಪರ್ವತಕ್ಕೆ ಆತನಿಗೋಸ್ಕರ ಕಾಣಿಕೆಯನ್ನು ತರುವರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India