ಯೆಶಾಯ 16 - ಕನ್ನಡ ಸತ್ಯವೇದವು J.V. (BSI)1 ದೇಶವನ್ನಾಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಗಳನ್ನು ಅರಣ್ಯದ ಕಡೆಯಿರುವ ಸೆಲದಿಂದ ಚೀಯೋನ್ ನಗರಿಯ ಪರ್ವತಕ್ಕೆ ಕಳುಹಿಸಿರಿ. 2 ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಮೋವಾಬಿನ ಊರುಗಳವರು ಅಲೆಯುವ ಪಕ್ಷಿಗಳಂತೆಯೂ ಗೂಡಿನಿಂದ ಚದರಿದ ಮರಿಗಳ ಹಾಗೂ ಆಗುವರು. 3 ಆಲೋಚನೆಹೇಳಿರಿ, ತೀರ್ಮಾನಿಸಿರಿ; ಮಟ್ಟ ಮಧ್ಯಾಹ್ನದಲ್ಲಿ ನಿಮ್ಮ ನೆರಳು ರಾತ್ರಿಯ ಕತ್ತಲಿನಂತೆ ದಟ್ಟವಾಗಿರಲಿ; ದೇಶ ಭ್ರಷ್ಟರನ್ನು ಮರೆಮಾಜಿರಿ, ಅಲೆಯುವವರನ್ನು ಬೈಲಿಗೆ ತರಬೇಡಿರಿ. 4 ನಮ್ಮ ದೇಶದಿಂದ ವಲಸೆಹೋದವರು ನಿಮ್ಮಲ್ಲಿ ವಾಸಿಸಲಿ; ಮೋವಾಬ್ಯರು ಬಲಾತ್ಕಾರಿಗಳಿಗೆ ವಶವಾಗದ ಹಾಗೆ ಆಶ್ರಯವಾಗಿರಿ. ಹಿಂಡಿ ಹಿಂಸಿಸುವವರು [ನಿಮ್ಮ] ದೇಶದಿಂದ ನಿರ್ಮೂಲರಾದರು, ಬಲಾತ್ಕಾರವು ತೀರಿತು, ತುಳಿದುಬಿಡುವವರು ಮುಗಿದುಹೋದರಷ್ಟೆ. 5 ಇದಲ್ಲದೆ ಸಿಂಹಾಸನವು ಕೃಪಾಧಾರದ ಮೇಲೆ ಸ್ಥಾಪಿತವಾಗಿದೆ; ರಾಜ್ಯಭಾರಪ್ರವೀಣನೂ ಧರ್ಮಾಸಕ್ತನೂ ನ್ಯಾಯನಿಪುಣನೂ ಆದವನು ದಾವೀದನ ಗುಡಾರದಲ್ಲಿನ ಆ ಸಿಂಹಾಸನದ ಮೇಲೆ ಸತ್ಯಪರನಾಗಿ ಕುಳಿತಿದ್ದಾನೆ. 6 ಮೋವಾಬ್ಯರಿಗೆ ಬಹು ಸೊಕ್ಕೇರಿದೆ ಎಂಬ ಅವರ ಹೆಮ್ಮೆಯ ಸುದ್ದಿಯೂ ಅವರ ಅಹಂಕಾರದಂಭ ಗರ್ವೋದ್ರೇಕ ಇವುಗಳ ಸಮಾಚಾರವೂ ನಮ್ಮ ಕಿವಿಗೆ ಬಿದ್ದಿವೆ. ಅವರು ಕೊಚ್ಚಿಕೊಳ್ಳುವದೆಲ್ಲಾ ಬರೀ ಬುರುಡೆಯೇ. 7 ಆದಕಾರಣ ಮೋವಾಬಿನ ನಿವಿುತ್ತ ಮೋವಾಬೇ ಗೋಳಾಡುವದು; ಪ್ರತಿಯೊಬ್ಬನೂ ಪ್ರಲಾಪಿಸುವನು; ಮುರಿದು ಹೋದವರಾಗಿ ನೀವು ಕೀರ್ ಹರೆಷೆಥಿನ ದೀಪದ್ರಾಕ್ಷೆಯು ಹಾಳಾಯಿತಲ್ಲಾ ಎಂದು ನರಳುವಿರಿ. 8 ಹೆಷ್ಬೋನಿನ ಭೂವಿುಯೂ ಸಿಬ್ಮದ ದ್ರಾಕ್ಷಾಲತೆಯೂ ನಿಸ್ಸಾರವಾಗಿವೆ; ಯಜ್ಜೇರಿನವರೆಗೆ ವ್ಯಾಪಿಸಿ ಅರಣ್ಯದಲ್ಲಿ ಹಬ್ಬಿ ಸಮುದ್ರದಾಚೆಗೆ ಸೇರುವಷ್ಟು ವಿಶಾಲವಾಗಿ ತನ್ನ ಶಾಖೆಗಳನ್ನು ಹರಡಿಕೊಂಡಿದ್ದ ಮೋವಾಬಿನ ರಾಜ ದ್ರಾಕ್ಷೆಗಳನ್ನು ಜನಾಂಗಗಳ ಒಡೆಯರು ಮುರಿದು ಬಿಟ್ಟಿದ್ದಾರೆ. 9 ಹೀಗಿರಲು ಸಿಬ್ಮದ ದ್ರಾಕ್ಷಾಲತೆಯ ನಿವಿುತ್ತ ಯಜ್ಜೇರಿನವರೊಂದಿಗೆ ನಾನು ಅಳುವೆನು. ಹೆಷ್ಬೋನೇ, ಎಲ್ಲಾಲೇ, ನನ್ನ ಕಣ್ಣೀರಿನಿಂದ ನಿಮ್ಮನ್ನು ತೋಯಿಸುವೆನು; ನಿಮ್ಮ ಹಣ್ಣಿನ ಮೇಲೆಯೂ ಬೆಳೆಯ ಮೇಲೆಯೂ ಬಿದ್ದು ಆರ್ಭಟಿಸುತ್ತಾರೆ; 10 ಹರ್ಷಾನಂದಗಳು ತೋಟಗಳಿಂದ ತೊಲಗಿವೆ, ದ್ರಾಕ್ಷೆಯ ತೋಟಗಳಲ್ಲಿ ಉತ್ಸಾಹಧ್ವನಿಯೂ ಉಲ್ಲಾಸದ ಆರ್ಭಟವೂ ಇರುವದಿಲ್ಲ, ತುಳಿಯುವವರು ತೊಟ್ಟಿಗಳಲ್ಲಿ ದ್ರಾಕ್ಷಾರಸವನ್ನು ತುಳಿದು ತೆಗೆಯುವದಿಲ್ಲ, ಅವರ ಕೂಗನ್ನು ನಿಲ್ಲಿಸಿಬಿಟ್ಟಿದ್ದೇನೆ. 11 ಆದದರಿಂದ ಮೋವಾಬಿನ ನಿವಿುತ್ತ ನನ್ನ ಹೃದಯವು, ಕೀರ್‍ಹೆರೆಸಿನ ನಿವಿುತ್ತ ನನ್ನ ಅಂತರಂಗವು, ಕಿನ್ನರಿಯಂತೆ ಅಲುಗಿ ನುಡಿಯುತ್ತದೆ. 12 ಮೋವಾಬ್ಯರು ಸನ್ನಿಧಿಗೆ ಸೇರಿ ದಿಣ್ಣೆಯಲ್ಲಿನ ಪೂಜೆಯಿಂದ ಬಹು ಆಯಾಸಗೊಂಡು ಪ್ರಾರ್ಥನೆಗಾಗಿ ತಮ್ಮ ದೇವಾಲಯಕ್ಕೆ ಬಂದರೂ ಪ್ರಾರ್ಥನೆಯು ಸಫಲವಾಗದು. 13 ಯೆಹೋವನು ಮೋವಾಬಿನ ವಿಷಯವಾಗಿ ಹಿಂದೆ ನುಡಿದ ಉಕ್ತಿಯು ಇದೇ. 14 ಈಗ ಯೆಹೋವನು ಹೇಳುವದೇನಂದರೆ - ಆಳಿನ ಒಂದೊಂದು ವರುಷ ವಾಯಿದೆಗೆ ಸರಿಯಾದ ಮೂರು ವರುಷಕ್ಕೇ ಮೋವಾಬಿನ ಮಹಿಮೆಯೂ ಅಲ್ಲಿನವರ ದೊಡ್ಡ ಗುಂಪೂ ಹೀನಾಯಕ್ಕೆ ಈಡಾಗುವವು; ಉಳಿದ ಜನವು ಹೆಚ್ಚದೆ ಕೇವಲ ಸ್ವಲ್ಪವಾಗಿಯೇ ಇರುವದು ಎಂಬದೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India