ಯೆಶಾಯ 15 - ಕನ್ನಡ ಸತ್ಯವೇದವು J.V. (BSI)ಮೋವಾಬಿನ ವಿಷಯವಾದ ದೈವೋಕ್ತಿ 1 ಮೋವಾಬಿನ ವಿಷಯವಾದ ದೈವೋಕ್ತಿ. ಒಂದು ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿರ್ಮೂಲವಾಯಿತಲ್ಲಾ! ಹೌದು, ಒಂದು ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವೂ ಹಾಳಾಗಿ ನಿರ್ಮೂಲವಾಯಿತು. 2 ಬಯಿತ್ ಮತ್ತು ದೀಬೋನ್ ಊರುಗಳವರು ಅಳುವದಕ್ಕಾಗಿ ಪೂಜಾಸ್ಥಾನಗಳಿಗೆ ಹತ್ತಿದ್ದಾರೆ; ನೆಬೋವಿನಲ್ಲಿಯೂ ಮೇದೆಬದಲ್ಲಿಯೂ ಮೋವಾಬ್ಯರು ಗೋಳಾಡುತ್ತಾರೆ; ಎಲ್ಲರ ತಲೆಯು ಬೋಳು, ಎಲ್ಲರ ಗಡ್ಡವು ವಿಕಾರವಾಗಿ ಕತ್ತರಿಸಿದೆ. 3 ಬೀದಿಗಳಲ್ಲಿ ತಿರುಗುವವರು ನಡುವಿಗೆ ಗೋಣಿತಟ್ಟು ಸುತ್ತಿಕೊಂಡಿದ್ದಾರೆ; ತಮ್ಮ ತಮ್ಮ ಮಾಳಿಗೆಗಳ ಮೇಲೆಯೂ ಚೌಕಗಳಲ್ಲಿಯೂ ಎಲ್ಲರು ಅರಚುತ್ತಾ ಕಣ್ಣೀರನ್ನು ಸುರಿಸಿ ಸುರಿಸಿ ಇಳಿದು ಹೋಗಿದ್ದಾರೆ. 4 ಹೆಷ್ಬೋನ್ ಮತ್ತು ಎಲೆಯಾಲೆ ಕೂಗುತ್ತವೆ; ಇವುಗಳ ರೋದನವು ಯಹಜಿನವರೆಗೂ ಕೇಳಬರುತ್ತದೆ; ಇದರಿಂದ ಮೋವಾಬಿನ ಭಟರು ಕಿರಚಿಕೊಳ್ಳುತ್ತಾರೆ; ಅದರ ಆತ್ಮವು ತನ್ನೊಳಗೆ ತತ್ತರಿಸುತ್ತದೆ. 5 ನನ್ನ ಹೃದಯವು ಮೋವಾಬಿನ ನಿವಿುತ್ತವಾಗಿ ಮೊರೆಯಿಡುತ್ತದೆ; ಅಲ್ಲಿಂದ ಪಲಾಯನವಾದವರು ಚೋಯರಿಗೂ ಎಗ್ಲತ್ ಶೆಲಿಶೀಯಕ್ಕೂ ಓಡಿಹೋಗುತ್ತಾರೆ, ಅಳುತ್ತಾ ಲೂಹೀಥ್ ದಿಣ್ಣೆಯನ್ನು ಹತ್ತುತ್ತಾರೆ, ಹೊರೊನಯಿವಿುನ ದಾರಿಯಲ್ಲಿ ನಡೆಯುತ್ತಾ ನಾಶನವಾದೆವಲ್ಲಾ ಎಂದು ದನಿಗೈಯುತ್ತಾರೆ. 6 ನಿಮ್ರೀಮ್ ಹೊಳೆಯು ಹಾಳಾಯಿತು, ಹಸಿಹುಲ್ಲು ಬಾಡಿತು, ಮೇವು ತೀರಿತು, ಯಾವ ಹಸುರೂ ಇಲ್ಲ. 7 ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ. 8 ಪ್ರಲಾಪವು ಮೋವಾಬಿನ ಎಲ್ಲೆಗಳ ತನಕ ಹಬ್ಬಿದೆ, ಅದರ ಅರಚಾಟವು ಎಗ್ಲಯಿವಿುನವರೆಗೂ ಬೆಯೇರ್ ಏಲೀವಿುನ ಪರ್ಯಂತವೂ ವ್ಯಾಪಿಸಿದೆ. 9 ದೀಮೋನಿನ ನೀರೆಲ್ಲಾ ರಕ್ತಮಯವಾಯಿತು; ಮತ್ತು ದೀಮೋನಿನ ಮೇಲೆ ಹೆಚ್ಚು ಬಾಧೆಯನ್ನು, ಅಂದರೆ ಮೋವಾಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ ದೇಶದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು, ಬರಮಾಡುವೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India