ಯೆಶಾಯ 14 - ಕನ್ನಡ ಸತ್ಯವೇದವು J.V. (BSI)1 ಯೆಹೋವನು ಯಾಕೋಬ್ಯರನ್ನು ಕನಿಕರಿಸಿ ಮತ್ತೆ ಇಸ್ರಾಯೇಲ್ಯರನ್ನು ಆರಿಸಿಕೊಂಡು ಸ್ವದೇಶದಲ್ಲಿ ತಂಗಿಸಬೇಕೆಂದಿದ್ದಾನಷ್ಟೆ; ಪರದೇಶಿಗಳು ಅವರೊಂದಿಗೆ ಕೂಡಿ ಬಂದು ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು. 2 ಜನಾಂಗದವರು ಅವರನ್ನು ಕರತಂದು ಸ್ವಸ್ಥಳಕ್ಕೆ ಸೇರಿಸುವರು; ಆಗ ಇಸ್ರಾಯೇಲಿನ ಮನೆತನದವರು ಯೆಹೋವನ ದೇಶದಲ್ಲಿ ಆ ಜನಾಂಗದವರನ್ನು ಗಂಡುಹೆಣ್ಣಾಳುಗಳನ್ನಾಗಿ ಇಟ್ಟುಕೊಳ್ಳುವರು; ಯಾರಿಗೆ ಸೆರೆಯಾಗಿದ್ದರೋ ಅವರನ್ನು ಸೆರೆಹಿಡಿಯುವರು; ತಮ್ಮನ್ನು ಹಿಂಸಿಸಿದವರ ಮೇಲೆ ಅಧಿಕಾರ ನಡಿಸುವರು. 3 ಮತ್ತು ಯೆಹೋವನು ನಿಮ್ಮ ಸಂಕಟದಿಂದಲೂ ಕಳವಳದಿಂದಲೂ ಕಠಿನವಾದ ಬಿಟ್ಟಿಯ ಸೇವೆಯಿಂದಲೂ 4 ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಎತ್ತಿ ಹೇಳಬೇಕು - ಆಹಾ, ಹಿಂಸಕನು ಕೊನೆಗೊಂಡನು, ರೇಗಾಟವು ನಿಂತಿತು! 5 ಜನಗಳನ್ನು ಕೋಪೋದ್ರೇಕದಿಂದ ಎಡೆಬಿಡದೆ ಹೊಡೆದು ಜನಾಂಗಗಳನ್ನು ಸಿಟ್ಟಿನಿಂದ ತಡೆಯಿಲ್ಲದೆ ಹಿಂಸಿಸಿ 6 ಆಳುತ್ತಿದ್ದ ದುಷ್ಟರ ಕೋಲನ್ನೂ ರಾಜರ ದಂಡವನ್ನೂ ಯೆಹೋವನು ಮುರಿದುಬಿಟ್ಟನು. 7 ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ, ಹರ್ಷಧ್ವನಿಗೈಯುತ್ತಾರೆ. 8 ಹೌದು, ತುರಾಯಿಮರಗಳೂ ಲೆಬನೋನಿನ ದೇವದಾರು ವೃಕ್ಷಗಳೂ ನೀನು ಬಿದ್ದುಕೊಂಡ ಮೇಲೆ ಕಡಿಯುವವನು ಯಾವನೂ ನಮ್ಮ ತಂಟೆಗೆ ಬಂದಿಲ್ಲವೆಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ. 9 ಬರುತ್ತಿರುವ ನಿನ್ನನ್ನು ಎದುರುಗೊಳ್ಳುವದಕ್ಕೆ ಕೆಳಗಡೆ ಪಾತಾಳವು ತಳಮಳಪಡುತ್ತದೆ; ನಿನಗೋಸ್ಕರ ಪ್ರೇತಗಳನ್ನು, ಅಂದರೆ ಭೂಲೋಕದಲ್ಲಿ ಮುಖಂಡರಾಗಿದ್ದವರೆಲ್ಲರನ್ನು ಎಚ್ಚರಗೊಳಿಸಿ ಜನಾಂಗಗಳ ಸಕಲ ರಾಜರನ್ನು ಅವರವರ ಆಸನಗಳಿಂದ ಎಬ್ಬಿಸುತ್ತದೆ. 10 ಇವರೆಲ್ಲಾ ನಿನ್ನನ್ನು ಕುರಿತು - ನೀನು ಸಹ ನಮ್ಮ ಹಾಗೆ ಬಲಹೀನನಾದೆಯಾ? ನಮಗೆ ಸರಿಸಮಾನನಾದೆಯೋ? ಎಂದು ಹೇಳುತ್ತಾರೆ. 11 ನಿನ್ನ ವೈಭವವೂ ವೀಣಾನಾದವೂ ಪಾತಾಳಕ್ಕೆ ತಳ್ಳಲ್ಪಟ್ಟಿವೆ; ನಿನಗೆ ಹುಳಗಳೇ ಹಾಸಿಗೆ, ಕ್ರಿವಿುಗಳೇ ಹೊದಿಕೆ. 12 ಆಹಾ, ಉದಯನಕ್ಷತ್ರವೇ, ಬೆಳ್ಳಿಯೇ, ಆಕಾಶದಿಂದ ಹೇಗೆ ಬಿದ್ದೆ! ಜನಾಂಗಗಳನ್ನು ಕೆಡವಿದ ನೀನು ಕಡಿಯಲ್ಪಟ್ಟು ನೆಲಕ್ಕೆ ಉರುಳಿದೆಯಲ್ಲಾ! 13 ನೀನು ನಿನ್ನ ಮನಸ್ಸಿನಲ್ಲಿ - ನಾನು ಆಕಾಶಕ್ಕೆ ಹತ್ತಿ ಉತ್ತರದಿಕ್ಕಿನ ಕಟ್ಟಕಡೆಯಿರುವ ಸುರಗಣ ಪರ್ವತದಲ್ಲಿ ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಮೇಲೆ ಏರಿಸಿ ಆಸೀನನಾಗುವೆನು; 14 ಉನ್ನತ ಮೇಘಮಂಡಲದ ಮೇಲೆ ಏರಿ ಉನ್ನತೋನ್ನತನಿಗೆ ಸರಿಸಮಾನನಾಗುವೆನು ಅಂದುಕೊಂಡಿದ್ದೆಯಲ್ಲಾ! 15 ಆದರೆ ನೀನು ಪಾತಾಳಕ್ಕೆ, ಅಧೋಲೋಕದ ಅಗಾಧಸ್ಥಳಗಳಿಗೆ, ತಳ್ಳಲ್ಪಡುತ್ತಿದ್ದೀ. 16 ನಿನ್ನನ್ನು ಕಂಡವರು ದಿಟ್ಟಿಸಿ ನೋಡಿ ಯೋಚಿಸುತ್ತಾ - ಭೂವಿುಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ 17 ಪಟ್ಟಣಗಳನ್ನು ಕೆಡವಿ ಲೋಕವನ್ನು ಕಾಡನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದವನು ಇವನೋ? ಅಂದುಕೊಳ್ಳುವರು. 18 ಜನಾಂಗಗಳ ಎಲ್ಲಾ ಅರಸರೂ, ಹೌದು, ಸಕಲ ರಾಜರೂ ತಮ್ಮ ತಮ್ಮ ಮನೆಗಳಲ್ಲಿ ವೈಭವದೊಡನೆ ದೀರ್ಘನಿದ್ರೆಮಾಡುತ್ತಾರೆ. 19 ನೀನಾದರೋ ನಿನ್ನ ಗೋರಿಗೆ ದೂರವಾಗಿ ಕೆಟ್ಟ ಮೊಳಿಕೆಯಂತೆ ಬಿಸಾಡಲ್ಪಟ್ಟಿದ್ದೀ; ನಿನ್ನ ಶವವು ತುಳಿತಕ್ಕೆ ಈಡಾಗಿದೆ, ಕತ್ತಿ ತಿವಿದು ಗುಂಡಿಯ ಕಲ್ಲುಗಳ ಪಾಲಾದ ಹತರೇ ಅದಕ್ಕೆ ಹೊದಿಕೆ. 20 ನೀನು ಆ ರಾಜರಂತೆ ಗೋರಿಗೆ ಸೇರುವದಿಲ್ಲ; ನಿನ್ನ ಪ್ರಜೆಯನ್ನು ಕೊಂದು ನಿನ್ನ ದೇಶವನ್ನು ಹಾಳುಮಾಡಿದ್ದೀ, ದುಷ್ಟರ ಸಂತಾನವು ನಿರಂತರವೂ ನಿರ್ನಾಮವಾಗಿರುವದಲ್ಲವೆ. 21 ಪಿತೃಗಳ ಅಧರ್ಮದ ನಿವಿುತ್ತ ಇವನ ಮಕ್ಕಳಿಗೂ ವಧ್ಯಸ್ಥಾನವನ್ನು ಸಿದ್ಧಮಾಡಿರಿ! ಅವರು ತಲೆಯೆತ್ತಿ ಲೋಕವನ್ನು ವಶಪಡಿಸಿಕೊಂಡು ಭೂಮಂಡಲದ ಮೇಲೆಲ್ಲಾ ಪಟ್ಟಣಗಳನ್ನು ಕಟ್ಟಿಕೊಳ್ಳದಿರಲಿ! 22 ಸೇನಾಧೀಶ್ವರನಾದ ಯೆಹೋವನಿಂದ ಒಂದು ಮಾತು ಹೊರಟಿತು - ನಾನು ಅವರಿಗೆ ವಿರುದ್ಧವಾಗಿ ಎದ್ದು ಬಾಬೆಲಿನಿಂದ ಹೆಸರನ್ನೂ ಜನಶೇಷವನ್ನೂ ಪುತ್ರ ಪೌತ್ರರನ್ನೂ ಕತ್ತರಿಸಿಬಿಡುವೆನು; 23 ಮತ್ತು ಆ ಪ್ರದೇಶವನ್ನು ಜವುಗುನೆಲವನ್ನಾಗಿಯೂ ಮುಳ್ಳುಹಂದಿಗೆ ಸೊತ್ತನ್ನಾಗಿಯೂ ಮಾಡಿ ನಾಶನವೆಂಬ ಬರಲಿನಿಂದ ಗುಡಿಸಿಬಿಡುವೆನು ಎಂದು ಸೇನಾಧೀಶ್ವರನಾದ ಯೆಹೋವನು ಹೇಳಿದ್ದಾನೆ. ಅಶ್ಶೂರದ ವಿಷಯವಾದ ದೈವೋಕ್ತಿ 24 ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವದೇನಂದರೆ - ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ. 25 ಅಶ್ಶೂರ್ಯರನ್ನು ನನ್ನ ದೇಶದಲ್ಲಿ ಮುರಿದು ನನ್ನ ಬೆಟ್ಟಗಳ ಮೇಲೆ ತುಳಿದುಬಿಡುವೆನು; ಆಗ ಅವರು ಹೂಡಿದ ನೊಗವು ನನ್ನ ಜನರಿಂದ ತೊಲಗಿ ಹೊರಿಸಿದ ಹೊರೆಯು ನನ್ನ ಜನರ ಹೆಗಲಿಗೆ ದೂರವಾಗುವದು. 26 ಇದೇ ಲೋಕದಲ್ಲೆಲ್ಲಾ ನೆರವೇರಬೇಕಾದ ನನ್ನ ಉದ್ದೇಶ, ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ. 27 ಸೇನಾಧೀಶ್ವರನಾದ ಯೆಹೋವನು ಉದ್ದೇಶಮಾಡಿದ್ದಾನೆ, ಅದನ್ನು ಯಾರು ವ್ಯರ್ಥಪಡಿಸುವರು? ಆತನ ಕೈ ಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು? ಎಂಬದೇ. ಫಿಲಿಷ್ಟಿಯದ ವಿಷಯವಾದ ದೈವೋಕ್ತಿ 28 ಅರಸನಾದ ಆಹಾಜನು ಕಾಲವಾದ ವರುಷದಲ್ಲಿ ಈ ದೈವೋಕ್ತಿಯು ಕೇಳ ಬಂತು - 29 ಎಲೈ, ಎಲ್ಲಾ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದುಹೋಯಿತೆಂದು ಉಲ್ಲಾಸಗೊಳ್ಳದಿರಿ; ಹಾವಿನ ಬೀಜದಿಂದ ಮಹಾ ನಾಗವುಂಟಾಗುವದು, ಆ ಬೀಜದ ಸಂತತಿಯು ಹಾರುವ ಅಗ್ನಿಮಯಸರ್ಪವೇ. 30 [ನನ್ನ ಜನರಲ್ಲಿ] ಬಡತನದ ಹಿರಿಯ ಮಕ್ಕಳಿಗೂ ಪೋಷಣೆಯಾಗುವದು, ದಿಕ್ಕಿಲ್ಲದವರೂ ನಿರ್ಭಯವಾಗಿ ಮಲಗಿಕೊಳ್ಳುವರು; ನಿಮ್ಮ ಸಂತಾನವನ್ನೋ ಕ್ಷಾಮದಿಂದ ಸಾಯಿಸುವೆನು, ನಿಮ್ಮಲ್ಲಿ ಉಳಿದವರನ್ನು [ಆ ಸರ್ಪವೇ] ಕೊಲ್ಲುವದು. 31 ಪುರದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಎಲ್ಲಾ ಫಿಲಿಷ್ಟಿಯರೇ, ಕುಂದಿಹೋಗಿರಿ! ಬಡಗಲಿಂದ ಹೊಗೆಯು ಬರುತ್ತಿದೆ. ಆ ವ್ಯೂಹದಲ್ಲಿ ಹಿಂದು ಬೀಳುವವರಿಲ್ಲ. 32 ಹೀಗಿರಲು ಪರಜನಾಂಗದ ರಾಯಭಾರಿಗಳಿಗೆ ಏನುತ್ತರ ಕೊಡಬೇಕಂದರೆ ಯೆಹೋವನು ಚೀಯೋನನ್ನು ಸ್ಥಾಪಿಸಿದ್ದಾನೆ, ಆತನ ಜನರಲ್ಲಿನ ದೀನದರಿದ್ರರು ಅದನ್ನೇ ಆಶ್ರಯಿಸಿಕೊಳ್ಳುವರು ಎಂಬದೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India