Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 13 - ಕನ್ನಡ ಸತ್ಯವೇದವು J.V. (BSI)


ಜನಾಂಗಗಳ ವಿಷಯವಾದ ದೈವೋಕ್ತಿಗಳು ( 13—22 ) ಬಾಬೆಲಿನ ವಿಷಯವಾದ ದೈವೋಕ್ತಿ

1 ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ಕಂಡುಬಂದ ದೈವೋಕ್ತಿ.

2 [ಶತ್ರುಗಳು] ಬಂದು ಪ್ರಭುಗಳ ಪುರದ್ವಾರಗಳಲ್ಲಿ ನುಗ್ಗುವಂತೆ ಬೋಳುಬೆಟ್ಟದ ಮೇಲೆ ಧ್ವಜವೆತ್ತಿರಿ, ಕೂಗಿ ಅವರನ್ನು ಕರೆಯಿರಿ, ಕೈಸನ್ನೆಮಾಡಿರಿ.

3 ನಾನು ಆರಿಸಿಕೊಂಡವರಿಗೆ ಅಪ್ಪಣೆಮಾಡಿದ್ದೇನೆ. ಹೌದು, ಉತ್ಸಾಹದಿಂದ ಮೆರೆಯುವ ಆ ನನ್ನ ಶೂರರು ನನ್ನ ಕೋಪವನ್ನು ತೀರಿಸಲಿ ಎಂದು ಅವರನ್ನು ಕರೆದಿದ್ದೇನೆ.

4 ಆಹಾ, ಬಹು ಜನಸಮೂಹವಿದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ! ಇಗೋ, ಒಟ್ಟಿಗೆ ಕೂಡಿಕೊಂಡ ರಾಜ್ಯ ಜನಾಂಗಗಳ ಆರ್ಭಟ! ಸೇನಾಧೀಶ್ವರನಾದ ಯೆಹೋವನು ಸೈನ್ಯವನ್ನು ಯುದ್ಧಕ್ಕಾಗಿ ಅಣಿಮಾಡುತ್ತಿದ್ದಾನೆ.

5 ಯೆಹೋವನೂ ಆತನ ರೋಷಕ್ಕೆ ಆಯುಧಗಳಾದವರೂ ದೂರ ದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ, ಭೂವಿುಯನ್ನೆಲ್ಲಾ ಹಾಳುಮಾಡುವದಕ್ಕಾಗಿ ಬಂದಿದ್ದಾರೆ.

6 ಅರಚಿಕೊಳ್ಳಿರಿ, ಯೆಹೋವನ ದಿನವು ಸಮೀಪವಾಯಿತು; ಅದು ಸರ್ವಶಕ್ತನಿಂದ ನಾಶರೂಪವಾಗಿ ಬರುವದು.

7 ಅದರಿಂದ ಎಲ್ಲರ ಕೈ ಜೋಲುಬೀಳುವದು, ಎಲ್ಲರ ಹೃದಯ ಕರಗಿ ನೀರಾಗುವದು;

8 ಅವರು ಬೆಚ್ಚಿಬೀಳುವರು, ಯಾತನೆವೇದನೆಗಳು ಅವರನ್ನಾಕ್ರವಿುಸುವವು. ಹೆರುವ ಹೆಂಗಸಿನಂತೆ ಸಂಕಟಪಡುವರು; ಒಬ್ಬರನ್ನೊಬ್ಬರು ನೋಡಿ ವಿಸ್ಮಯಪಡುವರು, ಅವರ ಮುಖಗಳು [ತಲ್ಲಣದಿಂದ] ಬೆಂಕಿಬೆಂಕಿಯಾಗುವವು.

9 ಇಗೋ, ಯೆಹೋವನ ದಿನವು ಬರುತ್ತಿದೆ; ಅದು ಭೂವಿುಯನ್ನು ಹಾಳುಮಾಡಿ ಪಾಪಿಗಳನ್ನು ನಿರ್ಮೂಲಪಡಿಸುವದಕ್ಕೆ [ಆತನ] ಕೋಪೋದ್ರೇಕದಿಂದಲೂ ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವದು.

10 ಆಕಾಶದ ತಾರೆಗಳೂ ನಕ್ಷತ್ರರಾಶಿಗಳೂ ಬೆಳಗವು, ಸೂರ್ಯನು ಮೂಡುತ್ತಲೇ ಕತ್ತಲಾಗುವನು, ಚಂದ್ರನು ಪ್ರಕಾಶಿಸನು.

11 ನಾನು ಲೋಕದವರಿಗೆ ಅವರ ಪಾಪದ ಫಲವನ್ನೂ ದುಷ್ಟರಿಗೆ ಅವರ ದುಷ್ಕೃತ್ಯಗಳ ಫಲವನ್ನೂ ತಿನ್ನಿಸಿ ಸೊಕ್ಕಿದವರ ಸೊಕ್ಕನ್ನು ಅಡಗಿಸಿ ಭಯಂಕರರ ಹೆಮ್ಮೆಯನ್ನು ತಗ್ಗಿಸಿ

12 ಮನುಷ್ಯರನ್ನು ಅಪರಂಜಿಗಿಂತಲೂ ಮಾನವರನ್ನು ಓಫೀರಿನ ಬಂಗಾರಕ್ಕಿಂತಲೂ ಅಪರೂಪವಾಗುವಂತೆ ಮಾಡುವೆನು.

13 ಇದಕ್ಕಾಗಿ ಸೇನಾಧೀಶ್ವರನಾದ ಯೆಹೋವನ ಕೋಪೋದ್ರೇಕವೂ ತೀಕ್ಷ್ಣರೋಷವೂ ಮಸಗುತ್ತಿರುವ ದಿನದಲ್ಲಿ [ಯೆಹೋವನೆಂಬ] ನಾನು ಆಕಾಶಮಂಡಲವನ್ನು ನಡುಗಿಸಿ ಭೂಲೋಕವನ್ನು ಸ್ಥಳದಿಂದ ಕದಲಿಸುವೆನು.

14 ಅಟ್ಟಿದ ಜಿಂಕೆಯಂತೆಯೂ ಯಾರೂ ಕೂಡದ ಕುರಿಗಳ ಹಾಗೂ ಪ್ರತಿಯೊಬ್ಬನು ಸ್ವಜನದ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು.

15 ಸಿಕ್ಕಿಸಿಕ್ಕಿದವರೆಲ್ಲಾ ಇರಿಯಲ್ಪಡುವರು, ಅಟ್ಟಿ ಹಿಡಿಯಲ್ಪಟ್ಟ ಸಕಲರೂ ಕತ್ತಿಗೆ ತುತ್ತಾಗುವರು.

16 ಅವರ ಮಕ್ಕಳನ್ನು ಬಂಡೆಗೆ ಅಪ್ಪಳಿಸಿಬಿಡುವರು, ಅವರ ಮನೆಗಳನ್ನು ಸೂರೆಮಾಡುವರು, ಅವರ ಹೆಂಡರನ್ನು ಕೆಡಿಸುವರು.

17 ಇಗೋ, ಅವರಿಗೆ ವಿರುದ್ಧವಾಗಿ ಮೇದ್ಯರನ್ನು ಎಬ್ಬಿಸುವೆನು; ಇವರು ಬೆಳ್ಳಿಯನ್ನು ಲಕ್ಷಿಸರು, ಬಂಗಾರವನ್ನು ಪ್ರೀತಿಸರು.

18 ಇವರ ಬಿಲ್ಲುಗಳು ಯುವಕರನ್ನು ಚೂರುಚೂರು ಮಾಡುವವು; ಇವರು ಗರ್ಭಫಲವನ್ನು ಕನಿಕರಿಸರು, ಇವರ ಕಣ್ಣು ಮಕ್ಕಳನ್ನೂ ಕರುಣಿಸದು.

19 ರಾಜ್ಯಗಳಿಗೆ ಶಿರೋರತ್ನವೂ ಕಸ್ದೀಯರ ಮಹಿಮೆಗೆ ಭೂಷಣವೂ ಆದ ಬಾಬೆಲಿಗೆ ದೇವರು ಕೆಡವಿದ ಸೊದೋಮ್ ಗೊಮೋರಗಳ ಗತಿಯು ಸಂಭವಿಸುವದು.

20 ಅದು ಎಂದಿಗೂ ನಿವಾಸಸ್ಥಳವಾಗದು, ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲಿರರು; ಯಾವ ಅರಬಿಯನೂ ಗುಡಾರಹಾಕನು; ಕುರುಬರು ಮಂದೆಗಳನ್ನು ತಂಗಿಸರು.

21 ಅದು ಕಾಡುಮೃಗಗಳಿಗೆ ಹಕ್ಕೆಯಾಗುವದು, ಅಲ್ಲಿನ ಮನೆಗಳಲ್ಲಿ ಗೂಬೆಗಳು ತುಂಬಿಕೊಳ್ಳುವವು, ಅಲ್ಲಿ ಉಷ್ಟ್ರಪಕ್ಷಿಗಳು ವಾಸಿಸುವವು, ದೆವ್ವಗಳು ಕುಣಿದಾಡುವವು.

22 ಅರಮನೆಗಳಲ್ಲಿ ತೋಳಗಳೂ, ವಿಲಾಸಮಂದಿರಗಳಲ್ಲಿ ನರಿಗಳೂ ಎದುರುಬದುರಾಗಿ ಕೂಗುವವು; ಅದಕ್ಕೆ ಹೊತ್ತು ಸಮೀಪಿಸಿದೆ, ಇನ್ನು ದಿನ ಹೆಚ್ಚದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು