Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 11 - ಕನ್ನಡ ಸತ್ಯವೇದವು J.V. (BSI)


ಅಭಿಷಿಕ್ತನ ವಿಷಯವಾದ ಎರಡು ದೈವೋಕ್ತಿಗಳು 1. ಆತನ ರಾಜ್ಯದ ಲಕ್ಷಣಗಳು (1 - 9) 2. ಸೆರೆಬಿದ್ದವರು ಹಿಂದಿರುಗುವದು (10-16)

1 ಇಷಯನ ಬುಡದಿಂದ ಒಂದು ಚಿಗುರು ಒಡೆಯುವದು, ಅದರ ಬೇರಿನಿಂದ ಹೊರಟ ತಳಿರು ಫಲಿಸುವದು;

2 ಆ ಅಂಕುರದ ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು;

3 ಯೆಹೋವನ ಭಯವು ಅವನಿಗೆ ಪರಿಮಳಿಸುವದು; ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ;

4 ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು, ಲೋಕದ ದೀನರಿಗೋಸ್ಕರ ಧರ್ಮವಾಗಿ ನಿರ್ಣಯಿಸುವನು; ಲೋಕವನ್ನು ತನ್ನ ಬಾಯ ದಂಡದಿಂದ ದಂಡಿಸುವನು, ದುಷ್ಟರನ್ನು ತನ್ನ ಬಾಯುಸುರಿನಿಂದ ಕೊಲ್ಲುವನು.

5 ಧರ್ಮವೇ ಅವನಿಗೆ ನಡುಕಟ್ಟು, ಪ್ರಾಮಾಣಿಕತೆಯೇ ಸೊಂಟಪಟ್ಟಿ.

6 ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡಿಸುವದು.

7 ಹಸುವು ಕರಡಿಯು ಸಂಗಡ ಮೇಯುವವು; ಅವುಗಳ ಮರಿಗಳು ಜೊತೆಯಾಗಿ ಮಲಗುವವು; ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು.

8 ಮೊಲೆಕೂಸು ನಾಗರಹುತ್ತದ ಮೇಲೆ ಆಡುವದು; ಮೊಲೆಬಿಟ್ಟ ಮಗು ಹಾವಿನ ಬಿಲದ ಮೇಲೆ ಕೈಹಾಕುವದು.

9 ನನ್ನ ಪರಿಶುದ್ಧಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳು ಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂವಿುಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.

10 ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರದವನನ್ನು ಆಶ್ರಯಿಸುವರು; ಅವನ ವಿಶ್ರಮ ಸ್ಥಾನವು ವೈಭವವುಳ್ಳದ್ದಾಗಿರುವದು.

11 ಆ ದಿನದಲ್ಲಿ ಕರ್ತನು ತನ್ನ ಜನಶೇಷವನ್ನು ಬಿಡಿಸಿಕೊಳ್ಳುವದಕ್ಕೆ ಎರಡನೆಯ ಸಾರಿ ಕೈಹಾಕಿ ಅಶ್ಶೂರ, ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್, ಸಮುದ್ರದ ಕರಾವಳಿ, ಈ ಸ್ಥಳಗಳಲ್ಲಿ ಉಳಿದವರನ್ನು ಬರಮಾಡಿಕೊಳ್ಳುವನು.

12 ಅವನು ಜನಾಂಗಗಳಿಗೆ ಧ್ವಜವನ್ನೆತ್ತಿ ಇಸ್ರಾಯೇಲ್ಯರಲ್ಲಿ ಸೆರೆಗೆ ಒಯ್ಯಲ್ಪಟ್ಟವರನ್ನೂ ಯೆಹೂದದಿಂದ ಚದರಿದವರನ್ನೂ ಭೂವಿುಯ ಚತುರ್ದಿಕ್ಕುಗಳಿಂದಲೂ ಕೂಡಿಸಿಕೊಳ್ಳುವನು.

13 ಎಫ್ರಾಯೀವಿುನ ಹೊಟ್ಟೇಕಿಚ್ಚು ತೊಲಗುವದು, ಯೆಹೂದವನ್ನು ವಿರೋಧಿಸುವವರು ನಿರ್ಮೂಲವಾಗುವರು; ಎಫ್ರಾಯೀಮು ಯೆಹೂದವನ್ನು ಮತ್ಸರಿಸದು, ಯೆಹೂದವು ಎಫ್ರಾಯೀಮನ್ನು ವಿರೋಧಿಸದು.

14 ಇವು ಪಡುವಲಲ್ಲಿ ಫಿಲಿಷ್ಟಿಯರ ಭುಜದ ಮೇಲೆ ಎರಗುವವು, ಜೊತೆಯಾಗಿ ಮೂಡಣದವರನ್ನು ಸೂರೆಗೊಳ್ಳುವವು; ಎದೋವಿುನ ಮತ್ತು ಮೋವಾಬಿನ ಮೇಲೆ ಕೈಮಾಡುವವು; ಅಮ್ಮೋನ್ಯರು ಇವುಗಳಿಗೆ ಅಧೀನರಾಗುವರು.

15 ಆಗ ಯೆಹೋವನು ಐಗುಪ್ತ ಸಮುದ್ರದ ಕೊಲ್ಲಿಯನ್ನು ಸಂಪೂರ್ಣವಾಗಿ ನಾಶನಮಾಡುವನು; ಯೂಫ್ರೇಟೀಸ್ ನದಿಯ ಮೇಲೆ ಕೈ ಝಾಡಿಸಿ ತನ್ನ ಬಿಸಿಗಾಳಿಯಿಂದ ಅದನ್ನು ಏಳು ತೊರೆಗಳನ್ನಾಗಿ ಒಡೆದು ಜನರು ಕೆರ ಮೆಟ್ಟಿ ದಾಟುವಂತೆ ಮಾಡುವನು.

16 ಇದಲ್ಲದೆ ಇಸ್ರಾಯೇಲ್ಯರು ಐಗುಪ್ತ ದೇಶದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಮಾರ್ಗವು ಹೇಗೆ ಸಿದ್ಧವಾಯಿತೋ ಹಾಗೆಯೇ ಅಶ್ಶೂರದಿಂದ ತಪ್ಪಿಸಿಕೊಂಡು ಬರುವ ಆತನ ಜನಶೇಷಕ್ಕೆ ರಾಜಮಾರ್ಗವು ಸಿದ್ಧವಾಗುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು