Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 9 - ಕನ್ನಡ ಸತ್ಯವೇದವು J.V. (BSI)

1 ಅಯ್ಯೋ, ನನ್ನ ಶಿರಸ್ಸು ಜಲಮಯವಾಗಿಯೂ ನನ್ನ ನೇತ್ರಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಎಷ್ಟೋ ಲೇಸು! ನನ್ನ ಜನರಲ್ಲಿ ಹತರಾದವರ ನಿವಿುತ್ತ ಹಗಲಿರುಳೂ ಅಳಬೇಕಲ್ಲಾ!

2 ಅಕಟಾ, ದಾರಿಗರು ತಂಗುವ ಗುಡಿಸಲು ಕಾಡಿನಲ್ಲಿ ನನಗೆ ಸಿಕ್ಕಿದರೆ ಎಷ್ಟೋ ಒಳ್ಳೇದು! ಆಗ ನನ್ನ ಜನರನ್ನು ತ್ಯಜಿಸಿ ಹೋಗುತ್ತಿದ್ದೆನು. ಅವರೆಲ್ಲರೂ ಸೂಳೆಗಾರರು, ದ್ರೋಹಿಗಳ ಗುಂಪೇ.

3 ಸುಳ್ಳಾಡುವದಕ್ಕೆ ತಮ್ಮ ನಾಲಿಗೆಯನ್ನು ಬಿಲ್ಲಿನಂತೆ ಬೊಗ್ಗಿಸುತ್ತಾರೆ; ಸತ್ಯಕ್ಕೆ ಪ್ರತಿಕೂಲವಾಗಿ ದೇಶದಲ್ಲಿ ಪ್ರಬಲಿಸಿದ್ದಾರೆ; ಕೇಡಿನಿಂದ ಕೇಡಿಗೆ ಹಾರುತ್ತಾರೆ; ನನ್ನನ್ನು ಅರಿಯರು ಎಂದು ಯೆಹೋವನು ಅನ್ನುತ್ತಾನೆ.

4 ನೀವೆಲ್ಲರೂ ನಿಮ್ಮ ನಿಮ್ಮ ನೆರೆಯವರ ವಿಷಯದಲ್ಲಿ ಎಚ್ಚರಿಕೆಯಾಗಿರಿ, ಯಾರೇ ಆಗಲಿ ತನ್ನ ತಮ್ಮನನ್ನೂ ನಂಬದಿರಲಿ; ಪ್ರತಿಯೊಬ್ಬ ತಮ್ಮನೂ ವಂಚಿಸೇ ವಂಚಿಸುವನು, ಒಬ್ಬೊಬ್ಬ ನೆರೆಯವನೂ ಚಾಡಿಹೇಳುತ್ತಾ ತಿರುಗಾಡುವನು.

5 ಎಲ್ಲರೂ ತಮ್ಮ ತಮ್ಮ ನೆರೆಯವರಿಗೆ ಮೋಸಮಾಡುತ್ತಾರೆ, ಸತ್ಯವನ್ನು ಆಡುವದೇ ಇಲ್ಲ; ತಮ್ಮ ನಾಲಿಗೆಗೆ ಸುಳ್ಳನ್ನು ಕಲಿಸಿದ್ದಾರೆ; ತಮಗೆ ಆಯಾಸವಾಗುವ ಮಟ್ಟಿಗೂ ಕೆಡುಕನ್ನು ಮಾಡುತ್ತಿದ್ದಾರೆ.

6 ನಿಮ್ಮ ನಿವಾಸವು ಮೋಸದೊಳಗೇ ಇದೆ; ಅಯ್ಯೋ, ಮೋಸಗಾರರಾಗಿರುವದರಿಂದ ನನ್ನನ್ನು ಅರಿಯಲೊಲ್ಲರು ಎಂದು ಯೆಹೋವನು ಅನ್ನುತ್ತಾನೆ.

7 ಹೀಗಿರಲು ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ನಾನು ನನ್ನ ಜನರ ದ್ರೋಹಕ್ಕೆ ಏನು ಮಾಡಲಿ? ಅವರನ್ನು ಪುಟಕ್ಕೆ ಹಾಕಿ ಶೋಧಿಸುವೆನು.

8 ಅವರ ನಾಲಿಗೆಯು ಕೊಲ್ಲುವ ಬಾಣವಾಗಿದೆ, ಅದು ಸುಳ್ಳನ್ನೇ ಆಡುತ್ತದೆ; ಒಬ್ಬನು ತನ್ನ ನೆರೆಯವನಿಗೆ ಬಾಯಿಂದ ಶುಭವಾಗಲಿ ಎಂದು ಹೇಳಿದರೂ ತನ್ನ ಹೃದಯದಲ್ಲಿ ಅವನಿಗಾಗಿ ಹೊಂಚುಹಾಕುತ್ತಾನೆ.

9 ನಾನು ಅವರನ್ನು ಇವುಗಳಿಗಾಗಿ ದಂಡಿಸಬಾರದೋ? ಇಂಥಾ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ?

10 ನಾನು ಪರ್ವತಗಳಿಗಾಗಿ ಅತ್ತು ಗೋಳಾಡುವೆನು, ಅಡವಿಯ ಕಾವಲುಗಳಿಗಾಗಿ ಶೋಕಗೀತವನ್ನು ಹಾಡುವೆನು; ಅವು ಸುಟ್ಟುಹೋಗಿವೆ, ಯಾರೂ ಹಾದುಹೋಗರು, ದನದ ಸದ್ದು ಕಿವಿಗೆ ಬೀಳದು, ಮೃಗಪಕ್ಷಿಗಳು ತೊಲಗಿಹೋಗಿವೆ.

11 ನಾನು ಯೆರೂಸಲೇಮನ್ನು ಹಾಳುದಿಬ್ಬಗಳನ್ನಾಗಿಯೂ ನರಿಗಳ ಹಕ್ಕೆಯನ್ನಾಗಿಯೂ ಗೈದು ಯೆಹೂದದ ಪಟ್ಟಣಗಳನ್ನು ಜನವಿಲ್ಲದ ಬೀಳುಭೂವಿುಯನ್ನಾಗಿ ಮಾಡುವೆನು [ಎಂದು ಯೆಹೋವನು ಹೇಳಿದ್ದಾನಲ್ಲಾ].

12 ಯಾರೂ ದಾಟದ ಹಾಗೆ ದೇಶವು ಹಾಳಾಗಿ ಕಾಡಿನಂತೆ ಸುಟ್ಟುಹೋದದ್ದು ಏಕೆ? ಈ ವಿಚಾರವನ್ನು ಗ್ರಹಿಸತಕ್ಕ ಜ್ಞಾನಿಯು ಯಾರು? ಅದನ್ನು ಯೆಹೋವನ ಬಾಯಿಂದಲೇ ಕೇಳಿ ತಿಳಿಸಬಲ್ಲವನು ಯಾರು?

13 ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಹೀಗನ್ನುತ್ತಾನೆ - ನಾನು ಇವರ ಕಣ್ಣೆದುರಿಗೇ ಇಟ್ಟಿರುವ ಧರ್ಮೋಪದೇಶವನ್ನು ಇವರು ಲಕ್ಷ್ಯಕ್ಕೆ ತಾರದೆ ನನ್ನ ಮಾತನ್ನು ಕೇಳದೆ ಆ ಧರ್ಮಮಾರ್ಗದಲ್ಲಿ ನಡೆಯದೆ

14 ಸ್ವಂತ ಹೃದಯದ ಹಟದಂತೆ ನಡೆದು ತಮ್ಮ ಪಿತೃಗಳು ಕಲಿಸಿಕೊಟ್ಟ ಹಾಗೆ ಬಾಳ್ ದೇವತೆಗಳನ್ನು ಹಿಂಬಾಲಿಸಿದ್ದರಿಂದ

15 ಆಹಾ, ನಾನು ಈ ಜನರಿಗೆ ಕಹಿಯಾದ ಆಹಾರಪಾನಗಳನ್ನು ಕೊಡುವೆನು.

16 ಇವರಿಗಾಗಲಿ ಇವರ ಪಿತೃಗಳಿಗಾಗಲಿ ಗೊತ್ತಿಲ್ಲದ ಜನಾಂಗಗಳೊಳಗೆ ಇವರನ್ನು ಚದರಿಸಿಬಿಟ್ಟು ಇವರು ನಿರ್ಮೂಲವಾಗುವ ತನಕ ಖಡ್ಗವನ್ನು ಇವರ ಹಿಂದೆ ಕಳುಹಿಸುವೆನು.

17 ಸೇನಾಧೀಶ್ವರನಾದ ಯೆಹೋವನ ಮಾತನ್ನು ಕೇಳಿರಿ - [ನಿಮ್ಮ ಸಂಗತಿಯನ್ನು] ಯೋಚಿಸಿರಿ; ರೋದನಗಾಯಕಿಯರನ್ನು ಕರೆಯಿಸಿರಿ, ಅವರು ಬರಲಿ; ಜಾಣೆಯರನ್ನು ಕರೆಯ ಕಳುಹಿಸಿರಿ, ಅವರು ಸೇರಲಿ;

18 ಅವರು ತ್ವರೆಪಟ್ಟು ನಮ್ಮ ನೇತ್ರಗಳಿಂದ ಧಾರೆ ಹೊರಡುವಂತೆಯೂ ನಮ್ಮ ರೆಪ್ಪೆಗಳೊಳಗಿಂದ ನೀರುಕ್ಕುವಂತೆಯೂ ನಮಗೋಸ್ಕರ ಗೋಳೆತ್ತಲಿ.

19 ಅಯ್ಯೋ, ಹಾಳಾದೆವು, ಭಂಗಪಟ್ಟೆವು; ನಾವು ನಮ್ಮ ದೇಶವನ್ನು ಬಿಟ್ಟೆವಲ್ಲಾ, [ಶತ್ರುಗಳು] ನಮ್ಮ ಮನೆಗಳನ್ನು ಕೆಡವಿದ್ದಾರಲ್ಲಾ ಎಂಬ ಪ್ರಲಾಪಧ್ವನಿಯು ಚೀಯೋನಿನೊಳಗಿಂದ ಕೇಳಿಸುತ್ತದೆ.

20 ಸ್ತ್ರೀಯರೇ, ಯೆಹೋವನ ನುಡಿಯನ್ನು ಕೇಳಿ ಆತನ ಬಾಯಿಂದ ಹೊರಟ ಮಾತಿಗೆ ಕಿವಿದೆರೆಯಿರಿ; ನಿಮ್ಮ ಹೆಣ್ಣುಮಕ್ಕಳಿಗೂ ಗೋಳಾಟವನ್ನು ಕಲಿಸಿರಿ, ಪ್ರತಿಯೊಬ್ಬಳು ತನ್ನ ನೆರೆಯವಳಿಗೂ ಶೋಕಗೀತವನ್ನು ಅಭ್ಯಾಸಮಾಡಿಸಲಿ;

21 ಏಕಂದರೆ ಬೀದಿಗಳಲ್ಲಿ ಮಕ್ಕಳೂ ಚೌಕಗಳಲ್ಲಿ ಯುವಕರೂ ಇಲ್ಲದ ಹಾಗೆ ಮೃತ್ಯುವು ನಮ್ಮ ಕಿಟಕಿಗಳ ಮೇಲೆ ಹತ್ತಿ ನಮ್ಮ ಉಪ್ಪರಿಗೆಗಳೊಳಗೆ ನುಗ್ಗಿದೆ.

22 ಯೆಹೋವನ ಈ ಮಾತನ್ನು ಸಾರು ಎಂದು ನನಗೆ ಅಪ್ಪಣೆಯಾಯಿತು - ಜನರ ಹೆಣಗಳು ನೆಲದ ಮೇಲೆ ಬಿದ್ದು ಗೊಬ್ಬರವಾಗುವವು; ಅವು ಹೊಲಕೊಯ್ಯುವವನ ಹಿಂದೆ ಯಾರೂ ಕೂಡಿಸದೆ ಬಿದ್ದಿರುವ ಅರಿಗಳಂತಿರುವವು.

23 ಯೆಹೋವನು ಹೀಗನ್ನುತ್ತಾನೆ - ಜ್ಞಾನಿಯು ತನ್ನ ಜ್ಞಾನಕ್ಕೆ, ಪರಾಕ್ರವಿುಯು ತನ್ನ ಪರಾಕ್ರಮಕ್ಕೆ, ಐಶ್ವರ್ಯವಂತನು ತನ್ನ ಐಶ್ವರ್ಯಕ್ಕೆ ಹೆಚ್ಚಳಪಡದಿರಲಿ;

24 ಹೆಚ್ಚಳಪಡುವವನು ತಾನು ನನ್ನನ್ನು ತಿಳಿದು ನಾನು ಲೋಕದಲ್ಲಿ ಪ್ರೀತಿನೀತಿನ್ಯಾಯಗಳನ್ನು ತೋರ್ಪಡಿಸುವ ಯೆಹೋವನಾಗಿರುವೆನು ಎಂದು ಗ್ರಹಿಸಿಕೊಂಡಿದ್ದೇನೆ ಎಂಬದಕ್ಕೇ ಹೆಚ್ಚಳಪಡಲಿ; ಪ್ರೀತಿನೀತಿನ್ಯಾಯಗಳೇ ನನಗೆ ಆನಂದವೆಂದು ಯೆಹೋವನು ಅನ್ನುತ್ತಾನೆ.

25 ಆಹಾ, ಐಗುಪ್ತ್ಯರು ಯೆಹೂದ್ಯರು ಎದೋಮ್ಯರು ಅಮ್ಮೋನ್ಯರು ಮೋವಾಬ್ಯರು ಚಂಡಿಕೆಬಿಟ್ಟುಕೊಂಡಿರುವ ಅರಣ್ಯನಿವಾಸಿಗಳು, ಅಂತು ಸುನ್ನತಿಯುಳ್ಳವರಾದರೂ ಸುನ್ನತಿಯಿಲ್ಲದ ಇವರೆಲ್ಲರನ್ನೂ ನಾನು ದಂಡಿಸುವ ದಿನಗಳು ಬರುತ್ತವೆ;

26 ಏಕಂದರೆ ಸಕಲಜನಾಂಗಗಳವರೂ ಸುನ್ನತಿಹೀನರು, ಎಲ್ಲಾ ಇಸ್ರಾಯೇಲ್ ವಂಶದವರೂ ಹೃದಯ ಸುನ್ನತಿಯಿಲ್ಲದವರು ಎಂದು ಯೆಹೋವನು ಅನ್ನುತ್ತಾನೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು