ಯೆರೆಮೀಯ 8 - ಕನ್ನಡ ಸತ್ಯವೇದವು J.V. (BSI)1 ಯೆಹೋವನು ಹೀಗನ್ನುತ್ತಾನೆ - ಆ ಕಾಲದಲ್ಲಿ ಯೆಹೂದದ ಅರಸರು, ಅಧಿಪತಿಗಳು, ಯಾಜಕರು, ಪ್ರವಾದಿಗಳು, ಯೆರೂಸಲೇವಿುನ ನಿವಾಸಿಗಳು, ಇವರೆಲ್ಲರ ಎಲುಬುಗಳನ್ನು ಗೋರಿಗಳೊಳಗಿಂದ ತೆಗೆದು 2 ಇವರು ಪ್ರೀತಿಸಿ ಸೇವಿಸಿ ಹಿಂಬಾಲಿಸಿ ಆಶ್ರಯಿಸಿ ಪೂಜಿಸಿದ ಸೂರ್ಯಚಂದ್ರತಾರಾಗಣಗಳ ಎದುರಿಗೆ ಹರಡಿಬಿಡುವರು; ಅವುಗಳನ್ನು ಯಾರೂ ಕೂಡಿಸಿ ಹೂಣಿಡುವದಿಲ್ಲ; ಅವು ಭೂವಿುಯ ಮೇಲೆ ಗೊಬ್ಬರವಾಗುವವು. 3 ನಾನು ಯಾವಾವ ಸ್ಥಳಗಳಿಗೆ ಈ ದುರ್ವಂಶದವರನ್ನು ಅಟ್ಟಿಬಿಟ್ಟಿದ್ದೇನೋ ಅಲ್ಲೆಲ್ಲಾ ಉಳಿದವರೆಲ್ಲರೂ ಜೀವಿಸುವದಕ್ಕಿಂತ ಮರಣವು ಲೇಸೆಂದು ಅದನ್ನು ಬಯಸುವರು. ಇದು ಯೆಹೋವನ ನುಡಿ. ಮೂರ್ಖರಾದ ಯೆಹೂದ್ಯರ ದುಷ್ಟತನವೂ ಅದರಿಂದಾಗುವ ಬಲುಭಂಗವೂ 4 ಮತ್ತು ನೀನು ಅವರಿಗೆ ಹೀಗೆ ಹೇಳಬೇಕು - ಯೆಹೋವನು ಇಂತೆನ್ನುತ್ತಾನೆ - ಬಿದ್ದವರು ಏಳದಿರುವರೋ? ಬಿಟ್ಟು ಹೋದವನು ತಿರಿಗಿ ಬರುವದಿಲ್ಲವೋ? 5 ಈ ಯೆರೂಸಲೇವಿುನವರು ಎಂದಿಗೂ ಹಿಂದಿರುಗದಂತೆ ಬಿಟ್ಟುಹೋದದ್ದೇಕೆ? ಮೋಸವನ್ನೇ ಪಟ್ಟಾಗಿ ಹಿಡಿದಿದ್ದಾರೆ, ತಿರಿಗಿ ಬರಲೊಲ್ಲರು. 6 ನಾನು ಕಿವಿಗೊಟ್ಟು ಕೇಳುವಾಗ ಅವರು ಯಥಾರ್ಥವಾಗಿ ಮಾತಾಡಿಕೊಳ್ಳುತ್ತಿರಲಿಲ್ಲ; ಯಾವನೂ ತನ್ನ ಅಧರ್ಮದ ವಿಷಯವಾಗಿ ಪಶ್ಚಾತ್ತಾಪಪಟ್ಟು - ಆಹಾ, ನಾನು ಎಂಥಾ ಕೆಲಸ ಮಾಡಿದೆ ಎಂದು ಕೊಳ್ಳುತ್ತಿರಲಿಲ್ಲ; ಯುದ್ಧದಲ್ಲಿ ರಭಸವಾಗಿ ಓಡುವ ಕುದುರೆಯಂತೆ ಪ್ರತಿಯೊಬ್ಬನೂ ತನ್ನ ತನ್ನ ಮಾರ್ಗಕ್ಕೇ ತ್ವರೆಪಡುತ್ತಾನೆ. 7 ಆಕಾಶದಲ್ಲಿ ಹಾರುವ ಬಕವೂ ತನ್ನ ನಿಯವಿುತ ಕಾಲಗಳನ್ನು ತಿಳಿದುಕೊಂಡಿದೆ, ಬೆಳವಕ್ಕಿಯೂ ಬಾನಕ್ಕಿಯೂ ಕೊಕ್ಕರೆಯೂ ತಮ್ಮ ಗಮನಾಗಮನ ಸಮಯಗಳನ್ನು ಗಮನಿಸುತ್ತವೆ; ನನ್ನ ಜನರಾದರೋ ಯೆಹೋವನ ನಿಯಮವನ್ನು ತಿಳಿಯರು. 8 ಹೀಗಿರಲು ನಾವು ಜ್ಞಾನಿಗಳು, ಯೆಹೋವನ ಧರ್ಮಶಾಸ್ತ್ರವು ನಮ್ಮಲ್ಲಿಯೇ ಇದೆ ಎಂದು ನೀವು ಅಂದುಕೊಳ್ಳುವದು ಹೇಗೆ? ಆಹಾ, ಶಾಸ್ತ್ರಿಗಳ ಸುಳ್ಳು ಲೇಖನಿಯು ಅದನ್ನು ಸುಳ್ಳನ್ನಾಗಿ ಮಾಡಿದೆ. 9 ಜ್ಞಾನಿಗಳು ಆಶಾಭಂಗಪಟ್ಟು ಬೆಬ್ಬರಬಿದ್ದು ಸಿಕ್ಕಿಕೊಂಡಿದ್ದಾರೆ; ಇಗೋ, ಯೆಹೋವನ ಮಾತನ್ನು ನಿರಾಕರಿಸಿದರು; 10 ಅವರ ಜ್ಞಾನವು ಎಷ್ಟರದು? ಆದದರಿಂದ ನಾನು ಇವರ ಹೆಂಡರನ್ನು ಅನ್ಯರಿಗೂ ಇವರ ಹೊಲಗದ್ದೆಗಳನ್ನು ಆಕ್ರವಿುಸುವವರಿಗೂ ಕೊಟ್ಟುಬಿಡುವೆನು; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಬಾಚಿಕೊಳ್ಳುತ್ತಲೇ ಇದ್ದಾರೆ; ಪ್ರವಾದಿಗಳು ಮೊದಲಾಗಿ ಯಾಜಕರವರೆಗೆ ಸಕಲರೂ ಮೋಸಮಾಡುತ್ತಾರೆ. 11 ಮೇಲಾಗದಿದ್ದರೂ ಮೇಲು ಮೇಲು ಎಂದು ಹೇಳಿ ನನ್ನ ಪ್ರಜೆಯೆಂಬಾಕೆಯ ಗಾಯವನ್ನು ಮೇಲೆ ಮೇಲೆ ವಾಸಿಮಾಡಿದ್ದಾರೆ. 12 ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾದರೂ ಎಳ್ಳಷ್ಟೂ ನಾಚಿಕೆಪಡಲಿಲ್ಲ, ಲಜ್ಜೆಯ ಗಂಧವನ್ನೂ ತಿಳಿಯಲಿಲ್ಲ; ಆದಕಾರಣ ನಾನು ದಂಡಿಸುವ ಸಮಯದಲ್ಲಿ ಅವರು ಮುಗ್ಗರಿಸುವರು, ಬೀಳುವವರ ಸಂಗಡ ಬಿದ್ದೇಹೋಗುವರು ಎಂದು ಯೆಹೋವನು ಅನ್ನುತ್ತಾನೆ. 13 ನಾನು ಇವರನ್ನು ನಿರ್ಮೂಲಮಾಡಿ ಕೊಚ್ಚಿಬಿಡುವೆನು; ದ್ರಾಕ್ಷೆಯ ಬಳ್ಳಿಯಲ್ಲಿಯೂ ಅಂಜೂರದ ಮರದಲ್ಲಿಯೂ ಹಣ್ಣಿರುವದಿಲ್ಲ, ಎಲೆಯು ಬಾಡುವದು; ನಾನು ಹಾಳು ಮಾಡುವವರನ್ನು ಅವರಿಗೆ ನೇವಿುಸುವೆನು. ಇದು ಯೆಹೋವನ ನುಡಿ. 14 [ಆ ಕಾಲದಲ್ಲಿ ಜನರು ಹೀಗನ್ನುವರು - ] ಸುಮ್ಮನೆ ಕೂತಿರುವದೇಕೆ? ಕೂಡಿಕೊಳ್ಳಿರಿ, ಕೋಟೆಕೊತ್ತಲಗಳ ಪಟ್ಟಣಗಳಲ್ಲಿ ಸೇರಿ ಅಲ್ಲೇ ನಾಶವಾಗೋಣ; ನಾವು ನಮ್ಮ ದೇವರಾದ ಯೆಹೋವನಿಗೆ ಪಾಪಮಾಡಿದ್ದರಿಂದ ಆತನು ನಮ್ಮನ್ನು ನಾಶನಕ್ಕೆ ಗುರಿಮಾಡಿ ಕಹಿಯಾದ ನೀರನ್ನು ಕುಡಿಸಿದ್ದಾನಷ್ಟೆ. 15 ನಾವು ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ; ಕ್ಷೇಮಕಾಲವನ್ನು ಎದುರುನೋಡಿದೆವು, ಹಾ, ಅಂಜಿಕೆಯೇ! 16 ವೈರಿಯ ಕುದುರೆಗಳ ಬುಸುಗಾಟವು ದಾನಿನಿಂದ ಕೇಳಬರುತ್ತದೆ; ತುರಂಗಗಳ ಕೆನೆತದ ಶಬ್ದಕ್ಕೆ ದೇಶವೆಲ್ಲಾ ಕಂಪಿಸುತ್ತದೆ; ಶತ್ರುಗಳು ಬಂದರು, ಸೀಮೆಯನ್ನೂ ಅದರಲ್ಲಿರುವ ಸಮಸ್ತವನ್ನೂ ಪಟ್ಟಣವನ್ನೂ ಪಟ್ಟಣದ ನಿವಾಸಿಗಳನ್ನೂ ನುಂಗಿಬಿಟ್ಟರು. 17 ಯೆಹೋವನು - ಇಗೋ, ನಾನು ನಿಮ್ಮ ಮೇಲೆ ಹಾವುಗಳನ್ನು, ಮಂತ್ರಕ್ಕೆ ಅಧೀನವಾಗದ ನಾಗಗಳನ್ನು ಬಿಡುವೆನು; ಅವು ನಿಮ್ಮನ್ನು ಕಚ್ಚುವವು ಎಂದು ನುಡಿದಿದ್ದಾನೆ. 18 ಅಯ್ಯೋ, ನನ್ನ ದುಃಖಕ್ಕೆ ಬೆಳಗೆಂದಿಗಾದೀತು? ನನ್ನ ಹೃದಯವು ನನ್ನೊಳಗೆ ಕುಂದಿಹೋಗಿದೆ. 19 ಆಹಾ, ನನ್ನ ಪ್ರಜೆಯೆಂಬಾಕೆಯು - ಯೆಹೋವನು ಚೀಯೋನಿನಲ್ಲಿಲ್ಲವೋ, ಅದರ ರಾಜನು ಅಲ್ಲಿ ವಾಸವಾಗಿಲ್ಲವೋ ಎಂದು ಮೊರೆಯಿಡುವ ಶಬ್ದವು ದೂರದೇಶದಿಂದ ಕೇಳಿಸುತ್ತದೆ. [ಅದಕ್ಕೆ ಯೆಹೋವನು - ] ಇವರು ತಮ್ಮ ವಿಗ್ರಹಗಳಿಂದಲೂ ಅನ್ಯದೇವತೆಗಳ ಶೂನ್ಯರೂಪಗಳಿಂದಲೂ ಏಕೆ ನನ್ನನ್ನು ಕೆಣಕಿದ್ದಾರೆ [ಅನ್ನುತ್ತಾನೆ]. 20 ಸುಗ್ಗಿ ತೀರಿತು, ಹಣ್ಣಿನ ಕಾಲ ಮುಗಿಯಿತು, ನಮಗೆ ಉದ್ಧಾರವೇ ಆಗಲಿಲ್ಲ. 21 ನನ್ನ ಪ್ರಜೆಯೆಂಬಾಕೆಯ ಭಂಗದಿಂದ ನನಗೆ ಭಂಗವಾಯಿತು, ನಾನು ಕರ್ರಗಾದೆನು, ಭಯವು ನನ್ನನ್ನು ಹಿಡಿದಿದೆ. 22 ಗಿಲ್ಯಾದಿನಲ್ಲಿ ಔಷಧವಿಲ್ಲವೋ? ಅಲ್ಲಿ ವೈದ್ಯನು ಸಿಕ್ಕನೋ? ನನ್ನ ಪ್ರಜೆಯೆಂಬಾಕೆಗೆ ಏಕೆ ಗುಣವಾಗಲಿಲ್ಲ? |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India