ಯೆರೆಮೀಯ 51 - ಕನ್ನಡ ಸತ್ಯವೇದವು J.V. (BSI)1 ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಬಾಬೆಲಿನ ಮೇಲೂ ಲೇಬ್‍ಕಾಮೈ ದೇಶದವರ ಮೇಲೂ ನಾಶನದ ಗಾಳಿಯನ್ನು ಬೀಸಮಾಡುವೆನು. 2 ಅನ್ಯಜನರನ್ನು ಬಾಬೆಲಿಗೆ ಕಳುಹಿಸುವೆನು, ಅವರು ಅದನ್ನು ತೂರುವರು, ಆ ದೇಶವನ್ನು ಬಟ್ಟಬರಿದು ಮಾಡುವರು; ನಿಯವಿುತ ವಿಪತ್ಕಾಲದಲ್ಲಿ ಅದನ್ನು ಮುತ್ತುವರಷ್ಟೆ. 3 ಧನುರ್ಧಾರಿಗಳಿಗೂ ಕವಚ ಸನ್ನದ್ಧರಿಗೂ ಬಿಲ್ಲುಗಾರರು ಬಾಣವನ್ನೆಸೆಯಲಿ. ಬಾಬೆಲಿನ ಯುವಕರನ್ನು ಉಳಿಸದಿರಿ; ಅವರ ಸೈನ್ಯವನ್ನೆಲ್ಲಾ ನಿಶ್ಶೇಷಮಾಡಿರಿ. 4 ಕಸ್ದೀಯರು ತಮ್ಮ ದೇಶದಲ್ಲಿ ಹತರಾಗಿ ಬೀಳುವರು, ಬಾಬೆಲಿನ ಬೀದಿಗಳಲ್ಲಿ ಇರಿಯಲ್ಪಟ್ಟು ಮಣ್ಣುಪಾಲಾಗುವರು. 5 ಇಸ್ರಾಯೇಲ್ಯರ ಸದಮಲಸ್ವಾವಿುಗೆ ಆತನ ಜನರು ಮಾಡಿದ ಅಪರಾಧವು ತಮ್ಮ ದೇಶದಲ್ಲಿ ತುಂಬಿದ್ದರೂ ಸೇನಾಧೀಶ್ವರನಾದ ಯೆಹೋವನೆಂಬ ದೇವರು ಇಸ್ರಾಯೇಲನ್ನಾಗಲಿ ಯೆಹೂದವನ್ನಾಗಲಿ ತ್ಯಜಿಸಲಿಲ್ಲ. 6 ನೀವು ಬಾಬೆಲಿನೊಳಗಿಂದ ಓಡಿಹೋಗಿ ನಿಮ್ಮ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿರಿ; ಅದಕ್ಕೆ ಉಂಟಾಗುವ ದಂಡನೆಗೆ ಒಳಗಾಗಬೇಡಿರಿ; ಯೆಹೋವನು ಮುಯ್ಯಿತೀರಿಸುವ ಕಾಲ ಬಂದಿದೆ; ಆತನು ಬಾಬೆಲಿಗೆ ಪ್ರತೀಕಾರಮಾಡುವನು. 7 ಬಾಬೆಲು ಯೆಹೋವನ ಕೈಯಲ್ಲಿನ ಹೊನ್ನಿನ ಪಾತ್ರೆ; ಲೋಕದವರೆಲ್ಲರೂ ಅದರಲ್ಲಿ ಕುಡಿದು ಮತ್ತರಾದರು; ಜನಾಂಗಗಳು ಅದರಲ್ಲಿನ ದ್ರಾಕ್ಷಾರಸವನ್ನು ಕುಡಿದು ಹುಚ್ಚಾದವು. 8 ಬಾಬೆಲ್ ತಟ್ಟನೆ ಬಿದ್ದು ಹಾಳಾಯಿತು! ಅದಕ್ಕಾಗಿ ಅರಿಚಿರಿ; ಅದರ ನೋವನ್ನು ನೀಗಿಸುವದಕ್ಕೆ ಔಷಧವನ್ನು ಸಂಪಾದಿಸಿರಿ, ಗುಣವಾದೀತು. 9 ಬಾಬೆಲನ್ನು ಸ್ವಸ್ಥಮಾಡುವದಕ್ಕೆ ನಾವು ಪ್ರಯತ್ನಪಟ್ಟರೂ ಅದು ಸ್ವಸ್ಥವಾಗಲಿಲ್ಲ; ಬಾಬೆಲನ್ನು ಬಿಟ್ಟು ನಾವೆಲ್ಲರೂ ನಮ್ಮ ನಮ್ಮ ದೇಶಗಳಿಗೆ ಹೋಗೋಣ; ಅದು ಹೊಂದಬೇಕಾದ ದಂಡನೆಯು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ, ಹೌದು, ಗಗನದವರೆಗೂ ಬೆಳೆದಿದೆ. 10 ಯೆಹೋವನು ನಮ್ಮ ನ್ಯಾಯವನ್ನು ವ್ಯಕ್ತಪಡಿಸಿದ್ದಾನೆ; ನಮ್ಮ ದೇವರಾದ ಯೆಹೋವನು ನಡಿಸಿದ ಕಾರ್ಯವನ್ನು ಚೀಯೋನಿನಲ್ಲಿ ಪ್ರಕಟಿಸೋಣ ಬನ್ನಿರಿ! 11 ಯೆಹೋವನು ಬಾಬೆಲನ್ನು ಹಾಳುಮಾಡಬೇಕೆಂದು ಉದ್ದೇಶಿಸಿ ಮೇದ್ಯರ ಅರಸರು ಅದನ್ನು ನಾಶಮಾಡುವಂತೆ ಅವರ ಮನಸ್ಸನ್ನು ಪ್ರೇರಿಸಿದ್ದಾನೆ; ಆ ನಾಶನವು ಯೆಹೋವನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತೀಕಾರವೇ; [ಮೇದ್ಯರೇ,] ಬಾಣಗಳನ್ನು ಮಸೆಯಿರಿ, ಸನ್ನದ್ಧರಾಗಿರಿ! 12 ಬಾಬೆಲ್ ಕೋಟೆಗೆ ಎದುರಾಗಿ ಧ್ವಜವೆತ್ತಿರಿ, ಠಾಣ್ಯವನ್ನು ಬಲಪಡಿಸಿರಿ, ಕಾವಲುಗಾರರನ್ನು ನಿಲ್ಲಿಸಿರಿ, ಹೊಂಚುಗಾರರನ್ನು ಗೊತ್ತುಮಾಡಿರಿ; ಯೆಹೋವನು ಬಾಬೆಲಿನವರ ವಿಷಯದಲ್ಲಿ ನುಡಿದದ್ದನ್ನು ಚಿತ್ತಕ್ಕೆ ತಂದು ನೆರವೇರಿಸಿದ್ದಾನೆ. 13 ಆಹಾ, ಬಹುಜಲಮಧ್ಯನಿವಾಸಿನಿಯಾದ ನಗರಿಯೇ, ಧನಭರಿತ ಪುರಿಯೇ, ನಿನ್ನ ಅಂತ್ಯವು ಬಂದಿದೆ, ನೀನು ಸೂರೆಮಾಡಿದ್ದು ಸಾಕು. 14 ಸೇನಾಧೀಶ್ವರನಾದ ಯೆಹೋವನು ತನ್ನ ಮೇಲೆ ಆಣೆಯಿಟ್ಟು - ಖಂಡಿತವಾಗಿ ನಾನು ನಿನ್ನನ್ನು ವಿುಡಿತೆಗಳಷ್ಟು ಅಸಂಖ್ಯಜನರಿಂದ ತುಂಬಿಸುವೆನು, ಅವರು ನಿನ್ನ ಮೇಲೆ ಆರ್ಭಟಿಸುವರು. 15 ಆತನು ತನ್ನ ಶಕ್ತಿಯಿಂದ ಭೂವಿುಯನ್ನು ನಿರ್ಮಿಸಿ ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ ತನ್ನ ವಿವೇಕದಿಂದ ಆಕಾಶಮಂಡಲವನ್ನು ಹರಡಿದ್ದಾನೆ; 16 ಆತನ ಗರ್ಜನೆಗೆ ಆಕಾಶದಲ್ಲಿ ನೀರು ಮೊರೋ ಎನ್ನುತ್ತದೆ; ಆತನು ಭೂವಿುಯ ಕಟ್ಟಕಡೆಯಿಂದ ಮೋಡಗಳನ್ನು ಏರಮಾಡುತ್ತಾನೆ; ಮಳೆಗೋಸ್ಕರ ವಿುಂಚನ್ನು ಹೊಳೆಯಮಾಡುತ್ತಾನೆ; ತನ್ನ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾನೆ. 17 ಎಲ್ಲರೂ ತಿಳುವಳಿಕೆಯಿಲ್ಲದೆ ಪಶುಪ್ರಾಯರಾಗಿದ್ದಾರೆ; ತಾನು ಕೆತ್ತಿದ ವಿಗ್ರಹದ ನಿವಿುತ್ತ ಪ್ರತಿಯೊಬ್ಬ ಅಕ್ಕಸಾಲಿಗನೂ ಅವಮಾನಕ್ಕೆ ಗುರಿಯಾಗುವನು; ಅವನು ಎರಕಹೊಯ್ದ ಪುತ್ತಳಿಯು ಸುಳ್ಳು, ಅವುಗಳಲ್ಲಿ ಶ್ವಾಸವೇ ಇಲ್ಲ. 18 ಅವು ವ್ಯರ್ಥ, ಹಾಸ್ಯಾಸ್ಪದವಾದ ಕೆಲಸ; ದಂಡನೆಯಾಗುವಾಗ ಅಳಿದುಹೋಗುವವು. 19 ಯಾಕೋಬ್ಯರ ಸ್ವಾಸ್ತ್ಯವಾದಾತನು ಅವುಗಳ ಹಾಗಲ್ಲ; ಆತನು ಸಮಸ್ತವನ್ನೂ ನಿರ್ಮಿಸಿದವನು; ಇಸ್ರಾಯೇಲು ಆತನ ಸ್ವಾಸ್ತ್ಯವಾದ ವಂಶ; ಸೇನಾಧೀಶ್ವರನಾದ ಯೆಹೋವನೆಂಬದು ಆತನ ನಾಮಧೇಯ. 20 [ಬಾಬೆಲೇ,] ನೀನು ನನಗೆ ಗದೆಯು, ಶಸ್ತ್ರವು, ನಾನು ನಿನ್ನಿಂದ ಜನಾಂಗಗಳನ್ನು ಒಡೆದುಬಿಡುತ್ತೇನೆ; 21 ನಿನ್ನಿಂದ ರಾಜ್ಯಗಳನ್ನು ಅಳಿಸುತ್ತೇನೆ; ನಿನ್ನಿಂದ ಕುದುರೆಯನ್ನೂ ಸವಾರನನ್ನೂ ಒಡೆದುಬಿಡುತ್ತೇನೆ; ನಿನ್ನಿಂದ ರಥವನ್ನೂ ಸಾರಥಿಯನ್ನೂ ಒಡೆದುಬಿಡುತ್ತೇನೆ; ನಿನ್ನಿಂದ ಸ್ತ್ರೀಪುರುಷರನ್ನು ಒಡೆದುಬಿಡುತ್ತೇನೆ; 22 ನಿನ್ನಿಂದ ಬಾಲವೃದ್ಧರನ್ನು ಒಡೆದುಬಿಡುತ್ತೇನೆ; ನಿನ್ನಿಂದ ಯುವತೀ ಯುವಕರನ್ನು ಒಡೆದುಬಿಡುತ್ತೇನೆ; 23 ನಿನ್ನಿಂದ ಕುರುಬರನ್ನೂ ಹಿಂಡನ್ನೂ ಒಡೆದುಬಿಡುತ್ತೇನೆ; ನಿನ್ನಿಂದ ರೈತನನ್ನೂ ನೊಗದ ಎತ್ತುಗಳನ್ನೂ ಒಡೆದುಬಿಡುತ್ತೇನೆ; ನಿನ್ನಿಂದ ದೇಶಾಧಿಪತಿಗಳನ್ನೂ ನಾಡೊಡೆಯರನ್ನೂ ಒಡೆದುಬಿಡುತ್ತೇನೆ; 24 ಆದರೆ ಬಾಬೆಲಿನವರೂ ಕಸ್ದೀಯರೂ ಚೀಯೋನಿನಲ್ಲಿ ಮಾಡಿದ ಎಲ್ಲಾ ಹಾನಿಗೆ ಪ್ರತಿಯಾಗಿ ನಾನು ಅವರೆಲ್ಲರಿಗೂ ಚೀಯೋನಿನವರ ಕಣ್ಣೆದುರಿಗೆ ಮುಯ್ಯಿತೀರಿಸುವೆನು ಎಂದು ಯೆಹೋವನು ಅನ್ನುತ್ತಾನೆ. 25 ಯೆಹೋವನು ಇಂತೆನ್ನುತ್ತಾನೆ - ಆಹಾ, ಲೋಕವನ್ನೆಲ್ಲಾ ಹಾಳುಮಾಡುವ ನಾಶಕ ಪರ್ವತವೇ, ನಾನು ನಿನಗೆ ವಿರುದ್ಧನಾಗಿದ್ದೇನೆ; ನಾನು ನಿನ್ನ ಮೇಲೆ ಕೈಮಾಡಿ ನಿನ್ನನ್ನು ಜರಿಯ ಮೇಲಿಂದ ಕೆಳಕ್ಕೆ ಉರುಳಿಸುವೆನು, ಸುಟ್ಟ ಬೆಟ್ಟವನ್ನಾಗಿ ಮಾಡುವೆನು. 26 ಮೂಲೆಗಲ್ಲಿಗಾಗಲಿ ಅಸ್ತಿವಾರಕ್ಕಾಗಲಿ ಯಾರೂ ನಿನ್ನಿಂದ ಕಲ್ಲನ್ನು ತೆಗೆಯರು, ನೀನು ನಿತ್ಯನಾಶನಕ್ಕೆ ಗುರಿಯಾಗುವಿ. ಇದು ಯೆಹೋವನ ನುಡಿ. 27 ದೇಶದಲ್ಲಿ ಧ್ವಜವೆತ್ತಿರಿ, ರಾಜ್ಯಗಳಲ್ಲೆಲ್ಲಾ ಕೊಂಬೂದಿರಿ, ಜನಾಂಗಗಳನ್ನು ಸನ್ನಾಹಮಾಡಿರಿ, ಬಾಬೆಲಿನ ಮೇಲೆ ಬೀಳಲಿಕ್ಕೆ ಅರರಾಟ್, ವಿುನ್ನಿ, ಅಷ್ಕೆನಜ್ ಎಂಬ ರಾಷ್ಟ್ರಗಳನ್ನು ಕರೆದುಕೊಳ್ಳಿರಿ, ಸೋಲಿಸಲು ಸೇನಾಪತಿಯನ್ನು ನೇವಿುಸಿರಿ, ಅಶ್ವಬಲವನ್ನು ಬಿರುಸಾದ ವಿುಡಿತೆದಂಡಿನೋಪಾದಿಯಲ್ಲಿ ಬರಮಾಡಿರಿ. 28 ಜನಾಂಗಗಳು, ಮೇದ್ಯರ ಅರಸರು, ಅಧಿಪತಿಗಳು, ಅಧಿಕಾರಿಗಳು, ಅವರ ಅಧೀನದಲ್ಲಿರುವ ಸಂಪೂರ್ಣ ದೇಶದವರು, ಇವರೆಲ್ಲರನ್ನೂ ಅದಕ್ಕೆ ವಿರುದ್ಧವಾಗಿ ಸನ್ನಾಹಮಾಡಿರಿ. 29 ದೇಶವೆಲ್ಲಾ ನೊಂದು ನಡುಗುತ್ತದೆ; ಏಕಂದರೆ ಬಾಬೆಲ್ ದೇಶವು ಹಾಳುಬಿದ್ದು ನಿರ್ಜನವಾಗಲಿ ಎಂದು ಯೆಹೋವನು ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪಗಳು ಸ್ಥಿರವಾಗಿವೆ. 30 ಬಾಬೆಲಿನ ಶೂರರು ಯುದ್ಧಕ್ಕೆ ಹಿಂದೆಗೆದು ಹೆಂಗಸರಂತೆ ಅಬಲರಾಗಿ ತಮ್ಮ ಕೋಟೆಗಳಲ್ಲಿ ನಿಂತಿದ್ದಾರೆ; ಅದರ ಮನೆಗಳಿಗೆ ಬೆಂಕಿಯಿಕ್ಕಿದೆ, ಅದರ ಅಗುಳಿಗಳು ಮುರಿದುಹೋಗಿವೆ; 31 ಓಡಾಳುಗಳೂ ದೂತರೂ ಓಡಿ ಓಡಿ ಒಬ್ಬರಿಗೊಬ್ಬರು ಎದುರುಬದುರಾಗಿ ಅರಸನನ್ನು ಸೇರಿ ಅವನಿಗೆ - ರಾಜಧಾನಿಯನ್ನು ಎಲ್ಲಾ ಕಡೆಯಲ್ಲಿಯೂ ಆಕ್ರವಿುಸಿದ್ದಾರೆ, 32 ಹಾಯ್ಗಡಗಳನ್ನು ಹಿಡಿದಿದ್ದಾರೆ, ಜೊಂಡುಹುಲ್ಲನ್ನು ಸುಟ್ಟುಬಿಟ್ಟಿದ್ದಾರೆ, ರಣವೀರರು ಬೆಚ್ಚಿಬಿದ್ದಿದ್ದಾರೆ ಎಂದು ತಿಳಿಸುವರು. 33 ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ಬಾಬೆಲ್ ಪುರಿಯು ತುಳಿದು ತುಳಿದು ಸರಿಮಾಡುತ್ತಿರುವ ಕಣದಂತಿದೆ; ಸ್ವಲ್ಪ ಕಾಲವಾದ ಮೇಲೆ ಒಕ್ಕುವ ಸಮಯವು ಅದಕ್ಕೆ ಸಂಭವಿಸುವದು. 34 [ಯೆಹೂದವು ಹೀಗೆ ಪ್ರಲಾಪಿಸುತ್ತದೆ] - ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ತಿಂದು ಹಾಕಿದ್ದಾನೆ, ಒಡೆದುಬಿಟ್ಟಿದ್ದಾನೆ, ಬರೀಪಾತ್ರೆಯನ್ನಾಗಿ ಕುಕ್ಕಿದ್ದಾನೆ, ಘಟಸರ್ಪದ ಹಾಗೆ ನನ್ನನ್ನು ನುಂಗಿದ್ದಾನೆ, ನನ್ನ ರುಚಿಪದಾರ್ಥಗಳಿಂದ ಹೊಟ್ಟೆತುಂಬಿಸಿಕೊಂಡಿದ್ದಾನೆ, ನನ್ನನ್ನು [ಗಂಗಾಳದಂತೆ] ತೊಳೆದು ಬಿಟ್ಟಿದ್ದಾನೆ. 35 ನಮ್ಮ ಪ್ರಾಣವನ್ನು ಹಿಂಸಿಸಿದ ದೋಷ ಬಾಬೆಲಿಗೆ ತಟ್ಟಲಿ ಎಂದು ಚೀಯೋನಿನವರು ಅನ್ನುತ್ತಾರೆ; ನಮ್ಮ ರಕ್ತವನ್ನು ಸುರಿಸಿದ ಅಪರಾಧವು ಕಸ್ದೀಯರಿಗೆ ಬಡಿಯಲಿ ಎಂದು ಯೆರೂಸಲೇವಿುನವರು ಹೇಳುತ್ತಾರೆ. 36 ಆದದರಿಂದ ಯೆಹೋವನು ಇಂತೆನ್ನುತ್ತಾನೆ - ಆಹಾ, ನಾನು ನಿನ್ನ ಪಕ್ಷವಾಗಿ ವ್ಯಾಜ್ಯವಾಡಿ ನಿನ್ನನ್ನು ಹಿಂಸಿಸಿದ ರಾಜ್ಯಕ್ಕೆ ಮುಯ್ಯಿತೀರಿಸುವೆನು; ಅದರ ಸರೋವರವು ಬತ್ತುವಂತೆಯೂ ಅದರ ಪ್ರವಾಹವು ಒಣಗುವಂತೆಯೂ ಮಾಡುವೆನು. 37 ಆಗ ಬಾಬೆಲು ಹಾಳುದಿಬ್ಬಗಳೂ ನರಿಗಳ ಹಕ್ಕೆಯೂ ಆಗಿರುವದು; ಅದು ನಿರ್ಜನವಾಗಿ ಬೆರಗಿನ ಸಿಳ್ಳಿಗೆ ಗುರಿಯಾಗುವದು. 38 ಆ ದೇಶದವರು ಪ್ರಾಯದ ಸಿಂಹಗಳಂತೆ ಒಟ್ಟಿಗೆ ಗರ್ಜಿಸುತ್ತಿದ್ದಾರೆ, ಸಿಂಹದ ಮರಿಗಳ ಹಾಗೆ ಗುರುಗುಟ್ಟುತ್ತಿದ್ದಾರೆ. 39 ಅವರು ಉರಿಗೊಂಡಿರುವಾಗ ನಾನು ಅವರಿಗೆ ಔತಣವನ್ನು ಸಿದ್ಧಪಡಿಸಿ ಅವರು ಅದರಿಂದ ಸಂಭ್ರಮಪಟ್ಟು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವಂತೆ ತಲೆಗೇರ ಕುಡಿಸುವೆನು. ಇದು ಯೆಹೋವನ ನುಡಿ. 40 ನಾನು ಅವರನ್ನು ಕುರಿ ಟಗರು ಹೋತಗಳ ಹಾಗೆ ವಧ್ಯಸ್ಥಾನಕ್ಕೆ ಬರಮಾಡುವೆನು. 41 ಆಹಾ, ಶೇಷಕ್ ಶತ್ರುವಶವಾಯಿತು, ಲೋಕಪ್ರಸಿದ್ಧವಾದ ಪಟ್ಟಣವು ಹಿಡಿಯಲ್ಪಟ್ಟಿದೆ, 42 ಬಾಬೆಲು ಜನಾಂಗಗಳ ಬೆರಗಿಗೆ ಈಡಾಗಿದೆ! ಸಮುದ್ರವು ಬಾಬೆಲಿನ ಮೇಲೆ ನುಗ್ಗಿದೆ, ಲೆಕ್ಕವಿಲ್ಲದ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ. 43 ಅದರ ಪಟ್ಟಣಗಳು ಕಾಡು, ಕಗ್ಗಾಡು, ಬೆಗ್ಗಾಡೂ ಆಗಿವೆ, ಆ ದೇಶದಲ್ಲಿ ಯಾರೂ ವಾಸಿಸರು, ಯಾವ ಮನುಷ್ಯನೂ ಹಾದುಹೋಗನು. 44 ನಾನು ಬಾಬೆಲಿನಲ್ಲಿ ಬೇಲ್ ದೇವತೆಯನ್ನು ದಂಡಿಸಿ ಅದು ನುಂಗಿದ್ದನ್ನು ಅದರ ಬಾಯೊಳಗಿಂದ ಕಕ್ಕಿಸುವೆನು; ಪ್ರವಾಹ ಪ್ರವಾಹವಾಗಿ ಬಾಬೆಲಿಗೆ ಬರುತ್ತಿದ್ದ ಸಕಲದೇಶೀಯರು ಇನ್ನು ಮೇಲೆ ಬಾರರು; ಇದಲ್ಲದೆ ಬಾಬೆಲಿನ ಪೌಳಿಗೋಡೆಯು ಬಿದ್ದುಹೋಗುವದು. 45 ನನ್ನ ಜನರೇ, ನೀವೆಲ್ಲರೂ ಬಾಬೆಲಿನೊಳಗಿಂದ ಹೊರಟು ಯೆಹೋವನ ರೋಷಾಗ್ನಿಯಿಂದ ತಪ್ಪಿಸಿಕೊಳ್ಳಿರಿ. 46 ನಿಮ್ಮ ಎದೆಯು ಕುಂದದಿರಲಿ, ದೇಶದಲ್ಲಿ ಕಿವಿಗೆ ಬೀಳುವ ಸುದ್ದಿಯು ನಿಮ್ಮನ್ನು ಹೆದರಿಸದಿರಲಿ; ಒಂದು ವರುಷ ಒಂದು ಸುದ್ದಿಯು, ಮತ್ತೊಂದು ವರುಷ ಮತ್ತೊಂದು ಸುದ್ದಿಯು ಹರಡುತ್ತಿರುವವು; ಬಲಾತ್ಕಾರವು ದೇಶದಲ್ಲಿ ಪ್ರಬಲವಾಗುವದು, ಅಧಿಕಾರಿಯು ಅಧಿಕಾರಿಗೆ ವಿರೋಧಿಯಾಗುವನು. 47 ಇದರಿಂದ ನಾನು ಬಾಬೆಲಿನ ಬೊಂಬೆಗಳನ್ನು ದಂಡಿಸುವ ದಿನಗಳು ಬರುತ್ತವೆ ಎಂದು ತಿಳಿದುಕೊಳ್ಳಿರಿ. ಆ ದೇಶವೆಲ್ಲಾ ನಾಚಿಕೆಪಡುವದು; ಅದರ ಪ್ರಜೆಗಳು ಅದರೊಳಗೆ ಹತರಾಗಿ ಬೀಳುವರು. 48 ಆಗ ಭೂಮ್ಯಾಕಾಶಗಳೂ ಅಲ್ಲಿನ ಸಮಸ್ತವೂ ಬಾಬೆಲಿನ ನಾಶನವನ್ನು ನೋಡಿ ಹರ್ಷಧ್ವನಿಗೈಯುವವು; ಏಕಂದರೆ ಹಾಳುಮಾಡುವವರು ಬಡಗಲಿಂದ ಬಂದು ಅದರ ಮೇಲೆ ಬೀಳುವರು; ಇದು ಯೆಹೋವನ ನುಡಿ. 49 ಹತರಾದ ಇಸ್ರಾಯೇಲ್ಯರೇ, ಬಾಬೆಲಿನ ಹಿತಕ್ಕಾಗಿ ಲೋಕದಲ್ಲೆಲ್ಲಾ ಬಹುಜನರು ಹೇಗೆ ಹತರಾದರೋ ಹಾಗೆಯೇ ಬಾಬೆಲೂ ಹತವಾಗುವದು. 50 ಖಡ್ಗಕ್ಕೆ ತಪ್ಪಿಸಿಕೊಂಡವರೇ, ಸುಮ್ಮನೆ ನಿಂತುಕೊಳ್ಳದೆ ನಡೆಯಿರಿ; ದೂರದಲ್ಲಿಯೂ ಯೆಹೋವನನ್ನು ಸ್ಮರಿಸಿರಿ, ಯೆರೂಸಲೇವಿುನ ಹಂಬಲು ನಿಮ್ಮ ಮನಸ್ಸಿನಲ್ಲಿ ಹುಟ್ಟಲಿ. 51 ನಾವು ನಿಂದೆಯನ್ನು ಕೇಳಿ ನಾಚಿಕೆಗೊಂಡೆವು, ಯೆಹೋವನ ಆಲಯದ ಪವಿತ್ರಸ್ಥಾನಗಳನ್ನು ಮ್ಲೇಚ್ಫರು ಪ್ರವೇಶಿಸಿದ್ದರಿಂದ ಅವಮಾನವು ನಮ್ಮ ಮುಖವನ್ನು ಮುಚ್ಚಿಕೊಂಡಿದೆ [ಎಂಬದಾಗಿ ಅಂದುಕೊಳ್ಳುತ್ತೀರೋ?] 52 ಹೀಗಿರಲು ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಬಾಬೆಲಿನ ಬೊಂಬೆಗಳನ್ನು ದಂಡಿಸುವ ದಿನಗಳು ಬರುತ್ತವೆ; ಆಗ ಆ ದೇಶದಲ್ಲೆಲ್ಲಾ ಗಾಯಪಟ್ಟವರು ನರಳಾಡುವರು. 53 ಬಾಬೆಲು ಆಕಾಶದ ತನಕ ಬೆಳೆದು ಎತ್ತರವಾಗಿಯೂ ಬಲವಾಗಿಯೂ ಇರುವ ತನ್ನ ಕೋಟೆಕೊತ್ತಲಗಳನ್ನು ಭದ್ರಪಡಿಸಿದರೂ ಹಾಳುಮಾಡುವವರು ನನ್ನ ಅಪ್ಪಣೆಯಿಂದ ಅದರ ಮೇಲೆ ಬೀಳುವರು. ಇದು ಯೆಹೋವನ ನುಡಿ. 54 ಆಹಾ, ಬಾಬೆಲಿನಿಂದ ಮೊರೆಯೂ ಕಸ್ದೀಯರ ದೇಶದಿಂದ ಮಹಾನಾಶನದ ಶಬ್ದವೂ ಕೇಳ ಬರುತ್ತವೆ! 55 ಯೆಹೋವನು ಬಾಬೆಲನ್ನು ಹಾಳುಮಾಡುತ್ತಿದ್ದಾನಲ್ಲಾ, ಅದರ ಬಲು ಗದ್ದಲವನ್ನು ಅಣಗಿಸಿಬಿಡುತ್ತಾನೆ; ಮಹಾಜಲಪ್ರವಾಹಗಳು ಭೋರ್ಗರೆಯುವಂತೆ ತರಂಗತರಂಗವಾಗಿ ಬಂದ ಶತ್ರುಗಳು ಘೋಷಿಸುತ್ತಾರೆ, ಕೂಗಿ ಆರ್ಭಟಿಸುತ್ತಾರೆ; 56 ಹಾಳುಮಾಡುವವನು ಬಾಬೆಲಿನ ಮೇಲೆ ಬಿದ್ದಿದ್ದಾನೆ, ಅದರ ಶೂರರು ಸೆರೆಯಾಗಿದ್ದಾರೆ, ಅದರ ಬಿಲ್ಲುಗಳು ಮುರಿದುಹೋಗಿವೆ; ಏಕಂದರೆ ಯೆಹೋವನು ಮುಯ್ಯಿತೀರಿಸುವ ದೇವರು, ಆತನು ಪ್ರತಿಕ್ರಿಯೆಮಾಡದೆ ಬಿಡನು. 57 ನಾನು ಅದರ ಪ್ರಧಾನರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು, ಬಲಿಷ್ಠರು, ಇವರೆಲ್ಲರಿಗೂ ತಲೆಗೇರ ಕುಡಿಸುವೆನು; ಅವರು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವರು ಎಂದು ಸೇನಾಧೀಶ್ವರನಾದ ಯೆಹೋವನಾಮಧೇಯದ ರಾಜಾಧಿರಾಜನು ಅನ್ನುತ್ತಾನೆ. 58 ಸೇನಾಧೀಶ್ವರನಾದ ಯೆಹೋವನು ಹೀಗೆ ನುಡಿಯುತ್ತಾನೆ - ಬಾಬೆಲಿನ ಗಾತ್ರವಾದ ಪೌಳಿ ಗೋಡೆಯು ಸಂಪೂರ್ಣವಾಗಿ ನೆಲಸಮವಾಗುವದು, ಅದರ ಉನ್ನತದ್ವಾರಗಳು ಬೆಂಕಿಯಿಂದ ಸುಟ್ಟುಹೋಗುವವು; ಜನಾಂಗಗಳು ಪಟ್ಟ ಪರಿಶ್ರಮ ವ್ಯರ್ಥ, ಜನಗಳು ಆಯಾಸಗೊಂಡು ದುಡಿದದ್ದು ಬೆಂಕಿಗೆ ತುತ್ತಾಗುವದು. ಬಾಬೆಲಿನ ನಾಶನವನ್ನು ಮುಂತಿಳಿಸುವ ಸೂಚಕಕಾರ್ಯ 59 ಮಹ್ಸೇಯನ ಮೊಮ್ಮಗನೂ ನೇರೀಯನ ಮಗನೂ ಆದ ಸೆರಾಯನು ಯೆಹೂದದ ಅರಸನಾದ ಚಿದ್ಕೀಯನ ಆಳಿಕೆಯ ನಾಲ್ಕನೆಯ ವರುಷ ಚಿದ್ಕೀಯನೊಡನೆ ಬಾಬೆಲಿಗೆ ಪ್ರಯಾಣಮಾಡಿದಾಗ ಪ್ರವಾದಿಯಾದ ಯೆರೆಮೀಯನು ಅವನಿಗೆ ಕೊಟ್ಟ ಅಪ್ಪಣೆ. (ಸೆರಾಯನು ಯಾರಂದರೆ ಸರಬರಾಯಿ ಕಾರುಬಾರಿ.) 60 ಯೆರೆಮೀಯನು ಬಾಬೆಲಿಗೆ ಸಂಭವಿಸತಕ್ಕ ಎಲ್ಲಾ ಕೇಡಿನ ವಿಷಯವನ್ನು (ಅಂದರೆ ಬಾಬೆಲಿನ ಸಂಬಂಧವಾಗಿ ಹಿಂದೆ ಲಿಖಿತವಾದ ಎಲ್ಲಾ ಸಂಗತಿಗಳನ್ನು) ಒಂದು ಗ್ರಂಥವನ್ನಾಗಿ ಬರೆದು 61 ಸೆರಾಯನಿಗೆ ಹೀಗೆ ಹೇಳಿದನು - ನೋಡು, ನೀನು ಬಾಬೆಲಿಗೆ ಸೇರಿದ ಮೇಲೆ ಈ ಮಾತುಗಳನ್ನೆಲ್ಲಾ [ತಕ್ಕವರಿಗೆ] ಓದಿ ಹೇಳಿ - 62 ಯೆಹೋವನೇ, ನೀನು ಈ ಸ್ಥಳವನ್ನು ನಿರ್ಮೂಲಮಾಡಬೇಕೆಂದು ಉದ್ದೇಶಿಸಿ ಇದು ಜನರಿಗೂ ಪಶುಗಳಿಗೂ ನೆಲೆಯಾಗದೆ ಸದಾ ಹಾಳಾಗಿಯೇ ಇರಲಿ ಎಂದು ನುಡಿದಿದ್ದೀಯಲ್ಲಾ ಎಂಬದಾಗಿ ಅರಿಕೆಮಾಡಬೇಕು. 63 ನೀನು ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಇದಕ್ಕೆ ಕಲ್ಲುಕಟ್ಟಿ ಯೂಫ್ರೇಟೀಸ್ ನದಿಯ ಮಧ್ಯದೊಳಗೆ ಹಾಕಿ 64 ಯೆಹೋವನು ಬಾಬೆಲಿಗೆ ಬರಮಾಡುವ ವಿಪತ್ತಿನಿಂದ ಆ ಪಟ್ಟಣವೂ ಹೀಗೆಯೇ ಮುಣುಗುವದು, ಮತ್ತೆ ಏಳದು ಎಂದು ಹೇಳು. ಜನಗಳು ಆಯಾಸಗೊಂಡು ದುಡಿದದ್ದು [ಬೆಂಕಿಗೆ ತುತ್ತಾಗುವದು] ಎಂಬ ಮಾತಿನವರೆಗೆ ಯೆರೆಮೀಯನ ಪ್ರವಾದನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India