ಯೆರೆಮೀಯ 46 - ಕನ್ನಡ ಸತ್ಯವೇದವು J.V. (BSI)ಜನಾಂಗಗಳ ವಿಷಯವಾದ ದೈವೋಕ್ತಿಗಳು ( 46—51 ) ಐಗುಪ್ತದ ವಿಷಯವಾದ ದೈವೋಕ್ತಿ 1 ಯೆಹೋವನು ಜನಾಂಗಗಳ ವಿಷಯವಾಗಿ ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯವು. 2 ಐಗುಪ್ತವನ್ನು ಕುರಿತದ್ದು. ಐಗುಪ್ತದ ಅರಸನಾದ ಫರೋಹನೆಕೋವಿನ ಸೈನ್ಯವು ಯೂಫ್ರೇಟೀಸ್ ನದಿಯ ಬಳಿ ಕರ್ಕೆಮೀಷಿನಲ್ಲಿರುವಾಗ ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳಿಕೆಯ ನಾಲ್ಕನೆಯ ವರುಷದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಆ ಸೈನ್ಯವನ್ನು ಹೊಡೆದ ವಿಷಯ. 3 ಗುರಾಣಿಖೇಡ್ಯಗಳನ್ನು ಸನ್ನಾಹಮಾಡಿಕೊಂಡು ಯುದ್ಧಕ್ಕೆ ಹೊರಡಿರಿ! 4 ರಥಾಶ್ವಗಳನ್ನು ಕಟ್ಟಿರಿ, ವಾಹನಾಶ್ವಗಳನ್ನು ಹತ್ತಿರಿ, ಶಿರಸ್ತ್ರಾಣಗಳನ್ನು ಹಾಕಿಕೊಂಡು ಯುದ್ಧಕ್ಕೆ ನಿಲ್ಲಿರಿ, ಬರ್ಜಿಗಳನ್ನು ಬೆಳಗಿರಿ, ಕವಚ ತೊಟ್ಟುಕೊಳ್ಳಿರಿ. 5 ಆಹಾ, ನನ್ನ ಕಣ್ಣಿಗೆ ಬಿದ್ದದ್ದೇನು? ಅವರು ಧೈರ್ಯಗೆಟ್ಟು ಬೆನ್ನು ಕೊಟ್ಟಿದ್ದಾರೆ. ಅವರ ಶೂರರು ಪೆಟ್ಟುತಿಂದು ಹಿಂದಿರುಗದೆ ಓಡಿಹೋಗುತ್ತಾರೆ; ಸುತ್ತುಮುತ್ತಲು ದಿಗಿಲು ಎಂದು ಯೆಹೋವನು ಅನ್ನುತ್ತಾನೆ. 6 ವೇಗಶಾಲಿಗಳೂ ಓಡಿಹೋಗಲಾರರು, ಬಲಿಷ್ಠರೂ ತಪ್ಪಿಸಿಕೊಳ್ಳಲಾರರು; ಬಡಗಲಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ಎಡವಿಬಿದ್ದಿದ್ದಾರೆ. 7 ನೈಲ್ ನದಿಯಂತೆ ಉಬ್ಬಿರುವದು ಇದೇನು? ನೈಲಿನ ಶಾಖೆಗಳ ಹಾಗೆ ತುಂಬಿತುಳುಕುವ ಈ ಪ್ರವಾಹವು ಯಾವದು? 8 ಐಗುಪ್ತವೇ ನೈಲಿನಂತೆ ಉಬ್ಬಿದೆ; ಐಗುಪ್ತವೆಂಬ ಪ್ರವಾಹವೇ ನೈಲಿನ ಶಾಖೆಗಳ ಹಾಗೆ ತುಂಬಿ ತುಳುಕುತ್ತದೆ; ನಾನು ಉಬ್ಬಿಕೊಂಡು ಲೋಕದಲ್ಲೆಲ್ಲಾ ಹಬ್ಬುವೆನು, ಪಟ್ಟಣವನ್ನು ಪಟ್ಟಣನಿವಾಸಿಗಳನ್ನು ನಾಶಮಾಡುವೆನು ಅಂದುಕೊಳ್ಳುತ್ತದೆ. 9 ಅಶ್ವಗಳೇ, ಕುಣಿದಾಡಿರಿ! ರಥಗಳೇ, ರಭಸವಾಗಿರಿ! ಶೂರರು ಹೊರಡಲಿ! ಖೇಡ್ಯಸನ್ನದ್ಧರಾದ ಕೂಷ್ಯರು, ಪೂಟ್ಯರು, ಧನುರ್ಧಾರಿಗಳಾದ ಲೂದ್ಯರು ಮುಂದರಿಯಲಿ! 10 ಆದರೆ ಆ ಯುದ್ಧದಿನವು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ದಿನವಾಗಿದೆ; ಅದು ದಂಡನೆಯ ದಿವಸ; ಆಗ ಖಡ್ಗವು ನುಂಗಿ ನುಂಗಿ ತಣಿಯುವದು, ಅವರ ರಕ್ತವನ್ನು ತುಂಬಾ ಹೀರುವದು; ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಬಡಗಲಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ಬಲಿಮಾಡಬೇಕೆಂದಿದ್ದಾನಲ್ಲಾ. 11 ಐಗುಪ್ತಕುಮಾರಿಯೇ, ಯುವತಿಯೇ, ಗಿಲ್ಯಾದಿಗೆ ಹೋಗಿ ಔಷಧವನ್ನು ಸಂಪಾದಿಸು; ನೀನು ಬಗೆಬಗೆಯ ಮದ್ದನ್ನು ಉಪಯೋಗಿಸುವದು ಪ್ರಯೋಜನವಿಲ್ಲ; ನಿನಗೆ ಗುಣವಾಗದು. 12 ನಿನ್ನ ಅವಮಾನದ ಸುದ್ದಿಯು ಜನಾಂಗಗಳಿಗೆ ಕೇಳಬಂದಿದೆ, ನಿನ್ನ ಕೂಗಾಟವು ಲೋಕದಲ್ಲೆಲ್ಲಾ ತುಂಬಿದೆ; ವೀರನು ವೀರನನ್ನು ಎಡವಿ ಇಬ್ಬರೂ ಬಿದ್ದಿದ್ದಾರೆ. 13 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದು ಐಗುಪ್ತದೇಶವನ್ನು ಹೊಡೆಯುವನು ಎಂಬದಾಗಿ ಯೆಹೋವನು ಪ್ರವಾದಿಯಾದ ಯೆರೆಮೀಯನಿಗೆ ನುಡಿದ ವಾಕ್ಯವು. 14 ಐಗುಪ್ತದಲ್ಲಿ ಪ್ರಕಟಿಸಿರಿ, ವಿುಗ್ದೋಲ್, ತಹಪನೇಸ್, ನೋಫ್ ಎಂಬೀ ಪಟ್ಟಣಗಳಲ್ಲಿ ಪ್ರಚುರಪಡಿಸಿರಿ - [ಐಗುಪ್ತವೇ,] ಸ್ಥಿರವಾಗಿ ನಿಂತುಕೊಂಡು ಸನ್ನದ್ಧವಾಗು! ಖಡ್ಗವು ನಿನ್ನ ಸುತ್ತಲು ನುಂಗಿಬಿಟ್ಟಿದೆ ಎಂದು ಸಾರಿರಿ. 15 ನಿನ್ನ ಬಸವ ಬಿದ್ದು ಹೋದದ್ದೇನು? ಯೆಹೋವನು ಅದನ್ನು ಕೆಡವಿದನು. ನಿಲ್ಲಲಾರದೆ ಹೋಯಿತು. 16 ಬಹು ಜನರು ಮುಗ್ಗರಿಸುವಂತೆ ಮಾಡಿದನು; ಹೌದು, ಒಬ್ಬರಿಗೊಬ್ಬರು ತಗಲಿ ಬಿದ್ದರು; ನಾವು ಎದ್ದು ಜನ್ಮಭೂವಿುಗೆ ಹೊರಟು ಸ್ವಜನರನ್ನು ಸೇರಿ ಹಿಂಸೆಯ ಖಡ್ಗದಿಂದ ತಪ್ಪಿಸಿಕೊಳ್ಳೋಣ ಎಂದುಕೊಂಡರು. 17 ಐಗುಪ್ತದ ಅರಸನಾದ ಫರೋಹನು ಧಡಮ್ಮನೆ ಬಿದ್ದವನು, ಯುಕ್ತಸಮಯವನ್ನು ಉಪೇಕ್ಷಿಸಿದವನು ಎಂದು ಅಲ್ಲಿ ಕೂಗಿದರು. 18 ಸೇನಾಧೀಶ್ವರನಾದ ಯೆಹೋವನೆಂಬ ನಾಮವುಳ್ಳ ರಾಜಾಧಿರಾಜನು ಇಂತೆನ್ನುತ್ತಾನೆ - ನನ್ನ ಜೀವದಾಣೆ, ಇಗೋ, ಪರ್ವತಗಳನ್ನು ಮೀರುವ ತಾಬೋರ್ ಬೆಟ್ಟದಂತೆಯೂ ಸಮುದ್ರದಿಂದೆದ್ದಿರುವ ಕರ್ಮೆಲ್ ಗುಡ್ಡದ ಹಾಗೂ ಉನ್ನತನಾದವನೊಬ್ಬನು ಬರುವನು. 19 ಐಗುಪ್ತದಲ್ಲಿ ವಾಸಿಸುವ ಯುವತಿಯೇ, ಸೆರೆಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಿಕೋ; ನೋಫ್ ಪಟ್ಟಣವು ಹಾಳಾಗಿ ಸುಟ್ಟು ನಿರ್ಜನವಾಗುವದು. 20 ಐಗುಪ್ತವು ಅಂದವಾದ ಕಡಸಾಗಿದೆ; ತೊಣಚೆಯು ಬಡಗಲಿಂದ ಅದರ ಮೇಲೆ ಬಂದಿದೆ. 21 ಸಂಬಳಕ್ಕಾಗಿ ಐಗುಪ್ತವನ್ನು ಸೇರಿರುವ ದಂಡಾಳುಗಳು ಕೊಬ್ಬಿದ ಕರುಗಳಂತಿದ್ದಾರೆ; ಅವರೂ ಬೆನ್ನುಕೊಟ್ಟು ಓಡಿಹೋಗಿದ್ದಾರೆ; ನಿಲ್ಲಲೇ ಇಲ್ಲ; ಅವರಿಗೆ ವಿಪತ್ಕಾಲವು ಒದಗಿದೆ, ದಂಡನೆಯ ದಿನವು ಸಂಭವಿಸಿದೆ. 22 ಐಗುಪ್ತವು ಓಡಿಹೋಗುವ ಶಬ್ದವು ಸರಿಯುವ ಸರ್ಪದ ಸಪ್ಪಳಕ್ಕೆ ಸಮನಾಗಿರುವದು; [ಶತ್ರುಗಳು] ದಂಡೆತ್ತಿಬಂದು ಕಟ್ಟಿಗೆ ಕಡಿಯುವವರಂತೆ ಕೊಡಲಿಗಳಿಂದ ಅದರ ಮೇಲೆ ಬೀಳುವರು. 23 ಅವರು ವಿುಡಿತೆಗಳಿಗಿಂತಲೂ ಅಸಂಖ್ಯಾತರಾಗಿ ದಾಟಲಾಗದ ಐಗುಪ್ತದ ದಟ್ಟವಾದ ಕಾಡನ್ನು ಕಡಿದು ಹಾಕುವರು. ಇದು ಯೆಹೋವನ ನುಡಿ. 24 ಐಗುಪ್ತವೆಂಬ ಯುವತಿಯು ಅವಮಾನಕ್ಕೆ ಗುರಿಯಾಗುವಳು; ಬಡಗಲವರ ಕೈವಶವಾಗುವಳು. 25 ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ನೋ ಪಟ್ಟಣದಲ್ಲಿನ ಆಮೋನ್ ದೇವತೆ, ಫರೋಹ, ಐಗುಪ್ತ, ಐಗುಪ್ತದ ದೇವತೆಗಳು, ಅಲ್ಲಿನ ಅರಸರು, ಅಂತು ಫರೋಹನನ್ನೂ, ಅವನಲ್ಲಿ ನಂಬಿಕೆಯಿಟ್ಟವರನ್ನೂ ದಂಡಿಸಿ 26 ಅವರ ಪ್ರಾಣವನ್ನು ಹುಡುಕುವ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಮತ್ತು ಅವನ ಸೇವಕರ ಕೈಗೆ ಕೊಟ್ಟುಬಿಡುವೆನು; ಅನಂತರ ಅಲ್ಲಿ ಪೂರ್ವಕಾಲದ ಹಾಗೆ ಜನರು ವಾಸಿಸುವರು. ಇದು ಯೆಹೋವನ ನುಡಿ. 27 ನನ್ನ ಸೇವಕ ಯಾಕೋಬೇ, ಭಯಪಡಬೇಡ! ಇಸ್ರಾಯೇಲೇ, ಅಂಜಬೇಡ! ಇಗೋ, ನಾನು ನಿನ್ನನ್ನು ದೂರದೇಶದಿಂದ ಉದ್ಧರಿಸುವೆನು, ನಿನ್ನ ಸಂತಾನವನ್ನು ಸೆರೆಹೋದ ಸೀಮೆಯಿಂದ ರಕ್ಷಿಸುವೆನು; ಯಾಕೋಬು ಹಿಂದಿರುಗಿ ನೆಮ್ಮದಿಯಾಗಿಯೂ ಹಾಯಾಗಿಯೂ ಇರುವದು; ಯಾರೂ ಅದನ್ನು ಹೆದರಿಸರು. 28 ನನ್ನ ಸೇವಕ ಯಾಕೋಬೇ, ಭಯಪಡಬೇಡ, ನಾನು ನಿನ್ನೊಂದಿಗಿದ್ದೇನೆ; ನಾನು ಯಾವ ಜನಾಂಗಗಳಲ್ಲಿಗೆ ನಿನ್ನನ್ನು ಅಟ್ಟಿದೆನೋ ಆ ಜನಾಂಗಗಳನ್ನೆಲ್ಲಾ ನಿರ್ಮೂಲಮಾಡುವೆನು; ನಿನ್ನನ್ನೋ ನಿರ್ಮೂಲಮಾಡೆನು; ವಿುತಿಮೀರಿ ಶಿಕ್ಷಿಸೆನು, ಆದರೆ ಶಿಕ್ಷಿಸದೆ ಬಿಡುವದಿಲ್ಲ. ಇದು ಯೆಹೋವನ ನುಡಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India