ಯೆರೆಮೀಯ 44 - ಕನ್ನಡ ಸತ್ಯವೇದವು J.V. (BSI)ಯೆರೆಮೀಯನು ಗಗನದ ಒಡತಿಯ ಪೂಜೆಯನ್ನು ಖಂಡಿಸಿದ್ದು 1 ಐಗುಪ್ತದೇಶದ ವಿುಗ್ದೋಲ್, ತಹಪನೇಸ್, ನೋಫ್ ಎಂಬ ಪಟ್ಟಣಗಳಲ್ಲಿಯೂ ಪತ್ರೋಸ್ ಪ್ರಾಂತದಲ್ಲಿಯೂ ವಾಸಮಾಡುತ್ತಿದ್ದ ಯೆಹೂದ್ಯರೆಲ್ಲರ ವಿಷಯವಾಗಿ ಯೆಹೋವನು ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ - 2 ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನಾನು ಯೆರೂಸಲೇವಿುಗೂ ಯೆಹೂದದ ಎಲ್ಲಾ ಊರುಗಳಿಗೂ ಬರಮಾಡಿದ ಕೇಡನ್ನು ನೀವು ನೋಡಿದ್ದೀರಷ್ಟೆ; 3 ಆಹಾ, ಅಲ್ಲಿನವರು ತಮಗೂ ನಿಮಗೂ ನಿಮ್ಮ ಪಿತೃಗಳಿಗೂ ತಿಳಿಯದ ಅನ್ಯದೇವತೆಗಳಿಗೆ ಧೂಪಹಾಕಿ ಸೇವೆಮಾಡುವದಕ್ಕೆ ಆತುರಪಟ್ಟು ನನ್ನನ್ನು ಕೆಣಕಬೇಕೆಂದೇ ಈ ದುರಾಚಾರವನ್ನು ನಡಿಸಿದ್ದರಿಂದ ಆ ಸ್ಥಳಗಳು ಹಾಳಾದವು. ಅಲ್ಲಿ ಯಾರೂ ವಾಸಿಸರು. 4 ನಾನು ನನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ಅವರ ಬಳಿಗೆ ಸಾವಕಾಶಮಾಡದೆ ಕಳುಹಿಸುತ್ತಾ - ಅಹಹ, ನಾನು ಹೇಸುವ ಈ ಅಸಹ್ಯಕಾರ್ಯವನ್ನು ಮಾಡಬೇಡಿರಿ ಎಂದು ಪ್ರಕಟಿಸುತ್ತಾ ಬಂದರೂ ಅವರು ಕಿವಿಗೊಟ್ಟು ಕೇಳಲಿಲ್ಲ, 5 ಅನ್ಯದೇವತೆಗಳಿಗೆ ಧೂಪಹಾಕುವದನ್ನು ನಿಲ್ಲಿಸಲಿಲ್ಲ, ತಮ್ಮ ದುರಾಚಾರವನ್ನು ಬಿಡಲಿಲ್ಲ. 6 ಆದಕಾರಣ ನನ್ನ ಉಗ್ರರೋಷಾಗ್ನಿಯು ಸುರಿದು ಯೆಹೂದದ ಊರುಗಳಲ್ಲಿಯೂ ಯೆರೂಸಲೇವಿುನ ಬೀದಿಗಳಲ್ಲಿಯೂ ಧಗಧಗಿಸಿತು; ಅವು ಈಗಲೂ ಹಾಳುಹಾಳಾಗಿವೆ. 7 ಹೀಗಿರಲು ಸೇನಾಧೀಶ್ವರಸ್ವಾವಿುಯೂ ಇಸ್ರಾಯೇಲಿನ ದೇವರೂ ಆದ ಯೆಹೋವನು ಈಗ ಇಂತೆನ್ನುತ್ತಾನೆ - ಈ ದೊಡ್ಡ ಕೇಡನ್ನು ನಿಮಗೆ ನೀವೇ ಉಂಟುಮಾಡಿಕೊಳ್ಳುವದೇಕೆ? ಈ ದುರಾಚಾರದ ನಿವಿುತ್ತ ಯೆಹೂದದಲ್ಲಿರುವ ಗಂಡಸರು, ಹೆಂಗಸರು, ಮಕ್ಕಳು, ಮೊಲೆಕೂಸುಗಳು ನಿರ್ಮೂಲವಾಗುವರು, ನಿಮ್ಮಲ್ಲಿ ಯಾರೂ ಉಳಿಯರು. 8 ಪ್ರವಾಸಿಗಳಾಗಿ ನೀವು ಬಂದಿರುವ ಐಗುಪ್ತದಲ್ಲಿ ಅನ್ಯದೇವತೆಗಳಿಗೆ ಧೂಪಹಾಕುವ ದುಷ್ಕೃತ್ಯವನ್ನು ನಡಿಸುತ್ತಾ ನನ್ನನ್ನು ಕೆಣಕುವದರಿಂದ ನೀವು ನಿರ್ಮೂಲರಾಗಿ ಸಕಲ ಭೂರಾಜ್ಯಗಳ ಶಾಪದೂಷಣೆಗಳಿಗೆ ಗುರಿಯಾಗುವಿರಿ. 9 ನಿಮ್ಮ ಪಿತೃಗಳು, ಯೆಹೂದದ ಅರಸರು, ಅವರ ಹೆಂಡಿರು, ನೀವು, ನಿಮ್ಮ ಹೆಂಡಿರು, ಇವರೆಲ್ಲರೂ ಯೆಹೂದದೇಶದಲ್ಲಿಯೂ ಯೆರೂಸಲೇವಿುನ ಬೀದಿಗಳಲ್ಲಿಯೂ ನಡಿಸಿದ ದುರಾಚಾರಗಳನ್ನು ಮರೆತುಬಿಟ್ಟಿರೋ? 10 ಅವರು ಇಂದಿನವರೆಗೂ ತಗ್ಗಲಿಲ್ಲ, ನನಗೆ ಭಯಪಡಲಿಲ್ಲ; ನಾನು ನಿಮಗೂ ನಿಮ್ಮ ಪಿತೃಗಳಿಗೂ ನೇವಿುಸಿದ ನಿಯಮನಿಷ್ಠೆಗಳನ್ನು ಅನುಸರಿಸಿ ನಡೆಯಲೂ ಇಲ್ಲ. 11 ಆದಕಾರಣ ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಹೀಗನ್ನುತ್ತಾನೆ - ಆಹಾ, ಯೆಹೂದವನ್ನೆಲ್ಲಾ ನಿರ್ಮೂಲಮಾಡುವೆನು, ಕೇಡಿಗಾಗಿಯೇ ನಿಮ್ಮ ಮೇಲೆ ದೃಷ್ಟಿಯಿಡುವೆನು. 12 ಐಗುಪ್ತಕ್ಕೆ ಹೋಗಿ ಅಲ್ಲಿ ಪ್ರವಾಸಿಸಲು ಹಟಹಿಡಿದ ಯೆಹೂದಜನಶೇಷವನ್ನು ನಾನು ಹಿಡಿದು ನಾಶಮಾಡುವೆನು; ಐಗುಪ್ತದಲ್ಲೇ ಒರಗಿ ಹೋಗುವರು; ಖಡ್ಗಕ್ಷಾಮಗಳಿಂದ ನಾಶವಾಗುವರು; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಖಡ್ಗಕ್ಷಾಮಗಳಿಂದ ಸತ್ತು ಅಪವಾದ ವಿಸ್ಮಯ ಶಾಪ ದೂಷಣೆಗಳಿಗೆ ಗುರಿಯಾಗುವರು. 13 ನಾನು ಯೆರೂಸಲೇವಿುನವರನ್ನು ಖಡ್ಗಕ್ಷಾಮವ್ಯಾಧಿಗಳಿಂದ ದಂಡಿಸಿದಂತೆ ಐಗುಪ್ತದಲ್ಲಿ ವಾಸಿಸುವವರನ್ನೂ ದಂಡಿಸುವೆನು; 14 ಐಗುಪ್ತಕ್ಕೆ ಹೋಗಿ ಪ್ರವಾಸಿಸುತ್ತಿರುವ ಯೆಹೂದಜನಶೇಷದವರು ಸ್ವದೇಶಕ್ಕೆ ಹಿಂದಿರುಗಬೇಕೆಂದು ಎಷ್ಟು ಆಶಿಸಿದರೂ ಅವರಲ್ಲಿ ಯಾರೂ ಉಳಿದು ಅಲ್ಲಿಂದ ತಪ್ಪಿಸಿಕೊಂಡು ಯೆಹೂದಕ್ಕೆ ಹಿಂದಿರುಗುವದಿಲ್ಲ; ಓಡಿಬರುವ ಕೊಂಚ ಜನವೇ ಹೊರತು ಯಾವನೂ ಹಿಂದಿರುಗನು. 15 ಆಗ ತಮ್ಮ ಹೆಂಡತಿಯರು ಅನ್ಯದೇವತೆಗಳಿಗೆ ಧೂಪಹಾಕುತ್ತಿದ್ದರೆಂದು ತಿಳಿದುಕೊಂಡ ಗಂಡಸರು, ಅಲ್ಲಿ ದೊಡ್ಡ ಗುಂಪಾಗಿ ನಿಂತುಕೊಂಡಿದ್ದ ಹೆಂಗಸರು, ಅಂತು ಐಗುಪ್ತದಲ್ಲಿಯೂ ಪತ್ರೋಸಿನಲ್ಲಿಯೂ ವಾಸವಾಗಿದ್ದವರೆಲ್ಲರೂ ಯೆರೆಮೀಯನಿಗೆ ಹೀಗೆ ಹೇಳಿದರು - 16 ಯೆಹೋವನ ಹೆಸರಿನಿಂದ ನೀನು ನಮಗೆ ನುಡಿದ ಮಾತನ್ನು ಕೇಳಲೊಲ್ಲೆವು. 17 ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು, ಸುರಿಯುವೆವು ಎಂದು ನಾವು ಬಾಯಿಬಿಟ್ಟು ಹೇಳಿದ ಮಾತುಗಳನ್ನೆಲ್ಲಾ ಖಂಡಿತವಾಗಿ ನೆರವೇರಿಸುವೆವು. ಮೊದಲು ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇವಿುನ ಬೀದಿಗಳಲ್ಲಿ ನಾವೂ ನಮ್ಮ ಪಿತೃಗಳೂ ನಮ್ಮ ಅರಸರೂ ನಮ್ಮ ಪ್ರಧಾನರೂ ಹೀಗೆ ಮಾಡುತ್ತಿದ್ದಾಗ ನಾವು ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬಾ ಉಂಡು ಸುಖಪಡುತ್ತಿದ್ದೆವು. 18 ಆದರೆ ನಾವು ಗಗನದ ಒಡತಿಗೆ ಧೂಪಹಾಕುವದನ್ನೂ ಪಾನವನ್ನು ನೈವೇದ್ಯವಾಗಿ ಸುರಿಯುವದನ್ನೂ ನಿಲ್ಲಿಸಿಬಿಟ್ಟಂದಿನಿಂದ ಎಲ್ಲಾ ಕೊರತೆಗೂ ಗುರಿಯಾಗಿ ಖಡ್ಗಕ್ಷಾಮಗಳಿಂದ ನಾಶವಾಗುತ್ತಿದ್ದೇವೆ. 19 ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುತ್ತಿದ್ದಾಗ ನಾವು ಆಕೆಯ ಪೂಜೆಗಾಗಿ ಆಕೆಯ ಆಕಾರವಾದ ಹೋಳಿಗೆಗಳನ್ನು ಮಾಡಿ ಪಾನದ್ರವ್ಯವನ್ನು ಅರ್ಪಿಸಿದ್ದು ನಮ್ಮ ಗಂಡಂದಿರಿಗೆ ಒಪ್ಪಿಗೆಯಾಗಿರಲಿಲ್ಲವೋ? 20 ಆಗ ಯೆರೆಮೀಯನು ಗಂಡಸರಿಗೂ ಹೆಂಗಸರಿಗೂ ಅಂತು ತನಗೆ ಆ ಉತ್ತರಕೊಟ್ಟ ಎಲ್ಲಾ ಜನರಿಗೂ ಹೀಗೆ ಹೇಳಿದನು - 21 ನೀವು, ನಿಮ್ಮ ಪಿತೃಗಳು, ನಿಮ್ಮ ಅರಸರು, ನಿಮ್ಮ ಪ್ರಧಾನರು, ಸಾಮಾನ್ಯ ಜನರು, ನೀವೆಲ್ಲರೂ ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇವಿುನ ಬೀದಿಗಳಲ್ಲಿ ಹಾಕಿದ ಧೂಪವು ಯೆಹೋವನ ನೆನಪಿನಲ್ಲಿ ಇಲ್ಲವೋ, ಅದು ಆತನ ಜ್ಞಾಪಕಕ್ಕೆ ಬರಲಿಲ್ಲವೋ? 22 ನೀವು ನಡಿಸಿದ ದುರಾಚಾರಗಳನ್ನೂ ಅಸಹ್ಯಕಾರ್ಯಗಳನ್ನೂ ಯೆಹೋವನು ಇನ್ನು ಸಹಿಸಲಾರದೆ ಹೋದದರಿಂದ ನಿಮ್ಮ ದೇಶವು ಹಾಳುಬಿದ್ದು ಜನವಿಲ್ಲದೆ ಬೆರಗಿಗೂ ಶಾಪಕ್ಕೂ ಆಸ್ಪದವಾಯಿತು; ಈಗಲೂ ಹಾಗೆಯೇ ಇದೆ. 23 ನೀವು ಯೆಹೋವನ ಮಾತನ್ನು ಕೇಳದೆ ಆತನ ಧರ್ಮಶಾಸ್ತ್ರವನ್ನೂ ನಿಬಂಧನೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸದೆ ಆತನಿಗೆ ಪಾಪಮಾಡಿ [ಅನ್ಯದೇವತೆಗಳಿಗೆ] ಧೂಪ ಹಾಕಿದ್ದರಿಂದಲೇ ಇಂಥಾ ಕೇಡು ನಿಮಗೆ ಸಂಭವಿಸಿದೆ. 24 ಇದಲ್ಲದೆ ಯೆರೆಮೀಯನು ಹೆಂಗಸರಿಗೂ ಎಲ್ಲಾ ಜನರಿಗೂ ಹೀಗೆ ಹೇಳಿದನು - ಐಗುಪ್ತದಲ್ಲಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ - 25 ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ಗಗನದ ಒಡತಿಗೆ ಧೂಪಹಾಕಿ ಪಾನನೈವೇದ್ಯವನ್ನು ಸುರಿಯುವೆವು ಎಂದು ನಾವು ಮಾಡಿಕೊಂಡ ಹರಕೆಗಳನ್ನು ಖಂಡಿತವಾಗಿ ತೀರಿಸುವೆವು ಎಂಬದಾಗಿ ನೀವೂ ನಿಮ್ಮ ಹೆಂಡಿರೂ ಬಾಯಿಂದ ಪ್ರತಿಜ್ಞೆಮಾಡಿ ಕೈಯಿಂದ ನೆರವೇರಿಸಿದ್ದೀರಲ್ಲಾ; ನಿಮ್ಮ ಹರಕೆಗಳನ್ನು ತೀರಿಸೇ ತೀರಿಸಿರಿ, ನೆರವೇರಿಸೇ ನೆರವೇರಿಸಿರಿ! 26 ಐಗುಪ್ತದಲ್ಲಿ ವಾಸವಾಗಿರುವ ಯೆಹೂದ್ಯರೇ, ನೀವೆಲ್ಲರೂ ಯೆಹೋವನ ಮಾತನ್ನು ಕೇಳಿರಿ; ಯೆಹೋವನು ಇಂತೆನ್ನುತ್ತಾನೆ - ಆಹಾ, ಕರ್ತನಾದ ಯೆಹೋವನ ಜೀವದಾಣೆ ಎಂದು ನನ್ನ ಹೆಸರನ್ನು ಬಾಯಿಂದ ಎತ್ತಲಿಕ್ಕೆ ಐಗುಪ್ತದಲ್ಲಿ ಯಾವ ಯೆಹೂದ್ಯನೂ ಇನ್ನಿರನು ಎಂಬದಾಗಿ ನನ್ನ ಮಹಾನಾಮದ ಮೇಲೆ ಆಣೆಯಿಟ್ಟಿದ್ದೇನೆ. 27 ಇಗೋ, ಇವರಿಗೆ ಮೇಲನ್ನಲ್ಲ, ಕೇಡನ್ನೇ ಮಾಡಬೇಕೆಂದು ಎಚ್ಚರಗೊಂಡಿದ್ದೇನೆ; ಐಗುಪ್ತದಲ್ಲಿನ ಎಲ್ಲಾ ಯೆಹೂದ್ಯರು ಖಡ್ಗಕ್ಷಾಮಗಳಿಂದ ನಾಶಹೊಂದುತ್ತಾ ನಿರ್ನಾಮವಾಗುವರು. 28 ಖಡ್ಗಕ್ಕೆ ತಪ್ಪಿಸಿಕೊಂಡವರು ಕೊಂಚ ಜನ ಮಾತ್ರವೇ ಆಗಿ ಐಗುಪ್ತದಿಂದ ಯೆಹೂದಕ್ಕೆ ಹಿಂದಿರುಗುವರು; ಆಗ ಐಗುಪ್ತಕ್ಕೆ ಹೋಗಿ ಪ್ರವಾಸಿಸುತ್ತಿರುವ ಯೆಹೂದ ಜನಶೇಷದವರೆಲ್ಲರೂ ನನ್ನ ಮಾತು ಸಾಗತಕ್ಕದ್ದೋ ತಮ್ಮ ಮಾತು ಸಾಗತಕ್ಕದ್ದೋ ಎಂದು ತಿಳಿದುಕೊಳ್ಳುವರು. 29 ನಾನು ನಿಮ್ಮನ್ನು ಈ ಸ್ಥಳದಲ್ಲಿ ದಂಡಿಸುವೆನೆಂಬದಕ್ಕೆ ಒಂದು ಗುರುತು ಕಾಣುವದು; ನನ್ನ ಮಾತುಗಳು ಈಡೇರಿ ನಿಮಗೆ ಕೇಡನ್ನುಂಟುಮಾಡುವವು ಎಂಬದಾಗಿ ಅದರಿಂದಲೇ ನಿಮಗೆ ತಿಳಿದುಬರುವದು; 30 ಅದೇನಂದರೆ - ಇಗೋ, ನಾನು ಯೆಹೂದದ ಅರಸನಾದ ಚಿದ್ಕೀಯನನ್ನು ಅವನ ಪ್ರಾಣ ಹುಡುಕುತ್ತಿದ್ದ ಶತ್ರುವಾದ ನೆಬೂಕದ್ನೆಚ್ಚರನೆಂಬ ಬಾಬೆಲಿನ ಅರಸನ ಕೈಗೆ ಕೊಟ್ಟಂತೆ ಐಗುಪ್ತದ ಅರಸನಾದ ಫರೋಹ ಹೊಫ್ರನನ್ನು ಅವನ ಪ್ರಾಣ ಹುಡುಕುವ ಶತ್ರುಗಳ ಕೈಗೆ ಕೊಡುವೆನು ಎಂಬದೇ; ಇದು ಯೆಹೋವನಾದ ನನ್ನ ನುಡಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India