ಯೆರೆಮೀಯ 43 - ಕನ್ನಡ ಸತ್ಯವೇದವು J.V. (BSI)1 ಯೆರೆಮೀಯನು ಸಮಸ್ತ ಜನರನ್ನು ಸಂಬೋಧಿಸಿ ಅವರ ದೇವರಾದ ಯೆಹೋವನು ತನ್ನ ಮೂಲಕ ಅವರಿಗೆ ಹೇಳಿ ಕಳುಹಿಸಿದ ಈ ಮಾತುಗಳನ್ನೆಲ್ಲಾ ತಿಳಿಸಿಬಿಟ್ಟ ಮೇಲೆ 2 ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಸೊಕ್ಕೇರಿದವರೆಲ್ಲರೂ ಅವನಿಗೆ - ನಿನ್ನ ಮಾತು ಸುಳ್ಳು; ಐಗುಪ್ತಕ್ಕೆ ಹೋಗಿ ವಾಸಮಾಡಬಾರದು ಎಂದು ತಿಳಿಸುವಂತೆ ನಮ್ಮ ದೇವರಾದ ಯೆಹೋವನು ನಿನ್ನನ್ನು ಕಳುಹಿಸಲಿಲ್ಲ; 3 ಕಸ್ದೀಯರು ನಮ್ಮನ್ನು ಕೊಲ್ಲುವದಕ್ಕೋ ಬಾಬೆಲಿಗೆ ಸೆರೆ ಒಯ್ಯುವದಕ್ಕೋ ನಮ್ಮನ್ನು ಅವರ ಕೈಗೆ ಸಿಕ್ಕಿಸಬೇಕೆಂದು ನೇರೀಯನ ಮಗನಾದ ಬಾರೂಕನೇ ನಿನ್ನನ್ನು ನಮ್ಮ ಮೇಲೆ ನೂಕಿದ್ದಾನೆ ಎಂದು ಹೇಳಿದರು. 4 ಹೀಗೆ ಯೆಹೂದ ದೇಶದಲ್ಲಿಯೇ ವಾಸಮಾಡಿರಿ ಎನ್ನುವ ಯೆಹೋವನ ಮಾತನ್ನು ಕಾರೇಹನ ಮಗನಾದ ಯೋಹಾನಾನನೂ ಸಮಸ್ತ ಸೇನಾಪತಿಗಳೂ ಸಕಲಜನರೂ ಕೇಳದೆ ಹೋದರು. 5 ಆಗ ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನ ವಶಕ್ಕೆ ಒಪ್ಪಿಸಿದ ಜನರು, ಅನ್ಯದೇಶಗಳಿಗೆ ಅಟ್ಟಲ್ಪಟ್ಟು ಯೆಹೂದದಲ್ಲಿ ವಾಸಿಸುವದಕ್ಕೆ ಹಿಂದಿರುಗಿ ಬಂದಿದ್ದ ಯೆಹೂದ ಜನಶೇಷದವರು, ಪ್ರವಾದಿಯಾದ ಯೆರೆಮೀಯನು, 6 ನೇರೀಯನ ಮಗನಾದ ಬಾರೂಕನು, ರಾಜಕುಮಾರ್ತೆಯರು, ಅಂತು ಗಂಡಸರು, ಹೆಂಗಸರು, ಮಕ್ಕಳು, 7 ಇವರೆಲ್ಲರನ್ನೂ ಕಾರೇಹನ ಮಗನಾದ ಯೋಹಾನಾನನೂ ಸಕಲ ಸೇನಾಪತಿಗಳೂ ಕರೆದುಕೊಂಡು ಐಗುಪ್ತಕ್ಕೆ ಹೋಗಿ ತಹಪನೇಸ್ ಊರಿಗೆ ಸೇರಿದರು. ಯೆಹೋವನ ಮಾತನ್ನು ಕೇಳಲೇ ಇಲ್ಲ. ನೆಬೂಕದ್ನೆಚ್ಚರನು ಐಗುಪ್ತವನ್ನು ಸ್ವಾಧೀನಮಾಡಿಕೊಳ್ಳುವನು ಎಂದು ಯೆರೆಮೀಯನು ಮುಂತಿಳಿಸಿದ್ದು 8 ಯೆರೆಮೀಯನು ತಹಪನೇಸಿನಲ್ಲಿರುವಾಗ ಯೆಹೋವನು ಈ ವಾಕ್ಯವನ್ನು ಅವನಿಗೆ ದಯಪಾಲಿಸಿದನು - 9 ನೀನು ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಬಾಗಿಲ ಮುಂದೆ ಯೆಹೂದ್ಯರ ಕಣ್ಣೆದುರಿಗೆ ನೆಲಗಟ್ಟಿನ ಕೆಳಗೆ ಇಟ್ಟು ಗಾರೆಯಿಂದ ಮುಚ್ಚಿಬಿಟ್ಟು ಅವರಿಗೆ ಹೀಗೆ ಹೇಳು - 10 ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಕರೆಯಿಸಿ ನಾನು ಮರೆಮಾಡಿಸಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಹಾಕಿಸುವೆನು; ಅವನು ಈ ಕಲ್ಲುಗಳ ಮೇಲೆಯೇ ತನ್ನ ರತ್ನಗಂಬಳಿಯನ್ನು ಹಾಸಿಸುವನು. 11 ಅವನು ಬಂದು ಐಗುಪ್ತದೇಶವನ್ನು ಹೊಡೆಯುವನು; ಮರಣಕ್ಕೆ ಗೊತ್ತಾದವರು ಮರಣಕ್ಕೆ, ಸೆರೆಗೆ ಗೊತ್ತಾದವರು ಸೆರೆಗೆ, ಖಡ್ಗಕ್ಕೆ ಗೊತ್ತಾದವರು ಖಡ್ಗಕ್ಕೆ ಗುರಿಯಾಗುವರು. 12 ನಾನು ಐಗುಪ್ತದ ದೇವಾಲಯಗಳಲ್ಲಿ ಬೆಂಕಿಹೊತ್ತಿಸುವೆನು, ಅವನು ಅವುಗಳನ್ನು ಸುಟ್ಟು ದೇವತೆಗಳನ್ನು ಸೆರೆ ಒಯ್ಯುವನು; ಕುರುಬನು ತನ್ನ ಕಂಬಳಿಯನ್ನು ಸುತ್ತಿಕೊಳ್ಳುವಂತೆ ಅವನು ಐಗುಪ್ತದೇಶವನ್ನು ಸುತ್ತಿಕೊಳ್ಳುವನು; ಸಮಾಧಾನವಾಗಿ ಅಲ್ಲಿಂದ ಹೊರಟು ಹೋಗುವನು. 13 ಐಗುಪ್ತದೇಶದಲ್ಲಿರುವ ಸೂರ್ಯಪುರಿಯ ಸ್ತಂಭಗಳನ್ನು ಒಡೆದುಹಾಕಿ ಐಗುಪ್ತದ ದೇವಾಲಯಗಳನ್ನು ಬೆಂಕಿಯಿಂದ ಸುಟ್ಟುಬಿಡುವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India