ಯೆರೆಮೀಯ 38 - ಕನ್ನಡ ಸತ್ಯವೇದವು J.V. (BSI)ಎಬೆದ್ಮೆಲೆಕನು ಯೆರೆಮೀಯನನ್ನು ಬಾವಿಯಿಂದ ಎತ್ತಿದ್ದು 1 ಯೆರೆಮೀಯನು ಸಮಸ್ತ ಜನರಿಗೆ - ಯೆಹೋವನು ಇಂತೆನ್ನುತ್ತಾನೆ - ಪಟ್ಟಣದಲ್ಲಿ ನಿಲ್ಲುವವನು ಖಡ್ಗಕ್ಷಾಮವ್ಯಾಧಿಗಳಿಂದ ಸಾಯುವನು; ಪಟ್ಟಣವನ್ನು ಬಿಟ್ಟುಹೋಗಿ ಕಸ್ದೀಯರನ್ನು ಮರೆಹೊಗುವವನು ಬದುಕುವನು, ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗಿ ಬದುಕುವನು; 2 ಬಾಬೆಲಿನ ಅರಸನು ಈ ಪಟ್ಟಣವನ್ನು ಆಕ್ರವಿುಸುವನು; ಅದು ಅವನ ಸೈನ್ಯದ ವಶವಾಗುವದು ಖಂಡಿತ ಎಂದು ಸಾರುತ್ತಿರುವಾಗ 3 ಮತ್ತಾನನ ಮಗನಾದ ಶೆಫತ್ಯ, ಪಷ್ಹೂರನ ಮಗನಾದ ಗೆದಲ್ಯ, ಸೆಲೆಮ್ಯನ ಮಗನಾದ ಯೂಕಲ, ಮಲ್ಕೀಯನ ಮಗನಾದ ಪಷ್ಹೂರ, ಇವರು ಅವನ ಮಾತುಗಳನ್ನು ಕೇಳಿದರು. 4 ಆಮೇಲೆ ಆ ಪ್ರಧಾನರು ಅರಸನಿಗೆ - ಒಡೆಯಾ, ಇವನಿಗೆ ಮರಣದಂಡನೆಯಾಗಬೇಕು. ಇವನು ಪಟ್ಟಣದಲ್ಲಿ ಉಳಿದಿರುವ ಯೋಧರಿಗೂ ಸಕಲ ಜನರಿಗೂ ಇಂಥಾ ಮಾತುಗಳನ್ನು ನುಡಿಯುತ್ತಾ ಅವರನ್ನು ಜೋಲುಗೈಯವರನ್ನಾಗಿ ಮಾಡುತ್ತಾನೆ; ಈ ಜನರ ಕ್ಷೇಮವನ್ನಲ್ಲ, ಹಾನಿಯನ್ನೇ ಹಾರೈಸುತ್ತಾನೆ ಎಂದು ಹೇಳಿದರು. 5 ಅದಕ್ಕೆ ಅರಸನಾದ ಚಿದ್ಕೀಯನು - ಇಗೋ, ಯೆರೆಮೀಯನು ನಿಮ್ಮ ಕೈಯಲ್ಲಿದ್ದಾನೆ; ಅರಸನು ನಿಮಗೆ ಅಡ್ಡ ಬಂದು ಏನೂ ಮಾಡಬಲ್ಲವನಲ್ಲ ಎಂದು ಹೇಳಲು 6 ಅವರು ಯೆರೆಮೀಯನನ್ನು ಹಿಡಿದು ಕಾರಾಗೃಹದ ಅಂಗಳದಲ್ಲಿ ರಾಜವಂಶೀಯನಾದ ಮಲ್ಕೀಯನ ಬಾವಿಯೊಳಗೆ ಹಗ್ಗಗಳಿಂದಿಳಿಸಿ ಹಾಕಿಬಿಟ್ಟರು. ಆ ಬಾವಿಯಲ್ಲಿ ನೀರಿರಲಿಲ್ಲ, ಕೆಸರಿತ್ತು; ಅದರೊಳಗೆ ಯೆರೆಮೀಯನು ದೊಸಕೊಂಡನು. 7 ಅರಮನೆಯ ಕಂಚುಕಿಯಾದ ಎಬೆದ್ಮೆಲೆಕನೆಂಬ ಕೂಷ್ಯನು ಯೆರೆಮೀಯನನ್ನು ಬಾವಿಯಲ್ಲಿ ಹಾಕಿದ್ದಾರೆಂದು ಕೇಳಿದಾಗ 8 ಅವನು ಅರಮನೆಯಿಂದ ಹೊರಟು ಬೆನ್ಯಾಮೀನಿನ ಬಾಗಿಲಿನಲ್ಲಿ ಕೂತುಕೊಂಡಿದ್ದ ಅರಸನ ಬಳಿಗೆ ಹೋಗಿ - 9 ಎನ್ನೊಡೆಯನೇ, ಅರಸನೇ, ಇವರು ಪ್ರವಾದಿಯಾದ ಯೆರೆಮೀಯನಿಗೆ ಮಾಡಿದ್ದೆಲ್ಲಾ ದುಷ್ಟಕಾರ್ಯವೇ ಸರಿ, ಅವನನ್ನು ಬಾವಿಯಲ್ಲಿ ಹಾಕಿದ್ದಾರೆ; ಅವನು ಆಹಾರವಿಲ್ಲದೆ ಬಿದ್ದಲ್ಲೇ ಸಾಯುವದು ಖಂಡಿತ, ಪಟ್ಟಣದಲ್ಲಿ ಇನ್ನು ರೊಟ್ಟಿಯಿಲ್ಲವಲ್ಲಾ ಎಂದು ಅರಿಕೆಮಾಡಿದನು. 10 ಅರಸನು ಇದನ್ನು ಕೇಳಿ ಕೂಷ್ಯನಾದ ಎಬೆದ್ಮೆಲೆಕನಿಗೆ - ನೀನು ಇಲ್ಲಿಂದ ಮೂವತ್ತು ಮಂದಿಯನ್ನು ಕರೆದುಕೊಂಡುಹೋಗಿ ಪ್ರವಾದಿಯಾದ ಯೆರೆಮೀಯನು ಸಾಯವದರೊಳಗಾಗಿ ಅವನನ್ನು ಬಾವಿಯಿಂದ ಎತ್ತಿಸು ಎಂದು ಅಪ್ಪಣೆಕೊಟ್ಟನು. 11 ಕೂಡಲೇ ಕೂಷ್ಯನಾದ ಎಬೆದ್ಮೆಲೆಕನು ಅವರನ್ನು ಕರೆದುಕೊಂಡುಹೋಗಿ ಅರಮನೆಯನ್ನು ಹೊಕ್ಕು ಖಜಾನೆಯ ಕೆಳಗಣ ಕೋಣೆಯಿಂದ ಜೀರ್ಣವಾದ ಹರಕು ಚಿಂದಿಪಂದಿಗಳನ್ನು ತೆಗೆದುಕೊಂಡು ಬಾವಿಯೊಳಗೆ ಹಗ್ಗಗಳಿಂದ ಯೆರೆಮೀಯನಿಗೆ ಮುಟ್ಟಿಸಿ 12 ಜೀರ್ಣವಾದ ಈ ಹರಕು ಚಿಂದಿಗಳನ್ನು ಹಗ್ಗಕ್ಕೆ ಸುತ್ತಿ ಕಂಕಳಲ್ಲಿ ಇಟ್ಟುಕೋ ಎನ್ನಲು ಯೆರೆಮೀಯನು ಅದರಂತೆಯೇ ಮಾಡಿದನು. 13 ಈ ಪ್ರಕಾರ ಅವರು ಯೆರೆಮೀಯನನ್ನು ಹಗ್ಗಗಳ ಮೂಲಕ ಸೇದಿಕೊಂಡು ಬಾವಿಯಿಂದ ಮೇಲಕ್ಕೆ ಎತ್ತಿದರು; ಆಮೇಲೆ ಯೆರೆಮೀಯನು [ಹಿಂದಿನಂತೆ] ಕಾರಾಗೃಹದ ಅಂಗಳದಲ್ಲಿ ವಾಸಿಸುತ್ತಿದ್ದನು. ಕಸ್ದೀಯರನ್ನು ಮರೆಹೊಗುವಂತೆ ಯೆರೆಮೀಯನು ಚಿದ್ಕೀಯನನ್ನು ಪ್ರೇರಿಸಿದ್ದು 14 ಹೀಗಿರುವಲ್ಲಿ ಅರಸನಾದ ಚಿದ್ಕೀಯನು ಪ್ರವಾದಿಯಾದ ಯೆರೆಮೀಯನನ್ನು ಯೆಹೋವನ ಆಲಯದ ಮೂರನೆಯ ಬಾಗಿಲಿಗೆ ಕರತರಿಸಿ - ನಾನು ನಿನ್ನನ್ನು ಒಂದು ಕೇಳುವೆನು, ನನಗೆ ಸ್ವಲ್ಪವೂ ಮರೆಮಾಡಬೇಡ ಎನ್ನಲು 15 ಯೆರೆಮೀಯನು ಚಿದ್ಕೀಯನಿಗೆ - ನಾನು ನಿನಗೆ ತಿಳಿಸಿದರೆ ನನ್ನನ್ನು ಸಾಯಿಸಿಯೇ ಸಾಯಿಸುವಿ ಅಲ್ಲವೇ? ಆಲೋಚನೆಹೇಳಿದರೂ ನೀನು ಕೇಳುವದಿಲ್ಲ ಎಂದು ಉತ್ತರಕೊಟ್ಟನು. 16 ಆಗ ಅರಸನಾದ ಚಿದ್ಕೀಯನು ಯೆರೆಮೀಯನಿಗೆ - ಈ ಪ್ರಾಣವನ್ನು ನಮಗೆ ದಯಪಾಲಿಸಿದ ಯೆಹೋವನ ಜೀವದಾಣೆ, ನಾನು ನಿನ್ನನ್ನು ಸಾಯಿಸೆನು, ನಿನ್ನ ಪ್ರಾಣವನ್ನು ಹುಡುಕುವ ಇವರ ಕೈಗೂ ನಿನ್ನನ್ನು ಸಿಕ್ಕಿಸೆನು ಎಂದು ರಹಸ್ಯವಾಗಿ ಪ್ರಮಾಣಮಾಡಲು 17 ಯೆರೆಮೀಯನು ಚಿದ್ಕೀಯನಿಗೆ - ಸೇನಾಧೀಶ್ವರ ಸ್ವಾವಿುಯೂ ಇಸ್ರಾಯೇಲ್ಯರ ದೇವರೂ ಆದ ಯೆಹೋವನು ಇಂತೆನ್ನುತ್ತಾನೆ - ನೀನು ಬಾಬೆಲಿನ ಅರಸನ ಸರದಾರರನ್ನು ಮರೆಹೊಕ್ಕರೆ ನಿನ್ನ ಪ್ರಾಣವುಳಿಯುವದು, ಈ ಪಟ್ಟಣವೂ ಬೆಂಕಿಯಿಂದ ಸುಡದು, ನೀನೂ ನಿನ್ನ ಮನೆತನದವರೂ ಬದುಕುವಿರಿ; 18 ನೀನು ಬಾಬೆಲಿನ ಅರಸನ ಸರದಾರರನ್ನು ಮರೆಹೊಗದಿದ್ದರೆ ಈ ಪಟ್ಟಣವು ಕಸ್ದೀಯರ ಕೈವಶವಾಗುವದು. ಅವರು ಅದನ್ನು ಬೆಂಕಿಯಿಂದ ಸುಟ್ಟುಬಿಡುವರು, ನೀನು ಅವರ ಕೈಯಿಂದ ತಪ್ಪಿಸಿಕೊಳ್ಳಲಾರೆ ಎಂದು ಹೇಳಿದನು. 19 ಇದನ್ನು ಕೇಳಿ ಅರಸನಾದ ಚಿದ್ಕೀಯನು ಯೆರೆಮೀಯನಿಗೆ - ಕಸ್ದೀಯರು ತಮ್ಮನ್ನು ಮರೆಹೊಕ್ಕಿರುವ ಯೆಹೂದ್ಯರಿಗೆ ನನ್ನನ್ನು ಒಪ್ಪಿಸುವರೋ ಏನೋ; ಅವರು ನನ್ನನ್ನು ಹಿಂಸಿಸಿಯಾರು ಎಂದು ಶಂಕೆಪಡುತ್ತೇನೆ ಎಂದುತ್ತರಕೊಡಲು 20 ಯೆರೆಮೀಯನು - ನಿನ್ನನ್ನು ಒಪ್ಪಿಸರು; ಜೀಯಾ, ನಾನು ನಿನಗೆ ಹೇಳಿರುವ ಯೆಹೋವನ ಮಾತನ್ನು ಕೈಕೊಳ್ಳು; ಕೈಕೊಂಡರೆ ಪ್ರಾಣವುಳಿಯುವದು, ಸುಖವೂ ಆಗುವದು. 21 ಆದರೆ ನೀನು - ಶತ್ರುವನ್ನು ಮರೆಹೊಗೆನು ಎನ್ನುವ ಪಕ್ಷದಲ್ಲಿ ಯೆಹೋವನು ನಿನ್ನ ಮುಂದಿನ ಗತಿಯನ್ನು ನನಗೆ ಹೀಗೆ ತೋರ್ಪಡಿಸಿದ್ದಾನೆ - 22 ಯೆಹೂದದ ಅರಸನ ಮನೆಯಲ್ಲಿ ಉಳಿದಿರುವ ಸಕಲ ಸ್ತ್ರೀಯರು ಬಾಬೆಲಿನ ಅರಸನ ಸರದಾರರ ಬಳಿಗೆ ತರಲ್ಪಟ್ಟವರಾಗಿ ನಿನ್ನನ್ನು ಪ್ರೇರಿಸಿ ಒಳಪಡಿಸಿಕೊಂಡಿದ್ದ ನಿನ್ನ ಆಪ್ತವಿುತ್ರರು ನಿನ್ನ ಕಾಲುಗಳು ಬದಿಯಲ್ಲಿ ಹೂತದ್ದನ್ನು ನೋಡಿ ಹಿಂದಿರುಗಿದ್ದಾರೆ ಎಂದು ನಿಂದಿಸುವರು. 23 ನಿನ್ನ ಸಮಸ್ತ ಪತ್ನಿಯರೂ ಕುಮಾರಕುಮಾರ್ತೆಯರೂ ಕಸ್ದೀಯರ ಬಳಿಗೆ ತರಲ್ಪಡುವರು; ನೀನೂ ಅವರಿಂದ ತಪ್ಪಿಸಿಕೊಳ್ಳಲಾರದೆ ಬಾಬೆಲಿನ ಅರಸನ ಕೈಗೆ ಸಿಕ್ಕಿಕೊಳ್ಳುವಿ; ಈ ಪಟ್ಟಣವು ನಿನ್ನ ನಿವಿುತ್ತ ಬೆಂಕಿಯಿಂದ ಸುಟ್ಟುಹೋಗುವದು ಎಂದು ಹೇಳಿದನು. 24 ಆಗ ಚಿದ್ಕೀಯನು ಯೆರೆಮೀಯನಿಗೆ - ಈ ಮಾತುಗಳು ಯಾರಿಗೂ ತಿಳಿಯದಿರಲಿ, ಜೋಕೆ; ತಿಳಿಯದಿದ್ದರೆ ನೀನು ಸಾಯೆ. 25 ನಾನು ನಿನ್ನ ಸಂಗಡ ಮಾತಾಡಿದ ಸುದ್ದಿಯನ್ನು ಪ್ರಧಾನರು ಕೇಳಿ ನಿನ್ನ ಬಳಿಗೆ ಬಂದು - ನೀನು ಅರಸನಿಗೆ ಹೇಳಿದ್ದನ್ನು ನಮಗೆ ತಿಳಿಸು; ನಮಗೆ ಮರೆಮಾಡದಿದ್ದರೆ ನಿನ್ನನ್ನು ಕೊಲ್ಲೆವು; ಅರಸನು ನಿನಗೆ ಹೇಳಿದ್ದನ್ನೂ ತಿಳಿಸು ಎಂದು ಪ್ರಶ್ನೆಮಾಡಿದ ಪಕ್ಷದಲ್ಲಿ 26 ನೀನು ಅವರಿಗೆ - ಯೆಹೋನಾಥಾನನ ಮನೆಗೆ ನನ್ನನ್ನು ತಿರಿಗಿ ಸೇರಿಸಬೇಡ, ಅಲ್ಲೇ ಸತ್ತೇನು ಎಂದು ಅರಸನಿಗೆ ಬಿನ್ನಹ ಮಾಡಿಕೊಂಡೆನು ಎಂಬದಾಗಿ ಹೇಳು ಎಂದು ಅಪ್ಪಣೆಕೊಟ್ಟನು. 27 ಕೆಲವು ಕಾಲದ ಮೇಲೆ ಸಕಲ ಪ್ರಧಾನರು ಯೆರೆಮೀಯನ ಬಳಿಗೆ ಬಂದು ಹಾಗೆಯೇ ಪ್ರಶ್ನೆಮಾಡಿದರು. ಅವನು ಅರಸನ ಅಪ್ಪಣೆಯಂತೆಯೇ ಉತ್ತರಕೊಡಲು ಅವರು ಮಾತನ್ನು ಮುಗಿಸಿದರು; ಏನೂ ತಿಳಿದುಕೊಳ್ಳಲಿಲ್ಲ. 28 ಯೆರೂಸಲೇಮು ಶತ್ರುವಶವಾಗುವ ತನಕ ಯೆರೆಮೀಯನು ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India