ಯೆರೆಮೀಯ 37 - ಕನ್ನಡ ಸತ್ಯವೇದವು J.V. (BSI)ಬಿಟ್ಟುಹೋದ ಕಸ್ದೀಯರು ಹಿಂದಿರುಗುವರೆಂದು ಯೆರೆಮೀಯನು ಚಿದ್ಕೀಯನನ್ನು ಎಚ್ಚರಿಸಿದ್ದು 1 ಯೋಷೀಯನ ಮಗನಾದ ಚಿದ್ಕೀಯನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದದೇಶದ ಪಟ್ಟಕ್ಕೆ ತರಲ್ಪಟ್ಟು ಯೆಹೋಯಾಕೀಮನ ಮಗನಾದ ಕೊನ್ಯನಿಗೆ ಬದಲಾಗಿ ರಾಜ್ಯವಾಳುತ್ತಿದ್ದಾಗ 2 ಅವನಾಗಲಿ ಅವನ ಸೇವಕರಾಗಲಿ ದೇಶದ ಜನರಾಗಲಿ ಯೆಹೋವನು ಪ್ರವಾದಿಯಾದ ಯೆರೆಮೀಯನಿಂದ ನುಡಿಸಿದ ಮಾತುಗಳನ್ನು ಕೇಳದೆ ಹೋದರು. 3 ಹೀಗಿರುವಲ್ಲಿ ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲ, ಯಾಜಕ ಮಾಸೇಯನ ಮಗನಾದ ಚೆಫನ್ಯ, ಇವರ ಮೂಲಕ - ದಯಮಾಡಿ ನಮಗಾಗಿ ನಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸು ಎಂದು ಪ್ರವಾದಿಯಾದ ಯೆರೆಮೀಯನಿಗೆ ಹೇಳಿಕಳುಹಿಸಿದನು. 4 ಆ ಕಾಲದಲ್ಲಿ ಯೆರೆಮೀಯನು ಇನ್ನೂ ಸೆರೆಯಾಗಿರಲಿಲ್ಲ; ಜನರಲ್ಲಿ ಹೋಗುತ್ತಾ ಬರುತ್ತಾ ಇದ್ದನು. 5 ಆಗ ಫರೋಹನ ಸೈನ್ಯವು ಐಗುಪ್ತದಿಂದ ಹೊರಟಿತ್ತು; ಇದನ್ನು ಕೇಳಿ ಯೆರೂಸಲೇಮನ್ನು ಮುತ್ತಿದ್ದ ಕಸ್ದೀಯರು ಬಿಟ್ಟು ಹೋಗಿದ್ದರು. 6 ಹೀಗಿರಲು ಯೆಹೋವನು ಪ್ರವಾದಿಯಾದ ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು - 7 ಇಸ್ರಾಯೇಲ್ಯರ ದೇವರಾದ ಯೆಹೋವನು ಇಂತೆನ್ನುತ್ತಾನೆ - ನನ್ನನ್ನು ವಿಚಾರಿಸುವದಕ್ಕೆ ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದ ಯೆಹೂದದ ಅರಸನಿಗೆ ಹೀಗೆ ಹೇಳಿರಿ - ಇಗೋ, ನಿಮ್ಮ ಸಹಾಯಕ್ಕೆ ಹೊರಟಿರುವ ಫರೋಹನ ಸೈನ್ಯವು ಸ್ವದೇಶವಾದ ಐಗುಪ್ತಕ್ಕೆ ಹಿಂದಿರುಗುವದು. 8 ಕಸ್ದೀಯರು ಪುನಃ ಮತ್ತೆ ಬಂದು ಈ ಪಟ್ಟಣವನ್ನು ಪ್ರತಿಭಟಿಸಿ ಆಕ್ರವಿುಸಿ ಬೆಂಕಿಯಿಂದ ಸುಟ್ಟುಬಿಡುವರು. 9 ಯೆಹೋವನು ಇಂತೆನ್ನುತ್ತಾನೆ - ಕಸ್ದೀಯರು ನಮ್ಮಿಂದ ತೊಲಗಿ ಹೋಗುವದು ಖಂಡಿತ ಎಂದು ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ; ಅವರು ತೊಲಗುವದೇ ಇಲ್ಲ. 10 ನಿಮ್ಮನ್ನು ಪ್ರತಿಭಟಿಸುವ ಕಸ್ದೀಯರಲ್ಲಿ ಗಾಯಪಟ್ಟವರು ಮಾತ್ರ ಉಳಿಯುವಂತೆ ನೀವು ಆ ಸೈನ್ಯವನ್ನೆಲ್ಲಾ ಒಂದು ವೇಳೆ ಹೊಡೆದಿದ್ದರೂ ಆ ಗಾಯಪಟ್ಟವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದುಬಂದು ಈ ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಡುತ್ತಿದ್ದರು. ಪ್ರಧಾನರು ಯೆರೆಮೀಯನನ್ನು ಸೆರೆಹಾಕಿಸಿದ್ದು; ಚಿದ್ಕೀಯನು ದಯೆತೋರಿಸಿದ್ದು 11 ಕಸ್ದೀಯರ ಸೈನ್ಯವು ಫರೋಹನ ಸೈನ್ಯಕ್ಕೆ ಭಯಪಟ್ಟು ಯೆರೂಸಲೇಮನ್ನು ಬಿಟ್ಟುಹೋದ ಮೇಲೆ ಯೆರೆಮೀಯನು ಬೆನ್ಯಾಮೀನ್ ಸೀಮೆಯಲ್ಲಿ 12 ತನಗೆ ಬರಬೇಕಾದ ಸ್ವಾಸ್ತ್ಯವನ್ನು ಜನರ ಸಮಕ್ಷಮ ತೆಗೆದುಕೊಳ್ಳಲು ಯೆರೂಸಲೇವಿುನಿಂದ ಅಲ್ಲಿಗೆ ಹೊರಟು 13 ಬೆನ್ಯಾಮೀನಿನ ಬಾಗಿಲನ್ನು ಹಾದುಹೋಗುತ್ತಿರುವಾಗ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನೂ ಆದ ಇರೀಯನು ಅಲ್ಲಿ ಪಹರೆಕೊಡುತ್ತಿದ್ದು ಪ್ರವಾದಿಯಾದ ಆ ಯೆರೆಮೀಯನನ್ನು ಹಿಡಿದು ನೀನು ಕಸ್ದೀಯರನ್ನು ಮರೆಹೊಗಲು ಹೋಗುತ್ತಿದ್ದೀ ಎಂದು ಹೇಳಿದನು. 14 ಅದಕ್ಕೆ ಯೆರೆಮೀಯನು - ಅದು ಸುಳ್ಳು, ನಾನು ಕಸ್ದೀಯರನ್ನು ಮರೆಹೊಗುವವನಲ್ಲ ಎನ್ನಲು ಇರೀಯನು ಅವನ ಮಾತನ್ನು ಕೇಳದೆ ಅವನನ್ನು ಹಿಡಿದು ಪ್ರಧಾನರ ಬಳಿಗೆ ಕರತಂದನು. 15 ಆ ಪ್ರಧಾನರು ಯೆರೆಮೀಯನ ಮೇಲೆ ಕೋಪಗೊಂಡು ಅವನನ್ನು ಹೊಡೆಯಿಸಿ ತಾವು ಬಂದಿಖಾನೆಯನ್ನಾಗಿ ಮಾಡಿದ್ದ ಲೇಖಕನಾದ ಯೆಹೋನಾಥಾನನ ಮನೆಯಲ್ಲಿ ಸೆರೆಹಾಕಿಸಿದರು. 16 ಯೆರೆಮೀಯನು ಆ ಬಂದಿಖಾನೆಯ ನೆಲಮನೆಗಳಲ್ಲಿ ಕೆಲವು ದಿವಸ ಇದ್ದ ಮೇಲೆ 17 ಅರಸನಾದ ಚಿದ್ಕೀಯನು ಅವನನ್ನು ಕರತರಿಸಿ ಯೆಹೋವನಿಂದ ದೈವೋಕ್ತಿಯು ದೊರೆಯಿತೋ ಎಂದು ತನ್ನ ಮನೆಯಲ್ಲಿ ರಹಸ್ಯವಾಗಿ ವಿಚಾರಿಸಲು ಯೆರೆಮೀಯನು - ಹೌದು, ದೊರೆಯಿತು, ನೀನು ಬಾಬೆಲಿನ ಅರಸನ ಕೈಯಲ್ಲಿ ಸಿಕ್ಕಿ ಬೀಳುವಿ ಅಂದನು. 18 ಅಲ್ಲದೆ ಯೆರೆಮೀಯನು ಅರಸನಾದ ಚಿದ್ಕೀಯನಿಗೆ - ನೀವು ನನ್ನನ್ನು ಸೆರೆಯಲ್ಲಿ ಹಾಕಿಸಿದ್ದಕ್ಕೆ ನಾನು ನಿನಗಾಗಲಿ ನಿನ್ನ ಸೇವಕರಿಗಾಗಲಿ ಈ ಜನರಿಗಾಗಲಿ ಯಾವ ಅಪರಾಧವನ್ನು ಮಾಡಿದೆನು? 19 ಬಾಬೆಲಿನ ಅರಸನು ನಿಮಗೂ ಈ ದೇಶಕ್ಕೂ ವಿರುದ್ಧವಾಗಿ ಬಾರನು ಎಂದು ನಿಮಗೆ ಸಾರಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ? 20 ಎನ್ನೊಡೆಯನೇ, ಅರಸನೇ, ಈಗ ದಯಮಾಡಿ ಲಾಲಿಸು; ಲೇಖಕನಾದ ಯೆಹೋನಾಥಾನನ ಮನೆಗೆ ನನ್ನನ್ನು ತಿರಿಗಿ ಸೇರಿಸಬೇಡ, ಅಲ್ಲೇ ಸತ್ತೇನು, ನನ್ನ ಬಿನ್ನಹವು ನಿನಗೆ ಮುಟ್ಟಲಿ ಎಂದು ಅರಿಕೆಮಾಡಿದನು. 21 ಅರಸನಾದ ಚಿದ್ಕೀಯನು ಇದನ್ನು ಕೇಳಿ ಅಪ್ಪಣೆಕೊಡಲು ಯೆರೆಮೀಯನನ್ನು ಕಾರಾಗೃಹದ ಅಂಗಳದಲ್ಲಿಟ್ಟು ಪಟ್ಟಣದ ರೊಟ್ಟಿಯೆಲ್ಲಾ ತೀರುವ ತನಕ ರೊಟ್ಟಿಯ ಪೇಟೆಯಿಂದ ದಿನವಹಿ ಒಂದೊಂದು ರೊಟ್ಟಿಯನ್ನು ಅವನಿಗೆ ತಂದು ಕೊಡುತ್ತಿದ್ದರು. ಹೀಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India