ಯೆರೆಮೀಯ 34 - ಕನ್ನಡ ಸತ್ಯವೇದವು J.V. (BSI)ಶತ್ರುವು ಯೆರೂಸಲೇಮನ್ನು ಮುತ್ತುತ್ತಿರುವಾಗ ಯೆರೆಮೀಯನು ಅನುಭವಿಸಿದ ಹಿಂಸೆಗಳೂ ಮಾಡಿದ ಪ್ರವಾದನೆಗಳೂ ( 34 , 35 37—39 ) ಯೆರೂಸಲೇಮು ಬಾಬೆಲಿನ ಅರಸನ ವಶವಾಗುವದೆಂದು ಯೆರೆಮೀಯನು ಚಿದ್ಕೀಯನನ್ನು ಎಚ್ಚರಿಸಿದ್ದು 1 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು, ಅವನ ಪೂರ್ಣಸೈನ್ಯವು, ಅವನ ಕೈಕೆಳಗಣ ಸಮಸ್ತ ಭೂರಾಜ್ಯಗಳು, ಸಕಲ ಜನಗಳು, ಇವೆಲ್ಲಾ ಯೆರೂಸಲೇವಿುಗೂ ಅದಕ್ಕೆ ಸೇರಿದ ಎಲ್ಲಾ ಊರುಗಳಿಗೂ ವಿರುದ್ಧವಾಗಿ ಯುದ್ಧ ಮಾಡುತ್ತಿದ್ದಾಗ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು - 2 ಇಸ್ರಾಯೇಲ್ಯರ ದೇವರಾದ ಯೆಹೋವನು ಇಂತೆನ್ನುತ್ತಾನೆ - ನೀನು ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಹೋಗಿ ಅವನಿಗೆ ಹೀಗೆ ಹೇಳು - ಯೆಹೋವನ ಮಾತನ್ನು ಆಲಿಸು - ಇಗೋ, ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈವಶಮಾಡುವೆನು, ಅವನು ಅದನ್ನು ಬೆಂಕಿಯಿಂದ ಸುಟ್ಟುಬಿಡುವನು; 3 ನೀನು ಅವನ ಕೈಯಿಂದ ತಪ್ಪಿಸಿಕೊಳ್ಳಲಾರದೆ ಹಿಡಿಯಲ್ಪಟ್ಟು ಅವನ ವಶವಾಗುವಿ; ಬಾಬೆಲಿನ ಅರಸನ ಸಮಕ್ಷಮದಲ್ಲಿ ನಿಲ್ಲುವಿ; ಅವನು ನಿನ್ನ ಸಂಗಡ ಎದುರೆದುರಾಗಿ ಮಾತಾಡುವನು; ನೀನು ಬಾಬೆಲಿಗೆ ಗಡೀಪಾರಾಗುವಿ. 4 ಆದರೂ ಯೆಹೂದದ ಅರಸನಾದ ಚಿದ್ಕೀಯನೇ, ಯೆಹೋವನ ಮಾತನ್ನು ಕೈಕೊಳ್ಳು; ಯೆಹೋವನು ನಿನ್ನ ವಿಷಯವಾಗಿ ಇಂತೆನ್ನುತ್ತಾನೆ - [ನೀನು ಕೇಳಿ ಕೈಕೊಂಡರೆ] ಖಡ್ಗದಿಂದ ಹತನಾಗುವದಿಲ್ಲ; ಸುಖವಾಗಿ ಸಾಯುವಿ; 5 ನಿನಗಿಂತ ಮುಂಚಿನ ನಿನ್ನ ಪಿತೃಗಳಾದ ಅರಸರಿಗೆ ಧೂಪಹಾಕಿದ ಪ್ರಕಾರ ನಿನಗೂ ಹಾಕುವರು; ಅಯ್ಯೋ, ಪ್ರಭುವೇ ಎಂದು ನಿನಗಾಗಿ ಗೋಳಾಡುವರು; ನಾನೇ ನುಡಿದಿದ್ದೇನೆ ಎಂದು ಯೆಹೋವನು ಅನ್ನುತ್ತಾನೆ. 6 ಆಗ ಪ್ರವಾದಿಯಾದ ಯೆರೆಮೀಯನು ಈ ಮಾತುಗಳನ್ನೆಲ್ಲಾ ಯೆರೂಸಲೇವಿುನಲ್ಲಿ ಯೆಹೂದದ ಅರಸನಾದ ಚಿದ್ಕೀಯನಿಗೆ ಹೇಳಿದನು. 7 ಬಾಬೆಲಿನ ಅರಸನ ಸೈನ್ಯವು ಯೆರೂಸಲೇವಿುಗೂ ಯೆಹೂದದೊಳಗೆ ಕೋಟೆಕೊತ್ತಲದ ಪಟ್ಟಣಗಳಿಗಾಗಿ ಉಳಿದಿದ್ದ ಲಾಕೀಷಿಗೂ ಅಜೇಕಕ್ಕೂ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾಗ ಹೇಳಿದನು. ಯೆರೂಸಲೇವಿುನವರು ತಮ್ಮ ಗುಲಾಮರಿಗೆ ಕೊಟ್ಟ ಮಾತಿಗೆ ಹಿಂದೆಗೆಯಲು ಯೆರೆಮೀಯನು ಅವರನ್ನು ಖಂಡಿಸಿದ್ದು 8 ಆಮೇಲೆ ಯೆಹೋವನು ಯೆರೆಮೀಯನಿಗೆ ಒಂದು ಮಾತನ್ನು ದಯಪಾಲಿಸಿದನು. ಇಷ್ಟರೊಳಗೆ ಅರಸನಾದ ಚಿದ್ಕೀಯನು ಯೆರೂಸಲೇವಿುನವರೆಲ್ಲರೊಂದಿಗೆ ಸೇರಿ - 9 ನಮ್ಮಲ್ಲಿ ಪ್ರತಿಯೊಬ್ಬನು ತನ್ನ ದಾಸದಾಸಿಯರೊಳಗೆ ಇಬ್ರಿಯರನ್ನು ಬಿಡುಗಡೆಮಾಡುವನು; ಯಾರೂ ತನ್ನ ಸಹೋದರನಾದ ಯೆಹೂದ್ಯನಿಂದ ಇನ್ನು ಗುಲಾಮತನ ಮಾಡಿಸಿಕೊಳ್ಳುವದಿಲ್ಲ ಎಂದು ಅವರಿಗೆ ವಿಮೋಚನೆಯನ್ನು ಪ್ರಕಟಿಸುವ ಒಡಂಬಡಿಕೆಯನ್ನು ಮಾಡಿಕೊಂಡಿದ್ದನು. 10 ಆಗ ತಾವು ತಮ್ಮ ತಮ್ಮ ದಾಸದಾಸಿಯರನ್ನು ಬಿಡುಗಡೆಮಾಡಿ ಅವರಿಂದ ಇನ್ನು ಗುಲಾಮತನ ಮಾಡಿಸಿಕೊಳ್ಳುವದಿಲ್ಲ ಎಂದು ಒಡಂಬಡಿಕೆಗೆ ಒಪ್ಪಿಕೊಂಡ ಸಕಲ ಪ್ರಧಾನರೂ ಸಮಸ್ತ ಪ್ರಜೆಗಳೂ ಅದರಂತೆ ನಡೆದು ಅವರನ್ನು ವಿಮೋಚಿಸಿದರು. 11 ಆದರೆ ಕೆಲವು ಕಾಲದ ಮೇಲೆ ಮನಸ್ಸನ್ನು ಬೇರೆಮಾಡಿಕೊಂಡು ತಾವು ಬಿಟ್ಟಿದ್ದವರನ್ನು ಪುನಃ ದಾಸದಾಸಿಯರನ್ನಾಗಿ ಸೇರಿಸಿಕೊಂಡು ಅಧೀನಮಾಡಿಕೊಂಡರು. 12 ಹೀಗಿರಲು ಯೆಹೋವನು ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು - 13 ಇಸ್ರಾಯೇಲ್ಯರ ದೇವರಾದ ಯೆಹೋವನು ಇಂತೆನ್ನುತ್ತಾನೆ - ಐಗುಪ್ತದೇಶದಲ್ಲಿ ದಾಸರಾಗಿದ್ದ ನಿಮ್ಮ ಪಿತೃಗಳನ್ನು ನಾನು ಅಲ್ಲಿಂದ ಕರತಂದಾಗ - 14 ತನ್ನನ್ನು ನಿಮಗೆ ಮಾರಿಕೊಂಡು ಆರು ವರುಷ ನಿಮ್ಮ ದಾಸನಾಗಿದ್ದ ಇಬ್ರಿಯನಾದ ಪ್ರತಿಯೊಬ್ಬ ಸಹೋದರನನ್ನು ಏಳನೆಯ ವರುಷದಲ್ಲಿ ಸ್ವತಂತ್ರನನ್ನಾಗಿ ಬಿಟ್ಟುಬಿಡಿರಿ ಎಂದು ವಿಧಿಸಿ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡೆನಷ್ಟೆ; ಆದರೆ ನಿಮ್ಮ ಪಿತೃಗಳು ನನ್ನ ಮಾತಿಗೆ ಕಿವಿಗೊಡಲಿಲ್ಲ, ಕೇಳಲಿಲ್ಲ. 15 ನೀವೋ ಈಗಲೇ ಮನಮರುಗಿ ನಿಮ್ಮ ನಿಮ್ಮ ನೆರೆಹೊರೆಯವರಿಗೆ ವಿಮೋಚನೆಯನ್ನು ಪ್ರಕಟಿಸಿ ನನ್ನ ಚಿತ್ತಾನುಸಾರವಾಗಿ ನಡೆದಿರಿ; ನನ್ನ ಹೆಸರಿನಿಂದ ಖ್ಯಾತಿಗೊಂಡಿರುವ ಆಲಯದಲ್ಲಿ ನನ್ನ ಮುಂದೆ ಒಡಂಬಡಿಕೆಮಾಡಿಕೊಂಡಿರಿ; 16 ಆಮೇಲೆ ನೀವು ಮನಸ್ಸನ್ನು ಬೇರೆ ಮಾಡಿಕೊಂಡಿರಿ; ಸ್ವತಂತ್ರರನ್ನಾಗಿ ಬಿಟ್ಟಿದ್ದವರನ್ನು ಪುನಃ ದಾಸದಾಸಿಯರನ್ನಾಗಿ ಸೇರಿಸಿಕೊಂಡು ಅಧೀನಮಾಡಿಕೊಂಡು ನನ್ನ ನಾಮವನ್ನು ಅಪಕೀರ್ತಿಗೆ ಗುರಿಮಾಡಿದಿರಿ. 17 ಆದಕಾರಣ ಯೆಹೋವನು ಇಂತೆನ್ನುತ್ತಾನೆ - ನೀವು ನನ್ನನ್ನು ಕೇಳಲಿಲ್ಲ, ನಿಮ್ಮ ನಿಮ್ಮ ಸಹೋದರರಿಗೂ ನೆರೆಹೊರೆಯವರಿಗೂ ಬಿಡುಗಡೆಯನ್ನು ಪ್ರಕಟಿಸಲಿಲ್ಲ; ಇದೇ ಯೆಹೋವನ ನುಡಿ - ಇಗೋ, ನಾನು ನಿಮಗೆ ಬಿಡುಗಡೆಯನ್ನು ಪ್ರಕಟಿಸುತ್ತೇನೆ; ನಿಮ್ಮನ್ನು ಖಡ್ಗವ್ಯಾಧಿಕ್ಷಾಮಗಳಿಗೆ ಗುರಿಯಾಗುವಂತೆ ಬಿಡುತ್ತೇನೆ; ನಿಮ್ಮನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. 18 ಕರುವನ್ನು ಸೀಳಿ ಅದರ ಹೋಳುಗಳ ನಡುವೆ ಹಾದುಹೋಗಿ ನನ್ನ ಮುಂದೆ ಮಾಡಿದ ಒಪ್ಪಂದದ ನಿಬಂಧನೆಗಳನ್ನು ಕೈಕೊಳ್ಳದೆ 19 ನನ್ನ ಒಡಂಬಡಿಕೆಯನ್ನು ಮೀರಿದ ಯೆಹೂದದ ಪ್ರಧಾನರು, ಯೆರೂಸಲೇವಿುನ ಪ್ರಧಾನರು, ಕಂಚುಕಿಗಳು, ಯಾಜಕರು, ಕರುವಿನ ಹೋಳುಗಳ ನಡುವೆ ಹಾದುಹೋದ ದೇಶದ ಸಕಲ ಜನರು, 20 ಇವರೆಲ್ಲರನ್ನೂ ಇವರ ಪ್ರಾಣವನ್ನು ಹುಡುಕುವ ಶತ್ರುಗಳ ಕೈಗೆ ಕೊಡುವೆನು; ಇವರ ಹೆಣಗಳು ಆಕಾಶಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವಾಗುವವು. 21 ಯೆಹೂದದ ಅರಸನಾದ ಚಿದ್ಕೀಯನನ್ನೂ ಅವನ ಪ್ರಧಾನರನ್ನೂ ಅವರ ಪ್ರಾಣ ಹುಡುಕುವ ಶತ್ರುಗಳ ಕೈಗೆ, ಅಂದರೆ ನಿಮ್ಮನ್ನು ಬಿಟ್ಟುಹೋಗಿರುವ ಬಾಬೆಲಿನ ಅರಸನ ಕೈಗೆ ಕೊಡುವೆನು. 22 ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಅಪ್ಪಣೆಕೊಟ್ಟು ಆ ಶತ್ರುಗಳು ಈ ಪಟ್ಟಣಕ್ಕೆ ಹಿಂದಿರುಗುವಂತೆ ಮಾಡುವೆನು; ಅವರು ಅದಕ್ಕೆ ವಿರುದ್ಧವಾಗಿ ಯುದ್ಧಮಾಡಿ ಅದನ್ನು ಆಕ್ರವಿುಸಿ ಬೆಂಕಿಯಿಂದ ಸುಟ್ಟುಬಿಡುವರು; ಮತ್ತು ನಾನು ಯೆಹೂದದ ಪಟ್ಟಣಗಳನ್ನು ಜನವಿಲ್ಲದ ಬೀಳುಭೂವಿುಯನ್ನಾಗಿ ಮಾಡುವೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India