Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 30 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲನ್ನೂ ಯೆಹೂದವನ್ನೂ ಸುಸ್ಥಿತಿಗೆ ತರುವೆನೆಂಬ ಯೆಹೋವನ ವಾಗ್ದಾನ ( 30 , 31 ) ಪೀಠಿಕೆ

1 ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು -

2 ಇಸ್ರಾಯೇಲ್ಯರ ದೇವರಾದ ಯೆಹೋವನು ಇಂತೆನ್ನುತ್ತಾನೆ - ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲಾ ಗ್ರಂಥವಾಗಿ ಬರೆ.

3 ಇಗೋ ನಾನು ನನ್ನ ಜನರಾದ ಇಸ್ರಾಯೇಲ್ಯರನ್ನೂ ಯೆಹೂದ್ಯರನ್ನೂ ಅವರ ದುರವಸ್ಥೆಯಿಂದ ತಪ್ಪಿಸುವ ದಿನಗಳು ಬರುವವು. ಆಗ ನಾನು ಅವರನ್ನು ಅವರ ಪಿತೃಗಳಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು. ಅವರು ಅದನ್ನು ಅನುಭವಿಸುವರು. ಇದು ಯೆಹೋವನ ನುಡಿ.


ಇಸ್ರಾಯೇಲಿಗೆ ಸಂಭವಿಸುವ ಬಾಧೆಯೂ ಉದ್ಧಾರವೂ

4 ಯೆಹೋವನು ಇಸ್ರಾಯೇಲಿನ ಮತ್ತು ಯೆಹೂದದ ವಿಷಯವಾಗಿ ಈ ಮಾತುಗಳನ್ನು ಹೇಳಿದನು -

5 ಯೆಹೋವನು ಇಂತೆನ್ನುತ್ತಾನೆ, ಭೀತಿಯಿಂದಾಗುವ ಶಬ್ದವು ಕೇಳಿಸಿದೆ; ಭಯವೇ ಹೊರತು ಸಮಾಧಾನವಿಲ್ಲ;

6 ವಿಚಾರಿಸಿ ನೋಡಿರಿ, ಗಂಡಸು ಪ್ರಸವವೇದನೆ ಪಡುವದುಂಟೇ? ಪ್ರತಿಯೊಬ್ಬನು ಹೆರುವವಳಂತೆ ಸೊಂಟವನ್ನು ಹಿಸಕಿಕೊಳ್ಳುವದು, ಎಲ್ಲಾ ಮುಖಗಳು ಬಿಳಿಚಿಕೊಂಡಿರುವದು, ಇವು ಏಕೆ ನನ್ನ ಕಣ್ಣಿಗೆ ಬೀಳುತ್ತವೆ?

7 ಅಯ್ಯೋ, ಆ ದಿನವು ಘೋರವಾದದ್ದು, ಅದಕ್ಕೆ ಎಣೆಯಿಲ್ಲ; ಅದು ಯಾಕೋಬ್ಯರಿಗೆ ಇಕ್ಕಟ್ಟಿನ ದಿನ; ಆದರೂ ಅದರಿಂದ ಪಾರಾಗುವರು.

8 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ - ನಾನು ಆ ದಿನದಲ್ಲಿ ಅವನು ಹೇರಿದ ನೊಗವನ್ನು ಅವರ ಹೆಗಲಿನಿಂದ ಮುರಿದುಬಿಟ್ಟು ಕಣ್ಣಿಗಳನ್ನು ಕಿತ್ತುಹಾಕುವೆನು; ಇನ್ನು ಅನ್ಯರು ಅವರನ್ನು ಅಡಿಯಾಳಾಗಿ ಮಾಡಿಕೊಳ್ಳರು;

9 ಅವರು ತಮ್ಮ ದೇವರಾದ ಯೆಹೋವನೆಂಬ ನನ್ನನ್ನೂ ನಾನು ಅವರಿಗಾಗಿ ಏರ್ಪಡಿಸುವ ರಾಜನಾದ ದಾವೀದನನ್ನೂ ಸೇವಿಸುವರು.

10 ಯೆಹೋವನು ಇಂತೆನ್ನುತ್ತಾನೆ - ನನ್ನ ಸೇವಕ ಯಾಕೋಬೇ, ಭಯಪಡಬೇಡ! ಇಸ್ರಾಯೇಲೇ, ಅಂಜಬೇಡ! ಇಗೋ ನಾನು ನಿನ್ನನ್ನು ದೂರದೇಶದಿಂದ ಉದ್ಧರಿಸುವೆನು, ನಿನ್ನ ಸಂತಾನವನ್ನು ಸೆರೆಹೋದ ಸೀಮೆಯಿಂದ ರಕ್ಷಿಸುವೆನು; ಯಾಕೋಬು ಹಿಂದಿರುಗಿ ನೆಮ್ಮದಿಯಾಗಿಯೂ ಹಾಯಾಗಿಯೂ ಇರುವದು;

11 ಯಾರೂ ಅದನ್ನು ಹೆದರಿಸರು. ಯೆಹೋವನು ಇಂತೆನ್ನುತ್ತಾನೆ - ನಾನು ನಿನ್ನನ್ನು ರಕ್ಷಿಸಲು ನಿನ್ನೊಂದಿಗಿದ್ದೇನೆ; ನಾನು ಯಾವ ಜನಾಂಗಗಳಲ್ಲಿಗೆ ನಿನ್ನನ್ನು ಅಟ್ಟಿ ಚದರಿಸಿದೆನೋ ಆ ಜನಾಂಗಗಳನ್ನೆಲ್ಲಾ ನಿರ್ಮೂಲಮಾಡುವೆನು, ನಿನ್ನನ್ನೋ ನಿರ್ಮೂಲಮಾಡೆನು; ನಿನ್ನನ್ನು ವಿುತಿಮೀರಿ ಶಿಕ್ಷಿಸೆನು. ಆದರೆ ಶಿಕ್ಷಿಸದೆ ಬಿಡುವದಿಲ್ಲ.


ಹಾಳಾಗಿ ಹೋದ ಚೀಯೋನನ್ನು ಯೆಹೋವನು ಮೇಲ್ಮೆಗೆ ತರುವದು

12 ಯೆಹೋವನು ಇಂತೆನ್ನುತ್ತಾನೆ - ನಿನ್ನ ಗಾಯವು ಗುಣಹೊಂದದು, ನಿನ್ನ ಬಾಸುಂಡೆಯು ಘೋರವಾಗಿದೆ.

13 ನಿನ್ನ ಭಾಗಕ್ಕೆ ಯಾರೂ ಇಲ್ಲ, ನಿನ್ನ ವ್ರಣಕ್ಕೆ ಔಷಧವಿಲ್ಲ, ನಿನಗೆ ವಾಸಿಯಾಗದು.

14 ನಿನ್ನ ವಿುಂಡರಾರೂ ನಿನ್ನನ್ನು ಹುಡುಕುವದಿಲ್ಲ, ಮರೆತುಬಿಟ್ಟರು; ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದದರಿಂದ ನಾನು ಶತ್ರುವಾಗಿ ನಿನ್ನನ್ನು ಹೊಡೆದೆನು, ಕ್ರೂರನಾಗಿ ದಂಡಿಸಿದೆನು.

15 ಅಯ್ಯೋ, ನೋವು ನಿಲ್ಲದು ಎಂದು ನಿನ್ನ ವ್ರಣಕ್ಕಾಗಿ ಏಕೆ ಅರಚಿಕೊಳ್ಳುತ್ತೀ? ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದದರಿಂದ ನಿನಗೆ ಇದನ್ನೆಲ್ಲಾ ಮಾಡಿದೆನು.

16 ಹೀಗಿರಲು ನಿನ್ನನ್ನು ನುಂಗುವವರೆಲ್ಲರು ನುಂಗಲ್ಪಡುವರು; ನಿನ್ನ ಶತ್ರುಗಳೆಲ್ಲಾ ಒಬ್ಬನೂ ತಪ್ಪದೆ ಸೆರೆಗೆ ಹೋಗುವರು, ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು, ನಿನ್ನನ್ನು ಕೊಳ್ಳೆ ಹೊಡೆಯುವವರನ್ನು ಕೊಳ್ಳೆಗೆ ಈಡುಮಾಡುವೆನು.

17 ಯೆಹೋವನು ಇಂತೆನ್ನುತ್ತಾನೆ - ಇಗೋ, ಇದು ಚೀಯೋನ್, ಯಾರಿಗೂ ಬೇಡವಾಗಿರುವ ನಗರಿ ಎಂದು ಜನರು ಹೇಳಿ ನಿನ್ನನ್ನು ಭ್ರಷ್ಟಳೆಂದದ್ದನ್ನು ನಾನು ಸಹಿಸಲಾರದೆ ನಿನಗೆ ಗುಣಪಡಿಸಿ ನಿನ್ನ ಬಾಸುಂಡೆಗಳನ್ನು ವಾಸಿಮಾಡುವೆನು.

18 ಯೆಹೋವನು ಹೀಗನ್ನುತ್ತಾನೆ - ಆಹಾ, ನಾನು ಯಾಕೋಬಿನ ಮನೆಗಳ ದುರವಸ್ಥೆಯನ್ನು ತಪ್ಪಿಸಿ ಅದರ ನಿವಾಸಗಳನ್ನು ಕರುಣಿಸುವೆನು; ಪಟ್ಟಣವು ತನ್ನ ಹಾಳುದಿಬ್ಬದ ಮೇಲೆ ಪುನಃ ಕಟ್ಟಲ್ಪಡುವದು, ಅರಮನೆಯು ತಾನಿದ್ದ ಸ್ಥಳದಲ್ಲೇ ನೆಲೆಯಾಗಿರುವದು.

19 ಅವುಗಳೊಳಗಿಂದ ಸ್ತೋತ್ರವೂ ವಿನೋದಪಡುವವರ ಧ್ವನಿಯೂ ಕೇಳಿಸುವವು; ನಾನು ಆ ಜನರನ್ನು ಹೆಚ್ಚಿಸುವೆನು, ಇನ್ನು ಕೊಂಚವಾಗಿರರು, ಅವರನ್ನು ಘನಪಡಿಸುವೆನು, ಇನ್ನು ಹೀನರಾಗಿರರು.

20 ಅವರ ಸಂತಾನವು ಪೂರ್ವದ ಸ್ಥಿತಿಯನ್ನು ಹೊಂದುವದು, ಅವರ ಸಮಾಜವು ನನ್ನ ಮುಂದೆ ನೆಲೆಯಾಗಿರುವದು, ಅವರನ್ನು ಬಾಧಿಸುವವರನ್ನೆಲ್ಲಾ ದಂಡಿಸುವೆನು.

21 ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗಿರುವನು, ಅವರ ವಂಶದವನೇ ಅವರನ್ನಾಳುವನು; ನಾನು ಅವನನ್ನು ನನ್ನ ಹತ್ತಿರಕ್ಕೆ ಬರಗೊಡಿಸಲಾಗಿ ಅವನು ನನ್ನ ಸನ್ನಿಧಾನಕ್ಕೆ ಸೇರುವನು; ನನ್ನನ್ನು ಸಮೀಪಿಸುವದಕ್ಕೆ ಯಾರು ಧೈರ್ಯಗೊಂಡಾರು? ಇದು ಯೆಹೋವನ ನುಡಿ.

22 ನೀವು ನನಗೆ ಜನರಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.


ಯೆಹೋವನ ರೋಷವೆಂಬ ಬಿರುಗಾಳಿ

23 ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಬಡಿದುಕೊಂಡು ಹೋಗುವ ಗಾಳಿಯು, ಹೊರಟಿದೆ; ಅದು ದುಷ್ಟರ ತಲೆಯ ಮೇಲೆ ಹೊಡೆಯುವದು.

24 ಯೆಹೋವನು ತನ್ನ ಹೃದಯಾಲೋಚನೆಯನ್ನು ನಡಿಸಿ ನೆರವೇರಿಸುವ ತನಕ ಆತನ ರೋಷವು ಹಿಂದಿರುಗದು; ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಗ್ರಹಿಸುವಿರಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು