ಯೆರೆಮೀಯ 3 - ಕನ್ನಡ ಸತ್ಯವೇದವು J.V. (BSI)1 ಯೆಹೋವನು ಹೀಗನ್ನುತ್ತಾನೆ - ಗಂಡನು ತ್ಯಜಿಸಿದವಳು ಅವನಿಂದ ಹೊರಟು ಮತ್ತೊಬ್ಬನವಳಾದ ಮೇಲೆ ಅವಳನ್ನು ಆ ಗಂಡನು ತಿರಿಗಿ ಸೇರಿಸಿಕೊಂಡಾನೇ? ಸೇರಿಸಿಕೊಂಡರೆ ಆ ದೇಶವು ಕೇವಲ ಅಪವಿತ್ರವಾಗಿ ಹೋಗುವದಲ್ಲವೆ! ಹೀಗಿರಲು ಬಹುಮಂದಿ ವಿುಂಡರೊಡನೆ ಸೂಳೆತನ ಮಾಡಿದ ನೀನು ನನ್ನ ಬಳಿಗೆ ತಿರಿಗಿ ಬರುತ್ತೀಯಾ? 2 ಕಣ್ಣೆತ್ತಿ ಬೋಳುಗುಡ್ಡಗಳನ್ನು ನೋಡು, ಯಾವದರಲ್ಲಿ ನಿನ್ನನ್ನು ಕೆಡಿಸಲಿಲ್ಲ? ಅರಬಿಯನು ಅಡವಿಯಲ್ಲಿ ಹೊಂಚುಹಾಕುವ ಹಾಗೆ ನೀನು ದಾರಿಯ ಮಗ್ಗುಲಲ್ಲಿ ಅವರಿಗಾಗಿ ಹೊಂಚುತ್ತಾ ಕೂತಿದ್ದೀ; ನಿನ್ನ ಸೂಳೆತನದಿಂದಲೂ ನಿನ್ನ ಕೆಟ್ಟತನದಿಂದಲೂ ದೇಶವನ್ನು ಅಪವಿತ್ರಮಾಡಿದ್ದೀ. 3 ಆದಕಾರಣ ಹದಮಳೆಗೆ ಅಡ್ಡಿಯಾಯಿತು, ಹಿಂಗಾರೂ ಆಗಲಿಲ್ಲ; ಆದರೂ ನೀನು ಸೂಳೆಯ ಮುಖವುಳ್ಳವಳಾಗಿ ನಾಚಿಕೆಗೆಟ್ಟಿದ್ದೀ. 4 ಈಗತಾನೆ ನನ್ನನ್ನು - ನನ್ನ ತಂದೆ, ನನ್ನ ಯೌವನದ ಆಪ್ತನು ಎಂದು ಕರೆಯುತ್ತೀಯಲ್ಲಾ. 5 ಆತನು ನಿತ್ಯವಾಗಿ ಕೋಪಮಾಡುವನೋ? ಕೊನೆಯ ತನಕ ಇಟ್ಟುಕೊಳ್ಳುವನೋ? ಅಂದುಕೊಳ್ಳುತ್ತಿದ್ದೀ. ಇಗೋ, ನೀನು ಹೀಗೆ ಮಾತಾಡಿದರೇನು? ದುಷ್ಕೃತ್ಯಗಳನ್ನು ನಡಿಸಿ ಕೃತಾರ್ಥಳಾಗಿದ್ದೀ. ಭ್ರಷ್ಟಳಾದ ಇಸ್ರಾಯೇಲಿನ ಪಾಪಕ್ಕಿಂತ ದ್ರೋಹಿಯಾದ ಯೆಹೂದದ ಪಾಪವು ಹೆಚ್ಚು 6 ಮತ್ತೆ ಅರಸನಾದ ಯೋಷೀಯನ ಕಾಲದಲ್ಲಿ ಯೆಹೋವನು ನನಗೆ ಹೀಗೆ ಹೇಳಿದನು - ಭ್ರಷ್ಟಳಾದ ಇಸ್ರಾಯೇಲು ಮಾಡಿದ್ದನ್ನು ನೋಡಿದಿಯಾ? ಅವಳು ಎತ್ತರವಾದ ಎಲ್ಲಾ ಗುಡ್ಡಗಳನ್ನು ಹತ್ತಿ ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳ ಕೆಳಗೆ ಹೋಗಿ ಸೂಳೆಯಾಗಿ ನಡೆದಳಷ್ಟೆ. 7 ಅವಳು ಇವುಗಳನ್ನೆಲ್ಲಾ ನಡಿಸಿದ ಮೇಲೆ ನನ್ನ ಬಳಿಗೆ ಪುನಃ ಬಂದಾಳು ಅಂದುಕೊಂಡೆನು. ಆದರೆ ಬರಲಿಲ್ಲ. ಆಗ ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ಇದನ್ನು ನೋಡಿದಳು. 8 ಭ್ರಷ್ಟಳಾದ ಇಸ್ರಾಯೇಲು ಹಾದರಮಾಡಿದ ಕಾರಣದಿಂದಲೇ ನಾನು ಅವಳನ್ನು ನಿರಾಕರಿಸಿ ತ್ಯಾಗಪತ್ರ ಕೊಟ್ಟದ್ದನ್ನು ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ನೋಡಿಯೂ ಅಂಜದೆ ತಾನೂ ಹೋಗಿ ಸೂಳೆತನವನ್ನು ನಡಿಸಿದಳು. 9 ಕಲ್ಲು ಮರಗಳೊಡನೆ ಹಾದರಮಾಡಿ ಲಘುವೆಂದು ಭಾವಿಸಿಕೊಂಡ ತನ್ನ ಸೂಳೆತನದಿಂದ ದೇಶವನ್ನು ಅಪವಿತ್ರಪಡಿಸಿದಳು. 10 ಇಸ್ರಾಯೇಲಿಗೆ ಇಷ್ಟು ದಂಡನೆ ಆದರೂ ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ನನ್ನ ಕಡೆಗೆ ಪೂರ್ಣಮನದಿಂದಲ್ಲ, ಕಪಟದಿಂದಲೇ ತಿರುಗಿಕೊಂಡಿದ್ದಾಳೆ ಎಂಬದು ಯೆಹೋವನಾದ ನನ್ನ ನುಡಿ. 11 ಮತ್ತು ಯೆಹೋವನು ನನಗೆ ಹೀಗೆ ಹೇಳಿದನು - ಭ್ರಷ್ಟಳಾದ ಇಸ್ರಾಯೇಲು ದ್ರೋಹಿಯಾದ ಯೆಹೂದಕ್ಕಿಂತಲೂ ಶಿಷ್ಟಳಾಗಿ ಕಂಡುಬಂದಿದ್ದಾಳೆ. 12 ನೀನು ಹೋಗಿ ಉತ್ತರದಿಕ್ಕಿಗೆ ಈ ಮಾತುಗಳನ್ನು ಸಾರು - ಯೆಹೋವನು ಹೀಗನ್ನುತ್ತಾನೆ, ಭ್ರಷ್ಟಳಾದ ಇಸ್ರಾಯೇಲೇ, ಹಿಂದಿರುಗು; ನಾನು ಕೋಪ ಮುಖದಿಂದ ನಿನ್ನನ್ನು ನೋಡೆನು, ನಾನು ಕರುಣಾಶಾಲಿ, ನಿತ್ಯಕೋಪಿಯಲ್ಲ. 13 ಇದೊಂದನ್ನು ಮಾಡು, ನೀನು ಕಂಡಕಡೆಯೆಲ್ಲ ತಿರುಗುತ್ತಾ ಸೊಂಪಾಗಿ ಬೆಳೆದಿರುವ ಪ್ರತಿಯೊಂದು ಮರದ ಕೆಳಗೆ ಅನ್ಯರನ್ನು ಸೇರಿ ನನ್ನ ಮಾತನ್ನು ಕೇಳದೆ ನಿನ್ನ ದೇವರಾದ ಯೆಹೋವನೆಂಬ ನನಗೆ ದ್ರೋಹಮಾಡಿದ್ದೀ ಎಂಬದಕ್ಕೆ ಒಪ್ಪಿಕೋ. 14 ಇದೇ ಯೆಹೋವನ ನುಡಿ - ಭ್ರಷ್ಟರಾದ ಮಕ್ಕಳೇ, ತಿರುಗಿಕೊಳ್ಳಿರಿ, ನಾನು ನಿಮಗೆ ಪತಿ; ಒಂದು ಪಟ್ಟಣಕ್ಕೆ ಒಬ್ಬನಂತೆಯೂ ಗೋತ್ರಕ್ಕೆ ಇಬ್ಬರಂತೆಯೂ ಆರಿಸಿ ಚೀಯೋನಿಗೆ ಕರತರುವೆನು. 15 ಇದಲ್ಲದೆ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ದಯಪಾಲಿಸುವೆನು; ಅವರು ನಿಮ್ಮನ್ನು ಜ್ಞಾನವಿವೇಕಗಳಿಂದ ಪೋಷಿಸುವರು. 16 ನೀವು ದೇಶದಲ್ಲಿ ಹೆಚ್ಚಿನ ವೃದ್ಧಿಗೆ ಬಂದಿರುವಾಗ ಇನ್ನು ಯೆಹೋವನ ನಿಬಂಧನಮಂಜೂಷದ ಪ್ರಸ್ತಾಪವಿರದು, ಅದು ಜ್ಞಾಪಕಕ್ಕೆಬಾರದು, ಯಾರೂ ಸ್ಮರಿಸರು, ಅದು ಇಲ್ಲವಲ್ಲಾ ಎಂದು ದುಃಖಿಸರು, ಹೊಸದಾಗಿ ಕಲ್ಪಿಸಿಕೊಳ್ಳರು, ಇದು ಯೆಹೋವನ ನುಡಿ. 17 ಆ ಕಾಲದಲ್ಲಿ ಯೆರೂಸಲೇಮನ್ನು ಯೆಹೋವನ ಸಿಂಹಾಸನವೆಂದು ಕರೆಯುವರು; ಯೆಹೋವನ ನಾಮಮಹತ್ವದ ಸ್ಥಾನವಾದ ಯೆರೂಸಲೇವಿುಗೆ ಸಕಲ ಜನಾಂಗಗಳವರು ನೆರೆದುಬರುವರು; ಇನ್ನು ಮೇಲೆ ತಮ್ಮ ದುಷ್ಟಹೃದಯದ ಹಟದಂತೆ ನಡೆಯರು. 18 ಆ ಕಾಲದಲ್ಲಿ ಯೆಹೂದವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ನಡೆಯುವದು, ಎರಡೂ ಕಲೆತು ನಾನು ನಿಮ್ಮ ಪಿತೃಗಳಿಗೆ ಬಾಧ್ಯವಾಗಿ ದಯಪಾಲಿಸಿದ ದೇಶಕ್ಕೆ ಬಡಗಣ ಸೀಮೆಯೊಳಗಿಂದ ಬರುವವು. ಪಶ್ಚಾತ್ತಾಪಪಡುವ ತನ್ನ ಜನರನ್ನು ಯೆಹೋವನು ಸ್ವೀಕರಿಸುವನು 19 ನಾನು ಎಷ್ಟೋ ಸಂತೋಷದಿಂದ ಗಂಡು ಮಕ್ಕಳೊಳಗೆ ನಿನ್ನನ್ನೂ ಎಣಿಸಿ ನಿನಗೆ ಮನೋಹರವಾದ ದೇಶವನ್ನು ಅಂದರೆ ಸಮಸ್ತಜನಾಂಗಗಳ ಬಾಧ್ಯಗಳಲ್ಲಿ ರಮಣೀಯವಾದದ್ದನ್ನು ಕೊಡುವೆನು; ನೀನು ನನ್ನ ಅನುಸರಣೆಯನ್ನು ಬಿಟ್ಟು ಓರೆಯಾಗದೆ ನನ್ನನ್ನು ತಂದೆಯೆನ್ನುವಿ ಅಂದುಕೊಂಡೆನು. 20 ಇಸ್ರಾಯೇಲ್ ವಂಶದವರೇ, ಒಬ್ಬ ಹೆಂಗಸು ಪತಿದ್ರೋಹ ಮಾಡಿದಂತೆ ನೀವು ನನಗೆ ದ್ರೋಹವನ್ನು ಮಾಡಿಯೇ ಇದ್ದೀರಿ ಎಂದು ಯೆಹೋವನು ಅನ್ನುತ್ತಾನೆ. 21 ಆಹಾ, ಬೋಳುಗುಡ್ಡಗಳಲ್ಲಿ ಒಂದು ಶಬ್ದ! ತಾವು ಡೊಂಕುದಾರಿಯನ್ನು ಹಿಡಿದು ತಮ್ಮ ದೇವರಾದ ಯೆಹೋವನನ್ನು ಮರೆತು ಬಿಟ್ಟಿದ್ದೇವೆಂದು ಇಸ್ರಾಯೇಲ್ಯರು ಕಣ್ಣೀರು ಸುರಿಸಿ ದೇವರ ಕೃಪೆಯನ್ನು ಬೇಡುತ್ತಿದ್ದಾರಲ್ಲಾ. 22 ಭ್ರಷ್ಟರಾದ ಮಕ್ಕಳೇ, ಹಿಂದಿರುಗಿರಿ, ನಿಮ್ಮ ಭ್ರಷ್ಟತ್ವವನ್ನು ಪರಿಹರಿಸುವೆನು [ಎಂದು ಯೆಹೋವನು ಅನ್ನುತ್ತಾನೆ. ಅದಕ್ಕೆ ಜನರು] - ಇಗೋ, ನಿನ್ನ ಬಳಿಗೆ ಬಂದೆವು. ನೀನು ಯೆಹೋವನು, ನಮ್ಮ ದೇವರು. 23 ನಿಶ್ಚಯವಾಗಿ ಗುಡ್ಡಗಳಿಂದಲೂ ಬೆಟ್ಟಗಳ ಜಾತ್ರೆಯ ಗದ್ದಲದಿಂದಲೂ ಮೋಸವಾಯಿತು; ನಿಜನಿಜವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಯೆಹೋವನಲ್ಲಿ ನೆಲೆಗೊಂಡಿದೆ. 24 ನಮ್ಮ ಪಿತೃಗಳು ದುಡಿದದ್ದನ್ನೂ ಅವರ ದನಕುರಿಗಳನ್ನೂ ಅವರ ಗಂಡು ಹೆಣ್ಣು ಮಕ್ಕಳನ್ನೂ ಬಾಳ್ ದೇವತೆಯು ನಮ್ಮ ಬಾಲ್ಯಾರಭ್ಯ ನುಂಗುತ್ತಾ ಬಂದಿದೆ. 25 ನಾವು ತಂದುಕೊಂಡ ಅವಮಾನದಲ್ಲಿ ಬಿದ್ದಿರೋಣ, ನಮ್ಮ ನಾಚಿಕೆಯು ನಮ್ಮನ್ನು ಮುಚ್ಚಿಬಿಡಲಿ; ನಮ್ಮ ದೇವರಾದ ಯೆಹೋವನಿಗೆ ನಾವೂ ನಮ್ಮ ಪಿತೃಗಳೂ ನಮ್ಮ ಚಿಕ್ಕತನದಿಂದ ಈಗಿನವರೆಗೆ ಪಾಪಮಾಡುತ್ತಾ ಬಂದಿದ್ದೇವಷ್ಟೆ; ನಮ್ಮ ದೇವರಾದ ಯೆಹೋವನ ಮಾತನ್ನು ನಾವು ಕೇಳಲೇ ಇಲ್ಲ ಎಂದು ಮೊರೆಯಿಡುತ್ತಾರೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India