Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆರೆಮೀಯ 24 - ಕನ್ನಡ ಸತ್ಯವೇದವು J.V. (BSI)


ಒಳ್ಳೆಯ ಮತ್ತು ಕೆಟ್ಟ ಹಣ್ಣುಗಳ ಸಾಮ್ಯ

1 ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಯೆಕೊನ್ಯನನ್ನೂ ಯೆಹೂದದ ಪ್ರಧಾನರನ್ನೂ ಶಿಲ್ಪಿಗಳನ್ನೂ ಕಮ್ಮಾರರನ್ನೂ ಯೆರೂಸಲೇವಿುನಿಂದ ಬಾಬೆಲಿಗೆ ಸೆರೆ ಒಯ್ದ ಮೇಲೆ ಯೆಹೋವನ ಆಲಯದ ಮುಂದೆ ಇಟ್ಟಿರುವ ಅಂಜೂರದ ಹಣ್ಣು ತುಂಬಿದ ಎರಡು ಪುಟ್ಟಿಗಳನ್ನು ಯೆಹೋವನು ನನಗೆ ಕಾಣಮಾಡಿದನು.

2 ಒಂದು ಪುಟ್ಟಿಯಲ್ಲಿ ಫಲಕಾಲಕ್ಕೆ ಮುಂಚೆ ಮಾಗಿದ ಹಣ್ಣುಗಳ ಹಾಗೆ ಕಾಣುತ್ತಿದ್ದ ಅತ್ಯುತ್ತಮವಾದ ಅಂಜೂರದ ಫಲಗಳು ತುಂಬಿದ್ದವು; ಇನ್ನೊಂದು ಪುಟ್ಟಿಯಲ್ಲಿ ಯಾರೂ ತಿನ್ನದ ಹಾಗೆ ಬಹಳ ಕೆಟ್ಟು ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳು ತುಂಬಿದ್ದವು.

3 ಆಗ ಯೆಹೋವನು ನನ್ನನ್ನು - ಯೆರೆಮೀಯನೇ, ಏನು ನೋಡುತ್ತೀ ಎಂದು ಕೇಳಲು ನಾನು - ಅಂಜೂರದ ಫಲಗಳನ್ನು ನೋಡುತ್ತೇನೆ; ಉತ್ತಮ ಫಲಗಳು ಅತ್ಯುತ್ತಮವಾಗಿವೆ; ಕೆಟ್ಟ ಫಲಗಳು ಬಹಳ ಕೆಟ್ಟಿವೆ, ಯಾರೂ ತಿನ್ನದ ಹಾಗೆ ಕೇವಲ ಅಸಹ್ಯವಾಗಿವೆ ಎಂದು ಉತ್ತರಕೊಟ್ಟೆನು.

4 ಆಗ ಯೆಹೋವನು ಈ ನುಡಿಯನ್ನು ನನಗೆ ದಯಪಾಲಿಸಿದನು -

5 ಇಸ್ರಾಯೇಲ್ಯರ ದೇವರಾದ ಯೆಹೋವನು ಇಂತೆನ್ನುತ್ತಾನೆ - ನಾನು ಈ ಸ್ಥಳದೊಳಗಿಂದ ಕಸ್ದೀಯರ ದೇಶಕ್ಕೆ ಕಳುಹಿಸಿಬಿಟ್ಟ ಸೆರೆಯವರಾದ ಯೆಹೂದ್ಯರನ್ನು ಈ ಉತ್ತಮವಾದ ಅಂಜೂರದ ಫಲಗಳಂತೆ ಲಕ್ಷಿಸಿ ಅವರಿಗೆ ಮೇಲನ್ನುಂಟುಮಾಡುವೆನು.

6 ಅವರನ್ನು ಕಟಾಕ್ಷಿಸಿ ಈ ದೇಶಕ್ಕೆ ತಿರಿಗಿ ಬರಮಾಡುವೆನು; ಅವರನ್ನು ಕಟ್ಟುವೆನು, ಕೆಡವುವದಿಲ್ಲ; ನೆಡುವೆನು, ಕೀಳುವದಿಲ್ಲ.

7 ಅವರು ನನ್ನನ್ನು ಯೆಹೋವನೆಂದು ಗ್ರಹಿಸತಕ್ಕ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನ್ನ ಜನರಾಗಿರುವರು, ನಾನು ಅವರ ದೇವರಾಗಿರುವೆನು; ಅವರು ನನ್ನ ಕಡೆಗೆ ಮನಃಪೂರ್ವಕವಾಗಿ ಹಿಂದಿರುಗಿ ಬರುವರು.

8 ಇದಲ್ಲದೆ ಯೆಹೋವನು ಇಂತೆನ್ನುತ್ತಾನೆ - ಯೆಹೂದದ ಅರಸನಾದ ಚಿದ್ಕೀಯ, ಅವನ ಪ್ರಧಾನರು, ಈ ದೇಶದಲ್ಲಿ ನಿಂತಿರುವ ಯೆರೂಸಲೇವಿುನವರ ಶೇಷ, ಐಗುಪ್ತದೇಶಕ್ಕೆ ವಲಸೆಯಾದವರು, ಇವರೆಲ್ಲರನ್ನು ಕೆಟ್ಟು ಯಾರೂ ತಿನ್ನದ ಹಾಗೆ ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳ ಗತಿಗೆ ತರುವೆನು.

9 ಅವರ ಕೇಡಿಗಾಗಿ ನಾನು ಅವರನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು; ನಾನು ಅವರನ್ನು ಅಟ್ಟಿಬಿಡುವ ಸ್ಥಳಗಳಲ್ಲೆಲ್ಲಾ ಅವರು ನಿಂದೆ, ಕಟ್ಟುಗಾದೆ, ಪರಿಹಾಸ್ಯ, ಶಾಪ, ಇವುಗಳಿಗೆ ಗುರಿಯಾಗುವರು.

10 ನಾನು ಅವರಿಗೂ ಅವರ ಪಿತೃಗಳಿಗೂ ಅನುಗ್ರಹಿಸಿದ ದೇಶದೊಳಗಿಂದ ಅವರು ನಿರ್ಮೂಲರಾಗುವ ತನಕ ಖಡ್ಗಕ್ಷಾಮವ್ಯಾಧಿಗಳನ್ನು ಅವರ ಮೇಲೆ ಕಳುಹಿಸುವೆನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು