ಯೆರೆಮೀಯ 21 - ಕನ್ನಡ ಸತ್ಯವೇದವು J.V. (BSI)ಬಾಬೆಲಿನ ಅರಸನು ಯೆರೂಸಲೇಮನ್ನು ಆಕ್ರವಿುಸುವನೆಂದು ಯೆರೆಮೀಯನು ಮುಂತಿಳಿಸಿದ್ದು 1 ಅರಸನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ ಯಾಜಕ ಮಾಸೇಯನ ಮಗನಾದ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿ - 2 ದಯಮಾಡಿ ಯೆಹೋವನ ಚಿತ್ತವೇನೆಂದು ಆತನನ್ನು ನಮಗೋಸ್ಕರ ವಿಚಾರಿಸು; ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಮಗೆ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾನಲ್ಲಾ; ಒಂದುವೇಳೆ ಯೆಹೋವನು ತನ್ನ ಸಮಸ್ತ ಅದ್ಭುತಕಾರ್ಯಗಳಿಗೆ ಅನುಗುಣವಾಗಿ ನಮ್ಮ ಪಕ್ಷವನ್ನು ವಹಿಸಿ ಈ ಶತ್ರುವು ನಮ್ಮ ಕಡೆಯಿಂದ ತೊಲಗುವಂತೆ ಮಾಡಿಯಾನು ಎಂದು ಅವರ ಮೂಲಕ ವಿಜ್ಞಾಪಿಸಿದಾಗ ಯೆಹೋವನಿಂದ ಯೆರೆಮೀಯನಿಗೆ ದೈವೋಕ್ತಿಯು ದೊರೆಯಿತು. 3 ಆಗ ಯೆರೆಮೀಯನು ಈ ಉತ್ತರವನ್ನು ಚಿದ್ಕೀಯನಿಗೆ ತಿಳಿಸಿರಿ ಎಂದು ಅವರಿಗೆ ಹೇಳಿದನು - 4 ಇಸ್ರಾಯೇಲ್ಯರ ದೇವರಾದ ಯೆಹೋವನು ಇಂತೆನ್ನುತ್ತಾನೆ - ಇಗೋ, ನಿಮ್ಮನ್ನು ಮುತ್ತುವ ಕಸ್ದೀಯರಿಗೂ ಬಾಬೆಲಿನ ಅರಸನಿಗೂ ವಿರುದ್ಧವಾಗಿ ಪೌಳಿಗೋಡೆಯ ಹೊರಗೆ ಯುದ್ಧಮಾಡುವದಕ್ಕೆ ನೀವು ಹಿಡಿದಿರುವ ಆಯುಧಗಳನ್ನು ನಾನು ಹಿಂದಕ್ಕೆ ತಳ್ಳಿ ಈ ಪಟ್ಟಣದೊಳಗೆ ಕೂಡಿಹಾಕುವೆನು. 5 ನಾನೇ ಕೋಪರೋಷ ಮಹಾಕ್ರೋಧಭರಿತನಾಗಿ ಶಿಕ್ಷಾಹಸ್ತದಿಂದಲೂ ಭುಜಪರಾಕ್ರಮದಿಂದಲೂ ನಿಮಗೆ ವಿರುದ್ಧವಾಗಿ ಯುದ್ಧಮಾಡುವೆನು. 6 ಈ ಪಟ್ಟಣದಲ್ಲಿ ವಾಸಿಸುವ ಮನುಷ್ಯರನ್ನೂ ಪಶುಗಳನ್ನೂ ಬಾಧಿಸುವೆನು; ಘೋರವ್ಯಾಧಿಯು ಸಾಯಿಸುವದು. 7 ತರುವಾಯ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ ಅವನ ಸೇವಕರನ್ನೂ ವ್ಯಾಧಿಖಡ್ಗಕ್ಷಾಮಗಳಿಂದ ಹತಶೇಷರಾದ ಪ್ರಜೆಗಳನ್ನೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೂ ಅವರ ಪ್ರಾಣವನ್ನು ಹುಡುಕುತ್ತಿರುವ ಅವರ ಶತ್ರುಗಳ ಕೈಗೂ ಕೊಟ್ಟುಬಿಡುವೆನು; ಅವನು ಅವರನ್ನು ಕರುಣಿಸದೆ ಕನಿಕರಪಡದೆ ಉಳಿಸದೆ ಕತ್ತಿಯಿಂದ ಸಂಹರಿಸುವನು. 8 ಮತ್ತು ಈ ಜನರಿಗೆ ಹೀಗೆ ಹೇಳು ಎಂದು ಯೆಹೋವನು ನನಗೆ ಅಪ್ಪಣೆಕೊಟ್ಟಿದ್ದಾನೆ. ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಜೀವಿಸುವ ಮಾರ್ಗವನ್ನೂ ಸಾಯುವ ಮಾರ್ಗವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ. 9 ಪಟ್ಟಣದಲ್ಲಿ ನಿಲ್ಲುವವನು ಖಡ್ಗಕ್ಷಾಮವ್ಯಾಧಿಗಳಿಂದ ಸಾಯುವನು; ನಿಮ್ಮನ್ನು ಮುತ್ತುವ ಕಸ್ದೀಯರನ್ನು ಮರೆಹೊಗಲು ಪಟ್ಟಣವನ್ನು ಬಿಡುವವನು ಬದುಕುವನು, ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು. 10 ಮೇಲಿಗಲ್ಲ ಕೇಡಿಗಾಗಿಯೇ ಈ ಪಟ್ಟಣದ ಮೇಲೆ ದೃಷ್ಟಿಯಿಟ್ಟಿದ್ದೇನೆ; ಇದು ಬಾಬೆಲಿನ ಅರಸನ ಕೈವಶವಾಗುವದು, ಅವನು ಸುಟ್ಟು ಬಿಡುವನು; ಇದು ಯೆಹೋವನ ನುಡಿ. 11 ಯೆಹೂದದ ಅರಸನ ಮನೆತನದ ವಿಷಯವಾಗಿ ಯೆಹೋವನು ಹೇಳಿರುವ ಈ ಮಾತನ್ನು ಕೇಳಿರಿ - 12 ದಾವೀದನ ಮನೆತನದವರೇ, ಯೆಹೋವನು ಇಂತೆನ್ನುತ್ತಾನೆ - ನಿಮ್ಮ ದುಷ್ಕೃತ್ಯಗಳ ನಿವಿುತ್ತ ನನ್ನ ರೋಷವು ಜ್ವಾಲೆಯಂತೆ ಹೊರಟು ಯಾರೂ ಆರಿಸಲಾಗದಷ್ಟು ರಭಸವಾಗಿ ದಹಿಸಬಾರದಾಗಿದ್ದರೆ ಮುಂಜಾನೆ ನ್ಯಾಯತೀರಿಸಿರಿ, ಸುಲಿಗೆಯಾದವನನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ. 13 ಆಹಾ, ತಗ್ಗಿನ ನಗರಿಯೇ, ಪ್ರಸ್ಥಭೂವಿುಯ ಶಿಖರದ ಮೇಲಣ ಪುರಿಯೇ, ನಾನು ನಿನಗೆ ವಿರುದ್ಧವಾಗಿದ್ದೇನೆ; ಯಾರು ಇಳಿದು ನಮ್ಮ ಮೇಲೆ ಬಂದಾರು, ನಮ್ಮ ನಿವಾಸಗಳಲ್ಲಿ ಯಾರು ನುಗ್ಗಿಯಾರು ಎನ್ನುವವರೇ, 14 ನಿಮ್ಮ ದುಷ್ಕೃತ್ಯಗಳಿಗೆ ಪ್ರತಿಫಲವಾಗಿ ನಿಮ್ಮನ್ನು ದಂಡಿಸುವೆನು; ನಿಮ್ಮ ಪುರಿಯೆಂಬ ವನಕ್ಕೆ ಬೆಂಕಿಹಚ್ಚುವೆನು, ಅದು ಸುತ್ತುಮುತ್ತಣದನ್ನೆಲ್ಲಾ ನುಂಗಿಬಿಡುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India