ಯೆರೆಮೀಯ 2 - ಕನ್ನಡ ಸತ್ಯವೇದವು J.V. (BSI)ದೇವಜನರ ದೇವದ್ರೋಹವು 1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - 2 ನೀನು ಹೋಗಿ ಯೆರೂಸಲೇವಿುನ ಕಿವಿಗೆ ಮುಟ್ಟುವಂತೆ ಈ ಮಾತುಗಳನ್ನು ಸಾರು - ಯೆಹೋವನು ಹೀಗನ್ನುತ್ತಾನೆ, ನೀನು ಯೌವನದಲ್ಲಿ [ನನ್ನ ಮೇಲೆ] ಇಟ್ಟಿದ್ದ ಪ್ರೀತಿಯನ್ನೂ ವಿವಾಹ ಕಾಲದ ನಿನ್ನ ಪ್ರೇಮವನ್ನೂ ಬೀಜಬಿತ್ತಿಯೇ ಇಲ್ಲದ ಅರಣ್ಯದಲ್ಲಿ ನೀನು ನನ್ನನ್ನು ಹಿಂಬಾಲಿಸಿದ ನಿನ್ನ ಪಾತಿವ್ರತ್ಯವನ್ನೂ ನಿನ್ನ ಹಿತಕ್ಕಾಗಿ ಜ್ಞಾಪಕದಲ್ಲಿಟ್ಟಿದ್ದೇನೆ. 3 ಇಸ್ರಾಯೇಲು ಯೆಹೋವನ ಬೆಳೆಯ ಪ್ರಥಮಫಲವಾಗಿ ಆತನಿಗೆ ಮೀಸಲಾಗಿತ್ತು; ಅದನ್ನು ತಿಂದುಬಿಟ್ಟವರೆಲ್ಲರೂ ದೋಷಿಗಳಾಗಿ ಕೇಡಿಗೆ ಗುರಿಯಾದರು ಎಂದು ಯೆಹೋವನು ಅನ್ನುತ್ತಾನೆ. 4 ಯಾಕೋಬನ ಮನೆತನವೇ, ಇಸ್ರಾಯೇಲ್ ವಂಶದ ಸಕಲ ಗೋತ್ರಗಳೇ, ಯೆಹೋವನ ವಾಕ್ಯವನ್ನು ಕೇಳಿರಿ; 5 ಯೆಹೋವನು ಹೀಗನ್ನುತ್ತಾನೆ, ನಿಮ್ಮ ಪಿತೃಗಳು ನನ್ನಲ್ಲಿ ಯಾವ ಅನ್ಯಾಯವನ್ನು ಕಂಡದರಿಂದ ವ್ಯರ್ಥಾಚಾರವನ್ನು ಅನುಸರಿಸಿ ತಾವೇ ವ್ಯರ್ಥರಾಗಿ ನನ್ನನ್ನು ಬಿಟ್ಟು ದೂರವಾದರು? 6 ನಮ್ಮನ್ನು ಐಗುಪ್ತದೇಶದೊಳಗಿಂದ ಬರಮಾಡಿ ಕಾಡಾಗಿಯೂ ಹಳ್ಳಕೊಳ್ಳವಾಗಿಯೂ ನಿರ್ಜಲವಾಗಿಯೂ ಘೋರಾಂಧಕಾರವಾಗಿಯೂ ಯಾರೂ ಹಾದುಹೋಗದೆಯೂ ಯಾರೂ ವಾಸಿಸದೆಯೂ ಇರುವ ಅರಣ್ಯದಲ್ಲಿ ನಡಿಸಿದ ಯೆಹೋವನು ಎಲ್ಲಿ ಎಂದು ಅವರು ಅಂದುಕೊಳ್ಳಲಿಲ್ಲವಲ್ಲ. 7 ನಾನು ನಿಮ್ಮನ್ನು ಫಲವತ್ತಾದ ಸೀಮೆಗೆ ಕರತಂದು ಅದರ ಫಲವನ್ನೂ ಸಾರವನ್ನೂ ಅನುಭವಿಸುವ ಹಾಗೆ ಮಾಡಿದೆನು; ಆದರೆ ನೀವು ಪ್ರವೇಶಿಸಿ ಆ ನನ್ನ ದೇಶವನ್ನು ಹೊಲೆಮಾಡಿ ನನ್ನ ಸ್ವಾಸ್ತ್ಯವನ್ನು ಅಸಹ್ಯಪಡಿಸಿದಿರಿ. 8 ಯಾಜಕರಿಗೆ ಯೆಹೋವನು ಎಲ್ಲಿ ಎಂಬ ವಿಚಾರವೇ ಇರಲಿಲ್ಲ, ಧರ್ಮೋಪದೇಶಕರು ನನ್ನನ್ನು ತಿಳಿಯಲಿಲ್ಲ, ಪಾಲಕರು ನನಗೆ ದ್ರೋಹಮಾಡಿದರು, ಪ್ರವಾದಿಗಳು ಬಾಳ್‍ದೇವತೆಯ ಆವೇಶದಿಂದ ಪ್ರವಾದಿಸಿ ಕೆಲಸಕ್ಕೆ ಬಾರದವುಗಳನ್ನು ಸೇವಿಸಿದರು. 9 ಆದಕಾರಣ ನಾನು ನಿಮ್ಮೊಂದಿಗೆ ಇನ್ನೂ ವ್ಯಾಜ್ಯವಾಡುವೆನು; ನಿಮ್ಮ ಸಂತಾನದವರೊಂದಿಗೂ ವ್ಯಾಜ್ಯವಾಡುವೆನು ಎಂದು ಯೆಹೋವನು ಅನ್ನುತ್ತಾನೆ. 10 ಕಿತ್ತೀಮ್ ದ್ವೀಪಗಳಿಗೆ ಹೋಗಿ ನೋಡಿರಿ, ಕೇದಾರಿಗೆ ಕಳುಹಿಸಿ ವಿಚಾರಮಾಡಿರಿ; ಇಂಥಾ ಕಾರ್ಯವು ಎಲ್ಲಿಯಾದರೂ ನಡೆಯಿತೇ ಎಂದು ಚೆನ್ನಾಗಿ ಆಲೋಚಿಸಿರಿ. 11 ತನ್ನ ದೇವತೆಗಳು ದೇವರಲ್ಲದೆ ಇದ್ದರೂ ಅವುಗಳನ್ನು ಯಾವ ಜನಾಂಗವಾದರೂ ಬದಲಾಯಿಸಿಕೊಂಡಿತೋ? ಆದರೆ ನನ್ನ ಜನರು ತಮ್ಮ ಮಹಿಮೆಯಾದ ನನಗೆ ಬದಲಾಗಿ ಕೆಲಸಕ್ಕೆ ಬಾರದ್ದನ್ನು ಆರಿಸಿಕೊಂಡಿದ್ದಾರೆ. 12 ಆಕಾಶ ಮಂಡಲವೇ, ಇದಕ್ಕೆ ಬೆಚ್ಚಿಬೆರಗಾಗು, ತತ್ತರಿಸು, ಹಾಳಾಗು ಎಂದು ಯೆಹೋವನು ನುಡಿಯುತ್ತಾನೆ. 13 ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ; ಜೀವಜಲದ ಬುಗ್ಗೆಯಾದ ನನ್ನನ್ನು ಬಿಟ್ಟಿದ್ದಾರೆ, ತಮಗೋಸ್ಕರ ತೊಟ್ಟಿಗಳನ್ನು, ನೀರು ನಿಲ್ಲದ ಬಿರಿದ ತೊಟ್ಟಿಗಳನ್ನು ಕೊರೆದುಕೊಂಡಿದ್ದಾರೆ. 14 ಇಸ್ರಾಯೇಲು ಒಬ್ಬ ದಾಸನೋ? ಮನೆಯ ಗುಲಾಮನಾಗಿ ಹುಟ್ಟಿದವನೋ? ಏಕೆ ಸೂರೆಯಾದನು? 15 ಪ್ರಾಯದ ಸಿಂಹಗಳು ಅವನ ಮೇಲೆ ಗರ್ಜಿಸಿ ಆರ್ಭಟಿಸುತ್ತಿವೆ, ಅವನ ದೇಶವನ್ನು ಹಾಳು ಮಾಡಿವೆ, ಅವನ ಊರುಗಳು ಸುಟ್ಟು ನಿರ್ನಿವಾಸಿಗಳಾಗಿವೆ. 16 ನೋಫ್ ಮತ್ತು ತಹಪನೇಸ್ ಪಟ್ಟಣಗಳವರು ನಿನ್ನ ನೆತ್ತಿಯನ್ನೂ ನುಣ್ಣಗೆ ಮೇದುಬಿಟ್ಟಿದ್ದಾರೆ. 17 ನಿನ್ನನ್ನು ದಾರಿಯಲ್ಲಿ ನಡಿಸುತ್ತಿದ್ದ ನಿನ್ನ ದೇವರಾದ ಯೆಹೋವನನ್ನು ತೊರೆದುಬಿಟ್ಟು ಇದನ್ನೆಲ್ಲಾ ನೀನೇ ನಿನ್ನ ಮೇಲೆ ಬರಮಾಡಿಕೊಂಡಿಯಲ್ಲಾ. 18 ನೀನು ಐಗುಪ್ತದ ದಾರಿಯಲ್ಲಿ ನಡೆದದ್ದೇಕೆ? ನೈಲ್‍ನದಿಯ ನೀರನ್ನು ಕುಡಿಯಬೇಕಾದದ್ದೇನು? ಅಶ್ಶೂರದ ಮಾರ್ಗದಲ್ಲಿ ಹೆಜ್ಜೆಯಿಟ್ಟದ್ದೇಕೆ? [ಯೂಫ್ರೇಟೀಸ್] ನದಿಯ ಜಲವನ್ನು ಪಾನಮಾಡಬೇಕಾದದ್ದೇನು? 19 ನಿನ್ನ ಕೆಟ್ಟತನವೇ ನಿನ್ನನ್ನು ಶಿಕ್ಷಿಸುವದು, ನಿನ್ನ ದ್ರೋಹಗಳೇ ನಿನ್ನನ್ನು ಖಂಡಿಸುವವು; ನೀನು ನನ್ನ ಭಯವಿಲ್ಲದೆ ನಿನ್ನ ದೇವರಾದ ಯೆಹೋವನೆಂಬ ನನ್ನನ್ನು ತೊರೆದುಬಿಟ್ಟದ್ದು ಕೆಟ್ಟದ್ದಾಗಿಯೂ ವಿಷವಾಗಿಯೂ ಇರುತ್ತದೆಂದು ಗ್ರಹಿಸಿಕೋ, ಕಣ್ಣಾರೆ ನೋಡು ಎಂಬದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನ ನುಡಿ. 20 ಬಹುಕಾಲದಿಂದ ನೀನು ನಿನ್ನ ನೊಗವನ್ನು ಮುರಿದು ಕಣ್ಣಿಗಳನ್ನು ಕಿತ್ತು ನಾನು ಸೇವೆ ಮಾಡುವದಿಲ್ಲವೆಂದು ಅಂದುಕೊಳ್ಳುತ್ತಿದ್ದೀ; ಎತ್ತರವಾದ ಎಲ್ಲಾ ಗುಡ್ಡಗಳ ಮೇಲೂ ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳ ಕೆಳಗೂ ನೀನು ಅಡ್ಡಬಿದ್ದು ಸೂಳೆಯಾಗಿ ನಡೆದಿದ್ದೀ. 21 ನಾನು ನಿನ್ನನ್ನು ಅತ್ಯುತ್ತಮ ಬೀಜದಿಂದ ಬೆಳೆದ ಒಳ್ಳೇಯ ದ್ರಾಕ್ಷಾಲತೆಯನ್ನಾಗಿ ನೆಟ್ಟಿರಲು ನೀನು ನನಗೆ ಕಾಡುದ್ರಾಕ್ಷೇಬಳ್ಳಿಯ ಕೆಟ್ಟ ರೆಂಬೆಗಳಾದದ್ದೇನು? 22 ನೀನು ಬಹಳ ಚೌಳನ್ನು ಹಾಕಿಕೊಂಡು ಸಬ್ಬಿನಿಂದ ತೊಳಕೊಂಡರೂ ನಿನ್ನ ಅಧರ್ಮವು ನನ್ನ ಕಣ್ಣೆದುರಿಗೆ ಕರೆಯಾಗಿ ನಿಂತಿದೆ ಎಂದು ಕರ್ತನಾದ ಯೆಹೋವನು ಅನ್ನುತ್ತಾನೆ. 23 ನನಗೆ ಮುಡಚಟ್ಟಾಗಲಿಲ್ಲ, ಅನ್ಯದೇವತೆಗಳನ್ನು ನಾನು ಹಿಂಬಾಲಿಸಲಿಲ್ಲವೆಂದು ಹೇಗೆ ಹೇಳುತ್ತೀ? ಆ ತಗ್ಗಿನಲ್ಲಿನ ನಿನ್ನ ನಡತೆಯನ್ನು ನೋಡು, ನೀನು ಮಾಡಿದ ಕೆಲಸವನ್ನು ಮನಸ್ಸಿಗೆ ತಂದುಕೋ, ತನ್ನ ಜಾಡೆಗಳನ್ನು ತಾರುಮಾರು ಮಾಡುವ ವೇಗವಾದ ಹೆಣ್ಣು ಒಂಟೆಯಂತಿದ್ದೀ. 24 ಅಡವಿಯಲ್ಲಿ ಪಳಗಿದ್ದು ಮದದಿಂದ ಗಾಳಿಯನ್ನು ಬುಸುಬುಸನೆ ಮೂಸಿನೋಡುವ ಹೆಣ್ಣು ಕಾಡುಕತ್ತೆಯ ಹಾಗಿದ್ದೀ; ಅದಕ್ಕೆ ಬೆದೆ ಏರಿದಾಗ ಯಾವ ಗಂಡುಕತ್ತೆಯು ನೂಕಿಬಿಟ್ಟೀತು? ಆಯಾ ತಿಂಗಳಿನಲ್ಲಿ ಅದನ್ನು ಹುಡುಕುವವುಗಳೆಲ್ಲಾ ಆಯಾಸಗೊಳ್ಳದೆ ಅದನ್ನು ದೊರಕಿಸಿಕೊಳ್ಳುವವು. 25 ನಿನ್ನ ಕಾಲು ಸವೆಯದಂತೆಯೂ ನಿನ್ನ ಗಂಟಲು ಆರದಂತೆಯೂ ತಡೆದುಕೋ; ಆದರೆ ನೀನು - ನಿರೀಕ್ಷೆಯಿಲ್ಲ, ಆಗಲಾರದು, ಅನ್ಯರ ಮೇಲೆ ಮೋಹಗೊಂಡಿದ್ದೇನೆ. ಅವರ ಹಿಂದೆಯೇ ಹೋಗುವೆನು ಅಂದುಕೊಂಡಿದ್ದೀ. 26 ಕಳ್ಳನು ಸಿಕ್ಕಿಬಿದ್ದು ಹೇಗೆ ನಾಚಿಕೆಪಡುವನೋ ಹಾಗೆಯೇ ಇಸ್ರಾಯೇಲ್ ವಂಶವು ನಾಚಿಕೆಪಡುವದು; ಮರಕ್ಕೆ, ನೀನು ನನ್ನ ತಂದೆ ಎಂತಲೂ ಕಲ್ಲಿಗೆ, ಹೆತ್ತ ತಾಯಿ ನೀನು ಎಂತಲೂ ಹೇಳುವ ಪ್ರಜೆಗಳು, ಅವರ ಅರಸರು, ಅಧಿಪತಿಗಳು, ಯಾಜಕರು, ಪ್ರವಾದಿಗಳು, ಇವರೆಲ್ಲರೂ ನಾಚಿಕೆಗೆ ಈಡಾಗುವರು; 27 ನನ್ನ ಕಡೆಗೆ ಮುಖ ತಿರುಗಿಸದೆ ಬೆನ್ನುಮಾಡಿದ್ದಾರೆ, ಆದರೆ ಅವರಿಗೆ ಕೇಡು ಸಂಭವಿಸಿದಾಗ - ಎದ್ದು ನಮ್ಮನ್ನುದ್ಧರಿಸು ಎಂದು ಮೊರೆಯಿಡುವರು. 28 ಯೆಹೂದವೇ, ನೀನು ನಿರ್ಮಿಸಿಕೊಂಡ ದೇವರುಗಳು ಎಲ್ಲಿ? ನಿನಗೆ ಕೇಡು ಸಂಭವಿಸಿದಾಗ ನಿನ್ನನ್ನುದ್ಧರಿಸಲು ಶಕ್ತರಾದರೆ ಏಳಲಿ! ನಿನ್ನ ಪಟ್ಟಣಗಳೆಷ್ಟೋ, ನಿನ್ನ ದೇವರುಗಳೂ ಅಷ್ಟು. 29 ಯೆಹೋವನು ಹೀಗನ್ನುತ್ತಾನೆ - ಏಕೆ ನನ್ನೊಡನೆ ವ್ಯಾಜ್ಯವಾಡುತ್ತೀರಿ? ನೀವೆಲ್ಲರೂ ನನಗೆ ದ್ರೋಹಿಗಳು. 30 ನಾನು ನಿಮ್ಮ ವಂಶದವರನ್ನು ಹೊಡೆದದ್ದು ವ್ಯರ್ಥ, ತಿದ್ದುಪಾಟಾಗಲಿಲ್ಲ; ಸಂಹರಿಸುವ ಸಿಂಹದಂತೆ ನಿಮ್ಮ ಕೈಯ ಕತ್ತಿಯೇ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿದೆ. 31 ನೀವು ಎಂಥಾ ದುರ್ವಂಶ! ಯೆಹೋವನ ಮಾತನ್ನು ನೋಡಿರಿ, ನಾನು ಇಸ್ರಾಯೇಲಿಗೆ ಅರಣ್ಯವಾಗಿಯೂ ಗಾಢಾಂಧಕಾರದ ಪ್ರದೇಶವಾಗಿಯೂ ಪರಿಣವಿುಸಿದ್ದೆನೋ? ನಾವು ಮನಬಂದಂತೆ ತಿರುಗುತ್ತಿದ್ದೇವೆ, ನಿನ್ನ ಹತೋಟಿಗೆ ಇನ್ನು ಬಾರೆವು ಎಂದು ನನ್ನ ಜನರು ಹೇಳುವದು ಹೇಗೆ. 32 ಯುವತಿಯು ತನ್ನ ಆಭರಣಗಳನ್ನು, ವಧುವು ತನ್ನ ಒಡ್ಯಾಣವನ್ನು ಮರೆಯುವದುಂಟೇ? ನನ್ನ ಜನರೋ ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತಿದ್ದಾರೆ. 33 ಕಾಮವನ್ನು ತೀರಿಸಿಕೊಳ್ಳಬೇಕೆಂದು ಎಷ್ಟೋ ಮುಂದರಿದಿದ್ದೀ! ಆದಕಾರಣ ನಿನ್ನ ದುರಭ್ಯಾಸಗಳಿಗೆ ನಿನ್ನ ನಡತೆಯನ್ನು ಒಗ್ಗಿಸಿಕೊಂಡಿದ್ದೀ. 34 ಇದಲ್ಲದೆ ನಿರ್ದೋಷಿಗಳಾದ ದರಿದ್ರರ ಪ್ರಾಣರಕ್ತವು ನಿನ್ನ ನೆರಿಗೆಯಲ್ಲಿ ಅಂಟಿಕೊಂಡಿದೆ; ಇವರು ಕನ್ನ ಕೊರೆಯುವದನ್ನು ಕಂಡೆನೆಂಬ ನೆವ ನಿನಗಿಲ್ಲ, ನಿನ್ನ ಈ ಎಲ್ಲಾ ದುರಭ್ಯಾಸಗಳ ದೆಸೆಯಿಂದ [ನಿನ್ನನ್ನು ದಂಡಿಸುವೆನು]. 35 ನೀನಾದರೆ - ನಾನು ನಿರ್ದೋಷಿ, ಆತನ ಕೋಪವು ನನ್ನ ಮೇಲಿಂದ ತೊಲಗಿ ಹೋಗಿದೆ ನಿಶ್ಚಯ ಎಂದುಕೊಂಡಿದ್ದೀ; ನಾನು ಪಾಪಮಾಡಲಿಲ್ಲವೆಂದು ನೀನು ಹೇಳಿದ ಕಾರಣ, ಇಗೋ ನಾನು ನಿನಗೆ ನ್ಯಾಯತೀರಿಸುವೆನು. 36 ಹೊಸ ಹೊಸ ಮಾರ್ಗಗಳನ್ನು ಅನುಸರಿಸಲು ಏಕೆ ಅಷ್ಟು ಅತ್ತಿತ್ತ ಹೋಗುತ್ತೀ? ಅಶ್ಶೂರದ ವಿಷಯವಾಗಿ ಹೇಗೆ ಆಶಾಭಂಗಪಟ್ಟಿಯೋ ಹಾಗೆಯೇ ಐಗುಪ್ತದ ವಿಷಯವಾಗಿಯೂ ಆಶಾಭಂಗಪಡುವಿ. 37 ಅಲ್ಲಿಂದಲೂ ತಲೆಯ ಮೇಲೆ ಕೈಯಿಟ್ಟುಕೊಂಡು ಹೊರಡುವಿ; ಏಕಂದರೆ ನಿನ್ನ ಭರವಸಗಳನ್ನು ಯೆಹೋವನು ನಿರಾಕರಿಸಿದ್ದಾನೆ; ಅವುಗಳ ಮುಖಾಂತರ ನಿನ್ನ ಕಾರ್ಯವು ಸಾಗದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India